ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಮಹಿಳೆಯರು ಸಜ್ಜಾಗಬೇಕು: ಡಿ.ಕೆ.ಶಿ ಕರೆ

Share

ಮುಂದಿನ ವಿಧಾನಸಭೆ, ಲೋಕಸಭೆ ಚುನಾವಣೆಗೆ ಮಹಿಳೆಯರು ಸಜ್ಜಾಗಬೇಕು: ಡಿ.ಕೆ.ಶಿ ಕರೆ

by-ಕೆಂಧೂಳಿ

ಕಲಬುರ್ಗಿ, ಮಾ. 8-“2028 ರ ಹೊತ್ತಿಗೆ ಮಹಿಳಾ ಮೀಸಲಾತಿ ಅಸ್ತಿತ್ವಕ್ಕೆ ಬರಬಹುದು ಆದ ಕಾರಣ ಮಹಿಳೆಯರು ಚುನಾವಣೆಗೆ ಸ್ಪರ್ಧಿಸಲು ತಯಾರಾಗಿ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ನಿಮ್ಮನ್ನು ಯಾರೂ ತಡೆಯುವುದಿಲ್ಲ” ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಅವರು ಹೇಳಿದರು.

ಕಲಬುರ್ಗಿಯಲ್ಲಿ ನಡೆದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯ ಉದ್ಘಾಟನಾ ಸಮಾರಂಭದಲ್ಲಿ ಡಿಸಿಎಂ ಅವರು ಮಾತನಾಡಿದರು.

“ಈಗ ಪಂಚಾಯಿತಿಯಿಂದ ಪಾರ್ಲಿಮೆಂಟ್ ತನಕ ಮಹಿಳೆಯರು ಅಧಿಕಾರದಲ್ಲಿ ಇದ್ದಾರೆ. ಸ್ಥಳೀಯ ಸಂಸ್ಥೆಗಳಲ್ಲಿ ಶೇ.50 ರಷ್ಟು ಮೀಸಲಾತಿ ನೀಡಲಾಗಿದೆ. ಈಗ ಅನೇಕ ಸ್ಥಳೀಯ ಸಂಸ್ಥೆಗಳಲ್ಲಿ ಹೆಂಡತಿಯನ್ನು ಸದಸ್ಯೆಯನ್ನಾಗಿಸಿ ಗಂಡ ಅಧಿಕಾರ ಚಲಾಯಿಸುತ್ತಾ ಇರುತ್ತಾನೆ. ಮುಂದಕ್ಕೆ ಇದೆಲ್ಲಾ ಕಡಿಮೆಯಾಗುತ್ತದೆ. ಮಹಿಳೆಯರೇ ಇದನ್ನೆಲ್ಲಾ ಸಮರ್ಥವಾಗಿ ನಿಭಾಯಿಸುತ್ತಾರೆ” ಎಂದರು.

“ಸೋನಿಯಾ ಗಾಂಧಿ ಅವರ ನಾಯಕತ್ವದಲ್ಲಿ, ಮನಮೋಹನ್ ಸಿಂಗ್ ಅವರ ನೇತೃತ್ವದಲ್ಲಿ ಕಾಂಗ್ರೆಸ್ ಸರ್ಕಾರ ಶೇ.33 ರಷ್ಟು ಮಹಿಳಾ ಮೀಸಲಾತಿಯನ್ನು ಜಾರಿಗೆ ತರಲು ಹೋಗಿತ್ತು. ಕಾರಣಾಂತರಗಳಿಂದ ಮಹತ್ವದ ಕಾರ್ಯ ಜಾರಿಗೆ ಬರಲಿಲ್ಲ. ಈಗ ಮೀಸಲಾತಿಯನ್ನು ಬಿಜೆಪಿ ಸರ್ಕಾರ ಜಾರಿಗೆ ತಂದಿದೆ. ಮುಂದಿನ ವಿಧಾನಸಭಾ, ಲೋಕಸಭಾ ಚುನಾವಣೆಗೆ ಮಹಿಳಾ ಮೀಸಲಾತಿ ಇರುತ್ತದೆ” ಎಂದು ಹೇಳಿದರು.

“ಮಹಿಳಾ ಮೀಸಲಾತಿ ಜಾರಿಯಾದರೆ ಇಲ್ಲಿ ಇರುವ ಯಾರ ಸ್ಥಾನ ಹೋಗುತ್ತದೆ ಎಂದು ಹೇಳಲು ಆಗುವುದಿಲ್ಲ. ಅಜಯ್ ಸಿಂಗ್, ಅಲ್ಲಮಪ್ರಭು, ಬಿ.ಆರ್.ಪಾಟೀಲ್, ಪ್ರಿಯಾಂಕ್ ಖರ್ಗೆ ಯಾರದ್ದು ಬೇಕಾದರೂ ಆಗಬಹುದು. ಅದಕ್ಕೆ ಈಗಿನಿಂದಲೇ ಸಜ್ಜಾಗಿ” ಎಂದರು.

*ಹೆಣ್ಣಿಲ್ಲದೇ ಮನೆ ಉದ್ಧಾರವಾಗಲು ಸಾಧ್ಯವಿಲ್ಲ*

“ಮಣ್ಣಿಲ್ಲದೇ ಮಡಕೆ ಮಾಡಲು ಸಾಧ್ಯವಿಲ್ಲ. ಹೆಣ್ಣಿಲ್ಲದೇ ಮನೆ ಉದ್ದಾರವಾಗಲು ಸಾಧ್ಯವಿಲ್ಲ. ಈ ಸಮಾಜ ಹಾಗೂ ನಾಗರಿಕಥೆಯನ್ನು ಕಟ್ಟಿದವರು ಮಹಿಳೆಯರು. ಇಡೀ ಸಂಸಾರದ ಜವಾಬ್ದಾರಿ ಮಹಿಳೆಯರ ಮೇಲೆ ಇರುತ್ತದೆ. ಕೆಆರ್ ಎಸ್ ಅಣೆಕಟ್ಟು ನಿರ್ಮಾಣದ ವೇಳೆ ಕೆಂಪ ನಂಜಮ್ಮಣ್ಣಿ ಅವರು ಒಡವೆಗಳನ್ನು ಅಡವಿಟ್ಟು ಸಹಾಯ ಮಾಡಿದರು. ನೆಹರು ಅವರು ಬಾಕ್ರಾನಂಗಲ್ ಅಣೆಕಟ್ಟನ್ನು ಬುಡಕಟ್ಟು ಮಹಿಳೆಯಿಂದ ಉದ್ಘಾಟನೆ ಮಾಡಿಸಿದರು. ನಮ್ಮ ದೇಶದಲ್ಲಿ ಮಹಿಳೆಯರಿಗೆ ನೀಡುವ ಪ್ರಾಶಸ್ತ್ಯವನ್ನು ಇದು ಹೇಳುತ್ತದೆ” ಎಂದರು.

“ಜನನ ನೀಡುವವಳು ತಾಯಿ, ಜೋಪಾನ ಮಾಡುವವಳು ಅಕ್ಕ, ಅಕ್ಷರ ಕಲಿಸುವವಳು ಶಿಕ್ಷಕಿ, ಜೊತೆಯಾಗಿ ನಿಲ್ಲುವವಳು ಹೆಂಡತಿ, ಮುಪ್ಪಿನಲ್ಲಿ ಆರೈಕೆ ಮಾಡುವವಳು ಮಗಳು, ಸತ್ತಾಗ ಜಾಗ ಕೊಡುವವಳು ಭೂಮಿ ತಾಯಿ. ಹೀಗೆ ಎಲ್ಲದಕ್ಕೂ ಹೆಣ್ಣೇ ಮೂಲ” ಎಂದರು.

“ಕಳೆದ ಬಾರಿಯ ಎಸ್ಸೆಸ್ಸೆಲ್ಸಿ ಪರೀಕ್ಷೆಯಲ್ಲಿ ಮೊದಲ ಸ್ಥಾನ ಗಳಿಸಿದ್ದು ಹೆಣ್ಣುಮಗಳು. ಸರ್ಕಾರಿ ಶಾಲೆಯಲ್ಲಿ ಓದಿ ಇಡೀ ರಾಜ್ಯದ ಗಮನ ಸೆಳೆದಳು. ಬೆಂಗಳೂರು ಭಾಗದ ಹುಡುಗಿಯರು ಬರಲಿಲ್ಲ ಎಂಬುದನ್ನು ಗಮನಿಸಬೇಕು. ಮಹಿಳೆಯರು ಈಗ ಎಲ್ಲಾ ರಂಗಗಳಲ್ಲೂ ಬೆಳೆಯುತ್ತಿದ್ದಾರೆ. ಮುಂದಕ್ಕೆ ಈ ದೇಶವನ್ನು ಆಳುವ ಶಕ್ತಿ ಮಹಿಳೆಯರಿಗಿದೆ. ಕಾಂಗ್ರೆಸ್ ಪಕ್ಷದಿಂದ ಇಂದಿರಾಗಾಂಧಿ ಅವರು ಪ್ರಧಾನಿಯಾಗಿದ್ದರು. ಪಕ್ಷದ ಅಧ್ಯಕ್ಷರಾಗಿದ್ದರು. ಮುಂದಕ್ಕೂ ದೇಶದ ಚುಕ್ಕಾಣಿ ಹಿಡಿಯುವವರು ಇದ್ದಾರೆ. ಶೇ.‌33 ರಷ್ಟು ಮಹಿಳಾ ಮೀಸಲಾತಿ ಜಾರಿಯಾದರೆ ದೇಶದಲ್ಲಿ ಸಾಕಷ್ಟು ಬದಲಾವಣೆ ಆಗುತ್ತದೆ” ಎಂದರು.

“ನಮ್ಮ ಸಂಸ್ಕೃತಿ ಮಹಿಳಾ ಪರವಾದುದು. ಯಾವುದೇ ದೇವರ ಹೆಸರನ್ನು ಪ್ರಸ್ತಾಪಿಸುವಾಗ ಮೊದಲು ಸ್ತ್ರೀ ದೇವತೆಗಳ ಹೆಸರು ಹೇಳುತ್ತೇವೆ. ಉದಾಹರಣೆಗೆ ಲಕ್ಣ್ಮೀ ವೆಂಕಟೇಶ್ವರ, ಪಾರ್ವತಿ ಪರಮೇಶ್ವರ ಹೀಗೆ. ನಮಗೆ ಆಹ್ವಾನ ಪತ್ರಿಕೆ ಕೊಡುವಾಗಲೂ ಶ್ರೀಮತಿ ಮತ್ತು ಶ್ರೀ ಡಿ.ಕೆ.ಶಿವಕುಮಾರ್ ಎಂದು ಬರೆಯುತ್ತಾರೆ‌. ಈ ಮೂಲಕ ಹೆಣ್ಣು ಮಕ್ಕಳಿಗೆ ಮೊದಲ ಆದ್ಯತೆ ನೀಡುವುದು ನಮ್ಮ ಸಂಸ್ಕೃತಿ” ಎಂದು ಹೇಳಿದರು.

*ಮಹಿಳೆಯರಿಗೆ ಮಾತ್ರ ಅವಕಾಶ ನೀಡಿ*

“ಮಹಿಳಾ ದಿನಾಚರಣೆಯನ್ನು ಸಂಪೂರ್ಣವಾಗಿ ಮಹಿಳೆಯರೇ ನಡೆಸಿಕೊಡಬೇಕು. ಪುರುಷರು ವೇದಿಕೆಯ ಕೆಳಗೆ ಕುಳಿತುಕೊಳ್ಳಬೇಕು. ಅವರ ಶಕ್ತಿಯನ್ನು ಈ ಮೂಲಕವೂ ನಾವೆಲ್ಲ ನೋಡಬಹುದು. ಬೆಂಗಳೂರಿನಲ್ಲಿ ದೊಡ್ಡ ಕಾರ್ಯಕ್ರಮ ಇದ್ದರೂ ಈ ಭಾಗದ ಮಹಿಳೆಯರ ಆಶೀರ್ವಾದ ಪಡೆಯಬೇಕು ಎಂದು ಬಂದಿದ್ದೇನೆ. ಮಹಿಳಾ ಪರವಾದ ಕಾರ್ಯಕ್ರಮಗಳನ್ನು ಮಹಿಳೆಯರಿಂದಲೇ ನೆರವೇರಿಸಬೇಕು. ಪುರುಷ ಅಧಿಕಾರಿಗಳು ಇನ್ನು ಮುಂದೆ ಇಂತಹ ಕಾರ್ಯಕ್ರಮಗಳಲ್ಲಿ ಇರಬಾರದು” ಎಂದು ಡಿಸಿಎಂ ಸೂಚನೆ ನೀಡಿದರು.

 

Girl in a jacket
error: Content is protected !!