ವಿಜಯಪುರ,ಸೆ,೧೪: ಕನ್ನಡ ಚಿತ್ರರಂಗದ ಖ್ಯಾತ ಹಾಸ್ಯನಟ ರಾಜು ತಾಳಿಕೋಟೆ ವಿರುದ್ಧ ಸೋದರಳಿಯನ ಪತ್ನಿ ಮೇಲೆ ಹಲ್ಲೆ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ. ಕೌಟುಂಬಿಕ ಕಲಹದಿಂದಾಗಿ, ಅಕ್ಕನ ಪುತ್ರ ಫಯಾಜ್ ಕರಜಗಿ ಪರವಾಗಿ ನಿಂತು ರಾಜು ಅವರು ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ. ಫಯಾಜ್ ಅವರ ಪತ್ನಿಯ ಮೇಲೆ ಹಲ್ಲೆ ನಡೆಸಿ, ಬಲವಂತಾಗಿ ವಿಷ ಕುಡಿಸಿರುವ ಆರೋಪ ಮಾಡಲಾಗಿದ್ದು, ಪ್ರಸ್ತುತ ಸನಾ ಕರಜಗಿ(ಫಯಾಜ್ ಪತ್ನಿ) ವಿಜಯಪುರ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಸನಾ ಕರಜಗಿ ಅವರ ತಾಯಿ ಫಾತಿಮಾ ಶಿರಹಟ್ಟಿ ವಿಜಯಪುರ ಮಹಿಳಾ ಠಾಣೆಗೆ ದೂರು ಸಲ್ಲಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ರಾಜು ತಾಳಿಕೋಟೆ, ಪತ್ನಿ ಪ್ರೇಮಾ ತಾಳಿಕೋಟೆ, ಫಯಾಜ್ ಕರಜಗಿ, ಸನಾ ಭಾವ ಪಿಂಟು ಸೇರಿ ಆರು ಜನರ ವಿರುದ್ಧ ದೂರು ದಾಖಲಾಗಿದೆ.
ರಾಜು ತಾಳಿಕೋಟೆ ಹೇಳಿದ್ದೇನು?
ತಮ್ಮ ಮೇಲೆ ಸನಾ ಸಂಬಂಧಿಕರು ಹಲ್ಲೆ ನಡೆಸಿದ್ದಾರೆ ಎಂದು ರಾಜು ತಾಳಿಕೋಟೆ ಪ್ರತಿ ಆರೋಪ ಮಾಡಿದ್ದು, ಆಸ್ಪತ್ರೆಗೆ ದಾಖಲಾಗಿದ್ದಾರೆ. ಹಾಗೆಯೇ ತಮ್ಮ ವಿರುದ್ಧ ಆರೋಪಿಸಿರುವುದು ಸುಳ್ಳು ಎಂದು ಅವರು ಹೇಳಿದ್ದಾರೆ. ಸನಾ ಸಂಬಂಧಿಕರು ತಮ್ಮ ಮೇಲೆ ಹಲ್ಲೆ ನಡೆಸಿ, ಪಿಸ್ತೂಲ್ ತೋರಿಸಿ ಜೀವ ಬೆದರಿಕೆ ಹಾಕಿದ್ದಾರೆಂದು ರಾಜು ತಾಳಿಕೋಟೆ ಆರೋಪ ಮಾಡಿದ್ದಾರೆ. ಇದಕ್ಕೆ ಸಂಬಂಧಪಟ್ಟಂತೆ, ಸನಾ ಕರಜಗಿ ಸಂಬಂಧಿಕ ಎಸ್.ಕೆ.ಮೋದಿ ವಿರುದ್ಧ ಪೊಲೀಸ್ ಠಾಣೆಗೆ ದೂರು ನೀಡುವುದಾಗಿ ರಾಜು ಹೇಳಿಕೆ ನೀಡಿದ್ದಾರೆ.