ನವದೆಹಲಿ,ಜೂ.೧೬- ಕಾಂಗ್ರೆಸ್ ವರಿಷ್ಠೆ ಸೋನಿಯಾ ಗಾಂಧಿ ಆರೋಗ್ಯದಲ್ಲಿ ಮತ್ತೆ ಏರುಪೇರಾಗಿದೆ. ಹೊಟ್ಟೆ ನೋವಿನಿಂದ ಬಳಲಿದ ಸೋನಿಯಾ ಗಾಂಧಿಯನ್ನು ದೆಹಲಿಯ ಗಂಗಾ ರಾಮ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
೭೮ ವರ್ಷದ ಸೋನಿಯಾ ಗಾಂಧಿ ಈ ತಿಂಗಳ ಆರಂಭದಲ್ಲಿ ಆರೋಗ್ಯ ಕ್ಷೀಣಿಸಿದ ಕಾರಣ ಆಸ್ಪತ್ರೆ ದಾಖಲಾಗಿದ್ದರು. ಬಳಿಕ ಸುಧಾರಿಸಿಕೊಂಡು ಬಿಡುಗಡೆಯಾಗಿದ್ದ ಸೋನಿಯಾ ಗಾಂಧಿ ಇದೀಗ ಒಂದೇ ವಾರದಲ್ಲಿ ಮತ್ತೆ ಆಸ್ಪತ್ರೆ ದಾಖಲಾಗಿದ್ದಾರೆ.
ಹೊಟ್ಟೆ ಸಂಬಂಧಿತ ಆರೋಗ್ಯ ಸಮಸ್ಯೆಯಿಂದ ಈ ಬಾರಿ ಸೋನಿಯಾ ಗಾಂಧಿ ಆಸ್ಪತ್ರೆ ದಾಖಲಾಗಿದ್ದಾರೆ. ಗಂಗಾ ರಾಮ್ ಆಸ್ಪತ್ರೆಯ ಗ್ಯಾಸ್ಟ್ರೋಎಂಟರಾಲಜಿ ವಿಭಾದ ನುರಿತ ವೈದ್ಯರ ತಂಡ ಸೋನಿಯಾ ಗಾಂಧಿಗೆ ಚಿಕಿತ್ಸೆ ನೀಡುತ್ತಿದೆ. ಸದ್ಯ ಸೋನಿಯಾ ಗಾಂಧಿ ವೈದ್ಯರ ನಿಗಾದಲ್ಲಿದ್ದಾರೆ. ಆರೋಗ್ಯ ಸ್ಥಿರವಾಗಿದೆ ಎಂದು ಆಸ್ಪತ್ರೆ ಮೂಲಗಳು ಹೇಳಿವೆ.
ಫೆಬ್ರವರಿ ತಿಂಗಳಲ್ಲೂ ಸೋನಿಯಾ ಗಾಂಧಿ ಹೊಟ್ಟೆ ನೋವು ಕಾರಣದಿಂದ ಆಸ್ಪತ್ರೆ ದಾಖಲಾಗಿದ್ದರು. ಇನ್ನು ಜೂನ್ ೭ ರಂದು ಇಂದಿರಾ ಗಾಂಧಿ ಪುತ್ರಿ ಪ್ರಿಯಾಂಕಾ ಗಾಂಧಿ ಜೊತೆ ಶಿಮ್ಲಾದಲ್ಲಿದ್ದ ವೇಳೆ ಅನಾರೋಗ್ಯ ಕಾಣಿಸಿಕೊಂಡಿತ್ತು. ಈ ವೇಳೆ ಶಿಮ್ಲಾದಾ ಇಂದಿರಾ ಗಾಂಧಿ ಆಸ್ಪತ್ರೆಗೆ ದಾಖಲಾಗಿದ್ದರು. ಆರೋಗ್ಯ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದ ಸೋನಿಯಾ ಗಾಂಧಿ ದೆಹಲಿಗೆ ಮರಳಿದ್ದರು. ಇದೀಗ ಒಂದೇ ವಾರದಲ್ಲಿ ಮತ್ತೆ ಹೊಟ್ಟೆ ನೋವಿನಿಂದ ಆಸ್ಪತ್ರೆ ದಾಖಲಾಗಿದ್ದಾರೆ.