ಕಲಬುರಗಿ,ಸೆ,17-ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಹ್ಯಾಪಿನೆಸ್ ಇಂಡೆಕ್ಸ್ ಆಧರಿಸಿ, ಕಾರ್ಯಕ್ರಮಗಳನ್ನು ರೂಪಿಸಲು ಚಿಂತನೆ ನಡೆದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಇಂದು ಇಲ್ಲಿ ತಿಳಿಸಿದರು.
ಕಲ್ಯಾಣ ಕರ್ನಾಟಕ ಉತ್ಸವದಲ್ಲಿ ಧ್ವಜಾರೋಹಣ ಕಾರ್ಯಕ್ರಮದ ನಂತರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿಗಳು, ಒಂದು ಕುಟುಂಬದ ಸಂತೃಪ್ತಿಯ ಮಾನದಂಡವನ್ನು ಆಧರಿಸಿ ಹ್ಯಾಪಿನೆಸ್ ಇಂಡೆಕ್ಸ್ ಅನ್ನು ನಿಗದಿ ಪಡಿಸಲಾಗುತ್ತದೆ. ಈ ಸೂಚ್ಯಂಕವನ್ನು ಆಧಾರವಾಗಿಟ್ಟುಕೊಂಡು ಕಲ್ಯಾಣ ಕರ್ನಾಟಕ ಭಾಗದ ಅಭಿವೃದ್ಧಿಗೆ ಕಾರ್ಯಕ್ರಮಗಳನ್ನು ರೂಪಿಸಲು ಉದ್ದೇಶಿಸಿದೆ. ಈ ಕುರಿತು ಯೋಜನಾ ಮಂಡಳಿಯ ಸದಸ್ಯರು ಹಾಗೂ ಇತರ ಪರಿಣತರೊಂದಿಗೆ ಸವಿಸ್ತಾರವಾಗಿ ಚರ್ಚಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಇಂದು ಪ್ರಮುಖ ಶುಭದಿನದಂದು ಕಲಬುರಗಿಗೆ ಭೇಟಿ ಕೊಟ್ಟಿದ್ದೇನೆ. ನಮ್ಮ ನಾಯಕ ಯಡಿಯೂರಪ್ಪನವರು ಈ ಭಾಗದ ಸಾಮಾಜಿಕ, ಶೈಕ್ಷಣಿಕ, ಆರ್ಥಿಕ, ಧಾರ್ಮಿಕ ಹಾಗೂ ನೈತಿಕವಾಗಿ ಕಲ್ಯಾಣವಾಗಬೇಕು ಎಂಬ ಆಶಯದೊಂದಿಗೆ ಕಲ್ಯಾಣ ಕರ್ನಾಟಕ ಎಂದು ಹೆಸರಿಟ್ಟಿದ್ದಾರೆ. ಈ ಭಾಗದ ಸಮಗ್ರ ಅಭಿವೃದ್ಧಿ ಮಾಡುವುದಕ್ಕೆ ತಮಗೆ ದೊರೆತಿರುವ ಸದವಕಾಶವನ್ನು ಸದ್ಬಳಕೆ ಮಾಡಿಕೊಳ್ಳುವ ಇಚ್ಛೆ ನನ್ನದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಲ್ಯಾಣ ಕರ್ನಾಟಕ ಭಾಗದಲ್ಲಿ ಈಗಾಗಲೇ ಅನುಷ್ಠಾನಗೊಳ್ಳುತ್ತಿರುವ ಯೋಜನೆಗಳನ್ನು ಶೀಘ್ರವೇ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಲಾಗುವುದು. ಈ ಭಾಗವನ್ನು ಎರಡು ಸ್ತರಗಳಲ್ಲಿ ಅಭಿವೃದ್ಧಿ ಮಾಡಬೇಕಾಗಿದೆ. ಜನೋಪಯೋಗಿ ಬೃಹತ್ ಯೋಜನೆಗಳಾದ ನೀರಾವರಿ, ವಿದ್ಯುತ್ ಉತ್ಪಾದನೆ, ಕೈಗಾರಿಕಾ ಯೋಜನೆಗಳ ಅನುಷ್ಠಾನದೊಂದಿಗೆ ಉದ್ಯೋಗ ಸೃಜನೆ ಮಾಡಬೇಕಾಗಿದೆ. ಇದರೊಂದಿಗೆ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ಆದ್ಯತೆ ನೀಡಲಾಗುವುದು. ಅದರ ಜೊತೆಗೆ ಕೃಷ್ಣಾಮೇಲ್ದಂಡೆ ಹಂತ 3ರಡಿ ಕಲಬುರಗಿ, ರಾಯಚೂರು, ವಿಜಾಪುರ ಜಿಲ್ಲೆಯ ಯೋಜನೆಗಳನ್ನು ಪೂರ್ಣಗೊಳಿಸಲು ಒತ್ತು ನೀಡಲಾಗುವುದು. ಎನ್ ಆರ್ ಬಿಸಿ, ಎನ್ ಎಲ್ ಬಿಸಿ, ಮಲ್ಲಬಾದ್ , ಜೇವರ್ಗಿ ಶಾಖಾ ಕಾಲುವೆ ಮೊದಲಾದವುಗಳನ್ನು ಪೂರ್ಣಗೊಳಿಸುವ ಚಿಂತನೆ ನಮ್ಮದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಕಲಬುರಗಿ ಭಾರತದ ಪ್ರಮುಖ ನಗರವಾಗಿ ಬೆಳೆಯುತ್ತಿದ್ದು, ಇದನ್ನು ಕೈಗಾರಿಕಾ ನಗರವಾಗಿ ಪರಿವರ್ತನೆ ಮಾಡಬೇಕಾಗಿದೆ. ಕೃಷಿ ಸಂಸ್ಕರಣೆ, ತೋಟಗಾರಿಕೆ ಉತ್ಪನ್ನ ಸಂಸ್ಕರಣೆಗೆ ಒತ್ತು ನೀಡಲಾಗುವದು. ಜೊತೆಗೆ ಕೇಂದ್ರ ಸರ್ಕಾರ ನೀಡುತ್ತಿರುವ ಪ್ರೋತ್ಸಾಹದ ಲಾಭವನ್ನು ಕಲ್ಯಾಣ ಕರ್ನಾಟಕ ಕೇಂದ್ರಿತವಾಗಿ ಪಡೆದುಕೊಂಡು, ಬೇಳೆಕಾಳುಗಳು, ಎಣ್ಣೆಕಾಳುಗಳನ್ನು ಬೆಳೆಗೆ ಉತ್ತೇಜನ ನೀಡಲು ಉದ್ದೇಶಿಸಿದೆ ಎಂದರು. ತೊಗರಿ ಮಂಡಳಿ ಪುನಶ್ಚೇತನಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು.
ಕೈಗಾರಿಕೆಯಲ್ಲಿ ಜವಳಿ, ಔಷಧಿ ಉದ್ಯಮಗಳಿಗೆ ಪ್ರೋತ್ಸಾಹ ನೀಡಲಾಗುತ್ತಿದೆ. ಜೊತೆಗೆ ಜಾಗತಿಕ ಹೂಡಿಕೆದಾರರ ಸಮಾವೇಶ ನಡೆಸಲಾಗುತ್ತಿದ್ದು, ಇದಕ್ಕೆ ಪೂರ್ವಭಾವಿಯಾಗಿ, ಹೂಡಿಕೆದಾರರ ಸಭೆ ಕರೆದು, ಈ ಭಾಗದ ಯೋಜನೆಗಳಿಗೆ ಅನುಮೋದನೆ ನೀಡಿ, ದೊಡ್ಡ ಪ್ರಮಾಣದ ಹೂಡಿಕೆ ಆಕರ್ಷಿಸಲು ಉದ್ದೇಶಿಸಿದೆ. ಇದರಿಂದ ಉದ್ಯೋಗ ಸೃಷ್ಟಿಯಾಗುವುದು. ಉದ್ಯೋಗ ಸೃಜನೆಯನ್ನು ಆಧರಿಸಿ ಕೈಗಾರಿಕೆಗಳಿಗೆ ಪ್ರೋತ್ಸಾಹಕ ನೀಡಲು ನಿರ್ಧರಿಸಲಾಗಿದೆ. ಈ ವರೆಗೆ ಬಂಡವಾಳದ ಪ್ರಮಾಣವನ್ನು ಆಧರಿಸಿ ಪ್ರೋತ್ಸಾಹಕ ನೀಡಲಾಗುತ್ತಿತ್ತು ಎಂದು ಅವರು ವಿವರಿಸಿದರು.
ಈ ಭಾಗದಲ್ಲಿ ಜವಳಿ ಪಾರ್ಕ್ ಹಾಗೂ ಆಭರಣಗಳ ಪಾರ್ಕ್ ಸ್ಥಾಪಿಸುವ ಕನಸು ಕೈಗಾರಿಕಾ ಸಚಿವರದ್ದಾಗಿದೆ. ಜೊತೆಗೆ ಕೇಂದ್ರ ಸರ್ಕಾರದ ‘ಒಂದು ಜಿಲ್ಲೆ ಒಂದು ಉತ್ಪನ್ನ’ ಯೋಜನೆಯಡಿ ಆರು ಜಿಲ್ಲೆಗಳಿಗೆ ವಿಶೇಷ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ. ಇದಲ್ಲದೆ ಮಾನವ ಅಭಿವೃದ್ಧಿ ಸೂಚ್ಯಂಕದ ಆಧಾರದಲ್ಲಿ ಈ ಜಿಲ್ಲೆಗಳಲ್ಲಿ ಗುರುತಿಸಲಾಗಿರುವ ಕೊರತೆಗಳನ್ನು ನಿವಾರಿಸಲು ಯೋಜನೆಗಳನ್ನು ರೂಪಿಸಲಾಗುವುದು. ಉದಾಹರಣೆಗೆ ನೀತಿ ಆಯೋಗವು ಮಹತ್ವಾಕಾಂಕ್ಷಿ ಜಿಲ್ಲೆಗಳೆಂದು ಗುರುತಿಸಿರುವ ರಾಯಚೂರು ಮತ್ತು ಯಾದಗಿರಿ ಜಿಲ್ಲೆಗಳಲ್ಲಿ ಅಪೌಷ್ಟಿಕತೆ, ಆರೋಗ್ಯಕ್ಕೆ ಒತ್ತು ನೀಡಬೇಕಾಗಿದೆ ಎಂದು ತಿಳಿಸಿದರು.
ಕಲ್ಯಾಣ ಕರ್ನಾಟಕ ಮಂಡಳಿ 13 ಸಾವಿರ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕಾಗಿದೆ. ಕಳೆದ ವರ್ಷ ಹಾಗೂ ಈ ವರ್ಷದ 1500 ಕೋಟಿ ರೂ. ಗಳ ಕಾಮಗಾರಿಗಳು ಪ್ರಗತಿಯಲ್ಲಿದ್ದು, ಈ ವರ್ಷ 400 ಕೋಟಿ ಬಿಡುಗಡೆ ಯಾಗಿದೆ. ಪ್ರಗತಿಗೆ ಅನುಗುಣವಾಗಿ ಅನುದಾನ ಬಿಡುಗಡೆ ಮಾಡಲಾಗುವುದು. ಮುಂದಿನ ಮಾರ್ಚ್ ವೇಳೆಗೆ ಮಂಜೂರಾಗಿರುವ ಕಾಮಗಾರಿಗಳಮನ್ನು ಪೂರ್ಣಗೊಳಿಸಿ, ಅನುದಾನವನ್ನು ಬಳಕೆ ಮಾಡಿಕೊಳ್ಳಬೇಕು ಎಂದು ಗುರಿ ನೀಡಲಾಗಿದೆ. ಮಂಡಳಿಯ ಅನುಷ್ಠಾನ ಸಾಮರ್ಥ್ಯವನ್ನು ಗಮನಿಸಿ, ಅನುದಾನ ದ್ವಿಗುಣಗೊಳಿಸಲು ತಾವು ಸಿದ್ಧರಿರುವುದಾಗಿ ತಿಳಿಸಿದರು.
ನಂಜುಂಡಪ್ಪ ವರದಿ ಪರಿಷ್ಕರಣೆ ಮಾಡಲು ಉದ್ದೇಶಿಸಿದೆ. ಅಂದಿನ ನಂಜುಂಡಪ್ಪ ವರದಿಯ ಮಾನದಂಡಗಳು, ಮಾನವ ಅಭಿವೃದ್ಧಿ ಸೂಚ್ಯಂಕ ಹಾಗೂ ವಿಶ್ವಸಂಸ್ಥೆಯ ಸುಸ್ಥಿರ ಅಭಿವೃದ್ಧಿ ಗುರಿಗಳನ್ನು ಆಧರಿಸಿ, ವಿಶೇಷ ಅಭಿವೃದ್ಧಿ ಯೋಜನೆಯನ್ನು ಹೊಸ ಗುರಿ ನಿಗದಿಯೊಂದಿಗೆ ಜಾರಿಗೊಳಿಸಲಾಗುವುದು ಎಂದು ಮುಖ್ಯಮಂತ್ರಿಗಳು ತಿಳಿಸಿದರು.
ಸರ್ಕಾರದಲ್ಲಿ ಆರ್ಥಿಕ ಶಿಸ್ತನ್ನು ತರಬೇಕು. ಆದ್ಯತೆಗಳನ್ನು ಗುರುತಿಸಬೇಕಾಗಿದೆ. ಬದ್ಧ ವೆಚ್ಚ ಕಡಿಮೆ ಮಾಡಿ, ರಾಜ್ಯದ ಅಭಿವೃದ್ಧಿಗೆ ಹೆಚ್ಚಿನ ಹಣ ಒದಗಿಸುವ ಅವಕಾಶ ಸೃಷ್ಟಿ ಮಾಡಬೇಕಾಗಿದೆ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಇದುವರೆಗೆ ಮಾಡಿರುವ ವೆಚ್ಚದ ಭೌತಿಕ ಪ್ರಗತಿಯ ಮೌಲ್ಯ ಮಾಪನ ಮಾಡಲಾಗುವುದು ಎಂದು ತಿಳಿಸಿದರು..
ಪೆಟ್ರೋಲ್ , ಡೀಸೆಲ್ ಗಳನ್ನು ಜಿ.ಎಸ್.ಟಿ. ವ್ಯಾಪ್ತಿಗೆ ತರುವ ಕುರಿತು, ಇದು ದೂರಗಾಮಿ ಪರಿಣಾಮ ಬೀರುವ ವಿಷಯವಾಗಿದ್ದು, ಇನ್ನಷ್ಟು ಚರ್ಚೆಯಾಗುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಕಲ್ಯಾಣ ಕರ್ನಾಟಕಕ್ಕೆ ಪ್ರತ್ಯೇಕ ಸಚಿವಾಲಯ ಕೊಡುವ ಬಗ್ಗೆ ಚರ್ಚೆ ಮಾಡಲಾಗುವುದು. ಆದರೆ ಡಿ.ಪಿ.ಎ.ಆರ್. ನ ವಿಶೇಷ ಕೋಶವನ್ನು ಕಲಬುರಗಿಯಲ್ಲಿ ಸ್ಥಾಪಿಸಲಾಗುವುದು. 371 (ಜೆ ) ಅನುಷ್ಠಾನಕ್ಕೆ ರಚಿಸಲಾದ ಕೋಶವನ್ನು ಕಲಬುರಗಿಯಲಲ್ಲಿ ಸ್ಥಾಪನೆ ಮಾಡಲಾಗುವುದು ಎಂದು ತಿಳಿಸಿದರು.
ರಾಜ್ಯ ಆಯವ್ಯಯದಲ್ಲಿ ನಿಗದಿಪಡಿಸುವ ಯೋಜನೆಗಳಿಗೆ ಹೆಚ್ಚುವರಿಯಾಗಿ ಕಲ್ಯಾಣ ಕರ್ನಾಟಕ ಅಭಿವೃದ್ಧಿ ಮಂಡಳಿ ಹಾಗೂ ನಂಜುಂಡಪ್ಪ ವರದಿ ಆಧಾರಿತ ವಿಶೇಷ ಅಭಿವೃದ್ಧಿ ಯೋಜನೆಯ ಅನುದಾನ ಒದಗಿಸುವ ಆಶಯಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.
ದೆಹಲಿಗೆ ತೆರಳಿದಾಗ ಕಲಬುರಗಿಯಲ್ಲಿ ರೈಲ್ವೆ ವಿಭಾಗ ಸ್ಥಾಪಿಸುವಂತೆ ಕೇಂದ್ರಕ್ಕೆ ಮನವಿ ಮಾಡಿದ್ದೇನೆ. ಕಲಬುರಗಿ ಮಧ್ಯಭಾರತದ ಪ್ರಮುಖ ಭಾಗವಾಗಿದೆ. ರೈಲ್ವೆ ವಿಭಾಗ ಇಲ್ಲಿ ಸ್ಥಾಪನೆಯಾದರೆ, ಪ್ರಯಾಣಿಕರಿಗೆ, ಪ್ರವಾಸೋದ್ಯಮಕ್ಕೆ ಹೆಚ್ಚಿನ ಅನುಕೂಲವಾಗಲಿದೆ ಎಂದು ಮುಖ್ಯಮಂತ್ರಿಗಳಳು ತಿಳಿಸಿದರು.
ಕೇಂದ್ರ ಸಚಿವ ನಿತಿನ್ ಗಡ್ಕರಿ ಅವರನ್ನು ಭೇಟಿಯಾದಾಗ ಬೀದರ್- ಬಳ್ಳಾರಿ ನಡುವೆ ರಾಷ್ಟ್ರೀಯ ಹೆದ್ದಾರಿಗಳನ್ನು ಪರಸ್ಪರ ಸಂಪರ್ಕಿಸುವ ಬಗ್ಗೆ ಚರ್ಚಿಸಲಾಗಿದೆ. ಪಿಯುಷ್ ಗೋಯಲ್ ಅವರೊಂದಿಗೆ ಟೆಕ್ಸ್ ಟೈಲ್ ಪಾರ್ಕ್ ಮತ್ತು ಜ್ಯುವೆಲ್ಲರಿ ಪಾರ್ಕ್, ಫಾರ್ಮಾ ಪಾರ್ಕ್ ಕುರಿತೂ ಮಾತನಾಡಿದ್ದೇನೆ. ಇಂದು ಅವರನ್ನು ಭೇಟಿಯಾದಾಗ ಮತ್ತೊಮ್ಮೆ ಈ ವಿಷಯಗಳ ಕುರಿತು ಚರ್ಚಿಸಲಾಗುವುದು ಎಂದು ತಿಳಿಸಿದರು.
ಕಲಬುರಗಿಯಲ್ಲಿ ಸಚಿವ ಸಂಪುಟ ಸಭೆ ನಡೆಸುವ ಕುರಿತು ಮಾಧ್ಯಮದವರು ಕೇಳಿದ ಪ್ರಶ್ನೆಗೆ ಉತ್ತರಿಸಿದ ಮುಖ್ಯಮಂತ್ರಿಗಳು ಈಗ ನಿರ್ಣಯ ತೆಗೆದುಕೊಳ್ಳುವುದಲ್ಲ, ಇದು ಅನುಷ್ಠಾನ ಕಾಲ. ಕಾರ್ಯಕ್ರಮ ಅನುಷ್ಠಾನಕ್ಕೆ ನಮ್ಮ ಆದ್ಯತೆ. ಮೂರು ತಿಂಗಳಿಗೊಮ್ಮೆ ಪ್ರಗತಿ ಪರಿಶೀಲನೆ ನಡೆಸಲಾಗುವುದು ಎಂದು ನುಡಿದರು.