ನವದೆಹಲಿ,ಸೆ,೧೪: ಸರ್ಕಾರಿ ನೌಕರರು ಮರಣ ಹೊಂದಿದ ಬಳಿಕ ಅವರ ಪುತ್ರಿ ವಿವಾಹ ವಿಚ್ಛೇದನ ಪಡೆದರೆ ಅಂಥ ಸಂದರ್ಭದಲ್ಲಿ ಅವರಿಗೆ ಅನುಕಂಪದ ಆಧಾರದಲ್ಲಿ ಸರ್ಕಾರಿ ಉದ್ಯೋಗ ನೀಡಲಾಗದು ಎಂದು ಸುಪ್ರೀಂ ಕೋರ್ಟ್ ಹೇಳಿದೆಕರ್ನಾಟಕಕ್ಕೆ ಸಂಬಂಧಿಸಿದ ಪ್ರಕರಣವೊಂದರ ವಿಚಾರಣೆ ವೇಳೆ ಸರ್ವೋಚ್ಛ ನ್ಯಾಯಾಲಯ ಈ ಅಂಶವನ್ನು ಸ್ಪಷ್ಟಪಡಿಸಿದೆ.
ಮಂಡ್ಯ ಜಿಲ್ಲಾ ಖಜಾನೆಯಲ್ಲಿ ಸೆಕೆಂಡ್ ಡಿವಿಷನ್ ಅಸಿಸ್ಟೆಂಟ್ ಆಗಿ ಕಾರ್ಯನಿರ್ವಹಿಸುತ್ತಿದ್ದ ದಿ. ಪಿ. ಭಾಗ್ಯಮ್ಮ ಅವರ ಪುತ್ರಿ ವಿ. ಸೌಮ್ಯಶ್ರೀ ಅವರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡುವಂತೆ ಕರ್ನಾಟಕ ಹೈಕೋರ್ಟ್ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಕರ್ನಾಟಕ ಸರ್ಕಾರ ಖಜಾನೆ ನಿರ್ದೇಶಕರು ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು.ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಆರ್.ಶಾ ಮತ್ತು ಅನಿರುದ್ಧ ಬೋಸ್ ಅವರಿದ್ದ ಪೀಠವು ಸೌಮ್ಯಶ್ರೀ ಅವರು ಅನುಕಂಪದ ಆಧಾರದಲ್ಲಿ ಉದ್ಯೋಗ ಪಡೆಯಲು ಅರ್ಹರಲ್ಲ ಎಂದು ಹೇಳಿದೆ.‘ಕರ್ನಾಟಕ ನಾಗರಿಕ ಸೇವಾ (ಸಹಾನುಭೂತಿ ಆಧಾರದ ನೇಮಕಾತಿ) ನಿಯಮಗಳು ʻ ೧೯೯೬’ ಪ್ರಕಾರ, ಸರ್ಕಾರಿ ಉದ್ಯೋಗಿಯ ವಿಚ್ಛೇದಿತ ಪುತ್ರಿಗೆ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಲು ಅವಕಾಶವಿಲ್ಲ. ಉದ್ಯೋಗಿಯನ್ನೇ ಅವಲಂಬಿಸಿದ್ದ ಮದುವೆಯಾಗದ ಅಥವಾ ವಿಧವೆ ಪುತ್ರಿಗೆ ಮಾತ್ರ ಅನುಕಂಪದ ಆಧಾರದಲ್ಲಿ ಉದ್ಯೋಗ ನೀಡಬಹುದಾಗಿದೆ ಎಂದು ಪೀಠ ಹೇಳಿದೆ.ಅನುಕಂಪದ ಆಧಾರದ ನೇಮಕಾತಿ ನಿಯಮಗಳಿಗೆ ೨೦೨೧ರಲ್ಲಿ ತಿದ್ದುಪಡಿ ಮಾಡಲಾಗಿದ್ದು, ‘ವಿಚ್ಛೇದಿತ ಪುತ್ರಿ’ಯನ್ನೂ ಸೇರ್ಪಡೆಗೊಳಿಸಲಾಗಿದೆ. ಆದರೆ, ಉದ್ಯೋಗಿ ಮರಣ ಹೊಂದಿದ ನಂತರ ವಿಚ್ಛೇದನ ಪಡೆದ ಸಂದರ್ಭದಲ್ಲಿ ಇದನ್ನು ಪರಿಗಣಿಸಲಾಗದು ಎಂದು ಕೋರ್ಟ್ ಹೇಳಿದೆ