ಪಿಓಪಿ ಬಳಸುವುದಿಲ್ಲವೆಂದು ಗಣೇಶೋತ್ಸವ ಸಮಿತಿಯಿಂದ ಮುಚ್ಚಳಿಗೆ ಬರೆಸಿಕೊಳ್ಳಲು ಸೂಚನೆ: ಖಂಡ್ರೆ

Share

ಬೆಂಗಳೂರು, ಆ.21- ಸಾರ್ವಜನಿಕ ಗಣೇಶೋತ್ಸವಗಳಲ್ಲಿ ಪಿಓಪಿ ಗಣಪತಿ ಮೂರ್ತಿ ಬಳಸುವುದಿಲ್ಲವೆಂದು ಪೆಂಡಾಲ್ ಗೆ ಅನುಮತಿ ನೀಡುವ ಮುನ್ನ ಗಣೇಶೋತ್ಸವ ಸಮಿತಿಗಳಿಂದ ಮುಚ್ಚಳಿಕೆ ಬರೆಸಿಕೊಳ್ಳಲು ಸ್ಥಳೀಯ ಸಂಸ್ಥೆಗಳಿಗೆ ಸೂಚಿಸಲಾಗಿದೆ ಎಂದು ಅರಣ್ಯ, ಜೀವಿಶಾಸ್ತ್ರ ಮತ್ತು ಪರಿಸರ ಸಚಿವ ಈಶ್ವರ ಬಿ ಖಂಡ್ರೆ ತಿಳಿಸಿದ್ದಾರೆ.
ವಿಕಾಸ ಸೌಧದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಅವರು, ನಾವು ಶ್ರದ್ಧಾಭಕ್ತಿಯಿಂದ ಆಚರಿಸುವ ಗಣೇಶೋತ್ಸವದಿಂದ ಜಲಚರಗಳಿಗೆ ಮಾರಕವಾಗಬಾರದು. ಈ ನಿಟ್ಟಿನಲ್ಲಿ ಗಣೇಶೋತ್ಸವ ಸಮಿತಿಗಳು ಮತ್ತು ಸಾರ್ವಜನಿಕರು ಪಿಓಪಿ ಗಣಪತಿ ಮೂರ್ತಿಗಳನ್ನು ಖರೀದಿಸದೆ, ಪರಿಸರ ಸ್ನೇಹಿಯಾದ ಮಣ್ಣಿನ ಗಣಪತಿ ಮೂರ್ತಿಗಳನ್ನೇ ಪೂಜಿಸಿ, ವಿಸರ್ಜಿಸುವಂತೆ ಮನವಿ ಮಾಡಿದರು.
3 ಜಿಲ್ಲೆಯಲ್ಲಿ ಪರಿಸರ ಗಣಪ:
ಉಡುಪಿ, ದಕ್ಷಿಣ ಕನ್ನಡ ಮತ್ತು ಉತ್ತರ ಕನ್ನಡ ಜಿಲ್ಲೆಗಳಲ್ಲಿ ಶೇ.90ರಷ್ಟು ಮಣ್ಣಿನ ಗಣಪತಿಯನ್ನೇ ಪೂಜಿಸುತ್ತಾರೆ. ಆ ಮೂರು ಜಿಲ್ಲೆಗಳಲ್ಲಿ ಸಾಧ್ಯವಾಗುವುದಾದರೆ ಉಳಿದ ಜಿಲ್ಲೆಗಳಲ್ಲಿ ಏಕೆ ಆಗುವುದಿಲ್ಲ. ಈ ಬಗ್ಗೆ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ, ಜಿಲ್ಲಾಡಳಿತ, ತಾಲೂಕು ಆಡಳಿತ ಮತ್ತು ಸ್ಥಳೀಯ ಸಂಸ್ಥೆಗಳು ಜಾಗೃತಿ ಮೂಡಿಸಬೇಕು ಎಂದು ಅಭಿಪ್ರಾಯಪಟ್ಟರು.
ಪಿಓಪಿ ಗೌರಿ ಗಣೇಶ ಮೂರ್ತಿಗಳು ನೀರಲ್ಲಿ ಕರಗುವುದಿಲ್ಲ. ಜೊತೆಗೆ ವಿಷಕಾರಕ ಅಂಶಗಳನ್ನು ನೀರಿನಲ್ಲಿ ಸೇರಿಸುತ್ತವೆ. ಜೊತೆಗೆ ಅದಕ್ಕೆ ಲೇಪಿಸುವ ಭಾರಲೋಹ ಮಿಶ್ರಿತ ರಾಸಾಯನಿಕ ಬಣ್ಣಗಳು ನೀರಲ್ಲಿ ಕರಗಿ ಜಲಚರಗಳ ಸಾವಿಗೆ ಕಾರಣವಾಗುತ್ತವೆ ಎಂದು ಹೇಳಿದರು.
ಬೆಂಗಳೂರು ನಗರ ಸೇರಿದಂತೆ ರಾಜ್ಯದ ಅನೇಕ ಪಟ್ಟಣ, ನಗರಗಳಲ್ಲಿ ಸಮುಚ್ಚಯಗಳಿವೆ. ಇವುಗಳಲ್ಲಿ ಸಂಘಗಳು ಇರುತ್ತವೆ. ಅವರಿಗೆ ಮನವಿ ಮಾಡಿ ಮಣ್ಣಿನ ಗಣಪ ಪೂಜಿಸುವಂತೆ ಎಲ್ಲರಿಗೂ ಸಂದೇಶ ಕಳಿಸುವಂತೆ ಮತ್ತು ಶಾಲಾ, ಕಾಲೇಜು ಮಕ್ಕಳಲ್ಲಿ ಪರಿಸರ ಸ್ನೇಹಿ ಗಣಪನ ಮೂರ್ತಿ ಪೂಜಿಸುವ ಬಗ್ಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ ಎಂದರು.
ಹಸಿರು ಪಟಾಕಿಗೆ ಮಾತ್ರ ಅವಕಾಶ:
ಗಣೇಶೋತ್ಸವದ ಮೆರವಣಿಗೆಯಲ್ಲಿ ಪಟಾಕಿಯನ್ನೂ ಹಚ್ಚಲಾಗುತ್ತದೆ. ಸುಪ್ರೀಂಕೋರ್ಟ್ 125 ಡೆಸಿಬಲ್ ಗಿಂತ ಹೆಚ್ಚು ಶಬ್ದ ಮಾಡುವ ಪಟಾಕಿ ಸಿಡಿಸದಂತೆ ಮತ್ತು ರಾತ್ರಿ 8ರಿಂದ 10ಗಂಟೆಯೊಳಗೆ ಮಾತ್ರ ಪಟಾಕಿ ಸಿಡಿಸುವಂತೆ ಆದೇಶ ನೀಡಿದ್ದು, ಎಲ್ಲರೂ ಈ ನಿಯಮ ಪಾಲಿಸಬೇಕು. ಪರಿಸರಕ್ಕೆ ಮಾರಕವಾದ ಪಟಾಕಿ ಬಳಸದೆ ಹಸಿರು ಪಟಾಕಿ ಸಿಡಿಸಬೇಕು ಎಂದು ಮನವಿ ಮಾಡಿದರು.
ಏಕ ಬಳಕೆ ಪ್ಲಾಸ್ಟಿಕ್ ನಿಷೇಧ:
ಮಣ್ಣಲ್ಲಿ ಮಣ್ಣಾಗದ, ನೀರಲ್ಲಿ ಕರಗದ ಮತ್ತು ಸುಟ್ಟರೆ ಗಾಳಿಗೆ ವಿಷಕಾರಕ ಅಂಶ ಸೇರಿಸುವ ಏಕ ಬಳಕೆ ಪ್ಲಾಸ್ಟಿಕ್ ಉತ್ಪನ್ನ ನಿಷೇಧಿಸಲಾಗಿದೆ. ಆದರೂ ಹಾದಿ ಬೀದಿಯಲ್ಲಿ ಪ್ಲಾಸ್ಟಿಕ್ ತ್ಯಾಜ್ಯ ನೋಡುತ್ತೇವೆ. ಈ ಬಗ್ಗೆ ಜಾಗೃತಿ ಅಗತ್ಯ. ಸ್ಥಳೀಯ ಸಂಸ್ಥೆಗಳು ಹೆಚ್ಚು ಪರಿಣಾಮಕಾರಿಯಾಗಿ ಈ ಸಮಸ್ಯೆ ಪರಿಹರಿಸಬೇಕು ಎಂದರು.
ಇಂದು ಇಡೀ ವಿಶ್ವ ಎದುರಿಸುತ್ತಿರುವ ದೊಡ್ಡ ಸವಾಲು ಜಾಗತಿಕ ತಾಪಮಾನ ಏರಿಕೆ ಮತ್ತು ಹವಾಮಾನ ಬದಲಾವಣೆ ಆಗಿದೆ. ತಾಪಮಾನ ಏರಿಕೆಯಿಂದ ಒಂದು ತಿಂಗಳಲ್ಲಿ ಬೀಳುವ ಮಳೆ ಒಂದು ವಾರದಲ್ಲಿ, ಒಂದು ವಾರದ ಮಳೆ ಒಂದೇ ದಿನ ಬೀಳುತ್ತಿದ್ದು, ಅತಿವೃಷ್ಟಿಯಿಂದ ಅನಾಹುತ ಸಂಭವಿಸುತ್ತಿದೆ. ಹೀಗಾಗಿ ಇರುವ ಒಂದು ಭೂಮಿಯನ್ನು ರಕ್ಷಿಸುವ ಹೊಣೆ ನಮ್ಮ ನಿಮ್ಮಲ್ಲರ ಮೇಲಿದೆ ಎಂದು ಹೇಳಿದರು.
ಸುದ್ದಿಗೋಷ್ಠಿಯಲ್ಲಿ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಅಧ್ಯಕ್ಷ ಹಾಗೂ ಶಾಸಕ ಪಿ.ಎಂ. ನರೇಂದ್ರ ಸ್ವಾಮಿ ಮತ್ತು ಅಧಿಕಾರಿಗಳು ಉಪಸ್ಥಿತರಿದ್ದರು.

Girl in a jacket
error: Content is protected !!