ಡಾ. ಶ್ರೀ ಶರಣಬಸಪ್ಪ ಅಪ್ಪಾ ಲಿಂಗೈಕ್ಯ

Share

ಕಲಬುರಗಿ,ಆ,15-ನಾಡಿನಲ್ಲಿ ಶಿಕ್ಷಣ ಕ್ರಾಂತಿ ಮಾಡಿದ ಸಂತ, ಜ್ಞಾನ ದಾಸೋಹಿ ಹಾಗೂ ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನ ಮಠದ 8ನೇ ಪೀಠಾಧಿಪತಿ ಡಾ. ಶ್ರೀ ಶರಣಬಸಪ್ಪ ಅಪ್ಪಾ (92) ಅವರು ಶಿವೈಕ್ಯರಾಗಿದ್ದಾರೆ.
ಅಪ್ಪ ಅವರು ಕಳೆದ ತಿಂಗಳು ಜುಲೈ 26 ರಂದು ವಯೋಸಹಜ ಅನಾರೋಗ್ಯದಿಂದ ಬಳಲುತ್ತಿದ್ದ ಅವರಿಗೆ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಿಸಲಾಗಿತ್ತು. ಮಹಾದಾಸೋಹ ಮನೆಯಲ್ಲಿ ಸಕಲ ವೈದ್ಯಕಿಯ ಚಿಕಿತ್ಸಾ ಸೌಲಭ್ಯ ಹೊಂದಿರುವ ವಿಶೇಷ ಕೋಣೆ ಸಿದ್ಧಪಡಿಸಿ, ಗುರುವಾರ ಸಂಜೆ ಆಸ್ಪತ್ರೆಯಿಂದ ದಾಸೋಹ ಮನೆಗೆ ಸ್ಥಳಾಂತರಿಸಲಾಗಿತ್ತು. ದಾಸೋಹ ಮನೆಯಲ್ಲಿಯೇ ರಾತ್ರಿ 9:23 ಗಂಟೆ ಸುಮಾರಿಗೆ ಅವರು ಇಹಲೋಕ ತ್ಯಜಿಸಿದರು.
ಧರ್ಮಪತ್ನಿ ಮಾತೋಶ್ರೀ ಡಾ. ದಾಕ್ಷಾಯಿಣಿ ಅವ್ವಾಜಿ, ಏಳು ಪುತ್ರಿಯರು, ಮಗ ಹಾಗೂ 9ನೇ ಪೀಠಾಧಿಪತಿ ದೊಡ್ಡಪ್ಪ ಅಪ್ಪ ಸೇರಿದಂತೆ ಲಕ್ಷಾಂತರ ಭಕ್ತರನ್ನು ಅಗಲಿದ್ದಾರೆ.
ಪೂಜ್ಯ ಡಾ. ಶರಣಬಸವಪ್ಪ ಅಪ್ಪಾ ಶರಣಬಸವೇಶ್ವರ ಮಹಾದಾಸೋಹ ಪೀಠದ 7ನೇ ಪೀಠಾಧಿಪತಿಗಳಾದ ಪೂಜ್ಯ ಶ್ರೀ ದೊಡ್ಡಪ್ಪ ಅಪ್ಪಾಜಿ ಹಾಗೂ ಮಾತೋಶ್ರೀ ಗೋದುತಾಯಿ ದಂಪತಿ ಪುತ್ರರಾಗಿ 1935ರ ನ.14ರಂದು ಜನಿಸಿದರು. ಅಧ್ಯಾತ್ಮ ಹಾಗೂ ದಾಸೋಹದ ವಾತಾವರಣದಲ್ಲಿ ಬೆಳೆದರು. ಶ್ರೀ ಶರಣಬಸವೇಶ್ವರರ ಮಹಾದಾಸೋಹ ಸಂಸ್ಥಾನ ಪೀಠಾಧಿಪತಿಗಳಾಗಿ 1983ರಲ್ಲಿ ಪೀಠಾರೋಹಣ ಮಾಡಿದರು. 45 ವರ್ಷಗಳಲ್ಲಿ ನಾಡಿನ, ವಿಶೇಷವಾಗಿ ಕಲ್ಯಾಣ ಕರ್ನಾಟಕ ಪ್ರದೇಶದ ಸಾಮಾನ್ಯ ಜನರ ನೈತಿಕ, ಆಧ್ಯಾತ್ಮಿಕ, ಧಾರ್ಮಿಕ ಮತ್ತು ಶೈಕ್ಷಣಿಕ ಗುಣಮಟ್ಟ ಉನ್ನತಿಗಾಗಿ ಶ್ರಮಿಸಿದರು. ಪಾರಂಪರಿಕವಾಗಿ ನಡೆದ ದಾಸೋಹ ಪರಂಪರೆ ನಡೆಸಿಕೊಂಡು ಅದಕ್ಕೆ ಜ್ಞಾನದ ಸ್ಪರ್ಶ ನೀಡಿದರು. ಭಕ್ತರಿಗೆ ಅನ್ನದಾಸೋಹ ಮತ್ತು ಜ್ಞಾನ ದಾಸೋಹ ನೀಡಿದರು.

Girl in a jacket
error: Content is protected !!