ಸಿಎಂ ಬೊಮ್ಮಾಯಿ ಮಾಡಿದ ಭಾಷಣದ ಮೋಡಿ

Share

 

ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು

ಬೆಂಗಳೂರು,ಸೆ,20:ಬೆಲೆ ಏರಿಕೆ ನಿಲುವಳಿ ಸೂಚನೆ ಚರ್ಚೆಗೆ ಮುಖ್ಯ ಮಂತ್ರಿ ಬಸವರಾಜ ಬೊಮ್ಮಾಯಿ ಇಂದು ವಿಧಾನಸಭೆಯಲ್ಲಿ ಸುಧೀರ್ಘ ಉತ್ತರ ನೀಡಿದರು.ತಮ್ಮ ಮೊದಲ ಪ್ರಯತ್ನದಲ್ಲಿಯೇ ಉತ್ತಮ ಸಂಸದೀಯ ಪಟುವಾಗಿ ವಿಜೃಂಭಿಸಿದರು.ಏಟಿಗೆ ಎದಿರೇಟು ;ಪಟ್ಟಿಗೆ ಪ್ರತಿ ಪಟ್ಟು;ಲಯಬದ್ಧ ಮಾತುಗಾರಿಕೆ;ನಾಟಕೀಯ ಸ್ಪರ್ಶ-ಒಟ್ಟಿನಲ್ಲಿ ತಾವೊಬ್ಬ ಪ್ರಚಂಡ ಭಾಷಣಕಾರರೆಂದು ಸಾಬೀತು ಪಡಿಸಿದರು.ಜೆ ಎಚ್ ಪಟೇಲರು ಮುಖ್ಯಮಂತ್ರಿಯಾಗಿ ಮಾಡಿದ ಮೊದಲ ಭಾಷಣವನ್ನು ನೆನಪಿಸುವಂತಿತ್ತು.ಅವರು ಅಡಿಗ-ಕುವೆಂಪು;ಕಾಫ್ಕ-ಕಾಮು;ರಷ್ಯಾ ಕ್ರಾಂತಿ-ಫ್ರೆಂಚ್ ಕ್ರಾಂತಿ ಹೀಗೆ ಪಟೇಲರು ತಮ್ಮ ಭಾಷಣದಲ್ಲಿ ಇಡೀ ಪ್ರಪಂಚದ ಪರ್ಯಟನೆ ಮಾಡಿ ಬಿಟ್ಟಿದ್ದರು.ಆಗ ವಿರೋಧ ಪಕ್ಷದ ನಾಯಕರಾಗಿದ್ದ ಬಿ ಎಸ್ ಯಡಿಯೂರಪ್ಪ ನವರು ಪಟೇಲರ ಭಾಷಣವನ್ನು ಅರ್ಥ ಮಾಡಿಕೊಂಡು ಸ್ಪಷ್ಟಿಕರಣವನ್ನು ಕೇಳಲು ತಡವರಿಸಿ ಬಿಟ್ಟಿದ್ದರು.ಇಂದು ಯಡಿಯೂರಪ್ಪನವರು ಮತ್ತು ವಿರೋಧ ಪಕ್ಷದ ಕೆಲವರು ಬೊಮ್ಮಾಯಿಯವರ ಭಾಷಣವನ್ನು ತಾರೀಫು ಮಾಡಿದರು.ಆದರೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮುಖ್ಯಮಂತ್ರಿಗಳ ಭಾಷಣದ ಮೋಡಿಗೆ ಅಷ್ಟು ಸುಲಭವಾಗಿ ಮರುಳಾಗಲಿಲ್ಲ.ಭಾಷಣಕ್ಕಿಂತ ದಯನೀಯ ಸ್ಥಿತಿಯಲ್ಲಿರುವ ಜನರ ಕಷ್ಟ ನಿವಾರಣೆಯಾಗುವುದೇ ಮುಖ್ಯ ಎಂದು ಅವರು ಪ್ರತಿಪಾದಿಸಿದರು.ಮಾತುಗಾರಿಕೆಯೇ ಸಂಸದೀಯ ಪ್ರಜಾ ಪ್ರಭುತ್ವದ ಸೌಂದರ್ಯ ಎಂಬುದು ನಿಜ.ಆದರೆ ಮಾತೇ ಬಂಡವಾಳ ಆಗಬಾರದು.ಮಾತಿನಲ್ಲೇ ಎಲ್ಲವನ್ನು ಜಯಿಸಬಲ್ಲೆ ಎಂಬ ಜೆ ಎಚ್ ಪಟೇಲರ ಅಹಂಕಾರವೇ ಅವರಿಗೆ ಮುಳುವಾಯಿತು.ರಾಜ್ಯದ ಮುಖ್ಯಮಂತ್ರಿಯಾಗಿ ರಾಜ್ಯದ ಜನರಿಗೆ ಕಿಂಚಿತ್ತಾದರೂ ಪರಿಹಾರ ದೊರೆಯುವಂತಹ ಕ್ರಮಗಳನ್ನು ಪ್ರಕಟಿಸುವುದು ಸಾಧ್ಯವಾಗಿದ್ದರೆ ಅವರ ಮಾತಿಗೆ ಸ್ವಲ್ಪ ತೂಕ ಬರುತ್ತಿತ್ತು.ಆದ್ದರಿಂದ ಈ ಮಾತಿನ ಮಂಟಪ ನೊಂದವರ ಹೆಸರಿನಲ್ಲಿ ಅಧಿಕಾರಸ್ಥರು ಮತ್ತು ಹೊಟ್ಟೆ ತುಂಬಿದವರ ಪ್ರಹಸನವಷ್ಟೇ.

Girl in a jacket
error: Content is protected !!