ಅಡ್ಡ ಹೆಸರುಗಳೆಂಬ ಸಾಮಾಜಿಕ ಸಂಕಥನಗಳು
ಅಡ್ಡ ಹೆಸರುಗಳು ಕಾಲು ಮತ್ತು ಕವಲುದಾರಿಗಳಂತವು.ಮನೆಯ ಪರಿಸರಕ್ಕಿಂತಲೂ ಅವು ಸಮೂಹದಿಂದಲೇ ಹುಟ್ಟಿಕೊಂಡವು..ಜನರನ್ನ ವಿಶಿಷ್ಟವಾಗಿ ವಿಶೇಷವಾಗಿ ಕಾಣುವ ಹಂಬಲಹೊತ್ತ ಇವುಗಳು ಗುಣಾನುರೂಪಿಯಾದವು.ಭಿನ್ನ ದಾರಿ ಭಿನ್ನ ಗುರಿಗಳನ್ನ ಆರಿಸಿಕೊಳ್ಳುವ ಇವುಗಳನ್ನ ವಚನಕಾರರ ಕಾಲದಿಂದಲೇ ಗುರ್ತಿಸುವ ಡಾ.ಎಂ.ಎಂ. ಕಲ್ಬುರ್ಗಿಯವರು ಹೇಳುವಂತೆ ಇವು ಅಡ್ಡ ಹೆಸರು ಎಂಬುದಕ್ಕಿಂತಲೂ ಅರ್ಧ ಹೆಸರುಗಳು ಎಂದೇ ಕರೆಯಬಹುದು.ವೃತ್ತಿಸೂಚಿ ಮತ್ತು ಗ್ರಾಮ ಸೂಚಿ ನೆಲೆಯಿಂದ ನೋಡಿದಾಗ ಇವು ಸಾಮಾಜಿಕ ಕಿರು ಕಥನಗಳೂ ಹೌದೆಂಬಂತಿವೆ.
ಕತ್ಲಪ್ಪ ಮೇಷ್ಟ್ರು:
ಮಂಗಳವಾರದ ಕತ್ತಲು ಆವರಿಸುತ್ತಿದ್ದಂತೆಯೇ ಚೌಡಮ್ಮನ ಅಂಗಳ ಭಕ್ತಾದಿಗಳಿಂದ ಗಿಜುಗುಡುತಿತ್ತು.ನಿವೃತ್ತ ಶಿಕ್ಷಕರಾಗಿದ್ದ ಸಂಗನ ಬಸಪ್ಪ ಮೇಷ್ಟ್ರು ಉರುಫ್ ಕತ್ಲಪ್ಪ ಮೇಷ್ಟ್ರು ಚೌಡಮ್ಮನ ಕುದುರೆ ಆಗಿಬಿಡುತ್ತಿದ್ದರು.ಅವ್ವನ ಆಪ್ತ ಭಕ್ತಾದಿಗಳಾದ ಕುರುಬರ ಕಾಳವ್ವ,ಬ್ಯಾಡರ ಬಸವ್ವ,ಮಾದರ ಗಂಗವ್ವ,ಪಿಂಜಾರ ಹಿಮ್ಮವ್ವ,ಅಳನಾರ ದುರ್ಗವ್ವ,ಕಾಳೇರ ರುದ್ರವ್ವರಾದಿಯಾಗಿ ಆವರಿಸಿಕೊಳ್ಳಲು ಮೇಷ್ಟ್ರ ಪತ್ನಿ ಕೊಟ್ರಮ್ಮ ” ಎತ್ತುವೆ ನಾರುತಿ ಎಲ್ಲಾ ನಿರ್ಜರ ತೇಜ..”ಎಂದು ಸ್ವರವೆತ್ತಲು ಮೇಷ್ಟ್ರು ಚೌಡಮ್ಮನ ಕಡೆ ಮುಖಮಾಡಿ ಕುಳಿತು ಒಮ್ಮೆ ?ಆ? ಅಂತ ಆಕಳಿಸಿ “ಹಾ” ಎಂದು ಥೇಟ್ ಯುವತಿಯಂತೆ ಮೈ ಮುರಿಯುತ್ತಲೇ.. ಜನ ” ಅವ್ವ ಬಂದ್ಲು ಉಧೋ..ಉಧೋ..ಚೌಡಮ್ಮ ನಿನ್ನಾಲ್ಕುಧೋ ?”ಎಂದು ಶುರುವಿಟ್ಟುಕೊಳ್ಳುತ್ತಿದ್ದರು.ಆಪ್ತ ಭಕ್ತಾಧಿಗಳು ರಟ್ಟೆಗೆ ಮುಂಗೈಗೆ ಬೆಳ್ಳಿ ಕಡಗ ಬಳೆಗಳನ್ನ ತೊಡಿಸಿ ಕೊರಳಿಗೆ ಉದ್ದನೆಯ ಚಡ್ಡು ಹಾಕಲು ಪತ್ನಿ ಕೊಟ್ರಮ್ಮ ಬೆಳ್ಳಿ ಬಾಕನ್ನ ಕೈಗೆ ನೀಡಲು, ಆ ಬಾಕಿನಿಂದ ಉದ್ದನೆ ಕೂದಲ ಸಿಕ್ಕು ಬಿಡಿಸಿಕೊಳ್ಳುತ್ತಾ ಎದ್ದು ?ಥೇಟ್? ದೇವಿಯಂತೆಯೇ ತಿರುಗಲು ಭಕ್ತಾದಿಗಳ ಬಗೆ ಬಗೆಯ ನೋವು ಸಂಕಟಗಳ ಗಾಳಿ ಮಳೆಗಳು ಏಳುತ್ತಾ ಭಕ್ತಿಯೆಂಬ ಹಳ್ಳ ಕೊಳ್ಳ ಹರಿಯುತ್ತ, ಕಾಣಿಕೆಗಳು ತಟ್ಟೆಯ ತುಂಬಿ ತುಳುಕುತಿದ್ದವು.ಶಿಕ್ಷಕ ವೃತ್ತಿಯು ತಾರದ ಗೌರವ ಈ ತಳವರ್ಗದ ಮೇಷ್ಟ್ರಿಗೆ ಪೂಜಾರಿ ಆದಗಲೇ ಸಿಗತೊಡಗಿತು.ನಾಟಿ ಔಷದಿ ಕೊಡುವ,ಅಂತ್ರ ಬರೆವ,ಮಂತ್ರಿಸುವ ಮೇಷ್ಟ್ರು ಚೌಡವ್ವನ ಹೇಳಿಕೆ ಶುರುಮಾಡಿದ ದಿನದಿಂದಲೇ ಊರ ಗೌರವ ಪಡೆದ್ದದಲ್ಲದೇ ಮೂಲ ಹೆಸರೂ ಹೋಗಿ ಕತ್ಲಜ್ಜ ಎಂಬ ಹೆಸರು ಗಟ್ಟಿಯಾಯಿತು.ಕಪ್ಪಗಿದ್ದದ್ದರಿಂದಲೋ ಅವರು ಮೊಹರಂನ ಕತ್ತಲ ರಾತ್ರಿ ದಿನದಂದು ಹುಟ್ಟಿದ್ದರಿಂದಲೋ ಅವರಿಗೆ ಆ ಹೆಸರೇ ನೆಲೆಗೊಂಡು ಬಿಟ್ಟಿತು.
ತಿಪ್ಪಿಗುಂಡಿ ಸವಕಾರ:
ಉರುಫ್ ಹನುಮಂತಪ್ಪ ತಳಗೇರಿಯಲ್ಲಿ ಭೀಷ್ಮರಂತೆ ಬಿಳಿ ಅಂಗಿ ಮತ್ತು ಲುಂಗಿ ಉಟ್ಟು ತನ್ನ ಗುಡಿಸಲಿಂದ ಹೊರ ಬಂದನೆಂದರೆ ಕೇರಿ ಮಕ್ಕಳೆಲ್ಲಾ ” ಸವಕಾರ?ಸವಕಾರ ಅಂತ ಹಿಂಡಿಂಡಾಗಿ ಓಡೋಡಿ ಬಂದು ಕೈ ಒಡ್ಡಲು ಬಿದ್ದ ಪುಡಿಗಾಸು ಹಿಡಿದು ಪಾರೇತವ್ವನ ಹೋಟಲಿಗೋ,ಶಾರದವ್ವನ ಹೋಟಲಿಗೋ ಓಡಿ ಅಂಗೈ ಅಗಲದ ಪೇಪರ್ ನೊಳಗೆ ಒಗ್ಗಣ್ಣಿ ಮಂಡಕ್ಕಿ ಹಿಡಿದು ಕುಣಿದಾಡಿ ಸವಿಯುತಿದ್ದರು.ಸವಕಾರ ಬಂಗಾಳ ಕಟ್ಟಿಗೆ ಕುಳಿತು ತನ್ನ ಹೆಂಡತಿ ಈಗ ಬಂದಾಳು ಆಗ ಬಂದಾಳು ಕಾಯುತ್ತಲೇ ಇದ್ದ.ಆತನ ಹೆಂಡತಿ ಗುಡಿಸಲಲ್ಲಿ ಇರೋದಕ್ಕಿಂತ, ಇರದಿದ್ದುದೇ ಹೆಚ್ಚು!.ಆಕೆಯನ್ನ ಬಾಲ್ಯವಿವಾಹವಾದ ಕಾರಣ ಇಬ್ಬರಿಗೂ ಅಂದಾಜು ನಲವತ್ತು ವರ್ಷ ವ್ಯತ್ಯಾಸ! ಅಕ್ಕ ಹೇಳಿದ್ದಕ್ಕೆ ತಾಳಿ ಕಟ್ಟಿದ್ದ ಹನುಮಪ್ಪನಿಗೆ ಹೆಂಡತಿ ಬಾಲ್ಯದೊಳಗಿದ್ದಾಗ ಮಾತ್ರ “ಸಾವಕಾರ” ಅಂತ ಹುಡುಗರ ಕೂಡಾ ತಾನೂ ಕುಣಿದು ಪೈಸೆ ಇಸಿದುಕೊಂಡು ಹೋಟೆಲಿಗೆ ಓಡುತಿತ್ತಂತೆ!,
ಹನುಮಂತಪ್ಪ ಆಕೆಗಾಗಿಯೇ ರಸ್ತೆ ರಸ್ತೆ ತಿರುಗಿ ಹೊಲ,ಕೆರೆ ಅಂಗಳಗಳೆನ್ನದೆ ತಿರುಗಿ ಸಗಣಿ ಸಂಗ್ರಹಿಸಿ ನಾಲ್ಕರಿಂದ ಐದು ತಿಪ್ಪೆಗುಂಡಿ ಮಾಡುತಿದ್ದ.ವರ್ಷಕ್ಕೋ ಆರುತಿಂಗಳಿಗೋ ಅವುಗಳನ್ನ ಊರ ಗೌಡರಿಗೆ ಮಾರಿ ಹಣ ಬಂದಾಗ ಮಾತ್ರ ಹೀಗೆ ಬಿಳಿ ಬಟ್ಟೆ ತೊಟ್ಟು ಜೇಬಿನ ತುಂಬ ಚಿಲ್ಲರೆ ತುಂಬಿ ಕೊಂಡು ನಗಾಡುತಿದ್ದ.
ಈಗ ಚಿಲ್ಲರೆ ಬಿಟ್ಟು ನೋಟುಗಳಿಗೆ ಮಾರು ಹೋದ ಮೈಲವ್ವ ಗಂಡನ ಬಗ್ಗೆ ಕೇಳಿದರೆ ಸಾಕು” ಅವನ ಪುಟಗೋಸಿ ಚಿಲ್ರೆ ಯಾವಳಿಗೆ ಬೇಕ್ರಲೋ ಗುಬ್ಬಿ ತಿಂದ ತೆನಿಯಂಗಿರೋ ಅವ್ನತಾವ ಏ ನೈತಿ ? ತಿಪ್ಪಿ ಬಿಟ್ಟು ? ಬತ್ತಿದ ಬಾವಿ, ಬೀಳ ಹೊಲನ ಯಾರ ಬೇಕಂತರಲೋ..ಥೂ ನನ್ನ ಹಾಟಗಳ್ಳ ! ನಡ್ರಿ ನಡ್ರಿ ಎಲ್ಲ ದೇವ್ಯ್ಕಾ ನಡ್ರೀ..ಅಂತ ಹುಡುಗರನ್ನೆಲ್ಲಾ ಆತನ ಬಳಿಗೇ ಓಡಿಸುತಿದ್ದಳು.
ಶಿವ ಶರಣಿ ಮಾಳಕ್ಕ:
ಮುಂಜಾನೆ ಆರಕ್ಕೇ ಎರದುಕೊಂಡು ಓಣಿಯ ಬಂಸದೇವ್ರು,..ಚಳ್ಳಿಮರದ ದುರ್ಗಮ್ಮ,ಗೋರಿ ಅಜ್ಜ ಅಂತೆಲ್ಲಾ ಹಣೆಗೆ ವಿಭೂತಿ ಬಳಕೊಂಡು ತಲೆಮೇಲೆ ಸೆರಗಾಕಿಕೊಂಡು ಸಣು ಮಾಡಿ ಬರುತಿದ್ದವಳು.ಮಾಳಕ್ಕನದೊಂದು ವಿಶೇಷ ಆಕೆ ತನಗೆದುರಾದ ಮನುಷ್ಯರಿಗೆ ಮಾತ್ರವಲ್ಲ ದನ ಕರು,ಮೇಕೆ,ಕುರಿಗಳಿಗೂ ?ಶಿವಾ?.. ಎನ್ನುತಿದ್ದಳು.ಯಾರೊಡನೆ ಮಾತಾಡಲಿ ?ಶಿವಾ?.. ಎಂದೇ ಆರಂಭಿಸುತ್ತಿದ್ದಳು.
ಮಾಳಕ್ಕ ಮಹಾ ಭಕ್ತೆ ಮಾತ್ರವಲ್ಲ.ಮಹಾನ್ ಗಟಿವಾಣಿಯೂ ಆಗಿದ್ದಳು.ಕಟ್ಟಿಕೊಂಡ ಗಂಡನನ್ನ ಬಿಟ್ಟು ಅದೇ ಓಣಿಯಲ್ಲೇ ಹಡಗಲಿಯ ಮೇಷ್ಟ್ರು ಮುಕ್ದುಂ ಸಾಬನೊಂದಿಗೆ ಬಾಳುವೆ ಮಾಡುತಿದ್ದಳು.ಆಕೆಯ ತಲೆಮೇಲೆ ಸೆರಗಿದ್ದರೆ ಮಾತ್ರ ಶಿವಶರಣೆ,ಸೆರಗು ತೆಗೆದು ಸೊಂಟಕ್ಕೆ ಸಿಕ್ಕಿಸಿಕೊಂಡರೆ ಮುಗೀತು ನಾಲ್ಕುದಿನವಾದರೂ ಬಿಡದೆ ಬೈಯುತ್ತಿದ್ದಳು.ಬೈದವರ ಅಂಗಳಕ್ಕೋಗಿ ಮಣ್ಣು ತೂರಿ ಬರುತಿದ್ದಳು.ಗೊತ್ತಿದ್ದ ಜನ ಆಕೆಯನ್ನ ತಡವುತ್ತಿರಲಿಲ್ಲ.ಊರಿಗೆ ಕಾಫಿಸೀಮೆಯ ಮಾಸ್ತಿ ಅಜ್ಜ ಬಂದಾಗಿನಿಂದ ಆತನಿಗೂ ನಡಕೊಂಡು ಹೊಟ್ಟೆಗೆ ಹಾಕೋದನ್ನೂ ಕಲಿತಿದ್ದಳು.ಕೂದಲನ್ನೋ,ಬಟ್ಟೆಯ ನೂಲನ್ನೋ,ಉಗುರನ್ನೋ,ಕೊನೆಗೆ ಆಗದವರು ನಡೆದ ಹೆಜ್ಜೆಯ ಮಣ್ಣನ್ನೋ ಹುಡುಕಿ ಮಾಟ ಮಾಡಿ ಗೊಂಬೆಯನ್ನ ದೊಡ್ಡ ಹುತ್ತಕ್ಕೆ ಕಾಣಿಸಿಬಿಡುತಿದ್ದಳು.ಪರಿಣಾಮ ಆಗದವರು ಅಮವಾಸಿ ಬರುವುದರೊಳಗೇ ಒಣಗಿದ ಕಳ್ಳಿಯ ಕಟಗಿಯಾಗಿ ಬಿಡುತಿದ್ದರು!.ಊ ಅನ್ನುವುದರೊಳಗೇ ಉದುರಿ ಗೋಡೆಯ ಫೋಟೋ ಆಗಿ ಬಿಡುತಿದ್ದರು!!.ಹೊಸದಾಗಿ ಮಾಸ್ತಿ ಅಜ್ಜನ ಭಕ್ತ ವಡ್ಡರ ದುರುಗಪ್ಪನ ಜೊತೆ ಹೋಗಿ ಕಾಫಿಸೀಮೆಯ ಭೂತವನ್ನೂ ಕರೆದು ಮನೆಯೊಳಗಿಟ್ಟುಕೊಂಡಿದ್ದಾಳೆಂಬ ಪಿಸ ಪಿಸವೇ?ಆಕೆಯನ್ನ ಯಾರೂ ಎದುರು ಹಾಕಿಕೊಳ್ಳದಂತೆ ಮಾಡಿತ್ತು.
ಮರಡಿ ವೆಂಕಣ್ಣ:
ನಮ್ಮೂರಿನ ವಡ್ಡರಲ್ಲಿ ಮರಡಿವೆಂಕಣ್ಣನೇ ವಿಚಿತ್ರ.ಬೆಳಿಗ್ಗೆ ಆರಕ್ಕೆಲ್ಲಾ ಕೆಳಗೇರಿಯವರನ್ನ ಹುಗಿಯುತಿದ್ದ ಹಾಳು ಮರಡಿ ಕಡೆಗೆ ಸಲಕೆ, ಪಿಕಾಸಿ,ಗುದ್ದಲಿಗಳ ಹಿಡಿದು ಹೊರಟು ಬಿಡುತಿದ್ದ.ಹಿಂದೆ ಈ ಊರನ್ನ ಸೋಮಶೇಖರ ನಾಯಕ ಆಳುತಿದ್ದನೆಂದೋ ಆತ ಎಲ್ಲೆಂದರಲ್ಲಿ ಚಿನ್ನ ಬೆಳ್ಳಿಗಳನ್ನ ಹುದುಗಿಸಿರುವನೆಂದು ಕಲ್ಲೇಶನ ಗುಡಿಗೆ ಬಂದವರ್ಯಾರಿಂದಲೋ ತಿಳಿದುಕೊಂಡು ಆ ಮರಡಿಯು ಹಿಂದೆ ಬ್ರಹ್ಮಣರ ಅಗ್ರಹಾರವೆಂತಲೂ ಅಲ್ಲಿ ಬಗೆದರೆ ಏನಾದರೂ ಸಿಕ್ಕೀತೆಂದು ಹೀಗೆ ಬೆಳಗಿನಿಂದ ಸಂಜೆಯತನಕ ದಿಬ್ಬ ಬಗೆಯುತಿದ್ದ.ಈತನ ದೆಸೆಯಿಂದ ಬಹಿರ್ದೆಸೆಗೆ ಹೋಗಬೇಕಾದ ಹೆಣ್ಣು ಮಕ್ಕಳೂ ಕತ್ತಲನ್ನೇ ಕಾಯಬೇಕಾಗಿತ್ತು.ಪರ ಊರಿಂದ ಬಂದವರಂತೂ ಸಮಯ ವ್ಯತ್ಯಾಸದಿಂದಾಗಿ ಬಾಯಿತುಂಬಾ ಬೈಯುತಿದ್ದರು.ಆತನ ಸುತ್ತ ದೇವತೆಗಳಂತೆ ಬಂದೂ ಬಂದೂ ಕೂರುತಿದ್ದ ಮಕ್ಕಳ ಕಣ್ಣಿಗೆ ಮಾತ್ರ ಚೇಳು,ಝರಿಗಳ ವಿನಃ ಮತ್ತೇನೂ ಕಾಣಲಿಲ್ಲ.ಓಣಿಯವರು ಬಗೆಯಲಿ ಬಿಡು ನಾಳೆ ಶ್ರಮಕ್ಕೆ ಅನುಕೂಲವಾಗುತ್ತದೆಂದು ಆತ ತೋಡುತಿದ್ದ ಗುಂಡಿಗಳಿಗೆ ತಕರಾರು ಮಾಡುತ್ತಲಿರಲಿಲ್ಲ. ತಂದಾಕದೇ ಪುಗಸೆಟ್ಟೆ ಸಾವಕಾರನಾಗುವ ಈತನ ಕಿರಿಕಿರಿ ಕನಸನ್ನ ಪತ್ನಿ ಸರೀಕರ ಗಮನಕ್ಕೆ ತಂದು ಬ್ಯಾರೆ ಒಲೆಯನ್ನೇ ಹೂಡಿಬಿಟ್ಟಳು.ಅವರ ಮಕ್ಕಳು ಮಾತ್ರ ಕೊಟ್ಟಾಗ ಅಪ್ಪ ಕೊಡದಾಗ ಅವ್ವ ಅಂತ ಎರಡೂ ಗಡಿಗಳನ್ನ ಸುತ್ತುತಿದ್ದವು.
ಗೊನಿ ನಾಗ:
ಕಳವನ್ನೇ ಕಸಬು ಮಾಡಿಕೊಂಡಿದ್ದ ಗೊನಿ ನಾಗ ಬಾಳೆಗೊನಿ,ತೆಂಗಿನ ಗೊನಿಯನ್ನ ನಸುಕಿನೊಳಗೇ ಹೊತ್ತು ತಂದು ಅಂಗಡಿ ಬಾರಾವಲಿಗೆ ವಿಲೇವಾರಿ ಮಾಡುತಿದ್ದ.ಆತ ಕೊಟ್ಟಷ್ಟು ಕಾಸು ಪಡೆದು ಹೊತ್ತು ಹುಟ್ಟುವುದರೊಳಗೇ ಸರಾಯಿ ದುರ್ಗವ್ವನ ಮನಿ ಕದತಟ್ಟಿ ಕಂಠ ಪೂರ್ತಿ ಕುಡಿದು ನಾಟಕದ ಹಾಡು ಹೇಳುತ್ತ ಮನೆ ಸೇರುತಿದ್ದ .ಕೇಳಿದ್ದನ್ನ ಮಾಡಿ ಹಾಕದಿದ್ದರೆ ಹೆಂಡತಿಗೆ ಸಿಕ್ಕದ್ದರಲ್ಲೇ ಬೀಸುತ್ತ ಓಣಿಯೆಲ್ಲಾ ಸುತ್ತಿಸುತಿದ್ದ ಆತ ಹೆದರುತಿದ್ದದ್ದು ತಮ್ಮನ ಹೆಂಡತಿ ರೇಣವ್ವನಿಗೆ ಮಾತ್ರ.ದಿನವೂ ಹೆಂಡತಿಯನ್ನ ಓಡಾಡಿಸಿ ಮನೆ ಮನೆ ಹೊಕ್ಕು ಹೊಡೆದರೂ ಸುಮ್ಮನೆ ನೋಡುವ ಗಂಡಸರ ನಡಾವಳಿಕಂಡು ಒಮ್ಮೆ ಈಕೆಯೇ ಆತನ ಕಾಲರ್ ಹಿಡಿದು “ಯಾಕಲೋ ಯಾತೋಟದ್ದೋ ತಂದು ಮುಂಜ ಮುಂಜಾಲೇ ಹುಚ್ಚಿ ಕುಡುದು ಹೆಂಗಸರಮೇಲೆ ಕೈ ಮಾಡ್ತಿಯಾ ಲಗಾಮರ್ದಾನೆ” ಅಂತ ಚಪ್ಪಲಿ ಸೇವೆ ಮಾಡಿದಾಗಿನಿಂದ ಗೊನೆ ನಾಗನ ಹೆಂಡತಿ ಕುಡಿದು ಬಂದರೆ ಸಾಕೂ ರೇಣಕ್ಕಾ ಅಂತ ಸೌಂಡು ಮಾಡುತಿದ್ದಳು.ನಾಗ ನಕ್ಕು ಆಕಿ ಮನಿಕಡೆ ತಿರುಗಿ ಕೈ ಮುಗಿದು ಮಲಗಿ ಬಿಡುತಿದ್ದ.
ಬಣ್ಣದ ಭದ್ರಪ್ಪ:
ಊರಿಗೆ ಬರಗಾಲ ಬಂದರೂ ಭದ್ರಪ್ಪನ ಕೈಯ ಸಿಗರೇಟು ಮಾತ್ರ ನಿಲ್ಲಲ್ಲ.ಕಾರಣ ಆತ ಅವರ ಟೊಪ್ಪಿಗೆ ಇವರಿಗಿಟ್ಟು ಮಾರ್ಜಾಲ ನ್ಯಾಯದಿಂದಲೇ ಬದುಕುತಿದ್ದ.ಊರು ಅನ್ನಕ್ಕಾಗಿ ಪರದಾಡುವಾಗಲೂ ಈತ ಜೇಬಿನೊಳಗೊಂದು ಹುಣಿಸಿ ಬೀಜವಿಟ್ಟುಕೊಂಡೇ ನಾಟಕದ ವಸರಮ್ಮನಿಗೆ ಗಟ್ಟಿ ಬಂಗಾರ ನಿನಗೆ ನಿನಗೇ ..ಎಂದು ನಂಬಿಸಿ ಕುಡಿದು ತಿಂದು ಅರಾಮಾಗಿ ಬರುತಿದ್ದ.ಓಣಿಕಡೆ ಬಂದ ರಾಸುಗಳನ್ನ,ತಿಪ್ಪೆ ಕಡಿಗೆ ಬಂದ ಕೋಳಿಗಳನ್ನ ಕ್ಷಣ ಮಾತ್ರದೊಳಗೆ ಇಲ್ಲವೆನ್ನಿಸಿ ಸದಾ ನೀಚ ಅಡುಗೆಯನ್ನೇ ಸವಿಯುತಿದ್ದ.ಜೇಬಿನಲ್ಲಿ ರೊಕ್ಕ ಕಡಿಮೆಯಾದರೆ ಸಾಕು ಹೆಣ್ಣುತೋರಿಸುವ ಕಾಯಕ ಹಿಡಿಯುತಿದ್ದ.ಈತನ ಮಾತಿಗೆ ನೆಲೆ ನಿಂತ ಹೆಣ್ಣು ಮಕ್ಕಳೆಲ್ಲಾ ಖರ್ಚಾಗಿ ಬಿಡುತಿದ್ದವು.ಹಾಗಾಗಿ ಹೆಣ್ಣು ಹಡೆದ ಜೀವಗಳಿಗೆ ಭದ್ರಪ್ಪ ಸಂಬಂಧ ಕುದುರಿಸುವ ಸಂಜೀವಿನಿಯಂತಾಗಿದ್ದ.ಮದುವೆ ಮಾತೆತ್ತದೆ ಬರೀ ಹೆಣ್ಣು ನೋಡುವುದನ್ನೇ ಅಭ್ಯಾಸ ಮಾಡಿದೊಂಡಿದ್ದ ಸಣ್ಣಿರಪ್ಪನಿಗೆ ಬುದ್ದಿ ಕಲಿಸಬೇಕೆಂದು ಯಾರೋ ಒಮ್ಮೆ ಬುದ್ದಿ ಕಲಿಸಲು ಭದ್ರಪ್ಪನಿಗೆ ಎದರು ಈಳೇವು ನೀಡಿದರು.ಭದ್ರಪ್ಪ ಒಪ್ಪಿ ಹೆಣ್ಣು ತೋರಿಸುತ್ತೇನೆ ಎಂದು ಸಣ್ಣೀರಪ್ಪನನ್ನ ಕರೆತಂದ.ಕಟ್ಟೆ ಮ್ಯಾಲೆ ಕುಂತ ತನ್ನ ಅಜ್ಜಿಯನ್ನೇ ತೋರಿಸಿ ನೋಡ್ರಿ ಎಂದ.ಈರಪ್ಪನ ಜೊತೆ ಬಂದವರು ” ಲೇ ಭದ್ರಿ ಹೆಣ್ಣು ತೋರಿಸ್ತೀನಿ ಅಂದ್ಯಲ್ಲಲೇ ” ಎನ್ನಲು :” ಹೌದು ಅದು ಹೆಣ್ಣಲ್ಲವಾ ” ಎಂದು ನಕ್ಕಿದ್ದ.ಸ್ವರಗಳ ಏರಾಟವಾಯ್ತು ಜನ ಕಲೆತರು,ಕೇಳಿದರು,ನಕ್ಕರು ಸರಿಯಾಗೇ ತೋರಿಸಿ ಬಿಡು ಎಂದು ಹೊರಟರು.
ಬಯಲು ಸೀಮೆಯನ್ನೇ ಹೆಚ್ಚು ಆವರಿಸಿಕೊಂಡಿರುವ ಈ ಐನಾತಿ ಅಡ್ಡ ಹೆಸರುಗಳು ಹಸಿವಿನ ಬಹು ಬಣ್ಣಗಳ ರೂಪಕಗಳಂತೆ ಕಾಣುತ್ತವೆ.ಹೆಣ್ಣು ಮದುವೆಯಾದೊಡನೆ ತನ್ನ ಮೂಲ ಹೆಸರು ಕಳಕೊಂಡು ಗಂಡಸರ ನಾಮವನ್ನೇ ಪ್ರಧಾನಗೊಳಿಸುವಂತೆ ಈ ಅಡ್ಡ ಹೆಸರುಗಳು ನಾಮಪದಗಳಿಗಿಂತಲೂ ಕ್ರಿಯಾಪದಗಳನ್ನೇ ಬೆನ್ನಿಗಂಟಿಸಿಕೊಂಡಂತೆ ಕಾಣುತ್ತವೆ.ಕೆಲವು ಅಡ್ಡ ಹೆಸರುಗಳು ಸ್ಥಾಯೀ ಭಾವದಂತೆ ನಿಂತರೆ ಇನ್ನೂ ಕೆಲವು ಅಡ್ಡ ಹೆಸರುಗಳು ಸಂಚಾರಿ ಭಾವದಂತೆ ಬಂದೂ ಬಂದೂ ನಾಮಪದಗಳನ್ನ ಆಗಾಗ ಸುತ್ತಿಕೊಳ್ಳುತ್ತವೆ.ಎಣ್ಣೆ,ಪೆಟ್ರೋಲು,ಮಳೆ,ಬಕೆಟ್ಟು,ಬುಲ್ಡೆ,ದೇಸಾಂತರ,ಮೊದಲಾದವು ಮೂಲ ಹೆಸರುಗಳಿಗೆ ತಾತ್ಕಾಲಿಕ ಗುಣವೊದಗಿಸುವವೇ ವಿನಃ ( ಮಳೆ ಮಂಜ,ಎಣ್ಣಿ ನಾಗ,ಬುಲ್ಡಿ ಪರುಸ,ದೇಸಾಂತರ ಮಲ್ಲಿ ) ಸಾಂಸ್ಕೃತಿಕ ಐಡಂಟಿಟಿ ಒದಗಿಸವು.ಅಡ್ಡ ಹೆಸರುಗಳು ಶಾಲಾ ಕಾಲೇಜು,ಸಿನಿಮಾ,ವ್ಯಾಪಾರ,ಹೋಟೇಲು,ಮಾರುಕಟ್ಟೆ ಮೊದಲಾದ ನೆಲೆಗಳಿಂದ ನೋಡಿದಾಗ ಕಾಣುವ ವಿಸ್ತಾರವನ್ನ ಮತ್ತಷ್ಟೂ ಶೋಧಿಸಬಹುದಾಗಿದೆ.