ದೆಹಲಿ ಗದ್ದುಗೆಗೆ ಮೂರು ಪಕ್ಷಗಳ ವಿಭಿನ್ನ ತಂತ್ರ..!
by ಕೆಂಧೂಳಿ
ನವದೆಹಲಿ,ಜ,24-ದೇಶಾದ್ಯಂತ ಕುತೂಹಲ ಕೆರಳಿಸಿರುವ ರಾಜಧಾನಿ ದೆಹಲಿಯ ವಿಧಾನಸಭೆ ಚುನಾವಣೆ ಮೂರುಪಕ್ಷಗಳಿಗೂ ಮಹತ್ವದ್ದಾಗಿದೆ.
ಎರಡುಭಾರಿ ಅಧಿಕಾರ ಪಡೆದುಕೊಂಡು ಹಾಲಿ ಅಧಿಕಾರ ನಡೆಸುತ್ತಿರುವ ಎಎಪಿ ಮೂರನೇ ಬಾರಿಗೆ ಅಧಿಕಾರಕ್ಕಾಗಿ ತೀವ್ರ ಪ್ರಯತ್ನ ನಡೆಸುತ್ತಿದ್ದರೆ,ಬಿಜೆಪಿ ಅಧಿಕಾರ ಗದ್ದುಗೆಗಾಗಿ ಇನ್ನಿಲ್ಲದ ಪ್ರಯತ್ನ ನಡೆಸುತ್ತಿದೆ.ಕಾಂಗ್ರೆಸ್ ತನ್ನದೆ ತಂತ್ರಗಳೊಂದಿಗೆ ಗೆಲುವಿಗಾಗಿ ಶತ ಪ್ರಯತ್ನ ನಡೆಸುತ್ತಿದೆ.
27 ವರ್ಷಗಳ ಬಳಿಕ ದೆಹಲಿ ಗದ್ದುಗೆ ಹಿಡಿಯಲು ಬಿಜೆಪಿ ಮತದಾರರಿಗೆ ಭರ್ಜರಿ ಕೊಡುಗೆಗಳನ್ನು ಘೋಷಿಸಿದೆ. 2013 ರಲ್ಲಿ ಅರವಿಂದ್ ಕೇಜ್ರಿವಾಲ್ ಸರ್ಕಾರ ಅಧಿಕಾರಕ್ಕೆ ಬರುವವರೆಗೆ ಸತತ 15 ವರ್ಷಗಳ ಕಾಲ ಅಧಿಕಾರದಲ್ಲಿದ್ದ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರಲು ಶತಪ್ರಯತ್ನ ಮಾಡುತ್ತಿದೆ
ಆಮ್ ಆದ್ಮಿ ಪಕ್ಷ ನೀಡಿರುವ ಕೊಡುಗೆಗಳನ್ನು ಟೀಕಿಸುತ್ತಲೇ ಬಂದಿದ್ದ ಬಿಜೆಪಿ ಇದೀಗ ತಾನು ಕೂಡ ಹಲವು ಉಚಿತ ಘೋಷಣೆಗಳನ್ನು ಮಾಡಿದ್ದಲ್ಲದೆ, ಈಗ ಇರುವ ಯೋಜನೆಗಳನ್ನು ಮುಂದುವರೆಸುವುದಾಗಿ ತಿಳಿಸಿದೆ. ದೆಹಲಿಯಲ್ಲಿ ತ್ರಿಕೋನ ಸ್ಪರ್ಧೆ ಏರ್ಪಡುತ್ತದೆ ಎಂದು ನಿರೀಕ್ಷೆ ಮಾಡಲಾಗಿತ್ತಾದರೂ ಇದೀಗ ಇಲ್ಲಿ ಎರಡು ಪಕ್ಷಗಳ ನಡುವೆ ನೇರ ಹಣಾಹಣಿ ಇದೆ ಎಂದು ಸಮೀಕ್ಷೆಯೊಂದು ತಿಳಿಸಿದೆ.
ರಾಜಸ್ಥಾನದ ಪ್ರಮುಖ ಬೆಟ್ಟಿಂಗ್ ಮಾರುಕಟ್ಟೆಯಾಗಿರುವ ಫಲೋಡಿ ಸಟ್ಟಾ ಬಜಾರ್ ದೆಹಲಿ ವಿಧಾನಸಭಾ ಚುನಾವಣೆ ಬಗ್ಗೆ ತನ್ನ ಮುನ್ಸೂಚನೆಯನ್ನು ನೀಡಿದೆ. ಈ ಮೊದಲೇ ಫಲೋಡಿ ಸಟ್ಟಾ ಬಜಾರ್ ಗೆಲುವಿನ ಅಂಕಿ ಅಂಶಗಳನ್ನು ನೀಡಿತ್ತು ಅದರ ಪ್ರಕಾರ 70 ಸದಸ್ಯ ಬಲ ಹೊಂದಿರುವ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 36 ಕ್ಕಿಂತ ಹೆಚ್ಚಿನ ಸ್ಥಾನಗಳನ್ನು ಗೆದ್ದು ಸರ್ಕಾರ ರಚನೆ ಮಾಡುತ್ತದೆ ಎಂದು ತಿಳಿಸಿತ್ತು. ಈಗ ಮತ್ತೊಮ್ಮೆ ಮುನ್ಸೂಚನೆ ನೀಡಿದ್ದು ಈ ಬಾರಿ ಅಂಕಿ ಸಂಖ್ಯೆಗಳನ್ನು ಬದಲಾಯಿಸಿದೆ.
ಫಲೋಡಿ ಸಟ್ಟಾ ಬಜಾರ್ ಪ್ರಕಾರ ಈ ಬಾರಿ ದೆಹಲಿ ಚುನಾವಣೆಯಲ್ಲಿ ಆಮ್ ಆದ್ಮಿ ಪಕ್ಷ 39 ರಿಂದ 41 ಸ್ಥಾನಗಳಲ್ಲಿ ಗೆಲುವು ಸಾಧಿಸುವ ಸಾಧ್ಯತೆ ಇದ್ದು ಸರಳ ಬಹುಮತ ಪಡೆಯುವ ಮೂಲಕ ಸರ್ಕಾರ ರಚನೆ ಮಾಡುತ್ತದೆ ಎಂದು ಹೇಳಿದೆ. ಬಿಜೆಪಿ ಪಕ್ಷ ಕಳೆದ ಬಾರಿಗಿಂತ ಹೆಚ್ಚಿನ ಸ್ಥಾನಗಳಲ್ಲಿ ಗೆಲ್ಲಲಿದ್ದು 29 ರಿಂದ 31 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ತಿಳಿಸಿದೆ. ಕಳೆದ ಬಾರಿಗಿಂತ ಹೆಚ್ಚಿಗೆ ಸ್ಥಾನ ಗೆದ್ದರೂ ಸರ್ಕಾರ ರಚಿಸುವ ಬಿಜೆಪಿ ಕನಸು ಈ ನನಸಾಗುವುದು ಅನುಮಾನವಾಗಿದೆ.
ಕಾಂಗ್ರೆಸ್ ಕೂಡ ಎಲ್ಲಾ 70 ಕ್ಷೇತ್ರಗಳಲ್ಲಿ ಸ್ಪರ್ಧೆ ಮಾಡಿದ್ದರೂ ಈ ಬಾರಿ ಚುನಾವಣೆಯಲ್ಲಿ ಒಂದೇ ಒಂದು ಸ್ಥಾನ ಗೆಲ್ಲುವುದು ಕೂಡ ಕಷ್ಟವಿದೆ ಎಂದು ಸಟ್ಟಾ ಬಜಾರ್ ಮುನ್ಸೂಚನೆ ಕೊಟ್ಟಿದೆ. ಒಂದು ವೇಳೆ ಅದು ನಿಜವಾದರೆ ಕಾಂಗ್ರೆಸ್ಗೆ ಅದಕ್ಕಿಂತ ದೊಡ್ಡ ಅವಮಾನಕರ ಸೋಲು ಎದುರಾಗಲಿದೆ.