ದಾವಣಗೆರೆಯಲ್ಲಿ ಫೆ 7 ರಿಂದ 9 ವರೆಗೆ ರಾಷ್ಟ್ರೀಯ ಅಕ್ಷರ ಹಬ್ಬ
by ಕೆಂಧೂಳಿ
ದಾವಣಗೆರೆ,ಜ,30: ಸೃಜನಶೀಲ ಸಾಹಿತ್ಯವನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಇದೇ ಮೊದಲ ಬಾರಿಗೆ ‘ದಾವಣಗೆರೆ ರಾಷ್ಟ್ರೀಯ ಅಕ್ಷರ ಹಬ್ಬ’ವನ್ನು ಫೆ.7ರಿಂದ 9ರವರೆಗೆ ಹಮ್ಮಿಕೊಳ್ಳಲಾಗಿದೆ
‘ಬೆಂಗಳೂರು, ಮೈಸೂರು, ಧಾರವಾಡದಲ್ಲಿ ನಡೆಯುತ್ತಿದ್ದ ಸಾಹಿತ್ಯ ಹಬ್ಬವನ್ನು ಅರಸಿ ಸಾಂಸ್ಕೃತಿಕ ವೇದಿಕೆ ಸಹಯೋಗದಲ್ಲಿ ಮಧ್ಯ ಕರ್ನಾಟಕದಲ್ಲಿ ಆಯೋಜಿಸಲಾಗಿದೆ. ಸಾಹಿತ್ಯ ಚಟುವಟಿಕೆಗಳಿಗೆ ಉತ್ತೇಜನ ನೀಡುವ ಪ್ರಯತ್ನದ ಭಾಗವಾಗಿ ಈ ಹಬ್ಬ ರೂಪುತಳೆದಿದೆ. ಕಥೆ, ಕಾವ್ಯ, ಕಾದಂಬರಿ ಮತ್ತು ರಂಗಭೂಮಿ ಕೇಂದ್ರೀಕರಿಸಿ ಉತ್ಸವ ಏರ್ಪಡಿಸಲಾಗಿದೆ’ ಎಂದು ಪತ್ರಿಕಾಗೋಷ್ಠಿಯಲ್ಲಿಎಂದು ದಾವಣಗೆರೆ ಸಾಹಿತ್ಯ ವೇದಿಕೆ ಸಂಚಾಲಕ ಶ್ರೀಹರ್ಷ ಸಾಲಿಮಠ ಮಾಹಿತಿ ನೀಡಿದರು.
‘ಕನ್ನಡ, ಕಾಶ್ಮೀರಿ, ಬಂಗಾಳಿ, ತೆಲುಗು, ತಮಿಳು, ಗುಜರಾತಿ, ಓರಿಯಾ, ಅಸ್ಸಾಮಿ, ಮರಾಠಿ ಸೇರಿ 15 ಭಾಷೆಯ ಸಾಹಿತಿಗಳು ಹಬ್ಬದಲ್ಲಿ ಪಾಲ್ಗೊಳ್ಳಲಿದ್ದಾರೆ. ನಗರದ ಎಂಬಿಎ ಕಾಲೇಜು ಸಭಾಂಗಣದಲ್ಲಿ ಹಬ್ಬ ಏರ್ಪಡಿಸಲಾಗಿದ್ದು, 300ಕ್ಕೂ ಹೆಚ್ಚು ಆಸಕ್ತರು ಪಾಲ್ಗೊಳ್ಳುವ ನಿರೀಕ್ಷೆ ಇದೆ. ಎಲ್ಲರಿಗೂ ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಲಾಗಿದೆ. ಹಬ್ಬದ ಅಂಗವಾಗಿ ಕಥಾ ಸ್ಪರ್ಧೆ ನಡೆಸಲಾಗುತ್ತಿದೆ’ ಎಂದರು
‘ಫೆ.7ರಂದು ಸಾಹಿತಿ ಎಲ್.ಹನುಮಂತಯ್ಯ ಅಕ್ಷರ ಹಬ್ಬವನ್ನು ಉದ್ಘಾಟಿಸಲಿದ್ದು,
ಸಾಹಿತಿಗಳಾದ ಎಚ್.ಟಿ.ಪೋತೆ, ಎಲ್.ಎನ್.ಮುಕುಂದರಾಜ್, ಎಚ್.ಎನ್.ಆರತಿ, ಚಾಂದನಿ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ‘ಕಥಾ ಸಮಯ’ವನ್ನು ಕಥೆಗಾರ ಕೇಶವರೆಡ್ಡಿ ಹಂದ್ರಾಳ, ‘ರಂಗ ಸಮಯ’ವನ್ನು ರಂಗಕರ್ಮಿ ಜಯಲಕ್ಷ್ಮಿ ಪಾಟೀಲ ಹಾಗೂ ಕವಿಗೋಷ್ಠಿಯನ್ನು ಕವಿ ಸತೀಶ್ ಕುಲಕರ್ಣಿ ನಡೆಸಿಕೊಡಲಿದ್ದಾರೆ’ ಎಂದರು.
‘ಫೆ.8ರಂದು ನಡೆಯುವ ಕವಿಗೋಷ್ಠಿಯಲ್ಲಿ ಗುಜರಾತಿ, ಓರಿಯಾ ಭಾಷೆಯ ಕವಿಗಳು ಪಾಲ್ಗೊಳ್ಳಲಿದ್ದಾರೆ. ‘ಮೌಖಿಕ ಸಾಹಿತ್ಯದ ಕಾಣ್ಕೆಗಳು’ ಗೋಷ್ಠಿಯನ್ನು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಪುರುಷೋತ್ತಮ ಬಿಳಿಮಲೆ ನಡೆಸಿಕೊಡಲಿದ್ದಾರೆ. ಸಾಹಿತಿ ಬಂಜಗೆರೆ ಜಯಪ್ರಕಾಶ್ ಸೇರಿ ಅನೇಕರು ಪಾಲ್ಗೊಳ್ಳಲಿದ್ದಾರೆ. ‘ಕವಿ ಸಮಯ’ದಲ್ಲಿ ಗುಜರಾತಿ, ಮರಾಠಿ, ಕಾಶ್ಮೀರಿ, ಬಂಗಾಳಿ ಕವಿಗಳು ಪಾಲ್ಗೊಳ್ಳಲಿದ್ದಾರೆ. ಪ್ರತಿ ಗೋಷ್ಠಿಯಲ್ಲಿ ಕನ್ನಡ ಸಾಹಿತ್ಯ ಓದು, ಅನುವಾದಿತ ಕವಿತೆಗಳ ಓದು ಇರಲಿದೆ’ ಎಂದು ಹೇಳಿದರು.
‘ಫೆ.9ರಂದು ಪುಸ್ತಕಗಳು ಬಿಡುಗಡೆ ಆಗಲಿವೆ, ಪತ್ರಕರ್ತ ಜಿ.ಎನ್.ಮೋಹನ್ ಅಧ್ಯಕ್ಷತೆ ವಹಿಸಲಿದ್ದಾರೆ. ‘ವರ್ತಮಾನ ಸಾಹಿತ್ಯದ ಸೃಜನಶೀಲ ಬಿಕ್ಕಟ್ಟುಗಳು’ ಗೋಷ್ಠಿಯಲ್ಲಿ ಓರಿಯಾ, ತೆಲುಗು ಸಾಹಿತಿಗಳು ಕೂಡ ಪಾಲ್ಗೊಳ್ಳಲಿದ್ದಾರೆ. ಸಮಾರೋಪ ಸಮಾರಂಭವನ್ನು ಚಿಂತಕ ಬರಗೂರು ರಾಮಚಂದ್ರಪ್ಪ ನಡೆಸಿಕೊಡಲಿದ್ದಾರೆ. ಎಂದು ತಿಳಿಸಿದರು.