ಐಕಾನ್ ಗಳ ಭೇಟೆ

Share

ರಾಜಕಾರಣಿಗಳು ಮತ್ತು ಸಾಂಸ್ಕೃತಿಕ ವಲಯದ ನಂಟು ಹಾಗೂ ಅವರ ನಡುವಳಿಕೆಗಳು ಹೇಗಿರುತ್ತವೆ ಎನ್ನುವ ಕುರಿತು ತಮ್ಮ ವೃತ್ತಿ ಅನುಭವದಲ್ಲಿ ಆದ ಕೆಲ ಘಟನೆಗಳನ್ನು ಹಿರಿಯ ಪತ್ರಕರ್ತ ಸಿ.ರುದ್ರಪ್ಪ ಅವರು ಅತ್ಯಂತ ಮನೋಜ್ಞವಾಗಿ ಇಲ್ಲಿ ಬಿಡಿಸಿಟ್ಟಿದ್ದಾರೆ.

ಸಿ.ರುದ್ರಪ್ಪ,ಹಿರಿಯ ಪತ್ರಕರ್ತರು

 

ಐಕಾನ್ ಗಳ ಭೇಟೆ
ಬಿಜೆಪಿಯ ಸಜ್ಜನ ರಾಜಕಾರಣಿಯೊಬ್ಬರ ಬಗ್ಗೆ ಇತ್ತೀಚೆಗೆ ಒಂದೆರಡು ಒಳ್ಳೆಯ ಮಾತುಗಳನ್ನು ಬರೆದಿದ್ದೆ.”ನಿಮಗೆ ಅವರ ಇನ್ನೊಂದು ಮುಖ ಗೊತ್ತಿಲ್ಲವೇ”ಎಂದು ಕೆಲವರು ನನ್ನನ್ನು ಕೇಳಿದರು.”ಇಲ್ಲ..ಅದನ್ನು ತಿಳಿದುಕೊಳ್ಳುವ ಅಗತ್ಯವೂ ಇಲ್ಲ.ನನ್ನ ದೃಷ್ಟಿಯಲ್ಲಿ ಅವರು ಸಜ್ಜನರಾಗಿಯೇ ಇರಲಿ”ಎಂದು ಸ್ಪಷ್ಟಪಡಿಸಿದೆ.
ಇನ್ನೊಂದು ಪ್ರಕರಣ-ಅವರೊಬ್ಬ ಜ್ಞಾನ ಪೀಠ ಪುರಸ್ಕೃತರು.ಅವರು ತಮ್ಮ ಆರಂಭಿಕ ವರ್ಷಗಳಲ್ಲಿ ನಮ್ಮ ಊರಿನಲ್ಲಿ ಪ್ರಾಧ್ಯಾಪಕರಾಗಿದ್ದರು.ಒಂದು ರಾತ್ರಿ ಪುರ ಸಭಾಧ್ಯಕ್ಷರು ಮತ್ತಿತರೊಂದಿಗೆ ಔತಣ ಕೂಟದಲ್ಲಿ ಭಾಗವಹಿಸಿದ್ದರು.ಪಾರ್ಟಿ ರಂಗೇರುತ್ತಿದ್ದಂತೆ ಅವರು ಪುರ ಸಭಾಧ್ಯಕ್ಷರನ್ನು ಉದ್ದೇಶಿಸಿ”ರಾಮ ಮನೋಹರ ಲೋಹಿಯಾ ಮತ್ತು ಶಾಂತವೇರಿ ಗೋಪಾಲ ಗೌಡರ ನಂತರ ನಾನು ಅತಿ ಹೆಚ್ಚು ಗೌರವಿಸುವ ವ್ಯಕ್ತಿಯೆಂದರೆ ನೀವೇ “ಎಂದು ಬಿಟ್ಟರು (ಅವರಿಂದ ಏನು ಏನು ಕೆಲಸ ಆಗಬೇಕಿತ್ತೋ ಏನೋ ).

 

ಅವರು ಭಟ್ಟಂಗಿತಕ್ಕೆ ಹೆಸರುವಾಸಿ.ಆದರೆ ಇಂತಹ ಸಂಗತಿಗಳು ಪ್ರಸಿದ್ಧ ವ್ಯಕ್ತಿಗಳ ವಿಷಯದಲ್ಲಿ ಮುಖ್ಯವಾಗಬಾರದು.ನಾನಂತೂ ಅವರ ಲೇಖನಿಯ ತುದಿಯಲ್ಲಿ ನಾಟ್ಯವಾಡುತ್ತಾ ವಿಜೃಂಭಿಸುವ ಅಕ್ಷರಗಳಿಂದಾಗಿ ಮತ್ತು ಅವರ ಸಾಹಿತ್ಯ ಕೃತಿಗಳು ನೀಡುವ ಸುಂದರ ಅನುಭವಗಳಿಂದಾಗಿ ಅವರನ್ನು ಆರಾಧಿಸುತ್ತೇನೆ.
ಮತ್ತೊಂದು ಪ್ರಕರಣ-1989 ರಲ್ಲಿ ಕುವೆಂಪು ವಿವಿಯ ರೀಡರ್ ಹುದ್ದೆಗೆ ರಾಮಚಂದ್ರ ದೇವ ಮತ್ತು ರಾಜೇಂದ್ರ ಚೆನ್ನಿ ನಡುವೆ ಭಾರಿ ಪೈಪೋಟಿ ನಡೆದಿತ್ತು.ಸಾಂಸ್ಕೃತಿಕ ರಾಜಕಾರಣ ಮತ್ತು ಜಾತಿ ರಾಜಕಾರಣ ತಳಕು ಹಾಕಿಕೊಂಡಿದ್ದರಿಂದ ಈ ಪ್ರಕರಣ ದೊಡ್ಡ ವಿವಾದವನ್ನು ಸೃಷ್ಟಿಸಿತ್ತು.ಆ ಬಗ್ಗೆ ವಿಶೇಷ ವರದಿ ಮಾಡಲು ನಮ್ಮ ಪತ್ರಿಕೆಯ ಸಂಪಾದಕರು ನನ್ನನ್ನು ಬೆಂಗಳೂರಿನಿಂದ ಕಳುಹಿಸಿದ್ದರು.ವಿವಿಯ ಉಪ ಕುಲಪತಿ dr ಶಾಂತಿ ನಾಥ ದೇಸಾಯಿ ಅವರನ್ನು ಭೇಟಿ ಮಾಡಲು ಸಂಪಾದಕರಿಂದ ಪರಿಚಯ ಪತ್ರವನ್ನು ತೆಗೆದುಕೊಂಡು ಹೋಗಿದ್ದೆ.ಎಲ್ಲಾ ಮೂಲಗಳಿಂದ ಮಾಹಿತಿ ಸಂಗ್ರಹಿಸಿದ ಬಳಿಕ ದೇಸಾಯಿ ಅವರ ಸಂದರ್ಶನ ಮಾಡಿದ್ದೆ .ಎಲ್ಲವನ್ನೂ ಎಚ್ಚರಿಕೆಯಿಂದ ನೋಟ್ಸ್ ಮಾಡಿಕೊಂಡು ಯಥಾವತ್ತಾಗಿ ವರದಿ ಮಾಡಿದ್ದೆ.ಆದರೆ ದೇಸಾಯಿಯವರು”ನಾನು ಹಾಗೆ ಹೇಳಿರಲಿಲ್ಲ”ಎಂದು ನಮ್ಮ ವಿರುದ್ಧ ಮಾನ ನಷ್ಟ ಮೊಕದ್ದಮೆಯನ್ನು ದಾಖಲು ಮಾಡಿದ್ದರು.ಸಾಹಿತಿಗಳು ಕೂಡ ಏಕೆ ಹೀಗೆ ಸುಳ್ಳು ಹೇಳುತ್ತಾರೆ ಎಂದು ನನಗೆ ಬೇಸರವಾಗಿತ್ತು.ಆದರೆ ಅದನ್ನು ಮರೆತು ಅವರ ಬಗ್ಗೆ ಮೊದಲಿದ್ದ ಗೌರವ ಭಾವನೆಯನ್ನೇ ಉಳಿಸಿಕೊಂಡೆ.
ಇನ್ನೂ ಒಂದು ಪ್ರಕರಣ-1984 ರಲ್ಲಿ ನಾನು ಮುಂಬೈನಲ್ಲಿದ್ದೆ.ಆಗ ಅಲ್ಲಿನ ರವೀಂದ್ರ ನಾಟ್ಯ ಮಂದಿರದಲ್ಲಿ ಮಹಾರಾಷ್ಟ್ರ-ಕರ್ನಾಟಕ ಸಾಂಸ್ಕೃತಿಕ ವಿನಿಮಯದ ಅಂಗವಾಗಿ ಉತ್ಸವ ನಡೆದಿತ್ತು.ಕನ್ನಡ ಮತ್ತು ಸಂಸ್ಕೃತಿ ಸಚಿವ dr ಜೀವರಾಜ ಆಳ್ವ ನೇತೃತ್ವದಲ್ಲಿ ಕರ್ನಾಟಕದ ಸಾಂಸ್ಕೃತಿಕ ತಂಡ ಆಗಮಿಸಿತ್ತು.

ಆ ಉತ್ಸವದಲ್ಲಿ ಒಂದು ದಿನ”ನೀಗಿಕೊಂಡ ಸಂಸ”ನಾಟಕವಿತ್ತು.ಸಂಸನ ಪಾತ್ರಧಾರಿ ಸಂಸನ ವಿಕ್ಷಿಪ್ತ ವ್ಯಕ್ತಿತ್ವವನ್ನು ತಮ್ಮ ಅಮೋಘ ಅಭಿನಯದ ಮೂಲಕ ಅನಾವರಣ ಗೊಳಿಸಿದ್ದರು.ಆ ಅದ್ಭುತ ಕಲಾವಿದ
ಮುಂದೆ ಅತ್ಯುತ್ತಮ ಸಿನೆಮಾ ಮತ್ತು ನಾಟಕಗಳ ನಿರ್ದೇಶನದ ಮೂಲಕ ಕರ್ನಾಟಕದ ಕೀರ್ತಿ ಪತಾಕೆಯನ್ನು ರಾಷ್ಟ್ರ ಮಟ್ಟದಲ್ಲಿ ಹಾರಿಸಿದರು.ಆದರೆ ಇದರ ಜೊತೆಗೆ ಅವರಿಗೆ ರಾಜಕೀಯ ಗಾಳಿಯ ದಿಕ್ಕನ್ನು ಗ್ರಹಿಸುವ ವಿಶೇಷ ಗುಣವೂ ಇದೆ.ಅವರು ಕಾಂಗ್ರೆಸ್ ಸರ್ಕಾರಗಳಲ್ಲಿ ಉನ್ನತ ಸ್ಥಾನಗಳನ್ನು ಅಲಂಕರಿಸುತ್ತಾರೆ.ಅದೇ ರೀತಿ ಬಿಜೆಪಿ ಅಧಿಕಾರಕ್ಕೆ ಬರುತ್ತಿದ್ದಂತೆ ಪ್ರಕಟವಾಗುವ ಅಕಾಡೆಮಿ ಮತ್ತು ಪ್ರಾಧಿಕಾರಗಳ ಅಧ್ಯಕ್ಷರ ಪಟ್ಟಿಯಲ್ಲಿಯೂ ಇವರ ಹೆಸರು ಇರುತ್ತದೆ.ಅವರ ಕಾಲಮಾನಕ್ಕೆ ತಕ್ಕಂತೆ ಬಣ್ಣ ಬದಲಾಯಿಸುವ ಗುಣದ ಬಗ್ಗೆ ನಾನು ತಲೆ ಕೆಡಿಸಿಕೊಳ್ಳುವುದೇ ಇಲ್ಲ.ಏಕೆಂದರೆ ಅವರೊಬ್ಬ ಕನ್ನಡದ ಪಾಲಿನ “ಆಭರಣ”.ಇವರೆಲ್ಲಾ ಆದರ್ಶ ಪ್ರಾಯವಾಗಿರುವ ವ್ಯಕ್ತಿಗಳು ಅಥವಾ ಉನ್ನತ ಮಾದರಿಗಳು.ಇಂಗ್ಲಿಷ್ ನಲ್ಲಿ ಇವರನ್ನು ಐಕಾನ್ ಗಳು ಎನ್ನುತ್ತಾರೆ.ಈ ಐಕಾನ್ ಗಳೇ ಸಮಾಜಕ್ಕೆ ಸ್ಫೂರ್ತಿಯ ಚಿಲುಮೆಗಳು.
ಆದರೆ ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿ ಎಲ್ಲಾ ಕ್ಷೇತ್ರಗಳ ಇಂತಹ ಐಕಾನ್ ಗಳನ್ನು ಹುಡುಕಿ ಹುಡುಕಿ ಭೇಟೆ ಮಾಡಲಾಗುತ್ತಿದೆ.ಅವರನ್ನು ಬಟಾಬಯಲು ಬೆತ್ತಲೆ ಮಾಡಲಾಗುತ್ತಿದೆ.ಅವರ ಸುತ್ತ ನಿರ್ಮಾಣವಾಗಿರುವ ಪ್ರತಿಮೆಗಳನ್ನು ಭಗ್ನಗೊಳಿಸಲಾಗುತ್ತಿದೆ.ಇದೊಂದು ಅಪಾಯಕಾರಿ ಬೆಳವಣಿಗೆ.ಇದೇ ಪ್ರವೃತ್ತಿ ಮುಂದುವರಿದರೆ ಸಮಾಜ ಸ್ಫೂತಿಯ ಸೆಲೆಯಿಲ್ಲದೆ ಬರಡು ಭೂಮಿಯಂತೆ ಆದೀತು.
ನಿಜ.ಮಹಾತ್ಮಾ ಗಾಂಧೀಜಿ ಯವರ ನಡೆಗೂ ನುಡಿಗೂ ವ್ಯತ್ಯಾಸ ವಿರಲಿಲ್ಲ.ಆದ್ದರಿಂದಲೇಇಂದಿಗೂ ಗಾಂಧಿ ಸಾಹಿತ್ಯವೇ ಶ್ರೇಷ್ಠ ಸಾಹಿತ್ಯ.ಆದರೆ ಗಾಂಧೀಜಿ ಅವರಂತವರನ್ನೇ ಎಲ್ಲಾ ಕಾಲಕ್ಕೂ ಎಲ್ಲಿಂದ ತರುವುದು?ಆದ್ದರಿಂದ ಪ್ರಸಿದ್ಧ ವ್ಯಕ್ತಿಗಳ ಪೂರ್ವಾಪರಗಳನ್ನು ಮತ್ತು ಪೂರ್ವಾಶ್ರಮಗಳನ್ನು ಪ್ರಶ್ನಿಸದೆ “as is where is ‘ಆಧಾರದಲ್ಲಿ ಭೇಷರತ್ ಆಗಿ ಒಪ್ಪಿಕೊಳ್ಳುವುದೇ ಸೂಕ್ತ .ಪೂರ್ವಾಪರ ಮತ್ತು ಪೂರ್ವಾಶ್ರಮಗಳ ಬಗ್ಗೆ ಒಳ್ಳೆಯ ಉದಾಹರಣೆಗಳೂ ಇವೆ.ಕೆಟ್ಟ ಮಾದರಿಗಳೂ ಇವೆ.ಮೊದಲು ಒಳ್ಳೆಯ ಉದಾಹರಣೆಯನ್ನು ನೋಡೋಣ.ಸಚಿವ ಕೋಟಾ ಶ್ರೀನಿವಾಸ ಪೂಜಾರಿಯವರಿಗೆ ಬಾಲಕನಾಗಿದ್ದಾಗ ಒಂದೇ ಅಂಗಿ ಇತ್ತು.

ಅದು ಕೊಳೆಯಾದಾಗ ತೊಳೆದು ಹಾಕುತಿದ್ದರು.ಅದು ಮಾರನೆಯ ದಿನ ಒಣಗದಿದ್ದರೆ ಅಂದು ಶಾಲೆಗೆ ರಜೆ.ಒಂದು ದಿನ ರಥೋತ್ಸವ ನಡೆಯುತ್ತಿತ್ತು.ತೇರಿನಿಂದ ಬಾಳೆ ಹಣ್ಣುಗಳನ್ನು ಎಸೆಯುತ್ತಿದ್ದರು.ಆ ಬಾಳೆ ಹಣ್ಣುಗಳನ್ನು ತೆಗೆದುಕೊಳ್ಳಲು ಪೂಜಾರಿಯವರು ತೇರಿನ ಹಿಂದೆ ಓಡ ತೊಡಗಿದರು.ಅವರೊಂದಿಗೆ ಇನ್ನೂ ಅನೇಕ ಜನರು ಓಡುತ್ತಿದ್ದರು.ನೂಕು ನುಗ್ಗಲಿನಲ್ಲಿ ಪೂಜಾರಿಯವರು ಎಡವಿ ಮಕಾಡೆ ಬಿದ್ದರು.ಯಾರೋ ಒಬ್ಬರು ಇವರ ಮೈ ಕೈ ಬದಲು ಇವರ ಅಂಗಿಯನ್ನು ಹಿಡಿದು ಎತ್ತಿದರು.ಅಂಗಿ ಹರಿದು ತುಂಡಾಯಿತು.ಪೂಜಾರಿಯವರು ಮೇಲೆದ್ದು ನೋಡುತ್ತಾರೆ-ಇವರ ಬೆನ್ನಿನ ಭಾಗದಲ್ಲಿ ಅಂಗಿಯೇ ಇಲ್ಲ.ಜೋಡಿಸಿ ಹೊಳೆದುಕೊಳ್ಳಲೆಂದು ಆ ತುಂಡಾದ ಅಂಗಿಗಾಗಿ ಅವರು ತಾಸು ಗಟ್ಟಲೆ ಹುಡುಕುತ್ತಾರೆ.ಅದು ಸಿಗುವುದೇ ಇಲ್ಲ.

◦ ಪೂರ್ವಾಶ್ರಮ ಕುರಿತ ಇನ್ನೊಂದು ಕತೆ -ವ್ಯಕ್ತಿಯೊಬ್ಬರು ಕಾರ್ಯನಿಮಿತ್ತ ಬೇರೆ ಊರಿಗೆ ಪ್ರಯಾಣ ಮಾಡಲು ಬಸ್ ನಲ್ಲಿ ಕುಳಿತುಕೊಂಡರು.ಆ ಬಸ್ ನಲ್ಲಿ ಇವರನ್ನು ಬಿಟ್ಟರೆ ಬೇರೆ ಪ್ರಯಾಣಿಕರೆಲ್ಲರೂ ಮಾರ್ಗ ಮಧ್ಯೆ ಬರುವ ಇನ್ನೊಂದು ಊರಿಗೆ ಟಿಕೆಟ್ ತೆಗೆದುಕೊಂಡರು.ಅವರೆಲ್ಲಾ ಆ ಸ್ಥಳದಲ್ಲಿರುವ ಸ್ವಾಮೀಜಿಯೊಬ್ಬರ ಬಗ್ಗೆಯೇ ಮಾತನಾಡುತ್ತಿದ್ದರು.ಸ್ವಾಮೀಜಿಯ ಪವಾಡಗಳು ಮತ್ತು ಮಹಿಮೆಗಳನ್ನು ಕೊಂಡಾಡುತ್ತಿದ್ದರು.ಈ ವ್ಯಕ್ತಿಯ ಕುತೂಹಲ ಹೆಚ್ಚುತ್ತಾ ಹೋಯಿತು.ಆ ಊರಿನ ಬಸ್ ಸ್ಟಾಪ್ ಬರುತ್ತಿದ್ದಂತೆಯೇ ಈ ವ್ಯಕ್ತಿಯನ್ನು ಬಿಟ್ಟು ಉಳಿದವರೆಲ್ಲರೂ ಇಳಿಯತೊಡಗಿದರು.ಈ ವ್ಯಕ್ತಿಯೂ ತಮ್ಮ ಕಾರ್ಯಕ್ರಮವನ್ನು ದಿಡೀರನೆ ಬದಲಿಸಿ ಅದೇ ಬಸ್ ಸ್ಟಾಪಿನಲ್ಲಿ ಇಳಿದುಬಿಟ್ಟರು.ಅಲ್ಲಿ ವಾಹನಗಳಲ್ಲಿ,ಟ್ರಾಕ್ಟರ್ ಗಳಲ್ಲಿ,ಎತ್ತಿನ ಗಾಡಿಗಳಲ್ಲಿ ಬಂದಿದ್ದ ಸಾವಿರಾರು ಜನರು ಸಾಲು ಸಾಲಾಗಿ ಬೆಟ್ಟವೊಂದರ ಕಡೆಗೆ ನಡೆದುಕೊಂಡು ಹೋಗುತಿದ್ದರು.ಈ ವ್ಯಕ್ತಿಯೂ ಆ ಸಾಲಿನಲ್ಲಿ ಸೇರಿಕೊಂಡರು.ಕೆಲವು ತಾಸುಗಳ ಬಳಿಕ ಬೆಟ್ಟದ ಮೇಲಿನ ಗುಹೆಯನ್ನು ತಲುಪಿದರು.ಆ ಗುಹೆಯಲ್ಲಿ ಕಾವಿ ವಸ್ತ್ರ,ರುದ್ರಾಕ್ಷಿ ಮಾಲೆಗಳು ಮತ್ತು ಹೂವಿನ ಹಾರಗಳಲ್ಲಿ ಮುಳುಗಿ ಹೋಗಿದ್ದ ಗಡ್ಡಧಾರಿ ಸ್ವಾಮೀಜಿ ದೂರದಿಂದ ಸ್ವಲ್ಪ ಕಾಣಿಸತೊಡಗಿದರು.ನೂಕುನುಗ್ಗಲಿನಲ್ಲಿ ಅವರ ದರ್ಶನಕ್ಕೆ ಮುಗಿ ಬೀಳುತ್ತಿದ್ದ ಭಕ್ತರನ್ನು ಸ್ವಾಮೀಜಿಯ ಶಿಷ್ಯಂದಿರು ಎಳೆದು ಎಳೆದು ಕಳುಹಿಸುತ್ತಿದ್ದರು.ಈ ವ್ಯಕ್ತಿ ಮುಂದೆ ಸಾಗುತ್ತಿದ್ದಂತೆ ಆ ಸ್ವಾಮೀಜಿಯ ಮುಖ ಮತ್ತಷ್ಟು ಸ್ಪಷ್ಟ ವಾಗತೊಡಗಿತು.ಅದು ಪರಿಚಿತ ಮುಖ ಅನ್ನಿಸತೊಡಗಿತು.ಇನ್ನೇನು ಸ್ವಾಮೀಜಿಯ ದರ್ಶನ ಮಾಡಬೇಕು ಎನ್ನುವಾಗ “ಇವನು ನಮ್ಮೂರ ಕೆಂಚ”ಎಂಬುದು ಖಾತ್ರಿಯಾಗಿ ಈ ವ್ಯಕ್ತಿಗೆ ಶಾಕ್ ಆಯಿತು.ಕೊಂಚ ಉದ್ವೇಗದಿಂದಲೇ”ನೀವು ನಮ್ಮ ಊರಿನ ಕೆಂಚ ಅಲ್ವಾ?”ಎಂದು ಸ್ವಾಮೀಜಿಯನ್ನು ಕೇಳುತ್ತಾರೆ.ಆಗ ಸ್ವಾಮೀಜಿ”ಹೌದು ಸ್ವಲ್ಪ ಸಮಾಧಾನ ಮಾಡಿಕೊಳ್ಳಿ”ಎನ್ನುತ್ತಾರೆ.”ಆದರೆ ನೀನು 20 ವರ್ಷಗಳ ಹಿಂದೆ ನಮ್ಮ ಊರಿನಲ್ಲಿ ತಲೆ ಹಿಡುಕನಾಗಿದ್ದೆ.ಆದರೆ ಈಗ ಇಲ್ಲಿ ಸ್ವಾಮೀಜಿಯಾಗಿದ್ದೀಯಾ”ಎಂದು ಈ ವ್ಯಕ್ತಿ ಕೇಳುತ್ತಾರೆ.”ಹೌದು..ನಿಮ್ಮ ಮಾತು ನಿಜ.ಅಲ್ಲಿ ನನ್ನ ಪೂರ್ವಾಶ್ರಮದಲ್ಲಿ ತಲೆ ಹಿಡುಕನಾಗಿದ್ದೆ.ಈಗ ಇಲ್ಲಿ ಹೊಸ ಅವತಾರದಲ್ಲಿ ಸ್ವಾಮೀಜಿಯಾಗಿದ್ದೇನೆ”.ಎಂದು ಸ್ವಾಮೀಜಿ ಅತ್ಯಂತ ನಿರ್ವಿಕಾರವಾದ ಧ್ವನಿಯಲ್ಲಿ ಹೇಳುತ್ತಾರೆ.”ಅದು ಹೇಗೆ ಸಾಧ್ಯ?”ಎಂದು ಈ ವ್ಯಕ್ತಿ ಕೇಳುತ್ತಾರೆ.ಆಗ ಸ್ವಾಮೀಜಿ”ತಲೆ ಹಿಡುಕರು ಮತ್ತು ಸ್ವಾಮೀಜಿಗಳು ಇಬ್ಬರೂ ಒಂದೇ”ಎನ್ನುತ್ತಾರೆ.”ಛೇ ಅದು ಹೇಗೆ?”ಎಂದು ಈ ವ್ಯಕ್ತಿ ಸಿಟ್ಟಿನಿಂದಲೇ ಏರಿದ ಧ್ವನಿಯಲ್ಲಿ ಪ್ರಶ್ನಿಸುತ್ತಾರೆ.ಆಗ ಸ್ವಾಮೀಜಿ”ಸ್ವಲ್ಪ ಸಮಾಧಾನದಿಂದ ನಾನು ಹೇಳುವುದನ್ನು ಕೇಳಿಸಿಕೊಳ್ಳಿ.ತಲೆ ಹಿಡುಕರು ಮತ್ತು ಸ್ವಾಮೀಜಿಗಳದ್ದು ಒಂದೇ ರೀತಿಯ ವ್ಯಕ್ತಿತ್ವ.ಇಬ್ಬರದ್ದೂ ಅಹಂ ಇಲ್ಲದ ಅವಸ್ಥೆ”ಎನ್ನುತ್ತಾರೆ.

Girl in a jacket
error: Content is protected !!