ಸುದೀಪ್ ನಟನೆಯ ಬಹುನಿರೀಕ್ಷಿತ ‘ವಿಕ್ರಾಂತ್ ರೋಣ ಇನ್ನೊಂದು ಹಾಡಿನ ಚಿತ್ರೀಕರಣ ಬಾಕಿಯಿದ್ದು ಕೊರೊನಾ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ಬಾಕಿಯಿರಿರುವ ಡಬ್ಬಿಂಗ್ ಮುಂದುವರೆಸಲು ಚಿತ್ರತಂಡ ಮುಂದಾಗಿದೆ.
ಚಿತ್ರದಲ್ಲಿನ ಹಲವು ಕಲಾವಿದರು ಈಗಾಗಲೇ ಡಬ್ಬಿಂಗ್ ನಲ್ಲಿ ನಿರತರಾಗಿದ್ದು ಇದೀಗ ನಾಯಕ ಕಿಚ್ಚ ಸುದೀಪ್ ಮುಂದಿನ ವಾರದಿಂದ ಡಬ್ಬಿಂಗ್ ಆರಂಭಿಸಲಿದ್ದಾರೆ ಎಂದು ತಿಳಿದುಬಂದಿದೆ. ಆಕ್ಷನ್-ಸಾಹಸ ಪ್ರಧಾನ ಚಿತ್ರವಾಗಿರುವ ವಿಕ್ರಾಂತ್ ರೋಣ ಶಾಲಿನಿ ಆರ್ಟ್ಸ್ ಬ್ಯಾನರ್ ನಡಿ ನಿರ್ಮಾಣವಾಗುತ್ತಿದ್ದು ಮಂಜುನಾಥ್ ಗೌಡ ಬಂಡವಾಳ ಹೂಡಿದ್ದಾರೆ. ರಂಗಿತರಂಗ ಖ್ಯಾತಿಯ ಅನೂಪ್ ಭಂಡಾರಿ ಅವರ ನಿರ್ದೇಶನ. ಇದರಲ್ಲಿ ಸುದೀಪ್ ಅವರದ್ದು ಪೊಲೀಸ್ ಪಾತ್ರ.
ಚಿತ್ರದಲ್ಲಿ ನಿರೂಪ್ ಭಂಡಾರಿ ಮತ್ತು ನೀತಾ ಅಶೋಕ್ ಅವರು ಕೂಡ ನಟಿಸಿದ್ದಾರೆ. ಅಜನೀಶ್ ಲೋಕನಾಥ್ ಅವರ ಸಂಗೀತ, ವಿಲಿಯಮ್ ಡೇವಿಡ್ ಅವರ ಛಾಯಾಗ್ರಹಣವಿದೆ. ೩ಡಿ ಮಾದರಿಯಲ್ಲಿ ಚಿತ್ರವನ್ನು ತೆರೆಗೆ ತರುವ ಯೋಜನೆಯಲ್ಲಿ ಚಿತ್ರತಂಡವಿದ್ದು, ತಮಿಳು, ತೆಲುಗು, ಮಲಯಾಳಂ ಮತ್ತು ಹಿಂದಿ ಭಾಷೆಗಳಲ್ಲಿ ತೆರೆಗೆ ತರುವ ಆಲೋಚನೆಯಲ್ಲಿದೆ. ಭಾರತೀಯ ಭಾಷೆಗಳಲ್ಲಿ ಪ್ಯಾನ್ ಇಂಡಿಯಾ ಮಟ್ಟದಲ್ಲಿ ಮಾತ್ರವಲ್ಲದೆ ಫ್ರೆಂಚ್, ಅರೇಬಿಕ್, ಸ್ಪ್ಯಾನಿಷ್, ಮ್ಯಾಂಡರಿನ್ ಮತ್ತು ರಷ್ಯನ್ ಭಾಷೆಗಳಲ್ಲಿ ೫೫ ದೇಶಗಳಲ್ಲಿ ಬಿಡುಗಡೆಯಾಗುವ ಸಾಧ್ಯತೆ ಕೂಡ ಇದೆ.
ಈ ವರ್ಷ ಕೋಟಿಗೊಬ್ಬ೩ ಮತ್ತು ವಿಕ್ರಾಂತ್ ರೋಣ ಸುದೀಪ್ ಅವರ ಬಹುನಿರೀಕ್ಷಿತ ಚಿತ್ರ. ಕೋಟಿಗೊಬ್ಬ ೩ ಈ ಹಿಂದೆ ಏಪ್ರಿಲ್ ೨೯ರಂದು ಬಿಡುಗಡೆಯಾಗಲು ಸಿದ್ಧವಾಗಿತ್ತು, ಆದರೆ ಲಾಕ್ ಡೌನ್ ಕಾರಣದಿಂದ ಮುಂದೂಡಲ್ಪಟ್ಟಿತು. ಕೋಟಿಗೊಬ್ಬ ೩ ಮುಂದೆ ಯಾವಾಗ ಬಿಡುಗಡೆ ಆಗುತ್ತದೆ ಎಂದು ಚಿತ್ರತಂಡ ಇನ್ನೂ ಪ್ರಕಟಿಸಿಲ್ಲ. ಈ ಮಧ್ಯೆ ವಿಕ್ರಾಂತ್ ರೋಣ ಆಗಸ್ಟ್ ೧೯ರಂದು ಬಿಡುಗಡೆಯಾಗಲಿದೆ ಎಂದು ಹೇಳಲಾಗುತ್ತಿದೆ.
ಈ ಮಧ್ಯೆ ಸುದೀಪ್ ಅವರು ಬಿಗ್ ಬಾಸ್ ಕನ್ನಡ-೮ನೇ ಆವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಕೊರೋನಾ ಸೋಂಕಿನ ಲಾಕ್ ಡೌನ್ ಕಾರಣದಿಂದ ಅರ್ಧಕ್ಕೆ ಸ್ಥಗಿತಗೊಂಡಿದ್ದ ಬಿಗ್ ಬಾಸ್ ಶೋ ಮತ್ತೆ ಆರಂಭವಾಗುತ್ತಿದೆ. ಇದೇ ವಾರಾಂತ್ಯ ಬಿಗ್ ಬಾಸ್ ಶೋ ಪುನರಾರಂಭವಾಗಲಿದೆ ಎಂದು ಮೂಲಗಳು ಹೇಳುತ್ತವೆ.