ಅಮೆರಿಕಾ ಅಧ್ಯಕ್ಷ ಟ್ರಂಪ್ ಪಾಕ್-ಭಾರತ ಮಧ್ಯಸ್ಥಿಕೆ ಭಾರತ ತಿರಸ್ಕರಿಸಿದೆ

Share

ನವದೆಹಲಿ, ಮೇ,14- ಭಾರತ- ಪಾಕಿಸ್ತಾನದ ಸಂಘರ್ಷಕ್ಕೆ ಸಂಬಂಧಿಸಿದಂತೆ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಮಧ್ಯಸ್ಥಿಕೆಯನ್ನು ಭಾರತ ತಿರಸ್ಕರಿಸಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್ ತಿಳಿಸಿದ್ದಾರೆ.

ಭಾರತ ಮತ್ತು ಪಾಕಿಸ್ತಾನದ ನಡುವಿನ “ಪರಮಾಣು ಯುದ್ಧ”ವನ್ನು ತಡೆಯಲು ವ್ಯಾಪಾರ ಸ್ಥಗಿತಗೊಳಿಸುವುದಾಗಿ ಎಚ್ಚರಿಕೆ ಕೊಟ್ಟಿದ್ದೆ ಎನ್ನುವ ಟ್ರಂಪ್ ಹೇಳಿಕೆ ಕೂಡ ಸುಳ್ಳು ಎಂದು ಕೂಡ ಇದೇ ವೇಳೆ ತಿಳಿಸಿದರು.

ವಿದೇಶಾಂಗ ವ್ಯವಹಾರಗಳ ಸಚಿವಾಲಯವು ಈ ಬಗ್ಗೆ ಸ್ಪಷ್ಟನೆ ನೀಡಿದ್ದು, ಆಪರೇಷನ್ ಸಿಂಧೂರ ಮಿಲಿಟರಿ ಕಾರ್ಯಾಚರಣೆಯು ನ್ಯಾಯಯುತವಾಗಿದೆ ಎಂದು ಹೇಳಿದೆ. ಪಹಲ್ಗಾಮ್ ಭಯೋತ್ಪಾದಕ ದಾಳಿಗೆ ಪ್ರತೀಕಾರವಾಗಿ ಭಾರತವು ಮೇ 7 ರಂದು ಆಪರೇಷನ್ ಸಿಂಧೂರ ಅಡಿಯಲ್ಲಿ ಪಾಕಿಸ್ತಾನದ ನಿಯಂತ್ರಣದಲ್ಲಿರುವ ಪ್ರದೇಶಗಳಲ್ಲಿನ ಭಯೋತ್ಪಾದಕರ ತರಬೇತಿ ಕೇಂದ್ರಗಳ ಮೇಲೆ ದಾಳಿ ನಡೆಸಿತ್ತು.

ಡ್ರೋನ್‌ಗಳು, ಕ್ಷಿಪಣಿಗಳು ಮತ್ತು ಇತರ ದೀರ್ಘ-ಶ್ರೇಣಿಯ ಶಸ್ತ್ರಾಸ್ತ್ರಗಳನ್ನು ಬಳಸಿ ಎರಡೂ ಕಡೆಯಿಂದ ನಾಲ್ಕು ದಿನಗಳ ತೀವ್ರವಾದ ದಾಳಿಗಳು ಮತ್ತು ಪ್ರತಿದಾಳಿ ನಡೆದಿದ್ದರಿಂದ ಯುದ್ಧದ ಭೀತಿ ಶುರುವಾಗಿತ್ತು. ಮಿಲಿಟರಿ ಕಾರ್ಯಾಚರಣೆ ನಿಲ್ಲಿಸಲು ಎರಡೂ ಕಡೆಯವರು ಒಪ್ಪಿದ್ದಾರೆ ಎಂದು ಮೇ 10 ರಂದು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಘೋಷಣೆ ಮಾಡಿದರು. ಬಳಿಕ ವಿದೇಶಾಂಗ ಇಲಾಖೆ ಈ ಬೆಳವಣಿಗೆಯನ್ನು ಯುಎಸ್ ಮಧ್ಯಸ್ಥಿಕೆಯ ಕದನ ವಿರಾಮ ಎಂದು ಘೋಷಿಸಿತು.

ಕಾಶ್ಮೀರ ವಿಚಾರದಲ್ಲಿ ಮಧ್ಯಸ್ಥಿಕೆ ವಹಿಸಲು ಸಿದ್ದ ಎಂದು ಡೊನಾಲ್ಡ್ ಟ್ರಂಪ್ ಹೇಳಿದ್ದರು. ಯುದ್ಧವನ್ನು ನಿಲ್ಲಿಸದೇ ಇದ್ದರೆ ವ್ಯಾಪಾರವನ್ನು ನಿಲ್ಲಿಸುವುದಾಗಿ ಬೆದರಿಕೆ ಹಾಕಿದ್ದೆ ಎಂದು ಟ್ರಂಪ್ ಹೇಳಿದ್ದರು. ಕಾಶ್ಮೀರ ವಿಷಯದಲ್ಲಿ ಮಧ್ಯಸ್ಥಿಕೆ ವಹಿಸಲು ಟ್ರಂಪ್ ನೀಡಿರುವ ಪ್ರಸ್ತಾಪದ ಕುರಿತ ಪ್ರಶ್ನೆಗೆ ಪ್ರತಿಕ್ರಿಯಿಸಿದ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣಧೀರ್ ಜೈಸ್ವಾಲ್, ಜಮ್ಮು ಮತ್ತು ಕಾಶ್ಮೀರಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳನ್ನು ಭಾರತ ಮತ್ತು ಪಾಕಿಸ್ತಾನ ದ್ವಿಪಕ್ಷೀಯವಾಗಿ ಪರಿಹರಿಸಿಕೊಳ್ಳಬೇಕು ಎನ್ನುವುದು ನಮ್ಮ ಸ್ಪಷ್ಟ ನಿಲುವು ಎಂದು ಹೇಳಿದರು.

ಸಂಭಾವ್ಯ ಪರಮಾಣು ಯುದ್ಧದ ಬಗ್ಗೆ ಟ್ರಂಪ್ ಅವರ ಹೇಳಿಕೆಗಳ ಕುರಿತಾದ ಮತ್ತೊಂದು ಪ್ರಶ್ನೆಗೆ ಉತ್ತರಿಸಿದ ಜೈಸ್ವಾಲ್, ಆಪರೇಷನ್ ಸಿಂಧೂರ ಸಮಯದಲ್ಲಿ ಮಿಲಿಟರಿ ಕ್ರಮವು “ಸಂಪೂರ್ಣವಾಗಿ ಸಾಂಪ್ರದಾಯಿಕ ಕ್ಷೇತ್ರದಲ್ಲಿದೆ” ಎಂದು ಹೇಳಿದರು. ಪಾಕಿಸ್ತಾನದ ವಿದೇಶಾಂಗ ಸಚಿವರೇ ದಾಖಲೆಯಲ್ಲಿರುವ ಪರಮಾಣು ಯುದ್ಧದ ಸಾಧ್ಯತೆಯನ್ನು ನಿರಾಕರಿಸಿದ್ದಾರೆ. “ಭಾರತವು ಪರಮಾಣು ಬೆದರಿಕೆಗೆ ಮಣಿಯುವುದಿಲ್ಲ ಅಥವಾ ಗಡಿಯಾಚೆಗಿನ ಭಯೋತ್ಪಾದನೆಯನ್ನು ನಡೆಸಲು ಬಿಡುವುದಿಲ್ಲ” ಎಂದು ಹೇಳಿದರು.

Girl in a jacket
error: Content is protected !!