ಅಡ್ಡ ಹೆಸರುಗಳು ಮತ್ತು ಕದಿರೆಪ್ಪ ಮಾಸ್ಟರ್
ನಮ್ಮ ಶಾಲೆಯಲ್ಲಿ ಮುಖ್ಯ ಶಿಕ್ಷಕರು ದಪ್ಪನೆಯ.. ಕಪ್ಪನೆಯ.. ಎತ್ತರದ ವ್ಯಕ್ತಿ ಹೆಸರು ಹೇಳಿದರೇನೇ ಮಕ್ಕಳೆಲ್ಲಾ ನಡುಗುತ್ತಿದ್ದೆವು. ಅವರ ಹೆಸರು ಕದಿರೆಪ್ಪ ಮಾಸ್ಟರ್. ಶಾಲೆಯ ವಿಸ್ತೀರ್ಣ ಬಹುಶಃ ಒಂದು ಎಕರೆ. ಶಾಲೆ ಚೌಕಾಕಾರದ ಆ ಬಯಲಿನಲ್ಲಿ ಒಂದು ಅಂಚಿನಲ್ಲಿ ಮಧ್ಯಕ್ಕೆ ನೆಲೆಗೊಂಡಿತ್ತು. ಶಾಲೇ ಎಲ್ ಆಕಾರದಲ್ಲಿ ಇತ್ತು.
ಮುಂಭಾಗದ ಗೇಟಿನಿಂದ ಶಾಲೆ ಬಹಳ ಸುಂದರವಾಗಿ ಕಾಣುತ್ತಿತ್ತು. ಗೇಟಿನ ಮತ್ತು ಶಾಲೆಯ ಮಧ್ಯದ ಭಾಗದಲ್ಲಿ ಪುಟ್ಟ ಗಣೇಶನ ಗುಡಿ ಇತ್ತು. ಅದಕ್ಕೆ ನಮಿಸಿಯೇ ಎಲ್ಲರೂ ದಾಟಿ ಶಾಲೆಗೆ ಹೋಗಬೇಕಿತ್ತು. ನಮ್ಮ ಶಾಲೆಯಲ್ಲಿಯೇ ನಮ್ಮ ಕನ್ನಡದ ಜ್ಞಾನಪೀಠ ಪಡೆದಿರುವ ಹೆಮ್ಮೆಯ ಕವಿ ಮಾಸ್ತಿ ವೆಂಕಟೇಶ ಅಯ್ಯಂಗಾರರು ಓದಿದ್ದರಂತೆ ಎಲ್ಲರೂ ಮಾತನಾಡಿಕೊಳ್ಳುತ್ತಿದ್ದರು
. ನಮ್ಮ ಶಾಲೆಯ ಆವರಣದಲ್ಲಿ ಸುತ್ತಲೂ ಕೆಲವೆಡೆ ತರಕಾರಿ ಗಿಡಗಳು ಹೂವಿನ ಗಿಡಗಳು ಇದ್ದವು. ಆವರಣದ ಒಂದು ಮೂಲೆಯಲ್ಲಿ ಒಂದು ದೊಡ್ಸ ಮರವಿತ್ತು. ಅದು ನಮ್ಮ ಮನೆ ಕಾಂಪೌಂಡ್ ಮತ್ತು ಶಾಲೆಯ ಕಾಂಪೌಂಡ್ ನ ಮಧ್ಯದಲ್ಲಿತ್ತು. ಅದು ಎರಡೂ ಬದಿಗೂ ತನ್ನ ವಿಶಾಲವಾದ ರೆಂಬೆಗಳನ್ನು ಚಾಚಿ ತಂಪಾದ ನೆರಳೀವ ಮರವಾಗಿತ್ತು. ಅದು ಯಾವ ಮರವೆಂದರೆ ಅದರಲ್ಲಿ ಉದ್ದದ ಕತ್ತಿಯಂತ ಕಾಯಿ ಬಿಡುತ್ತಿತ್ತು. ಸುಂಕತ್ತಿ ಮರ ಎನ್ನುತ್ತಿದ್ದರು ಬಹುಶಃ. ಆ ಮರದ ನೆರಳಲ್ಲಿ ನಮ್ಮ ಅಜ್ಜಿ ಸಿದ್ದಮ್ಮಣ್ಣಿ ಚಾಪೆ ಹಾಸಿಕೊಂಡು ಅದರ ಮೇಲೆ ಕೂರಿಸಿಕೊಂಡು ನಮಗೆಲ್ಲಾ ತಲೆಗೆ ಹರಳೆಣ್ಣೆ ಹಚ್ಚಿ ತಲೆಬಾಚುತ್ತಿದ್ದರು. ಅಜ್ಜಿ ತಲೆ ಬಾಜಿದರೆ ಮೂರುದಿನ ತಲೆಗೂದಲು ಆಕಡೆ ಈಕಡೆ ಹೊರಚಾಚುತ್ತಿರಲಿಲ್ಲ ಅಷ್ಟು ಬಿಗಿಯಾಗಿ ಹೆಣೆದು ಜಡೆ ಹಾಕುತ್ತಿದ್ದರು.
ಈಗ ಕದಿರೆಪ್ಪ ಮಾಸ್ಟರ್ ಬಗ್ಗೆ ನಾನು ಹೇಳ ಹೊರಟಿರುವುದು. ನೋಡಲು ಕಪ್ಪನೆಯ ದಪ್ಪನೆಯ ವ್ಯಕ್ತಿಯಾದರೂ ಮಾತು ಮೆಲುವಾಗಿ ಜೋರು ಮಾತನಾಡಿದರೆ ಎಲ್ಲಿ ಧ್ವನಿ ಹಾರಿಹೋಗುವುದೋ ಎನ್ನುವಂತೆ ಮೃದುವಾಗಿ ಮಾತುಗಳಾಡುತ್ತಿದ್ದರು. ಆದರೆ ಮಕ್ಕಳು ಓದದೆ ಇದ್ದಾಗ ಹೇಳದ ಕೆಲಸ ಮಾಡದೆ ಶಾಲೆಗೆ ಹೋದರೆ ಅವರು ಕೃತಿಯಲ್ಲಿ ತೀಕ್ಷ್ಣವಾದ ಶಿಕ್ಷೆ ಕೊಡುತ್ತಿದ್ದರು. ಅಂಗೈಗೆ ಹೊಡೆಯದೆ ಅದನ್ನು ತಿರುಗಿಸಿ ಗೆಣುವುಗಳ ಮೇಲೆ ಕೋಲು ಬೀಸುತ್ತಿದ್ದರು. ಕಿವಿ ಹಿಡಿದುಕೊಂಡರೆ ಅವರ ಸಿಟ್ಟು ಇಳಿಯುವವರೆಗೂ ಗಿಂಡುತ್ತಾ ಹಣ್ಣು ಮಾಡಿಬಿಡುತ್ತಿದ್ದರು. ಅದಕ್ಕಾಗಿಯೇ ಅವರ ಮಾತು ಮೃದುವಾದರೂ ನಾವೆಲ್ಲರೂ ಅವರೆಂದರೆ ಹೆದರಿ ಒಳಗೊಳಗೇ ನಡುಗುತ್ತಿದ್ದೆವು. ಹೀಗಿದ್ದ ನಮ್ಮ ಮಾಸ್ಟರ್ ತುಂಬಾ ಹಾಸ್ಯಪ್ರಜ್ಞೆಯ ವ್ಯಕ್ತಿಯೂ ಸಹ ಆಗಿದ್ದರು.
ನಮ್ಮ ಏಳನೇ ತರಗತಿಗೆ ಅವರೇ ಮೊದಲನೇ ಪೀರಿಯಡ್ಡಿಗೆ ಬರುತ್ತಿದ್ದರು. ಈಗಿನಂತೆ ನಮಗೆ ಕ್ಲಾಸ್ ಟೀಚರ್ ಅಂದರೇನೇ ಗೊತ್ತಿರಲಿಲ್ಲ. ಬಹುಶಃ ಅವರೇ ಇದ್ದಿರಬಹುದೇನೋ ಅದಕ್ಕೆ ಅವರೇ ಬರುತ್ತಿದ್ದರು. ಅವರು ಹಾಜರಿ ಹಾಕುವಾಗಲೇ ನಮ್ಮನ್ನೆಲ್ಲಾ ನಕ್ಕು ನಗಿಸುತ್ತಿದ್ದರು. ಹಾಜರಿ ಪುಸ್ತಕ ಮೇಜಿನ ಮೇಲೆ ಇಟ್ಟು ಒಂದೊಂದೇ ಹೆಸರು ಕರೆಯುತ್ತಿದ್ದರು. ಅಮರ್ ಇದ್ದರೆ ಮರಣ್ , ಭಾಗ್ಯ ಇದ್ದರೆ ದುರ್ಭಾಗ್ಯ, ದೇವ ಪ್ರಕಾಶ್ ಇದ್ದರೆ ದೆವ್ವಾ , ಅದರ ನಂತರದ ಹೆಸರು ದಕ್ಷಿಣಾಮೂರ್ತಿ ಇತ್ತು ॒ದೆವ್ವಕ್ಕೆ ಸಂಗಾತಿಯಾಗಿ ಪಿಶಾಚಿ ಎಂದಾಗುತ್ತಿತ್ತು. ಅವರು ಹೆಸರು ಕರೆದರೆ ಮಕ್ಕಳ ಮುಖವೆಲ್ಲಾ ಕೆಂಪಾಗಿ ಕೇಳುವವರಿಗೆ ಕಚಗುಳಿಯಿಡುವಂತೆ ಬಿದ್ದು ಬಿದ್ದು ನಗುತ್ತಿದ್ದೆವು ॒ಮುನಿರತ್ನ ಕಪ್ಪು ಸುಂದರಿಯಾಗಿದ್ದರು ಅವರನ್ನು ಕರಿನಾರಿ ಎಂದು, ಗಿರಿಜಾ ಇದ್ದರೆ ಬೆಟ್ಟಮ್ಮಾ, ನಾನು ಗುಂಡನೆ ಇದ್ದೆ ನನ್ನ ಹೆಸರು ಬಂದರೆ ಬೋಂಡಾ ಎಂದು ಕರೆಯುತ್ತಿದ್ದರು. ಅಷ್ಟು ಹೊತ್ತು ನಗುತ್ತಿದ್ದ ನಾನು ನನ್ನ ಹೆಸರು ‘ಬೋಂಡಾ’ ಕರೆದಾಗ ಯಾರು ಯಾರು ನಗುತ್ತಿದ್ದರು ಅವರ ಮೇಲೆ ಕಣ್ಣಿಡುತ್ತಿದ್ದೆ.. ನಂತರ ಏನೋ ಅವರಿಗೆ ಅಂದು ಸಮಾಧಾನಪಡುತ್ತಿದ್ದೆ.(ಹ ಹ ಹ ಹ ಹ.)
ಕದಿರೆಪ್ಪ ಮಾಸ್ಟರ್ ಬರೀ ಪಾಠದ ಟೀಚರ್ ಆಗಿರಲಿಲ್ಲ. ಒಬ್ಬ ಉತ್ತಮ ನಿರೂಪಕರಾಗಿದ್ದರು. ಬಿಡುವಿನ ವೇಳೆಯಲ್ಲಿ ರಾಮಾಯಣ ಮತ್ತು ಮಹಾಭಾರತದ ಸಂಪೂರ್ಣ ಕಥಾಸಾರವನ್ನು ವಿದ್ಯಾರ್ಥಿಗಳಿಗೆ ಹೇಳುತ್ತಿದ್ದರು. ಅವರ ಈ ಕಾವ್ಯಗಳ ನಿರೂಪಣೆಯಲ್ಲಿ ನಾವು ಮೈಮರೆತು ಆಲಿಸುತ್ತಿದ್ದೆವು.
ಮಾಸ್ಟರ್ ಸಹ ಆ ಮಹಾಕಾವ್ಯಗಳ ಪಾತ್ರಗಳ ಪರಕಾಯ ಪ್ರವೇಶ ಮಾಡಿ ನಮಗೆ ಕಣ್ಣಿಗೆ ಕಟ್ಟುವಂತೆ ಹೇಳುತ್ತಿದ್ದರು. ನನಗೆ ಬುದ್ದಿಬರುವವರೆಗೂ ರಾಮಾಯಣ ಮತ್ತು ಮಹಾಭಾರತವನ್ನು ಬರೆದವರು ನಮ್ಮ ಗುರುಗಳಾದ ಕದಿರೆಪ್ಪ ಮಾಸ್ಟರೇ ಎಂದು ತಿಳಿದಿದ್ದೆನು. ನಂತರ ಅವನ್ನು ಬರೆದವರು ವಾಲ್ಮೀಕಿ ಮತ್ತು ವೇದವ್ಯಾಸ ಮುನಿಗಳು ಎಂದು ಅರಿತೆನು. ಅಷ್ಟರ ಮಟ್ಟಿಗೆ ಅವರು ತಮ್ಮ ಸೊಗಸಾದ ಶೈಲಿಯಲ್ಲಿ ಮಕ್ಕಳನ್ನು ಮೋಡಿಗೆ ಒಳಪಡಿಸಿ ಕಥೆಯನ್ನು ನಿರೂಪಿಸುತ್ತಿದ್ದರು.
ಬಹುಶಃ ಇಪ್ಪತ್ತೈದು ವರ್ಷಗಳ ಹಿಂದೆ ಅವರನ್ನು ನೋಡುವ ಹಂಬಲ ಹೊತ್ತು. ನಾನು ಆ ಊರಿಗೆ ಹೋಗಿದ್ದೆನು. ನಮ್ಮ ಗುರುಗಳ ನೋಡುವ ಆಸೆಹೊತ್ತು ಬಾಲ್ಯದ ಆ ನೋಟವನ್ನು ಅವರೊಂದಿಗೆ ನೆನಪು ಮಾಡಿಕೊಳ್ಳಲು ತುಂಬಾ ಕಾತುರಳಾಗಿ ಹೋದೆ ಆದರೆ ಮಾಸ್ಟರ್ ಈ ಲೋಕದಲ್ಲಿ ಇರಲಿಲ್ಲ. ದುಃಖದ ಮನಸ್ಸಿನಿಂದ ವಾಪಸ್ಸಾಗಿದ್ದೆ. ಅವರು ನಮ್ಮೊಡನಿಲ್ಲದಿದ್ದರೂ.. ಅವರು ಕೊಟ್ಟಿರುವ ವಿದ್ಯೆ ಸದಾ ನಮ್ಮನ್ನು ಕಾಯುತ್ತಾ ನನ್ನೊಡನಿದೆ. ನಾನು ಪಾಠ ಮಾಡುವಾಗ ಸದಾ ಸ್ಮೃತಿಯಲ್ಲಿ ಶಾಲಾ ಗುರುಗಳು ನೆನಪಾಗುತ್ತಾರೆ. ಗುರುಗಳಿಗೆ ಮರಣವಿಲ್ಲ ॒ಅವರು ಸದಾ ಶಿಷ್ಯರ ವಿದ್ಯೆಯಲ್ಲಿ ಮುಂದಿನ ಪೀಳಿಗೆಯೊಂದಿಗೆ ಸಂಚರಿಸುತ್ತಲೇ ಇರುತ್ತಾರೆ. ಹೌದಲ್ಲವೇ?