
ಜಿ.ಕೆ.ಹೆಬ್ಬಾರ್, ಶಿಖಾರಿಪುರ
ಇಂದು ಸಮಾಜಿಕ ಹರಿಕಾರ ಸಮಾಜದಲ್ಲಿನ ಜಾತಿ ಜಾತಿಗಳ ನಡುವಿನ ಕಂದಕವನ್ನು ಹೋಗಲಾಡಿಸಿ ಸಾಮಾಜಿಕ ತಾರತಮ್ಯ ಹೋಗಲಾಡಿಸಿದವರು ನಾರಾಯಣ ಗುರು ಅವರ ಜನ್ಮದಿನ ಇಂದು ಆ ಪ್ರಯುಕ್ತ ಜಿ.ಕೆ.ಹೆಬ್ಬಾರ್ ಅವರು ಬರೆದ ಲೇಖನ
ಸಾಮಾಜಿಕ ತಾರತಮ್ಯ ಹೋಗಲಾಡಿಸಿದ ನಾರಾಯಣ ಗುರು
ಕೇರಳರಾಜ್ಯದಲ್ಲಿ ಜಾತಿ, ಮತಭೇದಗಳು ಹೆಚ್ಚಾಗಿದ್ದ ಕಾಲದಲ್ಲಿ ‘ನಾರಾಯಣ ಗುರು,’ ವೆಂಬ, ಒಬ್ಬ ಸಮಾಜಕ ಸುಧಾರಕ, ಉದಯಿಸಿ, ಸಮಾಜದ ತಾರತಮ್ಯಗಳನ್ನು ಕಡಿಮೆಮಾಡಲು ಇಡೀಜೀವನವನ್ನು ಮುಡಿಪಾಗಿಟ್ಟರು. ಅವರು ಪ್ರತಿಪಾದಿಸಿದ ತತ್ವ, ಜಗತ್ತಿನಲ್ಲಿರುವುದು, ” ಒಂದೇಜಾತಿ, ಒಂದೇ ಮತ, ಹಾಗೂ ಒಂದೇ ದೇವರು,” ಎಂಬ ಸತ್ಯವಾಕ್ಯವನ್ನು. ಸಂಸ್ಕೃತಭಾಷೆಯಲ್ಲಿ ಅದ್ವಿತೀಯ ಪಂಡಿತರಾಗಿದ್ದ ನಾರಾಯಣ ಗುರುಗಳು, ಕೇರಳ ಸಮಾಜದಲ್ಲಿ ಅಸ್ಪೃಶ್ಯತೆಯ ಪಿಡುಗಿಗೆ ತಮ್ಮದೇ ಆದ ನಿಲುವಿನಲ್ಲಿ, ಸಮಾಧಾನಕರವಾದ ಉಪಾಯಗಳನ್ನು ಕಂಡುಕೊಂಡರು. ಅವರು ಬೋಧಿಸಿದ್ದು, ದೇಶಸೇವೆಯೇ ಈಶ ಸೇವೆಯೆ ಎಂದವರುನಾರಾಯಣ ಗುರುಗಳು.

೧೨ನೆ ಶತಮಾನದ ಬಸವಣ್ಣನ ಕಾಲದ ಕ್ರೌರ್ಯಕ್ಕಿಂತ ಇಮ್ಮಡಿ, ಮುಮ್ಮಡಿಯಾದ ಕ್ರೌರ್ಯ, ದೌರ್ಜನ್ಯ, ಹಿಂಸೆ, ಬುದ್ಧಿ ಜೀವಿಗಳ ನಾಡಾದ ಕೇರಳದಲ್ಲಿ ೧೯ನೆ ಶತಮಾನದ ಅಂತ್ಯ ಮತ್ತು ೨೦ನೆ ಶತಮಾನದ ಆರಂಭದಲ್ಲಿ ನಡೆದಿತ್ತು. ಆಗಿನ ಕೇರಳದಲ್ಲಿ ಇಡೀ ಭಾರತದಲ್ಲಿಯೇ ಕಂಡರಿಯದ ಅಮಾನುಷ ವರ್ತನೆ ನಂಬೂದರಿ ಎಂಬ ಬ್ರಾಹ್ಮಣ ವರ್ಗದಿಂದ ಶೂದ್ರರ ಮೇಲೆ, ಅಸ್ಪ್ರಷ್ಯರ ಮೇಲೆ ಮತ್ತು ಸ್ತ್ರೀಯರ ಮೇಲೆ ನಡೆದಿತ್ತು. ಅಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ವಿಷ ವೃಕ್ಷವು ಇವೀ ಶೂದ್ರ ಜನಸಮೂಹವನ್ನು ಉಸಿರುಗಟ್ಟಿ ಸಾಯುಸಿತ್ತಿರುವ ಘೋರ ಕ್ರೌರ್ಯದ ತುರಿಯಾವಸ್ಥೆಯಲ್ಲಿ `ಈಳವ’ ಎಂಬ ಅಸ್ಪ್ರಶ್ಯ ಜಾತಿಯಲ್ಲಿ ನಾರಾಯಣ ಗುರು ಎಂಬ ಪವಿತ್ರಾತ್ಮನ ಜನ್ಮವಾಯಿತು. ಇಂತಹ ಜಾತೀಯತೆ, ಅಸ್ಪ್ರಶ್ಯತೆ ಎಂಬ ಕೊಳಕಿನಿಂದ ಸಮಾಜ ಕೊಳೆಯುತ್ತಿರುವಾಗ ನಾರಾಯಣ ಗುರುಗಳು ಅವತಾರ ಪುರುಷರಂತೆ, ಪ್ರವಾದಿಯಂತೆ ಜನ್ಮ ತಾಳುತ್ತಾರೆ. ಅನ್ಯ ಧರ್ಮಗಳನ್ನು ಖಂಡಿಸಿ ಅದ್ವೈತ ಮತ ಸ್ಥಾಪನಾಚಾರ್ಯರೆಂದು ಪ್ರಸಿದ್ಧಿ ಪಡೆದ ಶ್ರೀ ಶಂಕರಾಚಾರಾಚಾರ್ಯರು ತಮ್ಮ ಅದ್ವೈತ ಸಿದ್ಧಾಂತಕ್ಕೆ ಓರ್ವ ಹರಿಜನ ಗುರು ಎಂದು ಸ್ವೀಕರಿಸಿಕೊಂಡರೆ, ಕಾಲಕ್ರಮದಲ್ಲಿ ಅವರ ಹುಟ್ಟು ನಾಡಾದ ಕೇರಳವು ಜಾತಿಭೇದ ಮತ್ತು ಅಸ್ಪ್ರಶ್ಯತೆಯ ಹುಚ್ಚರ ಸಂತೆಯಾಯಿತು. ಅಂತಹ ಗೊಂದಲಮಯ ವಾತಾವರಣದಲ್ಲಿ ನಾರಾಯಣ ಗುರುಗಳ ಜನನವಾಯಿತು. ಈಳವ ಜಾತಿ ಕೇರಳದ ಅಸ್ಪ್ರಶ್ಯ ಜಾತಿಗಳಲ್ಲಿ ಒಂದಾಗಿದ್ದಿತು. ಕೇರಳ್ದಲ್ಲಿ ಆ ಜಾತಿಯ ಜನ ೩೦% ಇದ್ದರು. ನಾರಾಯಣ ಗುರುಗಳು ಕೇವಲ ಈಳವ ಜಾತಿಯವರನ್ನಲ್ಲದೆ, ಸಮಸ್ತ ಅಸ್ಪ್ರಶ್ಯ, ನಿಮ್ನ ವರ್ಗದವರನ್ನು ಎಲ್ಲ ಸ್ತರಗಳಲ್ಲಿ ಮೇಲೆ ತರಲು ಮಾಡಿದ ಅವರ ಪ್ರಯತ್ನವನ್ನು ಅವರ ಬದುಕಿನ್ ಮಹತ್ಸಾಧನೆ ಎನ್ನಬಹುದು. ನಾರಾಯಣ ಗುರುಗಳನ್ನು ಒಂದು ನಿರ್ದಿಷ್ಟ ಜಾತಿಯ ಗುರುವೆಂದು ಭಾವಿಸುವುದು ಸಂಕುಚಿತ ಮನೋಭಾವದ ಪ್ರತೀಕವೆನಿಸುವುದು.

ಪ್ರಾಚೀನ ಮೌಲ್ಯಾದರ್ಶಗಳನ್ನು, ಸತ್ಯವನ್ನು, ಅರಸಿಕೊಂಡು ಹೋಗಿ ಮನೆಯನ್ನು ತ್ಯಜಿಸಿ, ತಪಸ್ಸು ಮಾಡುತ್ತ ಗುಡ್ಡ, ಗಿರಿ, ಬೆಟ್ಟ, ಕಂದರ, ದಟ್ಟಾರಣ್ಯ, ಗುಹೆ, ಪರ್ಣಶಾಲೆಗಳಲ್ಲಿದ್ದು ಅನೇಕ ವರ್ಷ ಸಾಧನೆ ಮಾಡಿದರು.
ಗುರುಗಳ ಸಮಾಧಿಯ ಬಳಿಕ ಥಿಯೋಸೊಫಿಕಲ್ ಸೊಸೈಟಿಯ ಅಧ್ಯಕ್ಷೆಯಾಗಿದ್ದ ಎನಿಬೆಸಂಟರು ಪತ್ರಿಕೆಯಲ್ಲಿ ಹೀಗೆ ಬರೆದಿದ್ದರು:` ನಾರಾಯಣ ಗುರುಗಳ ಬದುಕೇ ಸನಾತನ ಧರ್ಮದಂತಿದ್ದು, ಅವರ ಸೇವಾ ವ್ಯಾಪ್ತಿ ವಿಶಾಲವಾಗಿತ್ತು. ಚಿಂತನೆಗಳು ಅಮೂಲ್ಯವಾಗಿದ್ದವು. ಯಾವುದೇ ಲೋಪ ದೋಷಗಳಿರದ ಜನಪರ ಕಾಳಜಿ ಅವರಿಗೆ ಇತ್ತು. ಇತ್ತೀಚಿಗಿನ ಶತಮಾನದಲ್ಲಿ ಇಂತಹ ಗೌರವ, ಮಾನ್ಯತೆಗಳನ್ನು ಪಡೆದ ಸ್ವಾಮಿಗಳು ಯಾರೂ ಇರಲಿಲ್ಲ. ಯೋಗದಲ್ಲಿ ಅವರು ಪತಂಜಲಿ, ಜ್ನಾನದಲ್ಲಿ ಶಂಕರ, ಅಹಿಂಸೆಯಲ್ಲಿ ಬುದ್ಧ, ಮಾನವೀಯತೆಯಲ್ಲಿ ಏಸುಗಳೆಲ್ಲರಂತೆ ಇದ್ದರು. ಅವರೊಬ್ಬ ದೇವರ ಅವತಾರವೇ ಆಗಿದ್ದರು. ಭವಿಷ್ಯದಲ್ಲಿ ಅವರನ್ನು ದೇವರೆಂದು ಆರಾಧಿಸುವರು.
ಜನನಮತ್ತು ಬಾಲ್ಯ
ಕೇರಳದ ತೀಯಾ ಸಮಾಜ ದವರಾದ ಮದನ್ ಆಸನ್ ಹಾಗೂ ಕುಟ್ಟಿ ಅಮ್ಮಾಳ್ ಎಂಬ ದಂಪತಿಗಳಿಗೆ ಜನಿಸಿದರು. ಆಗ ಕೇರಳದಲ್ಲಿ ಅನೇಕ ಜಾತಿಪಂಥಗಳಿದ್ದವು. ಮೇಲ್ಜಾತಿ, ಕೆಳಜಾತಿ, ಅಸ್ಪೃಷ್ಯತೆ ಮುಂತಾದ ಸಾಮಾಜಿಕ ಸಮಸ್ಯೆಗಳು ಎಲ್ಲೆಡೆ ಜನರ ಮನಸ್ಸನ್ನು ಹರಿದು ತಿನ್ನುತ್ತಿದ್ದವು. ಆಗ ರು ಪಣತೊಟ್ಟು ತಮ್ಮ ಜೀವನದ ಧ್ಯೇಯವೆಂದು ಶಪಥಮಾಡಿದರು. ದೇವರ ಹೆಸರಿನಲ್ಲಿ ಪ್ರಾಣಿಹತ್ಯೆ ಅವರಿಗೆ ಸರಿಬೀಳಲಿಲ್ಲ. ಹೀಗೆ ಸಮಾಜದ ವಿರೋಧಾಭಾಸಗಳಿಗೆ ಮುಟ್ಟುಗೋಲು ಹಾಕಲು ಅವರು ತೆಗೆದುಕೊಂಡ ಕ್ರಮಗಳು, ಆಂದೋಳನೆಗಳು ಅನನ್ಯ. ಕೆಳವರ್ಗದಲ್ಲಿ ಜನಿಸಿದ ಜನರಿಗೆ ದೇವಸ್ಥಾನಗಳಲ್ಲಿ ಅನುಮತಿಕೊಡಲು ಅವರು ಬೇಡಲಿಲ್ಲ. ಅಥವಾ ಹಿಂಸಾಚಾರದ ಚಳುವಳಿಗಳನ್ನೂ ನಡೆಸದೆ, ತಾವೇ ದೇವಾಲಯಗಳನ್ನು ಸ್ಥಾಪಿಸುವುದರಮೂಲಕ ಒಂದು ಹೊಸ-ಅನನ್ಯ-ಆಲೋಚನಾಕ್ರಮವನ್ನು ಹುಟ್ಟುಹಾಕಿದರು. ಕೇರಳದಾದ್ಯಂತವೂ ಸುಮಾರು ೬೦ ಕ್ಕೂ ಹೆಚ್ಚು ದೇವಾಲಯಗಳನ್ನು ಸ್ಥಾಪಿಸಿದರು
ಶಿವಗಿರಿಯಿಂದ ೪೫ ಕಿಲೋಮೀಟರ್ ಉತ್ತರಕ್ಕೆ ತಿರುವನಂತಪುರದಿಂದ ೧೨ ಕಿಲೋಮೀಟರ್ ದೂರದ ಉತ್ತರಪೂರ್ವ ಸೀಮೆಯಲ್ಲಿರುವ ಚೆಂಬಳಾಂತಿ ಗ್ರಾಮದಲ್ಲಿ ನಾರಾಯಣ ಗುರುಗಳು ಜನಿಸಿದರು. ಅವರು ಹುಟ್ಟಿ ಬೆಳೆದ ಮನೆಯನ್ನು ಇಂದಿಗೂ ಸುರಕ್ಷಿತವಾಗಿ ಕಾಯ್ದಿರಿಸಲಾಗಿದೆ. ನಾರಾಯಣ ಗುರು ಹುಟ್ಟಿದ್ದು 18-8-1854ರಂದು ಅವರ ಹೆತ್ತವರ ಕುರಿತಾಗಿ ಗುರು ನಟರಾಜರು ಈ ಕೆಳಗಿನ ವಿವರಗಳನ್ನು ಕೊಡುತ್ತಾರೆ: “ ಆ ಹಳ್ಳಿಯಲ್ಲಿ ೧೮೫೫ರ ಸುಮಾರಿಗೆ ಒಂದು ಕೃಷಿ ಕುಟುಂಬ ಬಾಳಿತ್ತು. ತಂದೆ ಮಾದನ್ ಆಶನ್. ಆಶನ್ ಕೇವಲ ಕೃಷಿಕರಷ್ಟೇ ಆಗಿರಲಿಲ್ಲ. ಅವರು ಖಗೋಲಶಾಸ್ತ್ರ, ಆಯುರ್ವೇದದಲ್ಲಿ ತಜ್ನರಾಗಿದ್ದರು. ಆಶನ್ ಎಂದರೆ ಆಚಾರ್ಯ ಎಂಬರ್ಥ. ವಾರಕ್ಕೊಮ್ಮೆ ಅವರ ಮನೆಯ ಚಾವಡಿಯಲ್ಲಿ ಹಳ್ಳಿಯ ಜನ ಮಾದನ್ ಆಶನ್ ಅವರ ರಾಮಾಯಣ, ಮಹಾಭಾರತ ಪ್ರವಚನವನ್ನು ಕೇಳಲು ನೆರೆಯುತ್ತಿದ್ದರು. ನಾರಾಯಣ ಗುರುವನ್ನು ಮುದ್ದಿನಿಂದ `ನಾಣು’ ಎಂದು ಕರೆಯುತ್ತಿದ್ದರು.ಕೇರಳದಲ್ಲಿ ಸಾಂಪ್ರದಾಯಿಕ ಕಲಿಕೆ ಎಂದರೆ ಸಂಸ್ಕ್ರತವನ್ನು ಕಲಿಯುವುದಾಗಿತ್ತು. ನಾರಾಯಣ ಗುರು ಸುಲಭವಾಗಿ ಸಂಸ್ಕ್ರತ ಭಾಷೆ ಮತ್ತು ವ್ಯಾಕರಣವನ್ನು ಕಲಿತ. `ಸಿದ್ಧ ರೂಪಮ್’,`ಬಾಲಪ್ರಭೋದಮ್’, ಮತ್ತು ಅಮರ ಕೋಶವನ್ನು ಕಲಿತ. ನಾಣುವು ಸಂಸ್ಕ್ರತ ಮತ್ತು ಮಲೆಯಾಳಮ್ ಮಾತ್ರ ಚೆನ್ನಾಗಿ ಕಲಿತಿದ್ದನಲ್ಲದೆ ತಮಿಳನ್ನೂ ಚೆನ್ನಾಗಿ ಕಲಿತನು. ಸ್ವಪ್ರಯತ್ನದಿಂದ ತಮಿಳಿನ ಶ್ರೇಷ್ಠ ಗ್ರಂಥಗಳಾದ `ತೋಲ್ಕಾಪ್ಪಿಯನ್’, `ನನ್ನುಲ್’, `ಸಿಲಪ್ಪದಿಕಾರಮ್’, `ಮನಿಮೇಕಲಮ್’, `ತಿರುಕ್ಕುರಲ್’, ಮತ್ತು `ತಿರುವಾಚಕಮ್’, ಅಭ್ಯಸಿಸಿದನು.

ವಿಚಿತ್ರ ಎಂದರೆ ನಾಣು ಸ್ವಾಮಿಯ ಮನಸ್ಸನ್ನು ಅರಿಯದ ಸಂಬಂಧಿಕರು ಅವನಿಗೆ ಮದುವೆಯಾಗುವಂತೆ ಒತ್ತಾಯಿಸಿದರು. ನಾಣು ರಾಮಕೃಷ್ಣ ಪರಮಹಂಸರು ಶಾರದಾ ದೇವಿಯನ್ನು ಮದುವೆಯಾದಂತೆ ಮದುವೆಯಾದ್ರು. ಆ ಕಾಲದಲ್ಲಿ ವರನ ಸಹೋದರಿಯು ವಧುವಿಗೆ `ಪುತವಾ’,ಅಂದ್ರೆ ವಧುವಿನ ಬಟ್ಟೆಗಳು, ಕೊಡುವ ಸಂಪ್ರದಾಯವಿತ್ತು. ನಾರಾಯಣ ಗುರುಗಳು ಮದುವೆಗೆ ತಾನೇ ಸ್ವತಃ ಹೋಗಲಿಲ್ಲ. ಮದುವೆ ೧೮೮೨ರ್ಲ್ಲಿ ಆಯಿತು. ಸಂಸಾರ್ ಬಂಧನವನ್ನು ಹರಿದುಕೊಂಡು ಹೋಗಲು ಮದುವೆ ಒಂದು ಅಡ್ಡಿಯಾಗಲಿಲ್ಲ. ಗುರು ಹೇಳಿದರು:“ನಾವು ಈ ಜಗತ್ತಿಗೆ ಯಾವುದೋ ಒಂದು ಉದ್ದೇಶಕ್ಕೆ ಬಂದಿದ್ದೇವೆ. ನನಗೆ ನನ್ನ ಕೆಲಸ ಮಾಡಲಿದೆ. ನಿನಗೆ ನಿನ್ನ ಕೆಲಸ ನಿರ್ವಹಿಸಲಿದೆ. ನನ್ನ ದಾರಿಯಲ್ಲಿ ನಾನು ಹೋಗುತ್ತೇನೆ. ನಿನ್ನ ದಾರಿಯಲ್ಲಿ ನೀನು ಹೋಗು. ಎಂದು ಹೆಂಡತಿಗೆ ಹೇಳಿ, ತಮ್ಮ ಹಳ್ಳಿಯನ್ನೂ, ತನ್ನ ಜನರನ್ನೂ ತ್ಯಜಿಸಿದರು. ಪುಣ್ಯಪುರುಷ ನಾರಾಯಣ ಗುರುಗಳು.