ಐಎಸ್ ಐ ಗೂಢಾಚಾರಿಗಳ
ಕಣ್ಣು ಈಗ ಕರ್ನಾಟಕ ದತ್ತ..!
Writing;ಪರಶಿವನ ಧನಗೂರು
ದಕ್ಷಿಣ ಕಮಾಂಡರ್ ಸೇನಾ ಗುಪ್ತದಳದ ಅಧಿಕಾರಿಗಳು ಮತ್ತು ಬೆಂಗಳೂರಿನ ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಿ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ನಂತೆ ಕೆಲಸಮಾಡುತ್ತಿದ್ದ ನಕಲಿ ಸೇನಾಧಿಕಾರಿ ಜಿತೇಂದರ್ ಸಿಂಗ್ ಎಂಬಾತನನ್ನು ಬಂಧಿಸಿದ್ದಾರೆ. ಬೆಂಗಳೂರಿನ ಕಾಟನ್ ಪೇಟೆಯ ಜಾಲಿಮೊಹಲ್ಲಾದಲ್ಲಿ ಬಾಡಿಗೆ ಮನೆಯಲ್ಲಿ ವಾಸವಿದ್ದ ರಾಜಸ್ಥಾನ ಮೂಲದ ಈ ಜಿತೇಂದರ್ ಸಿಂಗ್ ಪಾಕಿಸ್ತಾನದ ಅಂತಾರಾಷ್ಟ್ರೀಯ ಗಡಿ ಹಂಚಿಕೊಂಡಿರುವ ಬಾಡ್ಮೇರ್ ಜಿಲ್ಲೆಯವನು. ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಆರ್ಮಿಗೆ ಭಾರತದ ಸೇನಾ ರಹಸ್ಯವನ್ನು ರವಾನಿಸುತಿದ್ದನೆಂಬ ಖಚಿತ ಮಾಹಿತಿ ಮೇರೆಗೆ ಎನ್. ಐ.ಎ. ಹಲವು ದಿನಗಳಿಂದ ಹೆಚ್ಚಿನ ಮಾಹಿತಿ ಕಲೆಹಾಕಿ ಬೆಲೆಗೆ ಕೆಡವಿ ಬಂಧಿಸಿದೆ. ಕಳೆದ ವಾರ ಭಾರತದೊಳಗೆ ನಿಗೂಢವಾಗಿ ಜನನಿಬಿಡ ಪ್ರದೇಶಗಳಲ್ಲಿ ಬಾಂಬ್ ಬ್ಲಾಸ್ಟ್ ನಡೆಸಿ ವಿಧ್ವಂಸಕ ಕೃತ್ಯ ನಡೆಸಲು ಕಾದು ಕುಳಿತಿದ್ದ ಪಾಕಿಸ್ತಾನದ ಐ.ಎಸ್.ಐ ಟ್ರೈನ್ಡ್ ಉಗ್ರಗಾಮಿಗಳನ್ನು ಬಂಧಿಸಿದ್ದ ದೆಹಲಿಯ ವೀಶೇಷ ಪೊಲೀಸ್ ಘಟಕ ತನಿಖೆ ನಡೆಸುತ್ತಿರುವ ಬೆನ್ನಲ್ಲೇ ಈಗ ಮತ್ತೊಂದು ಐ.ಎಸ್.ಐ. ಸಂಚು ಬಯಲಾಗುತ್ತಿದೆ.
ಭಾರತದೆದುರು ಎರಡು ಬಾರಿ ಯುದ್ಧ ಮಾಡಿ ಹೀನಾಯವಾಗಿ ಸೋತಿದ್ದರೂ ಬುದ್ದಿ ಕಲಿಯದ ಶತ್ರುದೇಶ ಪಾಕಿಸ್ತಾನ ಪ್ರಾರಂಭ ದಿಂದಲೂ ಭಾರತದೊಳಗೆ ತನ್ನ ಗೂಢಾಚಾರಿಕೆ ಮೂಲಕ ಶಸ್ತ್ರಾಸ್ತ್ರಗಳನ್ನು ಸಾಗಿಸಿ, ಉಗ್ರಗಾಮಿಗಳನ್ನು ನುಗ್ಗಿಸಿ ಬಾಂಬ್ ಬ್ಲಾಸ್ಟ್ ನಡೆಸುತ್ತಾ ಬಂದಿದೆ. ಜಮ್ಮು ಕಾಶ್ಮೀರದ ಕಣಿವೆಯ ವಿಷಯವಾಗಿ ನಿತ್ಯ ಗುಂಡಿನಚಕಮಕಿ ನಡೆಸುತ್ತಾ ಕಾಲುಕೆರೆಯುತ್ತಾ ಗಡಿಯುದ್ದಕ್ಕೂ ಉಗ್ರರ ಶಿಬಿರಗಳನ್ನು ಏರ್ಪಡಿಸಿ ಭಾರತದ ನೆಮ್ಮದಿ- ಶಾಂತಿಗೆ ಭಂಗ ತರುತ್ತಿದೆ. ನಮ್ಮ ದೇಶದ ಮಿಲಿಟರಿ ಸೀಕ್ರೆಟ್ ದತ್ತಾಂಶಗಳ ಬಗ್ಗೆ ಮಾಹಿತಿ ತೆಗೆಯಲು ಕೂತಿರುವ ಪಾಕಿಸ್ತಾನದ ಗುಪ್ತಚರ ಇಲಾಖೆ ಐ.ಎಸ್.ಐ (ಇಂಟರ್ ಸರ್ವಿಸ್ ಇಂಟೆಲಿಜೆನ್ಸ್) ತಿಪ್ಪರಲಾಗ ಹಾಕಿದರೂ ಏನೂ ಮಾಡಲಾಗದೇ , ಕಳ್ಳದಾರಿಗಳನ್ನು, ಅಡ್ಡದಾರಿ ಗಳನ್ನು ಹುಡುಕುತ್ತಾ ಈಗ ಹನಿಟ್ರಾಪ್ ಎಂಬ ಕೊಳಕುದಾರಿಯ ಮೊರೆ ಹೋಗಿದೆ! ಅದಕ್ಕಾಗಿ ತಮ್ಮ ದೇಶದ ಸುಂದರ ಹುಡುಗಿಯರನ್ನು ಭಾರತದ ಮಿಲಿಟರಿ ಅಧಿಕಾರಿಗಳ ಮೇಲೆ ಚೂಬಿಟ್ಟು , ಭಾರತದ ಪ್ರಜೆಗಳನ್ನು ಹೆಂಗಸರ ದೇಹ ಸೌಂದರ್ಯ ತೋರಿಸಿ ಹನಿಟ್ರಾಪ್ ನಡೆಸಿ ಯಾಮಾರಿಸಿ , ಏನೇನೋ ಕಸರತ್ತು ನಡೆಸಿ ಭಾರತೀಯ ಮಿಲಿಟರಿ ಸೀಕ್ರೆಟ್ಸ್ ಮಾಹಿತಿ ತೆಗೆಯಲು ಹೆಣಗಾಡುತ್ತಿದೆ!
ಚಾಣಾಕ್ಷ ಚತುರ ಬುದ್ಧಿ ಇಲ್ಲದ ಪಾಕಿಸ್ತಾನ ತಮ್ಮ ದೇಶದ ಮಹಿಳೆಯರ ಮೈ ತೋರಿಸಿ ಶತ್ರುಗಳ ಮೇಲೆ ಜಯ ಸಾಧಿಸಲು ತಂತ್ರ ಹೆಣೆಯುತ್ತಿದೆ. ಆ ದೇಶಕ್ಕೆ ನಾಚಿಕೆ ಮಾನ ಮರ್ಯಾದೆ ಯಾವುದೂ ಇಲ್ಲವಾಗಿದೆ. ಹೆಣ್ಣನ್ನು ಸೈನ್ಯದ ರಹಸ್ಯ ಬೇಧಿಸಲು, ಯುದ್ಧಗೆಲ್ಲಲು ಶತ್ರುಪಾಳಯಕ್ಕೆ ಗೂಢಾಚಾರಿಕೆಗೆ ನುಗ್ಗಿಸುವುದು ರಾಜರ ಕಾಲದ ಪುರಾತನ ತಂತ್ರವೇ ಆಗಿರುವುದರಿಂದ ಭಾರತದ ಗುಪ್ತಚರ ಇಲಾಖೆಯೂ ಸದಾ ಎಚ್ಚರದಿಂದ ಇರಬೇಕಾಗುತ್ತದೆ. ಎರಡನೆಯ ಮಹಾಯುದ್ಧದಲ್ಲಿ ಹಲವಾರು ದೇಶಗಳಲ್ಲಿ ನುಸುಳಿ,ಮಿಲಿಟರಿ ಸೀಕ್ರೆಟ್ ಕದ್ದು ಕೆಲವು ದೇಶಗಳಲ್ಲಿ ಯುದ್ಧದ ಕಿಚ್ಚು ಹಚ್ಚಿದವಳು ಒಬ್ಬ ನ್ರತ್ಯಗಾರ್ತಿ ಎಂಬುದನ್ನು ಮರೆಯುವಂತಿಲ್ಲವಲ್ಲ! ಆ ಕಾರಣದಿಂದಲೇ ನಾವು ಈ ‘ಸ್ಪೈ ಮಿಷನ್!’ ಎಂಬ ಬೇಹುಗಾರಿಕೆಯ ಮಾಯಾಜಾಲದ ಬಲೆಯಲ್ಲಿ ನಮ್ಮ ದೇಶದ ಮಿಲಿಟರಿ ಅಧಿಕಾರಿಗಳು ಬೀಳದಂತೆ ಮುನ್ನೆಚ್ಚರಿಕೆ ವಹಿಸಿ, ಎಚ್ಚರಿಸಿ ಕಾಪಾಡಬೇಕಿದೆ.
ಪಾಕಿಸ್ತಾನದ ಗುಪ್ತಚರ ಐ.ಎಸ್.ಐ ನೆಟ್ವರ್ಕ್ ಜೊತೆ ಹವಾಲಾ ನೆಟ್ವರ್ಕಿಂಗ್ ಕೂಡ ಭಾರತದಲ್ಲಿ ಭರ್ಜರಿಯಾಗಿ ಹೆಣೆದುಕೊಂಡು ಅಪಾಯಕಾರಿಯಾಗಿ ವಿಸ್ತರಿಸುತ್ತಿದೆ! ಈ ಸ್ಪೈ ರ್ಯಾಕೆಟ್ ಇಂದು ನೆನ್ನೆಯದಲ್ಲ ಪಾಕಿಸ್ತಾನವಂತು ಈ ವಿಷಯದಲ್ಲಿ ಪಳಗಿದ ಪಾತಕಿ! ಬಹಳ ಹಿಂದಿನಿಂದಲೂ ಭಾರತದ ಮೇಲೆ ಚಿತ್ರ ವಿಚಿತ್ರವಾಗಿ ಬೇಹುಗಾರಿಕೆ ಸಂಚನ್ನು ನಡೆಸಿಕೊಂಡು ಬರುತ್ತಿರುವ ಪಾಕಿಸ್ತಾನ ಮತ್ತು ಲಷ್ಕರ್-ಇ-ತೋಯ್ಬಾ ಟೆರರಿಸ್ಟ್ ಗಳು ಸೇರಿಕೊಂಡು ಇತ್ತಿಚೆಗೆ ಭಾರತದೊಳಗೆ ನಿಗೂಢವಾಗಿ ಐ.ಎಸ್.ಐ.ಏಜೆಂಟ್ ಸ್ಲೀಪರ್ ಶೆಲ್ ಗಳನ್ನಿಟ್ಟು ಉಗ್ರಗಾಮಿ ಸಂಘಟನೆಗಳ ಸ್ಲೀಪರ್ ಶೆಲ್ ಗಳನ್ನಿಟ್ಟು ಕಾರ್ಯಾಚರಣೆ ನಡೆಸುತ್ತಿದೆ! ಈಗಾಗಲೇ ಪಾಕ್ ನ ಹನೀಟ್ರಾಪ್ ಬೇಹುಗಾರಿಕೆಯ ಮಾಯಾಜಾಲದ ಬಲೆಯಲ್ಲಿ ಸಿಲುಕಿ ನಮ್ಮ ದೇಶದ ಹಲವು ಜನರು ಸಣ್ಣ ಪುಟ್ಟ ಸೇನಾ ರಹಸ್ಯವನ್ನು ರವಾನಿಸಿದ್ದಾರೆ! ನಮ್ಮ ದೇಶದ ಮಿಲಿಟರಿಯೊಳಗೆ ಸೈನಿಕರ ವೇಷದಲ್ಲಿ ಐ.ಎಸ್.ಐ ಏಜೆಂಟರನ್ನು ಕೆಲಸಕ್ಕೆ ಸೇರಿಸಿ ಮಿಲಿಟರಿ ಸೀಕ್ರೆಟ್ ದತ್ತಾಂಶಗಳ. ಮಾಹಿತಿ ತೆಗೆಯಲು ನೋಡುವುದು. ಸೈನ್ಯದಕ್ಕೆ ಆಹಾರ ಪದಾರ್ಥಗಳನ್ನು ಸಪ್ಲೈ ಮಾಡುವ ಕೆಲಸದಲ್ಲಿ ತಮ್ಮ ಏಜೆಂಟರನ್ನು ಕೆಲಸಕ್ಕೆ ಸೇರಿಸಿ ಮಿಲಿಟರಿ ಸೀಕ್ರೆಟ್ ಕದಿಯುವುದು. ಮಿಲಿಟರಿ ಕೆಲಸಗಳಲ್ಲಿ ಹೊರಗುತ್ತಿಗೆ ಕಾಂಟ್ರಾಕ್ಟ್ ಕೆಲಸ ಮಾಡಿಸುವುದಾಗಿ ಸೇರಿಕೊಳ್ಳುವುದು.
ಅಥವಾ ಹೊರಗಿನಿಂದಲೇ ಸೈನ್ಯಾಧಿಕಾರಿಗಳೊಡನೆ ಸ್ನೇಹ ಬೆಳಿಸಿ ಹಣದ ಆಮಿಷ ನೀಡಿ ನಂಬಿಸಿ ಮಿಲಿಟರಿಯ ಸೂಕ್ಷ್ಮ ಮಾಹಿತಿ ಪಡೆದು ಐ.ಎಸ್.ಐ.ಗೆ ರವಾನಿಸುವುದು. ಮುಂತಾದ ವಿಧಾನಗಳಿಂದ ಪಾಕಿನ ಗೂಢಾಚಾರ ಸಂಸ್ಥೆ ಐಎಸ್ಐ ನಮ್ಮ ದೇಶದ ಮಿಲಿಟರಿಯೊಳಗಿನ ದತ್ತಾಂಶಗಳನ್ನು ಕದಿಯಲು ಸದಾ ಸಂಚು ರೂಪಿಸಿ ಹೊಂಚಿ ಕಾದು ಕುಳಿತಿರುತ್ತದೆ.
ಅದಕ್ಕಾಗಿ ಭಾರತದೊಳಗೇ ‘ಸ್ಪೈ ಮಿಷನ್!’ ಹೆಸರಿನಲ್ಲಿ ತನ್ನದೇ ಆದ ಸೀಕ್ರೆಟ್ ಏಜೆಂಟರನ್ನು ಇಟ್ಟುಕೊಂಡು ಕೆಲಸ ಮಾಡುತ್ತಿದೆ! ತನ್ನ ಬೇಹುಗಾರಿಕಾ ಜಾಲವನ್ನು ಭಾರತದೊಳಗೆ ಕಟ್ಟಲು ಹೋಗಲು ರಾತ್ರಿ ನಿದ್ದೆಗೆಟ್ಟು ಕಸರತ್ತು ನಡೆಸುತ್ತಿದೆ. ಅದಕ್ಕಾಗಿಯೇ ಅಂತಾರಾಷ್ಟ್ರೀಯ ಹಣಕಾಸು ನಿಧಿಯೂ ಭಾರತದ ಶತ್ರುರಾಷ್ಟ್ರಗಳಿಂದ ಸಂದಾಯವಾಗುತ್ತಿದೆಯಂತೇ! ನಿರಂತರವಾಗಿ ಭಾರತದೊಳಗೇ ಉಗ್ರಗಾಮಿ ಚಟುವಟಿಕೆ ಮತ್ತು ಬೇಹುಗಾರಿಕೆ ಸಂಚು ಎರಡನ್ನೂ ಸಮಾನಾಂತರವಾಗಿ ಎಡೆಬಿಡದೆ ನಡೆಸಿಕೊಂಡು ಬರುತ್ತಿರುವುದಕ್ಕೆ ಸಾಕ್ಷಿ ಎಂಬಂತೆ ವಾರಕ್ಕೊಮ್ಮೆ ಗಡಿಯಲ್ಲಿ ಜಿಹಾದಿ ಟೆರರಿಸ್ಟ್ ಗಳ ಆಕ್ರಮಣ, ನುಸುಳುಕೋರರ ಬಂಧನದ ಸುದ್ದಿ, ನಮ್ಮ ದೇಶದ ಯಾವುದೋ ರಾಜ್ಯದಲ್ಲಿ ನಿಗೂಢವಾಗಿ ಸಕ್ರಿಯರಾಗಿದ್ದ ಶಂಕಿತ ಉಗ್ರರ ಬಂಧನ, ಅಥವಾ ಐ.ಎಸ್.ಐ ಏಜೆಂಟರ ಬಂಧನದ ಸುದ್ಧಿಗೇನೂ ಕೊರತೆಯಿಲ್ಲ.
2021 ಜುಲೈ ತಿಂಗಳಲ್ಲಿ ಪೋಖ್ರಾನ್ ಆರ್ಮಿ ಬೇಸ್ ಕ್ಯಾಂಪ್ ನಲ್ಲಿ ತರಕಾರಿ ಸಪ್ಲೈ ಮಾಡುತ್ತಿದ್ದ ಹಬೀಬುರ್ ರೇಹಮಾನ್ ಅಲಿಯಾಸ್ ಹಬೀದ್ ಖಾನ್ ಮತ್ತು ಸೈನ್ಯದ ಕ್ಲರ್ಕ್ ಹುದ್ದೆಯಲ್ಲಿದ್ದ ಪರಮಜಿತ್ ಎಂಬುವರನ್ನು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ಕೆಲಸ ಮಾಡುತ್ತಿದ್ದ ಆರೋಪದ ಮೇಲೆ ಅಫೀಷೀಯಲ್ ಸೀಕ್ರೆಟ್ ಆಕ್ಟ್ ಅಡಿ ಬಂಧಿಸಿ ಜೈಲಿಗೆ ಕಳುಹಿಸಲಾಯಿತು. ಇಬ್ಬರ ಮನೆಯಲ್ಲೂ ಭಾರತೀಯ ಸೈನ್ಯದ ರಹಸ್ಯ ದಾಖಲೆಗಳನ್ನು ವಶಪಡಿಸಿಕೊಳ್ಳಲಾಯಿತು. ಭಾರತೀಯ ಮಿಲಿಟರಿ ಸೀಕ್ರೆಟ್ ನಕ್ಷೆ, ಯುದ್ಧದ ಆಪರೇಷನ್ ಪ್ಲಾನ್, ಟ್ರೈನಿಂಗ್ ಸೆಂಟರ್ ಸೀಕ್ರೆಟ್, ಗನ್ನು ಮದ್ದು-ಗುಂಡುಗಳ ಆಯುದಗಳ ಗುಪ್ತ ಮಾಹಿತಿ ದತ್ತಾಂಶಗಳನ್ನು ನಾಲ್ಕು ವರ್ಷಗಳಿಂದಲೂ ಕದ್ದು ಪಾಕಿಸ್ತಾನಕ್ಕೆ ರವಾನಿಸಿದ್ದಕ್ಕಾಗಿ ಹವಾಲಾ ಮೂಲಕ ಕೈತುಂಬಾ ಹಣ ಪಡೆದು ಕೊಂಡಿರುವುದು ತನಿಖೆಯಿಂದ ಗೊತ್ತಾಯಿತು! ತರಕಾರಿ ಸಪ್ಲೈಯರ್ ಹಬೀಬ್ ಖಾನ್ ನ ಸಂಬಂಧಿಕರು ಪಾಕಿಸ್ತಾನದ ಸಿಂಧ್ ಪ್ರಾಂತ್ಯದಲ್ಲಿದ್ದು ಅಲ್ಲಿಂದಲೇ ಐ.ಎಸ್.ಐ.ಏಜೆಂಟ್ ಕೆಲಸ ಮಾಡುತ್ತಾ ಹಣದ ಆಮಿಷ ನೀಡಿ ಭಾರತದ ರಾಜಸ್ಥಾನದ ಆರ್ಮಿ ಬೇಸ್ ಕ್ಯಾಂಪ್ ನಲ್ಲಿ ಇದ್ದ ಸೈನಿಕ ಪರಮಜೀತ್ ನನ್ನು ಪಾಕಿಸ್ತಾನದ ಗುಪ್ತಚರ ಇಲಾಖೆಯ ಏಜೆಂಟ್ ನಂತೆ ಬದಲಾಯಿಸಿದ್ದರು!
ಹಾಗೆಯೇ ಇದೇ ಸ್ಪೈ ರ್ಯಾಕೆಟ್ ನಲ್ಲಿ ಭಾರತದ ಮಿಲಿಟರಿ ಇಂಟಿಲಿಜನ್ಸ್ ಯೂನಿಟ್ ನ ಇನ್ನೂ ನಾಲ್ಕು ಅಧಿಕಾರಿಗಳು ಇರುವುದು ತಿಳಿದು ಬಂದು ಕೇಂದ್ರ ರಕ್ಷಣಾ ಇಲಾಖೆಯೇ ಬೆಚ್ಚಿ ಬಿದ್ದಿತ್ತು! 2020ರ ಅಕ್ಟೊಬರ್ ನಲ್ಲಿ ನಾಸಿಕ್ ನಲ್ಲಿ ಹೆಚ್.ಎ.ಎಲ್.ನೌಕರನನ್ನು ಬಂಧಿಸಲಾಗಿತ್ತು. ಹಣದಾಸೆಗೆ ಆತನನ್ನು ಬುಟ್ಟಿಗೆ ಬೀಳಿಸಿ ಐ.ಎಸ್.ಐ. ಏಜೆಂಟ್ ನನ್ನಾಗಿಸಿದ್ದ ಪಾಕ್ ಏಜೆಂಟರು ಆತನಿಂದಲೂ ಅತಿ ವೇಗದ ವಿಮಾನ , ಹೆಲಿಕಾಪ್ಟರ್ ತಯಾರಿಕೆಯ ದತ್ತಾಂಶಗಳನ್ನು ಪಡೆದಿದ್ದರು! 2020ಜನವರಿಯಲ್ಲಿ ವಾರಣಾಸಿಯಲ್ಲಬ್ಬ, ಐ.ಎಸ್.ಐ.ಏಜೆಂಟ್ ಸಿಕ್ಕು ಬಿದ್ದಿದ್ದ. ಹಾಗೆಯೇ ಬಾರ್ಡರ್ ಸೆಕ್ಯೂರಿಟಿ ಫೋರ್ಸ್ ನ ಮೇಲೂ ಕಣ್ಣಿಟ್ಟು ಅಲ್ಲಿಯೂ ತನ್ನ ಏಜೆಂಟರನ್ನು ತಯಾರಿಸಿದ್ದ ಐ.ಎಸ್.ಐ.ಹಣದ ಆಮಿಷ ನೀಡಿ ಅಲ್ಲಿಂದಲೂ ಹಲವಾರು ಮಿಲಿಟರಿ ಸೀಕ್ರೆಟ್ ಪಡೆದಿತ್ತು. 2018ರ ನವೆಂಬರ್ ನಲ್ಲಿ ಶೇಖ್ ರೈಜುದ್ದೀನ್ ಎಂಬ ಬಿ.ಎಸ್.ಎಫ್ ಯೋಧನನ್ನು ಬಂಧಿಸಿ ಜೈಲಿಗಟ್ಟಲಾಗಿತ್ತು. 2017 ರಲ್ಲಿ ಬಿ.ಎಸ್.ಎಫ್. ಇಂಟಿಲಿಜೆನ್ಸ್ ವಿಂಗ್ ನಲ್ಲಿದ್ದ ಹೆಡ್ ಕಾನ್ಸ್ ಟೇಬಲ್ ಅಬ್ದುಲ್ ರಶೀದ್ ಈ ಮೇಲ್ ಮೂಲಕ ಪಾಕಿಸ್ತಾನದ ಗುಪ್ತಚರ ಸಂಸ್ಥೆಗೆ ಮಾಹಿತಿ ನೀಡುತ್ತಿದ್ದನೆಂದು ದಿಲ್ಲಿ ಪೊಲೀಸರು ಬಂಧಿಸಿದ್ದರು. 2017 ರಲ್ಲಿ ಸ್ಪೆಷಲ್ ಟಾಸ್ಕ್ ಫೋರ್ಸ್ ನವರು ಕೊಲ್ಕತ್ತಾ ಬಳಿ ಇಸಾಕ್.ಅನ್ಸಾರಿ,ಅಸಾಕ್ ಅನ್ಸಾರಿ, ಜಹಾಂಗೀರ್. ಎಂಬ ಮೂವರು ಪಾಕಿಸ್ತಾನದ ಐ.ಎಸ್.ಐ.ಏಜೆಂಟರನ್ನು ಬಂದಿಸಿದ್ದರು. ಲಕ್ನೋದಲ್ಲಿ 2014ರಲ್ಲಿ ಹನಿಟ್ರಾಪ್ ಗೊಳಗಾಗಿ ಐ.ಎಸ್.ಐ.ಏಜೆಂಟ್ ಆಗಿದ್ದ ಸುನಿತ್ ಕುಮಾರ್ ಎಂಬ ಆರ್ಮಿ ಜವಾನ್ ನನ್ನು 2013ರಲ್ಲಿ ಸುರೇಂದ್ರ ಕುಮಾರ್ ಎಂಬ ಗ್ರಹಮಂತ್ರಿ ಕಾರ್ಯಾಲಯದ ನೌಕರನನ್ನು ಸ್ಪೆಷಲ್ ಟಾಸ್ಕ್ ಫೋರ್ಸ್ ಬಂಧಿಸಿತ್ತು.
ಕಾಶ್ಮೀರದಲ್ಲಿ ಭಾರತೀಯ ಸೇನೆಯಲ್ಲಿದ್ದ ಕಪಾಯಿತುಲ್ಲಾ, ಮೀರಟ್ ನಲ್ಲಿ ಆಸಿಫ್ ಆಲಿ ಭಾರತದ ಸೇನಾ ಪಡೆಯ ರಹಸ್ಯವನ್ನು ಮಾರಿಕೊಂಡು ಐ.ಎಸ್.ಐ.ಏಜೆಂಟರಾಗಿದ್ದಕ್ಕೆ ಜೈಲಿಗಟ್ಟಲಾಗಿದೆ. 2021ಮೇನಲ್ಲಿ ಪಾಕಿಸ್ತಾನದ ಪುರುಷರ ಜೊತೆ ಸಂಪರ್ಕದಲ್ಲಿದ್ದುಕೊಂಡು ಭಾರತದ ಮಿಲಿಟರಿ ಸೂಕ್ಷ್ಮ ಮಾಹಿತಿ ತಂತ್ರಜ್ಞಾನ ದತ್ತಾಂಶಗಳನ್ನು ರವಾನಿಸಿದ್ದಾರೆಂದು ಇಂದೂರ್ ನಲ್ಲಿ ಬಂಧಿಸಲಾಗಿತ್ತು. ಭಾರತದ ಸಿವಿಲ್ ಡೆಫೆನ್ಸ್ ಏಜೆನ್ಸಿಯ ಚಿಮನ್ ಲಾಲ್, ವಿಕಾಸ್ ಕುಮಾರ್ ಎಂಬುವರನ್ನು 2019ರಲ್ಲಿ ರಾಜಸ್ಥಾನದ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದರು. ಅನುಷ್ಕಾ ಚೋಪ್ರಾ ಎಂಬ ಹೆಸರಿನ ಪಾಕಿಸ್ತಾನದ ಗುಪ್ತಚರ ಇಲಾಖೆಯ ಹುಡುಗಿಯ ಮೋಹಪಾಶಕ್ಕೆ ಬಿದ್ದು ಹನಿಟ್ರಾಪ್ ಗೊಳಗಾಗಿ ಭಾರತದ ಮಿಲಿಟರಿ ಕ್ಯಾಂಪ್ ಸೀಕ್ರೆಟ್ ಗಳನ್ನು ಐ.ಎಸ್.ಐ.ಏಜೆಂಟರಿಗೆ ರವಾನಿಸಿ ಹೋಲ್ಡರ್ಸ್ ಕಡೆಯಿಂದ ಹವಾಲಾ ಮೂಲಕ ತಮ್ಮ ಬ್ಯಾಂಕ್ ಖಾತೆಗೆ ಹಣ ಹಾಕಿಸಿಕೊಂಡಿರುವುದು ತನಿಖೆಯಿಂದ ತಿಳಿದುಬಂದಿತ್ತು.
ಮತ್ತು ಭಾರತದಲ್ಲಿರುವ ಪಾಕಿಸ್ತಾನದ ಭಾರತೀಯ ರಾಯಭಾರಿ ಕಛೇರಿಯಲ್ಲಿಯೇ ವೀಸಾ ಸೆಕ್ಷನ್ ನಲ್ಲಿ ಕೆಲಸಮಾಡುತ್ತಿದ್ದ ಮೊಹ್ಮದ್ ಅಖ್ತರ್ ಎಂಬ ಐ.ಎಸ್.ಐ. ಏಜೆಂಟ್ ಪಾಕಿಸ್ತಾನಕ್ಕೆ ಪಾಸ್ ಪೋರ್ಟ್ ಕೇಳಿ ಬರುತ್ತಿದ್ದ ಮುಸ್ಲಿಮರನ್ನು ಸ್ಪೈ ರೆಕ್ರೂಟ್ಮೇಂಟ್ ಗೆ ಸೇರಿಸಿಕೊಂಡು, ಪಾಕಿಸ್ತಾನದ ಗುಪ್ತಚರ ಸಂಸ್ಥೆಯ ಏಜೆಂಟರನ್ನಾಗಿ ಭಾರತದಲ್ಲಿ ಕೆಲಸ ಮಾಡುವಂತೆ ಹಣದ ಆಮಿಷ ನೀಡಿ ಒಪ್ಪಿಸುತ್ತಿದ್ದ! 2018ರಲ್ಲಿ ಈ ಸ್ಪೈ ಮಿಷನ್ ನೆಟ್ ವರ್ಕ್ ಕಿಂಗ್ ಫಿನ್ ಅಖ್ತರ್ ನನ್ನು ಆತನ ಜೊತೆಗೆ ಮೌಲಾನಾ ರಂಜಾನ್, ಸಬ್ಫಾಸ್ ಎಂಬ ಮತ್ತಿಬ್ಬರನ್ನು ಬಂಧಿಸಿ ಜೈಲಿಗಟ್ಟಲಾಯಿತು.
ರಕ್ಷಣ ಅಧಿಕಾರಿಗಳ ಮೂಲಕ ಗೂಡಾಚರ್ಯ ಕೆಲಸ
ಮತ್ತೊಂದು ಆಘಾಕಾರಿ ವಿಷಯವೇನೆಂದರೇ ಭಾರತದ ರಕ್ಷಣಾ ಮಂತ್ರಿ ಎ.ಕೆ.ಅಂಟೋನಿ ಮತ್ತು ಆರ್ಮಿ ಚೀಫ್ ಆಗಿದ್ದ ಜನರಲ್ ಬಿಕ್ರಂ ಸಿಂಗ್ ಆಡಿಯೋ ಸಂಗ್ರಹಿಸಿ ಲೀಕ್ ಮಾಡಿದ್ದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ತಾನು ಭಾರತದ ನೆಲದಲ್ಲಿ ನಡೆಸುತ್ತಿದ್ದ ಬೇಹುಗಾರಿಕೆಯ ಮಾಯಾಜಾಲದ ಮೋಸದಾಟವನ್ನು ಜಗತ್ತಿನೆದುರು ತೆರೆದಿಟ್ಟಿತ್ತು. ಇನ್ನೂ ಮುಂದೆ ಹೋಗಿ ಭಾರತ ಮತ್ತು ರಷ್ಯಾ ಜಂಟಿಯಾಗಿ ನಿರ್ಮಿಸುತ್ತಿದ್ದ ಬ್ರಹ್ಮೋಸ್ ಕ್ಷಿಪಣಿ ಉಡಾವಣೆ ವಿಭಾಗದ ಏರ್ ಸ್ಪೇಸ್ ಇಂಜಿನಿಯರ್ ನಿಶಾಂತ್ ಅಗರ್ ವಾಲ್ ನನ್ನು ಫೇಸ್ಬುಕ್ ಮೂಲಕ ಇಬ್ಬರು ಯುವತಿಯರನ್ನಿಟ್ಟು ಬೆಲೆಗೆ ಕೆಡವಿತ್ತು! ಭಾರತದ ಬ್ರಹ್ಮೋಸ್ ಇಂಜಿನಿಯರ್ ಅಗರ್ ವಾಲ್ ಪಾಕಿಸ್ತಾನದ ನೇಹಾ ಶರ್ಮಾ ಮತ್ತು ಪೂಜಾ ರಂಜನ್ ಎಂಬ ಹುಡುಗಿಯರ ಸೌಂದರ್ಯಕ್ಕೆ ಮೋಡಿ ಮಾಡುವ ಮಾತಿಗೆ ಮನಸೋತು ಹನಿಟ್ರಾಫ್ ಗೊಳಗಾಗಿ ದೇಶದ ಸೈನ್ಯದ ಕೆಲವು ರಹಸ್ಯಗಳನ್ನು ಪಾಕಿಸ್ತಾನದ ಹುಡುಗಿಯರಿಗೆ ರವಾನಿಸಿದ್ದಕ್ಕಾಗಿ ಉತ್ತರಪ್ರದೇಶದ ಪೊಲೀಸರು ಮತ್ತು ಆಂಟಿ ಟೆರರಿಸ್ಟ್ ಸ್ಕ್ವಾಡ್ ಜಂಟಿಯಾಗಿ ಕಾರ್ಯಾಚರಣೆ ನಡೆಸಿ ಈತನನ್ನು 2018ರಲ್ಲಿ ಬಂಧಿಸಲಾಗಿದೆ! ಈಗ ಮತ್ತೊಬ್ಬ ನಕಲಿ ಸೇನಾಧಿಕಾರಿ ಜಿತೇಂದರ್ ಸಿಂಗ್ ಹನಿಟ್ರಾಪ್ ವಿಷಯದಲ್ಲೂ ಮತ್ತೆ ನೇಹಾ ಎಂಬ ಹೆಸರು ಮತ್ತು ಪೂಜಾ ಎಂಬ ಹೆಸರುಗಳು ಪುನರಾವರ್ತನೆ ಆಗಿ ಕೇಳಿ ಬರುತ್ತಿವೆ! ಪಾಕ್ ಐಪಿ ಅಡ್ರೆಸ್ ನ ಯುವತಿಯ ಮೊಬೈಲ್ ಫೋನಿನಿಂದ ಕಳೆದ ಆರು ತಿಂಗಳಿಂದ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಹುಡುಗಿಯರ ಮೂಲಕ ಜಿತೇಂದರ್ ಸಿಂಗ್ ನಿಜವಾದ ಸೇನಾಧಿಕಾರಿ ಎಂದು ತಿಳಿದು ಹನಿಟ್ರಾಪ್ ನಡೆಸಿ, ಬೆಲೆಗೆ ಬೀಳಿಸಿ, ಆತನನ್ನು ಬೆತ್ತಲೆಗೊಳಿಸಿ ವೀಡಿಯೋ ಚಿತ್ರೀಕರಿಸಿಯೊ ಬ್ಲಾಕ್ ಮೇಲ್ ಮಾಡಿ ತಮ್ಮ ಏಜೆಂಟ್ ನಂತೆ ಕೆಲಸ ಮಾಡಲು ರೆಡಿಮಾಡಿದೆ! ತನ್ನ ಜಿಯೋ ಮತ್ತು ಐಡಿಯಾ ಸಿಮ್ಮುಗಳ ಮೊಬೈಲ್ ಫೋನ್ ಮೂಲಕ ವೀಡಿಯೋ ಆಡಿಯೋ ಮೆಸ್ಸೆಂಜರ್ ಚಾಟಿಂಗ್ ನಡೆಸಿ ಹಣಕ್ಕಾಗಿ ರಾಜಸ್ಥಾನದ ಬಾಡ್ಮೇರ್ ಸೇನಾ ಗುಪ್ತನೆಲೆಗಳ ಫೋಟೋ, ಬೆಂಗಳೂರಿನ ವಾಯುಪಡೆಯ ಸೇನಾ ಗುಪ್ತನೆಲೆಗಳ ಫೋಟೋ, ಮಂತಾದವುಗಳನ್ನು ಹಂಚಿಕೊಂಡಿರುವುದು ಈಗ ತನಿಖೆಯಿಂದ ತಿಳಿದುಬಂದಿದೆ. ಪ್ರಸ್ತುತ ಪಾಕ್ ಗುಪ್ತಚರ ಸಂಸ್ಥೆ ಐಎಸ್ಐ ಏಜೆಂಟ್ ನಂತೆ ಕೆಲಸಮಾಡುತ್ತಿದ್ದ ಜಿತೇಂದರ್ ಯಾವ ಯಾವ ಮಾಹಿತಿಯನ್ನು ನೀಡಿರಬಹುದು ಈತನ ಜೊತೆಗೆ ಇನ್ನೂ ಎಷ್ಟು ಜನ ಏಜೆಂಟ್ ಕೆಲಸ ಮಾಡುತ್ತಿರಬಹುದು ಎಂಬ ಅಮೂಲ್ಯ ಮಾಹಿತಿ ತೆಗೆಯಲು ಸಿಸಿಬಿ ಪೊಲೀಸರು ಕಾರ್ಯಾಚರಣೆ ನಡೆಸಬೇಕಿದೆ. ಈತ ಕೇವಲ ಬಟ್ಟೆ ವ್ಯಾಪಾರಜಲ್ಲೇ ತೊಡಗಿದ್ದನೇ ಅಥವಾ ಹಣದಾಸೆಗೆ ಫುಲ್ ಟೈಂ ಐ.ಎಸ್.ಐ. ಗೂಢಾಚಾರನಾಗಿ ಕೆಲಸಮಾಡುತ್ತಿದ್ದನೆ ಎಂಬುದರ ಜೋತೆಗೆ ಪಾಕ್ ಏಜೆಂಟರೇ ಜಿತೇಂದರ್ ಸಿಂಗ್ ಗೆ ಮಿಲಿಟರಿ ಸೀಕ್ರೆಟ್ ಕದಿಯಲು ಸ್ಥಳಗಳ ಫೋಟೋ ಶೂಟ್ ಮಾಡಿಸಿ ಕೊಳ್ಳಲು ನಕಲಿ ಸೇನಾಧಿಕಾರಿ ಡ್ರೆಸ್ ಹಾಕಿಸಿದ್ದರೇ ಎಂಬುದೂ ಬಯಲಿಗೆ ಬರಬೇಕಿದೆ.
ಮಹಿಳೆಯರ ಬಳಕೆಯಿಂದ ದತ್ತಾಂಶಗಳ ಮಾಹಿತಿ
ಪಾಕಿಸ್ತಾನದ ಚೆಲುವೆಯರ ಮೋಹದ ಪಾಶಕ್ಕೆ ಬಿದ್ದು ನಮ್ಮವರೇ ನಮ್ಮ ದೇಶದ ಮಿಲಿಟರಿ ಸೀಕ್ರೆಟ್ ದತ್ತಾಂಶಗಳ ಬಗ್ಗೆ ಮಾಹಿತಿ ನೀಡುತ್ತಿರುವುದು ಅಕ್ಷಮ್ಯ ಅಪರಾಧ. ಅಂದದ ಹುಡುಗಿಯರ ಫೋಟೋ ಹಾಕಿ ನಕಲಿ ಫೇಸ್ಬುಕ್ ಅಕೌಂಟ್ ಓಪನ್ ಮಾಡೀ ಭಾರತದ ಬಕರಾ ಗಳಿಗೆ ಪ್ರೆಂಡ್ಸ್ ರಿಕ್ವೆಸ್ಟ್ ಕಳುಹಿಸುವ ಪಾಕಿಸ್ತಾನದ ಗುಪ್ತಚರ ಸಂಸ್ಥೆ ಹಿಂದಿನಿಂದಲೂ ಇದೇ ಮಾಡಿಕೊಂಡು ಬರುತ್ತಿದೆ. ಈಗ ನೇಹಾ ಪೂಜಾ ಎಂಬ ಐ.ಎಸ್.ಐ.ಪ್ರೇರಿತ ಹುಡುಗಿಯ ‘ ಸುಳ್ಳು ಡಾಕ್ಯುಮೆಂಟರಿ ಮಾತಿನ ಮೋಡಿಗೆ ..ನಿಮ್ಮ ಭಾರತದ ಜನರು ಇಷ್ಟ ನಿಮ್ಮನು ಶೀಘ್ರದಲ್ಲೇ ಬಂದು ಬೇಟಿಯಾಗುವೇ!’ ಎಂಬ ಪೊಳ್ಳು ಭರವಸೆಗೆ ಬಲಿಯಾಗಿ ಬೆಂಗಳೂರಿನ ಯಲಹಂಕದ, ಜಾಲಹಳ್ಳಿ ವಾಯುನೆಲೆಯ, ಎಂಜಿ ರೋಡಿನ ಮದ್ರಾಸ್ ರೆಜಿಮೆಂಟ್ ನ ಫೋಟೋ ಶೂಟ್ ಮಾಡಿ ಕಳುಹಿಸಿರುವುದು ದುರಂತವೇ ಸರಿ. ಒಂದು ಕಡೆ ಕರ್ನಾಟಕದ ಕರಾವಳಿ ತೀರದಲ್ಲಿ ತುರಾಯಿ ಸ್ಯಾಟ್ ಲೈಟ್ ಫೋನಿನ ನಿರಂತರ ಬಳಕೆಯ ಬೆದರಿಕೆ..! ಶ್ರೀಲಂಕಾ ದಿಂದ 12ಜನ ಶಂಕಿತ ಇಸ್ಲಾಮಿಕ್ ಸ್ಟೇಟ್ಸ್ ಉಗ್ರಗಾಮಿಗಳು ಕರ್ನಾಟಕದ ಕರಾವಳಿ ಕಡೆ ಮೀನುಗಾರರ ವೇಷದಲ್ಲಿ ಬಂದು ಸೇರಿ ಕೊಂಡಿರುವ ಗುಪ್ತಚರ ಮಾಹಿತಿ ಯ ಎಚ್ಚರಿಕೆ.! ನಿಷೇಧಿತ ತುರಾಯ್ ಉಪಗ್ರಹ ಆಧಾರಿತ ಮೊಬೈಲ್ ಗಳನ್ನು ಮಲೆನಾಡಿನ ಬೆಟ್ಟಗುಡ್ಡ ಕಾಡುಗಳಲ್ಲಿ ಕಾರವಾರ ದಕ್ಷಿಣ ಕನ್ನಡ, ಚಿಕ್ಕ ಮಂಗಳೂರು ಕರಾವಳಿ ತೀರದಲ್ಲಿ ಯಾರೋ ವಿದೇಶಗಳಿಗೆ ಕರೆಮಾಡಿ ಗುಪ್ತ ಸಮಾಲೋಚನೆ ನಡೆಸುತ್ತಿರುವ ಬೆನ್ನಲ್ಲೇ ಮಂಗಳೂರಿನಲ್ಲಿ ಎನ್.ಐ.ಎ. ಶಾಲೆಯೊಂದನ್ನು ಸ್ಥಾಪಿಸಲು ಸಿದ್ಧತೆಗಳು ನಡೆಯುತ್ತಿವೆ ಎಂಬ ಮಾಹಿತಿಯೂ ಹರಿದಾಡುತ್ತಿದೆ. ನಮ್ಮ ದೇಶದ ಗುಪ್ತಚರ ಇಲಾಖೆ ರಿಸರ್ಚ್ ಅನಾಲಿಸಿಸ್ ವಿಂಗ್ ಹೈ ಅಲರ್ಟ್ ಘೋಷಿಸಿದೆ! ಕರ್ನಾಟಕದ ಕರಾವಳಿ ತೀರ ಮತ್ತು ಪಶ್ಚಿಮ ಘಟ್ಟದ ಕಾಡುಗಳಲ್ಲಿ ಉಗ್ರಗಾಮಿಗಳು ಅಡಗಿಕೊಂಡಿರುವ ಬಗ್ಗೆ, ಸ್ಲೀಪರ್ ಶೆಲ್ ರೀತಿ ಕೆಲಸಮಾಡುತ್ತ ಭಯೋತ್ಪಾದಕರು ಅಡಗಿರುವ ಬಗ್ಗೆ ಅನುಮಾನಗಳು ಇರುವುದರಿಂದ ಈಗ 225ಕಿಲೋ ಮೀಟರ್ ರೆಡ್ ಅಲರ್ಟ್ ಘೋಷಿಸಲಾಗಿದೆ. ಕೇಂದ್ರ ಗುಪ್ತಚರ ಇಲಾಖೆ ಈಗ ಕೋಸ್ಟಲ್ ಘಾಟ್ಸ್ ಅನ್ನು ಕರ್ನಾಟಕ ಪೊಲೀಸ್ ಸಹಕಾರದೊಂದಿಗೆ ಶೋಧಿಸಿ ತನಿಖೆ ನಡೆಸಲಾಗುತ್ತಿದೆ! ಅದರಲ್ಲೂ ಇತ್ತೀಚೆಗೆ ಮಂಗಳೂರಿನ ಹಲವು ಯುವಕರು ಭಯೋತ್ಪಾದಕ ಚಟುವಟಿಕೆಗಳಿಗೆ ಸಹಕರಿಸುತ್ತಿರುವ ಮಾಹಿತಿಯಿಂದ ಬಂಧಿಸಿ ತನಿಖೆ ನಡೆಸಲಾಗುತ್ತಿದೆ. ಇಂಡಿಯನ್ ಮುಜಾಹಿದ್ದೀನ್ ಸಂಘಟನೆಯ ಪ್ರಮುಖ ಯಾಸಿನ್ ಭಟ್ಕಳ್ ನ ಪ್ರಭಾವವೂ ಅಲ್ಲಿ ಕೆಲಸಮಾಡುತ್ತಿರುವ ಶಂಕೆಯಿದೆ.. ಆದ್ದರಿಂದ ನಮ್ಮ ಕರಾವಳಿ ಕಡಲ ತೀರವೂ ಉಗ್ರರ ಹಿಟ್ ಲಿಸ್ಟ್ ನಲ್ಲಿರುವಂತಿದೆ.
ಕರಾವಳಿ ಕಡೆ ಉಗ್ರರ ಹೆಜ್ಜೆ
ಇತ್ತೀಚೆಗೆ ಶ್ರಿಲಂಕಾದಿಂದ ಹನ್ನೆರಡು ಜನ ಡೇಂಜರಸ್ ಉಗ್ರರು ಕರಾವಳಿ ಕಡೆ ಹೆಜ್ಜೆ ಹಾಕಿದ್ದಾರೆಂಬ ಆಘಾತಕಾರಿ ಮಾಹಿತಿ ಹೊರಬಿದ್ದ ಬೆನ್ನಲ್ಲೇ ಮಂಗಳೂರಿನ ಸುತ್ತಮುತ್ತ ಆತಂಕ ಮನೆಮಾಡಿದೆ. ಕಾಶ್ಮೀರದಲ್ಲಿ ಲೀಡ್ ಮಾಡುತ್ತಿರುವ ಜೈಷ್ ಎ ಮೊಹ್ಮದ್ ಉಗ್ರಗಾಮಿ ಸಂಘಟನೆ ಅಂಡರ್ ವಾಟರ್ ಯುನಿಟ್ ಕೂಡ ಹೊಂದಿರುವುದು ನೀರಿನೊಳಗೇ ಬಂದು ಅಟ್ಯಾಕ್ ಮಾಡುವ ಟ್ರೈನಿಂಗ್ ಪಡೆಧ ಟೆರರಿಸ್ಟ್ ವಿಂಗ್ ಸಮುದ್ರತೀರದಲ್ಲಿ ಬಂದು ಭಾರತದೊಳಗೆ ಅಟ್ಯಾಕ್ ಮಾಡಲು ಹವಣಿಸುತ್ತಿದೆಯಕತೆ! ಅತ್ತ ಕಾಶ್ಮೀರದ ಕಣಿವೆಯಲ್ಲಿ ಚೀನಾ ದೊಂದಿಗೆ ಜಂಟೀ ಮಿಲಿಟರಿ ಕಾರ್ಯಾಚರಣೆ ನಡೆಸುತ್ತಾ, ಡ್ರಗ್ಸ್ ಮಾಫಿಯಾ ಜಾಲವನ್ನು ಭಾರತದೊಳಗೆ ನಿಗೂಢವಾಗಿ ವಿಸ್ತರಣೆ ಮಾಡುತ್ತಾ ವಿವಿಧ ರೀತಿಯ ಗೇಮ್ ಪ್ಲಾನ್ ಮಾಡಿಕೊಂಡು ದುಷ್ಕೃತ್ಯ ನಡೆಸಲು ಕಾದು ಕುಳಿತಿದೆ. 2008ರ ಬಾಂಬೆ ಅಟ್ಯಾಕ್ ನಲ್ಲಿ ಹತ್ತು ಜನ ಲಷ್ಕರ್-ಇ-ತೋಯ್ಬಾ ಉಗ್ರಗಾಮಿಗಳು ಇದೇ ತುರಾಯಿ ಫೋನ್ ಬಳಸಿ ಬಂದು ದಾಳಿಮಾಡಿದ್ದರಿಂಧ ನಂತರ ಭಾರತದಲ್ಲಿ ತುರಾಯ್ ಸ್ಯಾಟ್ ಲೈಟ್ ಫೋನಿನ ಬಳಕೆ ನೀಶೇಧಿಸಲಾಗಿದೆ. ಆದರೆ ಈಗ ಭಾರತದ ಕಾಶ್ಮೀರದ ಕಣಿವೆಯಲ್ಲಿ, ಈಗ ನಮ್ಮ ಕರಾವಳಿ ಕಡಲ ತೀರದಲ್ಲೂ ತುರಿಯ್ ಫೋನ್ ಬಳಸಿ ಉಗ್ರಗಾಮಿ ಚಟುವಟಿಕೆಗಳನ್ನು ನಡೆಸುತ್ತಿರುವ ಅನುಮಾನ ಬಲವಾಗಿದೆ. ಈಗ ಐ.ಎಸ್.ಐ.ಬೇಹುಗಾರಿಕೆಯೂ ಕರ್ನಾಟಕದಲ್ಲೂ ಬೇರೂರುತ್ತಿರುವುದು ದಕ್ಷಿಣ ಭಾರತದ ಮೇಲೆಯೂ ಉಗ್ರಗಾಮಿಗಳ ಕಣ್ಣು ಬಿದ್ದಿರುವುದು ಗೋಚರಿಸುತ್ತಿದೆ. ರಾಜ್ಯದ ಪೊಲೀಸರೇ ಇದಕ್ಕೆ ಪರಿಹಾರ ಏನು ಎಂಬುದನ್ನು ಕಂಡುಕೊಳ್ಳಬೇಕಿದೆ