ವಿದ್ಯಾಸಿರಿ ಯೋಜನೆಯ ಮೊತ್ತ ಎರಡು ಸಾವಿರ ರೂಪಾಯಿಗೆ ಹೆಚ್ಚಳ: ಸಿಎಂ ಘೋಷಣೆ

Share

ಬೆಂಗಳೂರು ಏ 18-ಮಡಿವಾಳ ಸಮುದಾಯದ ಪ್ರಗತಿಗೆ ಕಾಂಗ್ರೆಸ್ ಸರ್ಕಾರ ಬದ್ಧವಾಗಿದೆ: ಮುಖ್ಯವಾಹಿನಿಗೆ ಬರುವ ಪ್ರಯತ್ನ ನಿಮ್ಮಿಂದ ಹೆಚ್ಚೆಚ್ಚು ಆಗಬೇಕು. ಈ ಕಾರಣಕ್ಕೇ ವಿದ್ಯಾಸಿರಿ ಯೋಜನೆಯ ಮೊತ್ತವನ್ನು ಎರಡು ಸಾವಿರ ರೂಪಾಯಿಗೆ ಹೆಚ್ಚಳ ಮಾಡ್ತೀನಿ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಹತ್ವದ ಘೋಷಣೆ ಮಾಡಿದರು.

ಕೆಂಗೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಕಲಿದೇವ ಕನ್ವೆಷ್ನನ್ ಹಾಲ್ ಲೋಕಾರ್ಪಣೆಗೊಳಿಸಿ ಮಾತನಾಡಿದರು.

ಮಡಿವಾಳ ಮತ್ತು ಹಿಂದುಳಿದ ಸಮುದಾಯದ ಮಕ್ಕಳು ಶಿಕ್ಷಣವಂತರಾಗಬೇಕು. ಇದಕ್ಕೇ ವಿದ್ಯಾಸಿರಿ ಮೊತ್ತವನ್ನು ಪ್ರತೀ ವಿದ್ಯಾರ್ಥಿಗೆ ಒಂದೂವರೆ ಸಾವಿರದಿಂದ ಎರಡು ಸಾವಿರ ರೂಪಾಯಿಗೆ ಹೆಚ್ಚಿಸಲಾಗುವುದು ಎಂದು ಘೋಷಿಸಿದರು.

12ನೇ ಶತಮಾನದಲ್ಲೇ ಮಡಿವಾಳ ಮಾಚಿ ದೇವರು ಬಸವಣ್ಣನವರ ಜೊತೆ ಸೇರಿ ಸಮಾಜದ ಬದಲಾವಣೆಗೆ ಮುಂದಾಗಿದ್ದರು. ನಮ್ಮ ಸಮಾಜದಲ್ಲಿ ಜಾತಿ ವ್ಯವಸ್ಥೆ ಕಾರಣಕ್ಕೆ ಅಸಮಾನತೆ ಇದೆ. ಈ ಕಾರಣಕ್ಕೆ ಉದ್ಯೋಗ, ಶಿಕ್ಷಣ ಸಿಗದೆ ಆರ್ಥಿಕ ಅಸಮಾನತೆ ಹೆಚ್ಚಿ ಅಸಮಾನತೆ ಹೆಚ್ಚಾಯಿತು ಎಂದು ವಿವರಿಸಿದರು.

ಬಸವಾದಿ ಶರಣರು ಜಾತಿಮುಕ್ತ ಮನುಷ್ಯ ಸಮಾಜ ನಿರ್ಮಾಣಕ್ಕೆ ಹೋರಾಡಿದ್ದರು. ಒಟ್ಟಿಗೆ ಕುಳಿತು ಊಟ ಮಾಡಲಾಗದ ಅನಿಷ್ಠ ಪದ್ಧತಿ ವಿರುದ್ಧ ಧ್ವನಿ ಎತ್ತಿ ಜಾತಿ ಅಸಮಾನತೆ ಅಳಿಸಲು ಹೋರಾಡಿದ್ದನ್ನು ವಿವರಿಸಿದರು.

ಎಲ್ಲಾ ಜಾತಿ, ಸಮುದಾಯಗಳ ಜಾತ್ಯತೀತ ಪ್ರತಿನಿಧಿಗಳನ್ನೊಳಗೊಂಡ ಅನುಭವ ಮಂಟಪದ ಉದ್ದೇಶವೇ ಜಾತಿ ಮುಕ್ತ ಸಮಾಜದ ನಿರ್ಮಾಣವಾಗಿತ್ತು ಎಂದರು.

ಮಡಿವಾಳ ಸಮಾಜದಲ್ಲಿ ಯಾರೂ ಶಾಸಕರಿಲ್ಲ, ಒಬ್ಬರು ಮಾತ್ರ IAS ಅಧಿಕಾರಿ ಇದ್ದಾರೆ. ಮಡಿವಾಳ ಸಮಾಜ ಇಷ್ಟು ಹಿಂದುಳಿಯಲು ಮನುಸ್ಮೃತಿ ಕಾರಣ. ಈ ಅಸಮಾನತೆ ಕಾರಣಕ್ಕೇ ಮನುಸ್ಮೃತಿಯನ್ನು ಅಂಬೇಡ್ಕರ್ ಅವರು ಬೆಂಕಿ ಹಾಕಿ ಸುಟ್ಟರು. ಈ ಮನುಸ್ಮೃತಿಯೇ ಜಾತಿ ವ್ಯವಸ್ಥೆಯ ಮೂಲ ಎಂದರು.

ಮಡಿವಾಳ ಸಮುದಾಯದ ಮಕ್ಕಳು ಹೆಚ್ಚೆಚ್ಚು ಶಿಕ್ಷಣ ಪಡೆಯಬೇಕು ಎನ್ನುವ ಉದ್ದೇಶದಿಂದಲೇ ನಾವು ವಿದ್ಯಾಸಿರಿ ಯೋಜನೆ ಜಾರಿಗೆ ತಂದೆವು. ಈಗ ವಿದ್ಯಾಸಿರಿ ಯೋಜನೆಯ ಮೊತ್ತವನ್ನು ಪ್ರತೀ ವಿದ್ಯಾರ್ಥಿಗೆ ಎರಡು ಸಾವಿರಕ್ಕೆ ಹೆಚ್ಚಿಸಲಾಗುವುದು, ಜೊತೆಗೆ ಮಡಿವಾಳ ಸಮುದಾಯದ ಹಾಸ್ಟೆಲ್ ಗೆ ಅಗತ್ಯ ಸವಲತ್ತು ಒದಗಿಸಲಾಗುವುದು ಎಂದರು.

ಸಂವಿಧಾನ ವಿರೋಧಿಗಳನ್ನು ದೂರ ಇಡಿ

ಸಮಾನತೆ ಸಾರುವ ಸಂವಿಧಾನವನ್ನು ವಿರೋಧಿಸುವವರನ್ನು ದೂರ ಇಡಿ. ಹತ್ತಿರ ಸೇರಿಸಬೇಡಿ. ಸಂವಿಧಾನ ವಿರೋಧಿಗಳ ಜೊತೆ ಕೈ ಜೋಡಿಸುವುದು ಮಡಿವಾಳ ಮಾಚಿದೇವರಿಗೆ ಮಾಡುವ ಅವಮಾನ ಎಂದರು.

Girl in a jacket
error: Content is protected !!