ಸಿನಿಮಾ ಮಂದಿಯ ನಿರ್ಲಕ್ಷ್ಯಕ್ಕೆ ಇನ್ನೆಷ್ಟು ಬಲಿ?

Share

Writing- ಪರಶಿವ ಧನಗೂರು

ಕನ್ನಡ ಸಿನಿಮಾ ಮಂದಿಗೆ ಬುದ್ಧಿ ಬರುವ ಯಾವ ಲಕ್ಷಣಗಳೂ ಕಾಣುತ್ತಿಲ್ಲ. ಸರ್ಕಾರ ಮದ್ಯೆ ಪ್ರವೇಶಿಸಿ ಚಿತ್ರೀಕರಣದ ವೇಳೆಯಲ್ಲಿ ಕಲಾವಿದರ ರಕ್ಷಣೆಗೆ ಸರಿಯಾದ ನೀತಿ ನಿಯಮ ಜಾರಿಮಾಡಿ ಎಚ್ಚರಿಸದಿದ್ದರೇ ಇನ್ನೆಷ್ಟು ಜೀವಗಳನ್ನು ಬಲಿಪಡೆಯುತ್ತಾರೋ ಈ ಬಣ್ಣದಜನ ಎನ್ನುತ್ತಿದ್ದಾರೆ ಕರ್ನಾಟಕದ ಜನ. ಕೆದಕುತ್ತಾ ಹೋದರೆ ಕನ್ನಡ ಸಿನಿಮಾ ರಂಗದಲ್ಲಿ ಶೂಟಿಂಗ್ ದುರಂತಗಳ ಕತೆ ಸಾಲು ಸಾಲೇ ಇವೆ! ಮೊದಲಿಗೆ 25 ವರ್ಷಗಳ ಹಿಂದೆ ಸದ್ದು ಮಾಡಿದ್ದು ಲಾಕಪ್ ಡೆತ್ ಸಿನಿಮಾದ ಬೈಕ್ ಜಂಪ್ ದುರಂತ. ಅಂದಿನ ಕಾಲಕ್ಕೆ ಅದೇ ರಾಜ್ಯ ಮಟ್ಟದ, ರಾಷ್ಟ್ರ ಮಟ್ಟದ ಸೆನ್ಸೇಷನ್ ಸಿನಿಮಾ ಆಕ್ಸಿಡೆಂಟ್!! ಚೇಸಿಂಗೂ, ಪೈಟಿಂಗೂ, ಬಿಲ್ಡಿಂಗೂ ಬಸ್ಸುಗಳಮೇಲೆಲ್ಲಾ ಸಾಹಸ ಕಲಾವಿದ ಕುಳಿತಬೈಕ್ ಹಾರಿಸಿ, ಸರಿಯಾದ ಮುನ್ನೆಚ್ಚರಿಕೆ ವಹಿಸದೆ ಸಾಹಸ ಕಲಾವಿದರು ಕೈಕಾಲು ಮುರಿದುಕೊಂಡು ಹಾಸಿಗೆ ಹಿಡಿದು ಅಂಗವಿಕಲರಾಗಿದ್ದು ಇತಿಹಾಸ! ಆಗ ರಾಜ್ಯದ ಮೂಲೆಯಲ್ಲೂ ಥ್ರಿಲ್ಲರ್ ಮಂಜು ಎಂಬ ಸಾಹಸ ನಿರ್ದೇಶಕನ ಹೆಸರು ಪಸರಿಸಿತ್ತು. ಇದೇ ಆಕ್ಸಿಡೆಂಟ್ ಥ್ರಿಲ್ಲರ್ ಮಂಜು ರವರನ್ನು ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ 30ವರ್ಷ ಕೈಹಿಡಿದು ಮೇಲೆತ್ತಿ ನಡೆಸಿ, ನಿರ್ದೇಶಕ, ನಿರ್ಮಾಪಕ, ನಾಯಕ ನಟನನ್ನಾಗಿಸಿ ಉಳಿಸಿದೆ! ಅದೇ ರೀತಿ 1999ರಲ್ಲಿ ಟಿಕೆಟ್ ಟಿಕೆಟ್ ಎಂಬ ಹೆಸರಿನ ಚಿತ್ರದ ಸಾಹಸ ದ್ರಶ್ಯಕ್ಕಾಗಿ ಬಾಂಬ್ ತಯಾರಿಸುತ್ತಿದ್ದಾಗ ಬಾಂಬ್ ಸಿಡಿದು ಬಾಂಬ್ ರವಿ ಜೀವ ಕಳೆದುಕೊಂಡ. ಆಗ ಆ ದುರ್ಘಟನೆ ಕನ್ನಡ ಸಿನಿಮಾ ರಂಗದಲ್ಲಿ ದೊಡ್ಡ ಸಂಚಲನವನ್ನು ಸ್ರಷ್ಠಿಸಿ ವಿವಾದ ಹಾಗೆಯೇ ತಣ್ಣಗಾಗಿತ್ತು.

1997ರಲ್ಲಿ ಸಿಂಹದ ಮರಿ ಚಿತ್ರೀಕರಣದಲ್ಲಿ ಕ್ಯಾಮೆರಾ ಆಪರೇಟರ್ ವಿಜಿ ಪ್ರಾಣ ಕಳೆದುಕೊಂಡಿದ್ದರು. 2000ಇಸವಿಯಲ್ಲಿ ರೌಡಿ ಅಳಿಯ ಚಿತ್ರದ ಚಿತ್ರೀಕರಣದ ವೇಳೆಯಲ್ಲಿ ಸಾಹಸ ಕಲಾವಿದ ಡಿಫರೆಂಟ್ ಡ್ಯಾನಿಗೆ ಅಪಘಾತವಾಗಿ ಪ್ರಾಣಾಪಾಯದಿಂದ ಪಾರಾಗಿದ್ದೇ ಹೆಚ್ಚು. ಫ್ಯಾನ್ ಇಂಡಿಯಾ ಸಿನಿಮಾ ಕೆ.ಜಿ.ಎಫ್. ನಲ್ಲಿ ಹಾಕಿದ್ದ ಶೆಟ್ ಕಳಚಿಕೊಂಡು ಬಿದ್ದು ಸುಮಾರು ಜನರು ದುರಂತದಿಂದ ಪಾರಾಗಿದ್ದು ಆಗಿದೆ. ಹಾಗೆಯೇ ಬಹುಮುಖ್ಯವಾಗಿ 2016ರಲ್ಲಿ ಬೆಂಗಳೂರಿನ ಹೊರವಲಯದ ಮಾಗಡಿ ಬಳಿಯ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹೆಲಿಕಾಪ್ಟರ್ ಮೇಲಿಂದ ಜಿಗಿದು ಖ್ಯಾತ ಖಳನಟರಾಗಿದ್ದ ಅನಿಲ್ ಮತ್ತು ಉದಯ್ ನೀರಿನಲ್ಲಿ ಮುಳುಗಿ ಮೃತಪಟ್ಟ ಘಟನೆ, ದುನಿಯಾ ವಿಜಯ್ ಅಭಿನಯದ ಮಾಸ್ತಿಗುಡಿ ಚಲನಚಿತ್ರದ ಆ ಚಿತ್ರೀಕರಣದಲ್ಲಿ ಸಿನಿಮಾ ಹೀರೋ ದುನಿಯಾ ವಿಜಯ್ ರನ್ನು ಮಾತ್ರ ಸ್ಟಂಟ್ ಡೈರೆಕ್ಟರ್ ರವಿವರ್ಮ ಕಾಪಾಡಿ ಪ್ರಾಣ ಉಳಿಸಿದ್ದು ಕಣ್ಮುಂದೆ ಇರುವಂತೆಯೇ ಈಗ ಯುವ ಸಾಹಸ ಕಲಾವಿದ ಫೈಟರ್ ವಿವೇಕ್ ಬಲಿಯಾಗಿದೆ. ಸೋಮವಾರ ನಡೆದಿರುವ ಈ ಕ್ರೇನ್ ದುರಂತ, ಫೈಟರ್ ಕಲಾವಿದ ವಿವೇಕ್ ಸಾವು ಚಿತ್ರತಂಡದ ಬೇಜವಾಬ್ದಾರಿತನದ ಅಜ್ಞಾನದ ಪರಮಾವಧಿಯಾಗಿದೆ. ಎಕ್ಸ್ ಟ್ರಾ ಹೈಟೆನ್ಷನ್ ವೈರುಗಳು ಹಾದು ಹೋಗಿರುವ ಸ್ಥಳದಲ್ಲಿ ಯಾವ ಅಯೋಗ್ಯನೂ ಚಿತ್ರೀಕರಣದ ಪ್ಲಾನ್ ಮಾಡಲಾರ. ಆದರೇ ‘ಲವ್ ಯೂ ರಚ್ಚೂ’ ಚಿತ್ರ ತಂಡ ನಾಲ್ಕು ದಿನಗಳಿಂದಲೂ ಅಲ್ಲೇ ಭರದಿಂದ ಚಿತ್ರೀಕರಣ ನಡೆಸಿದೆ! ರಾಮನಗರದ ಪೊಲೀಸ್ ಇಲಾಖೆಯಿಂದ ಅನುಮತಿಯನ್ನೇ ಪಡೆಯದೆ ಇದ್ದುದರಿಂದ ಇನ್ನೂ ಇವರು ಆಡಿದ್ದೇ ಆಟವೆನ್ನುವಂತಾಗಿದೆ. ಮುಖ್ಯವಾಗಿ ಇಲ್ಲಿ ಎಚ್ಚರ ವಹಿಸಬೇಕಾಗಿದ್ದುದ್ದು ಸಾಹಸ ಸಂಯೋಜಿಸುವ ಮುನ್ನ ಸಾಕಷ್ಟು ಮುನ್ನೆಚ್ಚರಿಕೆ ಅದಕ್ಕೆ ಬೇಕಾಗುವ ರಕ್ಷಣಾ ಪರಿಕರಗಳ ಪೂರ್ವ ತಯಾರಿಯನ್ನು ನಿರ್ದೇಶಕರು ಮಾಡಿಕೊಳ್ಳಬೇಕಿತ್ತು. ಮೊದಲನೆಯದಾಗಿ ಚಿತ್ರೀಕರಣ ಮಾಡಲು ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವ ಜಾಗವನ್ನು ಆಯ್ಕೆಮಾಡಿಕೊಂಡಿರುವುದೇ ದೊಡ್ಡ ತಪ್ಪು. ಸಾಮಾನ್ಯವಾಗಿ ಅಲ್ಲಿ ಹಾದು ಹೋಗಿರುವ ವಿದ್ಯುತ್ ತಂತಿ ಗಳಲ್ಲಿ 60ಕಿಲೋ ವ್ಯಾಟ್ ವಿದ್ಯುತ್ ನಿಂದ 440ಕಿಲೋ ವಾಟ್ ವರೆಗೂ ವಿದ್ಯುತ್ ಹರಿಯುತ್ತಿರುತ್ತದೆ. ಇಂತಹ ಎಕ್ಸ್ ಟ್ರಾ ಹೈಟೆನ್ಷನ್ ವಿದ್ಯುತ್ ತಂತಿ ಹಾದು ಹೋಗಿರುವ ಸ್ಥಳದ ವೈರುಗಳ ಕೆಳಗೆ ಯಾರೂ ವಾಸಿಸಬಾರದೆಂದೂ ಕಾನೂನೇ ಜಾರಿಯಲ್ಲಿದೆ! ಈ ಡೇಂಜರಸ್ ಹೈವೋಲ್ಟೇಜ್ ವಿದ್ಯುತ್ ತಂತಿ ಹರಿಯುವ ವೈರುಗಳ ಪಕ್ಕದ 2.3 ಮೀಟರ್ ಪರಿಧಿಯನ್ನು ಆರ್ಕ್ ಝೋನ್ ಎಂದು ಗುರುತಿಸಲಾಗಿರುತ್ತದೆ.

 

ಈ ಡೇಂಜರಸ್ ಝೋನ್ ಒಳಗೇ ಮನುಷ್ಯ ಬಂದರೆ ಸಾಕು, ವಿದ್ಯುತ್ ತಂತಿ ಸ್ಪರ್ಶಿಸುವ ಅವಶ್ಯಕತೆಯೇ ಬೇಕಾಗಿಲ್ಲ ಮನುಷ್ಯ ನಿಗೆ ವಿದ್ಯುತ್ ಪ್ರವಹಿಸಿ ಸಾವನ್ನಪ್ಪುತ್ತಾನೆ! ಕೇವಲ ನಮ್ಮ ಮನೆಗಳಲ್ಲಿರುವ 440 ವೋಲ್ಟೇಜ್ ವಿದ್ಯುತ್ ತಗುಲಿದರೇ ಮನುಷ್ಯ ಸಾಯುತ್ತಾನೆ. ಇನ್ನೂ 66ಕಿಲೋ ವ್ಯಾಟ್ 220 ಕಿಲೋ ವ್ಯಾಟ್ 400ಕಿಲೋ ವ್ಯಾಟ್ ಹೊತ್ತು ಸಾಗುತ್ತಿರುವ ಎಕ್ಸ್ ಟ್ರಾ ಹೈಟೆನ್ಷನ್ ವೈರುಗಳಿಗೆ ಈ ವಿವೇಕ್ ಗೆ ಕಟ್ಟಿದ್ದ ಉಕ್ಕಿನ ವೈರು(ಮೆಟಲ್ ರೋಪ್)ಗಳ ತಂತಿಯಾಗಲೀ, ಕ್ರೇನ್ ಆಗಲೀ ತಗುಲಿದ್ದರೇ ರಕ್ತಹರಿಯುವ ವ್ಯಕ್ತಿಯ ಜೀವದಗತಿ ಏನಾಗಿರಬಹುದೆಂದೂ ನೀವೇ ಊಹಿಸಿಕೊಳ್ಳಿ. ತೆಂಗಿನ ತೋಟದ ಓನರ್ ಪುಟ್ಟರಾಜುಗಾಗಲೀ ಕ್ರೇನ್ ಡ್ರೈವರ್ ಮುನಿಯಪ್ಪ ಎಂಬವನಿಗಾಗಲೀ ಬುದ್ಧಿ ಇರದಿರಬಹುದು. ಲವ್ ಯೂ ರಚ್ಚು ಸಿನಿಮಾದ ನಿರ್ದೇಶಕ ಶಂಕರ್ ರಾಜ್, ಸ್ಟಂಟ್ ಡೈರೆಕ್ಟರ್ ವಿನೋದ್ ಮಾಸ್ಟರ್ ಗಾಗಲೀ ತಲೆಯಲ್ಲಿ ಲದ್ದಿ ತುಂಬಿಕೊಂಡಿತ್ತೇ? ಕೇವಲ ವ್ಯಕ್ತಿಯ ದೇಹಕ್ಕೆ ರೋಪ್ ಕಟ್ಟಿ ಕ್ರೇನ್ ನಿಂದ ಮೇಲಕ್ಕೆತ್ತಿ ಬೀಳಿಸುವುದನ್ನೇ ಫೈಟ್ ಕಂಪೋಸಿಂಗ್ ಎಂದುಕೊಂಡಿರುವ ಇಂದಿನ ಕೆಲವು ಸಿನಿಮಾ ಸ್ಟಂಟ್ ಡೈರೆಕ್ಟರ್ ಗಳಿಗೆ ಫೈಟ್ ಸೀನ್ ಗಳಲ್ಲಿ ರಿಸ್ಕ್ ಶಾಟ್ ಗಳನ್ನು ತೆಗೆಯುವಾಗ ಯಾವರೀತಿಯ ರಕ್ಷಣಾ ಕ್ರಮಗಳ ಮುನ್ನೆಚ್ಚರಿಕೆ ಕೈಗೊಳ್ಳಬೇಕೆಂಬ ಜವಾಬ್ದಾರಿ ಮರೆತು ಹೋದಂತಿದೇ. ಪ್ರೊಡೆಕ್ಷನ್ ಮ್ಯಾನೇಜರ್ ಕೈಗೆ ದುಡ್ಡು ಕೊಟ್ಟು ಮತ್ತೆಲ್ಲೊ ಕುಳಿತು ತಮ್ಮ ಸಿನಿಮಾ ಚಿತ್ರೀಕರಣದಲ್ಲಿ ಪ್ರತಿದಿನ ಏನೇನಾಗುತ್ತಿದೆ ಎಂಬುದನ್ನು ಗಮನಿಸದ ನಿರ್ಮಾಪಕರು ಇದ್ದಾರೆ! ಕೇವಲ ಹತ್ತು ನಿಮಿಷದ ಶಾರ್ಟ್ ಮೂವೀ ತೆಗೆಯುವವರೇ ಚಿತ್ರೀಕರಣದ ಬಗ್ಗೆ ಕಾಳಜಿಯಿಂದ ಕೇರ್ ತೆಗೆದುಕೊಂಡು ಕೆಲಸ ಮಾಡುತ್ತಿದ್ದಾರೆ. ಹೀಗಿರುವಾಗ ಈ ನಮ್ಮ ಕನ್ನಡ ಸಿನಿಮಾ ರಂಗದ ಜನರಿಗೆ ಏನಾಗಿದೆ? ಇವರು ಪಕ್ಕಾ ಪ್ರೊಫೆಷನಲ್ ಆಗಿರುವಾಗ ಹೇಗಿರಬೇಕಿತ್ತೇಳಿ ಇವರ ಚುರುಕುತನ, ಪ್ರಜ್ಞೆ ಜವಾಬ್ದಾರಿ. ಮನುಷ್ಯನ ಜೀವಕ್ಕೆ ಬೆಲೆಯೇ ಇಲ್ಲವೇನೋ ಎಂಬಂತೆ ಪಾಪದ ಅಮಾಯಕ ಕಲಾವಿದರನ್ನು ಕಾಸಿನಾಸೆ ತೋರಿಸಿ ಕರೆತಂದು ಬೇಜವಾಬ್ದಾರಿಗೆ ಬಲಿ ಕೊಡುತ್ತಿದ್ದಾರೆ! ಸತ್ತ ಕಲಾವಿದನ ಕುಟುಂಬಕ್ಕೆ ಯಾರು ದಿಕ್ಕು?

ಫೈಟರ್ ಗಳೆಂಬ ಗಾಣದೆತ್ತುಗಳ ಸಾವಿನ ಮೇಲಿನ ನಡಿಗೆ..!

ಬೆಳ್ಳಿ ಪರದೆಯ ಬಣ್ಣದ ಬದುಕಿನ ವ್ಯಾಮೋಹ ಎಷ್ಟೋ ಸ್ಟಂಟ್ ಕಲಾವಿದರ, ಫೈಟರ್ ಎನಿಸಿಕೊಂಡವರ ಬದುಕನ್ನು ಬಲಿಹಾಕಿದೆ. ಯಾವುದೇ ದ್ರಶ್ಯದ ಚಿತ್ರೀಕರಣವೇ ಆಗಲೀ ಸಿನಿಮಾ ಹೀರೋ ಹೀರೋಯಿನ್ ಗಳ ಮೇಲೆ ಇಡುವಷ್ಟು ಕಾಳಜಿಯನ್ನು ಚಿತ್ರ ನಿರ್ದೇಶಕರು ಫೈಟರ್ ಗಳ ಮೇಲಾಗಲೀ ಇತರ ಸಹ ಕಲಾವಿದರ ಮೇಲೂ ತೋರಿಸುವುದಿಲ್ಲ. ಒಬ್ಬ ಹೀರೋ ಶೂಟಿಂಗ್ ಸ್ಪಾಟಿಗೆ ಬರುತ್ತಿದ್ದಂತೆಯೇ ತಲೆ ಮೇಲೊಂದು ನೆರಳಿಗೆ ಚತ್ರಿಯಿಂದಿಡಿದು, ಊಟ ತಿಂಡಿ ತೀರ್ಥ ಪ್ರಸಾದದ ವರೆಗೂ ಸೇವೆ ಮಾಡುತ್ತಾ ಅತ್ಯಂತ ಕಾಳಜಿ-ಜವಾಬ್ದಾರಿಯಿಂದ ನೋಡಿಕೊಳ್ಳುವ ಸಿನಿಮಾ ನಿರ್ದೇಶಕರು, ನಿರ್ಮಾಪಕರು ಅದೇ ರೀತಿಯ ಗೌರವ ಪ್ರೀತಿ ಕಾಳಜಿಗಳನ್ನು ಸಿನಿಮಾದ ಇನ್ನುಳಿದ ಕಲಾವಿದರಿಗೆ ತೋರುವುದಿಲ್ಲ! ಕೆಲವೊಮ್ಮೆ ಕೆಲಸ ಮಾಡಿಸಿಕೊಂಡು ಕಾಲಕಸಕ್ಕಿಂತಲೂ ಕಡೆಯಾಗಿ ಕಂಡಿರುವ ಉದಾಹರಣೆಗಳು ಸಾಕಷ್ಟಿವೆ. ಕೇವಲ ಎರಡು ಹೊತ್ತಿನ ಊಟ 800 ರೂಪಾಯಿ ದುಡ್ಡಿಗಾಗಿ ತಮ್ಮ ಜೀವದ ಹಂಗು ತೊರೆದು ಫೈಟಿರ್ ಆಗಿ ನಟನೆಯ ಕೆಲಸ ಮಾಡುತ್ತಿರುವ ಸಾಹಸ ಕಲಾವಿದರು ಎಷ್ಟೋ ಸಾರಿ ಬಿಸಿಲು ಮಳೆ ಚಳಿಗಾಳಿ ಎನ್ನದೆ ಹಗಲು ರಾತ್ರಿ ಸಿನಿಮಾ ಚಿತ್ರೀಕರಣದಲ್ಲಿ ತೊಡಗಿಸಿಕೊಂಡು ಹೊಡೆದಾಟದ ದ್ರಶ್ಯ, ಚೇಸಿಂಗ್ ದ್ರಶ್ಯ ಗಳಲ್ಲಿಯೂ, ಉರಿವ ಬೆಂಕಿಯೊಡನೆ ನಟಿಸುವಾಗ, ಬಿಲ್ಡಿಂಗ್ ಗಳ ಮೇಲಿಂದ ಎಗರಿ ಬೀಳುವಾಗ, ಗಾಜಿನ ಗ್ಲಾಸುಗಳನ್ನು ಹೊಡೆದು ಧೈರ್ಯದಿಂದ ನುಗ್ಗುವಾಗ ದ್ರಶ್ಯಗಳು ನೈಜವಾಗಿ ಬರುವುದಕ್ಕಾಗಿಯೇ ತಮ್ಮ ಪ್ರಾಣವನ್ನು ಪಣಕ್ಕಿಟ್ಟು, ಸಾವುನೋವಿಗೆ ಹೆದರದೇ ಮೈ-ಕೈ ತಲೆಗೆ ಗಾಯ ಮಾಡಿಕೊಂಡು ಒಮ್ಮೊಮ್ಮೆ ಕೈಕಾಲಿನ ಬೆನ್ನುಮೂಳೆ ಮುರಿದುಕೊಂಡು ಚಿತ್ರೀಕರಣದಲ್ಲಿ ನಟಿಸಿರುವ ಸಾಕಷ್ಟು ಉದಾಹರಣೆಗಳು ಸಿಗುತ್ತವೆ. ವೇಗವಾಗಿ ಬೈಕ್ ಸವಾರಿ ಮಾಡುತ್ತಾ ರಸ್ತೆಯಲ್ಲಿ ಬೀಳುವುದು, ಬೈಕ್ ಹಾರಿಸುವುದು. ಕಾರನ್ನು ವೇಗವಾಗಿ ಗುದ್ದಿಸುವುದು, ವೇಗವಾಗಿ ಕುದುರೆ ಏರಿ ಬರುತ್ತಾ ಹಾರಿಬೀಳುವುದು, ಆಕಾಶದಲ್ಲಿ ಹಾರಾಡುತ್ತಾ ಪ್ಯಾರಾ ಗ್ಲೈಡರ್ ಗಳಿಂದಲೋ, ಹೆಲಿಕಾಪ್ಟರ್ ಗಳಿಂದಲೋ ಸಮುದ್ರಕ್ಕೆ-ನದಿಗೇ ನೇರವಾಗಿ ದುಮುಕುವುದು ಮುಂತಾದ ಲೈಪ್ ರಿಸ್ಕ್ ಶಾಟ್ ಗಳಲ್ಲಿ ಇದೇ ಫೈಟರ್ ಗಳು ಹೀರೋಗಳೆನಿಸಿಕೊಂಡವರಿಗೇ ನಕಲಿ ಹೀರೋಗಳಾಗಿ ಡ್ಯೂಪ್ ಗಳಾಗಿ ನಟಿಸಿ ಪರದೆ ಮೇಲೆ ಹೀರೋ ಪಾತ್ರದಾರಿಗೆ ಶಿಳ್ಳೆ ಚಪ್ಪಾಳೆ ಸಿಗುವಂತೆ ಮಾಡಿ ಎಲ್ಲೋ ಮರೆಯಲ್ಲಿರುತ್ತಾರೆ! ಕನ್ನಡ ಸಿನಿಮಾ ರಂಗದಲ್ಲಿ ಟೈಗರ್ ಎನಿಸಿಕೊಂಡೇ ಮೆರೆದ ಅಪರೂಪದ ಫೈಟರ್ ಸಾಹಸ ಕಲಾವಿದ ಪ್ರಭಾಕರ್ ರಂತವರಿಗೆ ಮಾತ್ರ ಹೀರೋ ಆಗಿ ಮೆರೆಯುವ ಅವಕಾಶ ಕೆಲವೊಮ್ಮೆ ಬಂದಿರುತ್ತದೆ. ಉಳಿದವರು ಖಳನಾಯಕರಾಗಿಯೇ ಹೊಟ್ಟೆ ಹೊರೆದುಕೊಳ್ಳಬೇಕಾಗುತ್ತದೆ.ಅಅಭಿಮಾನಿಗಳಿಂದ ನಮ್ಮ ಹೀರೋ ಗಳು ಬಾಸ್, ಕಿಂಗು, ಸೈ ಎನಿಸಿಕೊಳ್ಳುವಲ್ಲಿ ಇದೇ ಫೈಟರ್ ಗಳ ರಕ್ತ ಬೆವರಿನ ಶ್ರಮ ಸಾಕಷ್ಟಿರುತ್ತದೆ. ಹೀರೋ ಕೈಯಲ್ಲಿ ಒದೆ ತಿಂದಂತೆ ನೆಲದಲ್ಲಿ ಬಿದ್ದು ನೆಗೆದು ಹೊರಳಾಡಿ, ಮಣ್ಣು ಕಲ್ಲು ಕೆಸರು ನೋಡದೆ ಸಾಹಸ ನಿರ್ದೇಶಕರ ಅಣತಿಯಂತೆ ನಟಿಸಿ ಆ ದ್ರಶ್ಯ ಅದ್ದೂರಿಯಾಗಿ ಬರವಲ್ಲಿ ಫೈಟರ್ ಸಾಹಸ ಕಲಾವಿದರ ಪರಿಶ್ರಮ ಪರದೆಮೇಲೆಯೇ ಕಾಣಸಿಗುತ್ತದೆ. ಆದರೆ ಸಿನಿಮಾ ರಿಲೀಸ್ ಆದ ತಕ್ಷಣ ಸಹಜವಾಗಿ ಯಾರ್ಯಾರಿಗೋ ರಾತ್ರೋರಾತ್ರಿ ಸ್ಟಾರ್ ಪಟ್ಟ ಬಂದುಬಿಡುತ್ತದೆ ಇಡೀ ಸಿನಿಮಾ ಅಧ್ಬುತವಾಗಿ ಬರುವುದಕ್ಕಾಗಿಯೇ ಎಲ್ಲರೂ ಒಟ್ಟಾಗಿ ತಂಡದಂತೆ ಒಗ್ಗಟ್ಟಾಗಿ ಕೆಲಸಮಾಡಿದ್ದರೂ ಎಲ್ಲರನ್ನೂ ಕರೆದು ಗೌರವಿಸಿ, ಸನ್ಮಾನಿಸುವ ಕೆಲಸವನ್ನು ಯಾರು ಅಷ್ಟಾಗಿ ಮಾಡಲು ಹೋಗುವುದಿಲ್ಲ.

ಸಿನಿಮಾ ಫೈಟ್ ಸೀನ್ ಗಳಲ್ಲಿ ಎಗರಿ ಎಗರಿ ಬೀಳುತ್ತಾ ಕಿರುಚಾಡಿ ಕೊಂಡು ಒದೆ ತಿನ್ನುವಂತೆ ನಟಿಸುವ ಈ ಸಾಹಸ ಕಲಾವಿದರನ್ನಂತೂ ಕೇಳುವವರೇ ಇರುವುದಿಲ್ಲ. ಎಷ್ಟೋ ಢಮ್ಮಿ ಹೀರೋ ಗಳೂ ಫೈಟರ್ ಗಳಿಂದಲೇ ರಾತ್ರೋರಾತ್ರಿ ಆಕ್ಷನ್ ಹೀರೋಗಳಾಗಿ ಬಿಂಬಿತವಾಗಿರುವ ಸತ್ಯ ಕಣ್ಮುಂದೆಯೆ ಇವೆ. ಸಾಹಸ ನಿರ್ದೇಶಕರಾದ ಫೈಟ್ ಮಾಸ್ಟರ್ ಗಳು ಕಂಪೋಸ್ ಮಾಡುವ ಡಿಫರೆಂಟ್ ಫೈಟಿಂಗ್ ಶಾಟ್ ಗಳು ಎಷ್ಟೋ ನಾಯಕ ನಾಯಕಿಯರನ್ನು, ಖಳನಾಯಕರನ್ನೂ ನಾಲ್ಕು ಎತ್ತರಕ್ಕೂ ಕಾಲು ಎತ್ತಲಾರದವರನ್ನೂ ಕ್ಷಣಾರ್ಧದಲ್ಲಿ ಬಡಿದಾಡುವ ವೀರ ಧೀರ-ಶೂರನನ್ನಾಗಿ ಪರದೆ ಮೇಲೆ ತೋರಿಸಿ ಮೆರೆಸಿ ಬಿಟ್ಟಿರುತ್ತವೆ!
ಕಷ್ಟಪಟ್ಟು ಬಾಡಿ ಬಿಲ್ಡ್ ಮಾಡಿಕೊಂಡು ಕಟ್ಟು ಮಸ್ತು ಮೈ ಕೈ ಬೆಳೆಸಿಕೊಂಡು ಕರಾಟೆ, ಸ್ಟಂಟ್, ಜಂಪ್ ಗಳನ್ನು ಪ್ರಾಕ್ಟೀಸ್ ಮಾಡಿಕೊಂಡು ಫೈಟರ್ ಗಳಾಗಿ ಸಿನಿಮಾ ರಂಗಕ್ಕೆ ಎಂಟ್ರಿ ಕೊಡುವ ಸಾಹಸ ಕಲಾವಿದರೆನಿಸಿಕೊಳ್ಳುವ ಫೈಟರ್ ಕಲಾವಿದರು ಹೊಟ್ಟೆ ಪಾಡಿಗಾಗಿ ಮುಂದೊಂದು ದಿನ ಒಳ್ಳೆಯ ಖಳನಟನ ರೋಲ್ ಸಿಗಬಹುದೆಂಬ ನಿರೀಕ್ಷೆಯಿಂದ ಪ್ರಾಣ ಭಯವಿದ್ದರೂ ಫೈಟಿಂಗ್ ಕಂಪೋಸರ್ ಗಳಿಂದ ಬಯ್ಯಿಸಿಕೊಂಡು ಹೇಳಿಕೊಟ್ಟಿದ್ದನ್ನೆಲ್ಲಾ ಮೈಮೇಲೆ ಹಾಕಿಕೊಂಡು ಕೆಮೆರಾ ಎದುರು ಮಾಡುತ್ತಾರೆ ಸ್ವಲ್ಪ ಯಾಮಾರಿದರೂ ಅನಿಲ್, ಉದಯ್, ವಿವೇಕ್ ರಂತೆ ನಿಮಿಷದಲ್ಲೇ ಸಾಯುತ್ತಾರೆ!

 


ಯಾವುದೇ ಸೌಲಭ್ಯಗಳನ್ನು ನೀಡದೆ ಪೈಂಟಿಂಗ್ ಸೀನ್ ನಲ್ಲಿ ಭಾಗವಹಿಸುವ ಫೈಟರ್ ಗಳನ್ನೂ, ಸಹ ಕಲಾವಿದರನ್ನೂ ಲೈಫ್ ರಿಸ್ಕ್ ಇರುವಂತಹ ಶಾಟ್ ಗಳಲ್ಲಿ ಬಳಸಿಕೊಂಡು ಕಂಡೋರ ಮಕ್ಕಳನ್ನು ಬಾವಿಗೆ ತಳ್ಳಿ ಆಳ ನೋಡುತ್ತಿರುವುದು ಸಿನಿಮಾ ರಂಗಕ್ಕೆ ಎಷ್ಟು ಸರಿ ಎಂದು ಜನ ಪ್ರಶ್ನೆ ಮಾಡುತ್ತಿದ್ದಾರೆ. ಲವ್ ಯೂ ರಚ್ಚು ಸಿನಿಮಾದ ನಿರ್ಮಾಪಕ ಗುರು ದೇಶಪಾಂಡೆಗೆ ಕನ್ನಡ ಚಿತ್ರರಂಗದ ಹೊಸದೇನಲ್ಲ. ಫೈಟ್ ಮಾಸ್ಟರ್ ವಿನೋದ್ ಗೂ ಸ್ಟಂಟ್ ಡೈರೆಕ್ಟರ್ ರವಿವರ್ಮರಷ್ಟಲ್ಲದಿದ್ದರೂ ಒಳ್ಳೆಯ ಹೆಸರಂತೂ ಇತ್ತೂ. ಆದರೆ ಈಗ ಏನಾಗಿದೆ? ಈ ಸಾವಿಗೆ ಯಾರು ಹೊಣೆ? ಅವನ ತಪ್ಪು ಇವನ ಮೇಲೆ ಈವನ ತಪ್ಪು ಅವನ ಮೇಲೆ ಹಾಕಿ ತಪ್ಪಿಸಿಕೊಳ್ಳಲು ನೋಡುತ್ತಿದ್ದಾರೆ. ಅಂತಿಮವಾಗಿ ಎಲ್ಲಾ ತಪ್ಪನ್ನು ಕ್ರೇನ್ ಡ್ರೈವರ್ ಮೇಲೆ ಹಾಕಲು ರೆಡಿಯಾಗಿದ್ದಾರೆ. ರೂಫ್ ಸ್ಟಂಟ್ ಶಾಟ್ ಎಂಬ ರಿಸ್ಕೀ ಶಾಟ್ ಗಳಲ್ಲಿ ಈಗ ಎಲ್ಲಾ ಚಿತ್ರರಂಗದಲ್ಲೂ ಮೆಟಲ್ ರೋಪ್ (ಉಕ್ಕಿನ ವೈರ್) ಕಾಮನ್ ಆಗಿದೆ. ಹಗ್ಗ,
ಪ್ಲಾಸ್ಟಿಕ್ ಬಳಸುವುದನ್ನು ನಿಲ್ಲಿಸಿ ಎಷ್ಟೋ ಕಾಲವಾಗಿದೆಯಂತೇ. ಹದಿನೈದು ವರ್ಷಗಳ ಹಿಂದೆಯೇ ‘ಹಲೋ ಸಿಸ್ಟರ್’ ಚಲನ ಚಿತ್ರ ಚಿತ್ರೀಕರಣದ ವೇಳೆಯಲ್ಲಿ ಇದೇ ರೀತಿ ಕ್ರೇನ್ ಶಾಟ್ ತೆಗೆಯುವಾಗ ವಿದ್ಯುತ್ ತಂತಿ ತಗುಲಿ ಇಬ್ಬರು ಹುಡುಗರು ಸುಟ್ಟು ಹೋಗಿದ್ದರು!! ಹಳೆಯ ಯಾವ ದುರ್ಘಟನೆಗಳಿಂದಲೂ ನಮ್ಮ ಸಿನಿಮಾ ರಂಗದವರು ಪಾಟ ಕಲಿತಿಲ್ಲವಲ್ಲ ಅದಕ್ಕಾಗಿಯೇ ಈಗ ಇತಿಹಾಸ ಮತ್ತೆ ಮರುಕಳಿಸಿದೆ ಅಷ್ಟೇ! ಇದೇ ಜೋಗನ ಪಾಳ್ಯದ ತೆಂಗಿನ ತೋಟದಲ್ಲೂ ಫೈಟರ್ ವಿವೇಕ್ ಜೋತೆಗೇ ರಂಜಿತ್ ಎಂಬ ಇನ್ನೊಬ್ಬ ಸಹ ಕಲಾವಿದ ಸಾಯಬೇಕಿತ್ತು ಅದ್ರಷ್ಟಾವಶಾತ್ ಬದುಕಿದ್ದಾನೆ. ಬೇಜವಾಬ್ದಾರಿ ನಿರ್ದೇಶಕರನ್ನು ಬಂಧಿಸುವುದು ರಿಂದ ಅವರ ಮೇಲೆ ಕೇಸು

ಹಾಕುವುದರಿಂದ ಇವೆಲ್ಲ ನಿಲ್ಲಲು ಸಾಧ್ಯವೇ? ಈ ಹಿಂದೆ ಕೂಡ ಅನಿಲ್, ಉದಯ್ ಇದೇ ರಾಮನಗರ ಜಿಲ್ಲೆಯ ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ಹೆಲಿಕಾಪ್ಟರ್ ನಿಂದ ನೆಗೆದು ಪ್ರಾಣ ಬಿಟ್ಟಾಗ ಸ್ಟಂಟ್ ಡೈರೆಕ್ಟರ್ ರವಿವರ್ಮ ಮತ್ತು ಸಿನಿಮಾ ನಿರ್ದೇಶಕ ನಾಗಶೇಖರ್ ಮೇಲೆ ಕೊಲೆ ಪ್ರಕರಣವನ್ನೇ ದಾಖಲಿಸಲಾಗಿತ್ತು! ಈಗ ‘ಲವ್ ಯೂ ರಚ್ಚು’ ಹೀರೋ ಅಜಯ್ ರಾವ್ ಫೈಟರ್ ವಿವೇಕ್ ಸಾಯುವಾಗ ಪಕ್ಕದಲ್ಲೆ ಇದ್ದರು ಅವರನ್ನು ಬಂಧಿಸಿ ಅಂತಿದ್ದಾರೆ ಕೆಲವರು! ಕನ್ನಡ ಚಿತ್ರರಂಗದಲ್ಲಿ ಕಲಾವಿದರಿಗಾಗಿ ಒಂದು ಸರಿಯಾದ ಕಾರ್ಮಿಕ ಕಾನೂನು ಗಳಿಲ್ಲ-ನೀತಿ ನಿಯಮಗಳಿಲ್ಲ ಇಂತ ಬಡ ಫೈಟರ್ ಗಳಿಗಂತೂ ಜೀವ ವಿಮೆಯಂತೂ ಇರಲು ಸಾಧ್ಯವೇ ಇಲ್ಲ. ಕಲಾವಿದರ ಸಂಘವಂತೂ ಸದಾ ನಿದ್ರೆಯಲ್ಲಿರುತ್ತದೆ. ಚಲನ ಚಿತ್ರ ವಾಣಿಜ್ಯ ಮಂಡಳಿಗೆ ಕಣ್ಣು-ಕಿವಿಯಿದ್ದರೂ ಪ್ರಯೋಜನವಿಲ್ಲ ಎನ್ನುವಂತಾಗಿದೆ ನಮ್ಮ ಕನ್ನಡ ಸಿನಿಮಾ ರಂಗದ ಸ್ಥಿತಿ. ಗಾಂಧಿನಗರದ ನಿರ್ದೇಶಕರ ಬೇಜವಾಬ್ದಾರಿ ಹೀಗೆ ಮುಂದುವರಿದರೇ ಇನ್ನೆಷ್ಟು ಬಡ ಕಲಾವಿದರ ಹೆಣ ಬೀಳಲಿವೆಯೋ?,

 

 

Girl in a jacket
error: Content is protected !!