ತೊಗರಿಗೆ ಕ್ವಿಂಟಾಲ್ಗೆ ಹೆಚ್ಚುವರಿ ರೂ 450 ಬೆಂಬಲ ಬೆಲೆ; ಶಿವಾನಂದ ಪಾಟೀಲ
by- ಕೆಂಧೂಳಿ
ಬೆಂಗಳೂರು,ಫೆ,09-: ಬೆಂಬಲ ಬೆಲೆಯಲ್ಲಿ ತೊಗರಿ ಖರೀದಿಗೆ ರಾಜ್ಯ ಸರ್ಕಾರ ಕ್ವಿಂಟಾಲ್ಗೆ ಹೆಚ್ಚುವರಿ ರೂ 450 ನೀಡಲು ನಿರ್ಧರಿಸಿದ್ದು, ಆರ್ಥಿಕ ಇಲಾಖೆ ಅನುಮೋದನೆ ನೀಡಿದೆ ಎಂದು ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ್ ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ಕ್ವಿಂಟಾಲ್ಗೆ ರೂ 7,550 ನಿಗದಿಪಡಿಸಿದ್ದು, ರಾಜ್ಯ ಸರ್ಕಾರ ಕೂಡ ಪ್ರತಿ ಕ್ವಿಂಟಾಲ್ಗೆ ಹೆಚ್ಚುವರಿ ರೂ 450 ನೀಡಲಿದೆ. ಹೀಗಾಗಿ ಬೆಂಬಲ ಬೆಲೆ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡುವ ರೈತರಿಗೆ ಕ್ವಿಂಟಾಲ್ಗೆ ರೂ 8000 ನೀಡಲಾಗುವುದು. ರಾಜ್ಯ ಸರ್ಕಾರದ ಈ ಉದ್ದೇಶಕ್ಕೆ ರೂ 140 ಕೋಟಿ ಒದಗಿಸಲಿದೆ ಎಂದು ಸಚಿವರು ತಿಳಿಸಿದ್ದಾರೆ.
ಕೇಂದ್ರ ಸರ್ಕಾರ ನಿಗದಿಪಡಿಸಿರುವ ಬೆಂಬಲ ಬೆಲೆ ಕಡಿಮೆಯಾಗಿದ್ದು, ಹೆಚ್ಚಳ ಮಾಡಬೇಕು ಎಂದು ರೈತರು ಬೇಡಿಕೆ ಇಟ್ಟಿದ್ದರು. ಈ ಬೇಡಿಕೆ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಗಮನ ಸೆಳೆದು ರಾಜ್ಯದಿಂದ ಹೆಚ್ಚುವರಿ ಬೆಂಬಲ ಬೆಲೆ ನೀಡಬೇಕು ಎಂದು ಕೋರಿದಾಗ ಮನವಿಗೆ ಸ್ಪಂದಿಸಿದರು. ಹೀಗಾಗಿ ಪ್ರತಿ ಕ್ವಿಂಟಾಲ್ಗೆ ಹೆಚ್ಚುವರಿ ರೂ 450 ಕೊಡುವ ನಿರ್ಧಾರ ಕೈಗೊಳ್ಳಲಾಯಿತು. ಇದೇ ಮೊದಲ ಬಾರಿಗೆ ರೂ 8000 ಧಾರಣಿಯಲ್ಲಿ ತೊಗರಿ ಖರೀದಿ ಮಾಡಲಾಗುತ್ತಿದೆ. ಇದುವರೆಗೆ ರೂ 5800 ಧಾರಣಿಯಲ್ಲಿ ಖರೀದಿ ಮಾಡಲಾಗುತ್ತಿತ್ತು.
ಕಲಬುರಗಿ, ಬೀದರ್, ಯಾದಗಿರಿ, ರಾಜಚೂರು, ವಿಜಯಪುರ, ಬಾಗಲಕೋಟೆ, ಬಳ್ಳಾರಿ, ವಿಜಯನಗರ, ಕೊಪ್ಪಳ, ಬೆಳಗಾವಿ, ಚಿತ್ರದುರ್ಗ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಈಗಾಗಲೇ ಖರೀದಿ ಪ್ರಕ್ರಿಯೆ ಆರಂಭವಾಗಿದೆ ಎಂದು ತಿಳಿಸಿದ್ದಾರೆ.
ಶೇಂಗಾ ಖರೀದಿ ಅವಧಿ ವಿಸ್ತರಣೆ
ಬೆಂಬಲ ಬೆಲೆಯಲ್ಲಿ ಶೇಂಗಾ ಖರೀದಿ ಅವಧಿಯನ್ನು ಫೆಬ್ರವರಿ 15ರ ವರೆಗೆ ವಿಸ್ತರಣೆ ಮಾಡಲಾಗಿದೆ. ನೋಂದಣಿ ಮಾಡಿಕೊಂಡಿರುವ ರೈತರು ಇನ್ನೂ ಮಾರಾಟ ಮಾಡಲು ಸಾಧ್ಯವಾಗಿಲ್ಲ ಎಂಬ ಹಿನ್ನೆಲೆಯಲ್ಲಿ ಖರೀದಿ ಅವಧಿ ವಿಸ್ತರಣೆ ಮಾಡಲಾಗಿದೆ ಎಂದು ಸಚಿವ ಶಿವಾನಂದ ಪಾಟೀಲ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.