ಬೌರಿಂಗ್ ನಲ್ಲಿ ಬ್ಲ್ಯಾಕ್ ಫಂಗಸ್ ಚಿಕಿತ್ಸೆ ವ್ಯವಸ್ಥೆ;ಸುಧಾಕರ್

Share

ಬೆಂಗಳೂರು, ಮೇ 16:ಬ್ಲ್ಯಾಕ್ ಫಂಗಸ್ ಗೆ ಚಿಕಿತ್ಸೆ ನೀಡಲು ಬೌರಿಂಗ್ ಆಸ್ಪತ್ರೆಯಲ್ಲಿ ಪ್ರಾಯೋಗಿಕವಾಗಿ ವ್ಯವಸ್ಥೆ ಮಾಡುತ್ತಿದ್ದು, ನಂತರ ಬೇರೆ ಜಿಲ್ಲೆಗಳಿಗೂ ಈ ಸೇವೆ ನೀಡಲಾಗುವುದು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ತಿಳಿಸಿದರು.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರೋಗ ನಿರೋಧಕ ಶಕ್ತಿ ಕಡಿಮೆ ಇರುವವರು ಹಾಗೂ ಸ್ಟೀರಾಯಿಡ್ ಅಧಿಕವಾಗಿ ಬಳಸಿರುವವರಿಗೆ ಹಾಗೂ ಮಧುಮೇಹ ಹೆಚ್ಚಿರುವವರಿಗೆ ಕೋವಿಡ್ ಬಂದಾಗ ಬ್ಲ್ಯಾಕ್ ಫಂಗಸ್ ಬರುವ ಸಾಧ್ಯತೆ ಇದೆ. ಮೂಗಿನಿಂದ ಆರಂಭವಾಗುವ ಈ ರೋಗ ಕಣ್ಣಿಗೆ ಹಾನಿ ಮಾಡುತ್ತದೆ. ದೃಷ್ಟಿ ಕೂಡ ಕಳೆದುಕೊಳ್ಳುವ ಅಪಾಯವಿರುತ್ತದೆ. ಸರಿಯಾದ ಚಿಕಿತ್ಸೆ ನೀಡದಿದ್ದರೆ ಸಾವು ಕೂಡ ಬರಬಹುದು. ಮಹಾರಾಷ್ಟ್ರದಲ್ಲಿ ಕಾಣಿಸಿಕೊಂಡಾಗಲೇ ಇಲ್ಲಿನ ನೇತ್ರ ತಜ್ಞರೊಂದಿಗೆ ಸಮಾಲೋಚನೆ ಮಾಡಲಾಗಿದೆ. ನಾಳೆಯಿಂದಲೇ ಬೌರಿಂಗ್ ಆಸ್ಪತ್ರೆಯಲ್ಲಿ ಉತ್ತಮ ಚಿಕಿತ್ಸೆ ನೀಡಲು ಪ್ರಾಯೋಗಿಕವಾಗಿ ಆರಂಭಿಸಲಾಗುತ್ತಿದೆ. ನಂತರ ಎಲ್ಲ ಜಿಲ್ಲೆಗಳಲ್ಲಿ ಜಿಲ್ಲಾಸ್ಪತ್ರೆ, ಮೆಡಿಕಲ್ ಕಾಲೇಜುಗಳಲ್ಲಿ ಆರಂಭಿಸಲಾಗುವುದು ಎಂದರು.

ನೇತ್ರ ತಜ್ಞರು ಸೇರಿದಂತೆ ಮೂರ್ನಾಲ್ಕು ತಜ್ಞರನ್ನೊಳಗೊಂಡ ಸಮಿತಿ ರಚಿಸಲಾಗುತ್ತಿದೆ. ಇದಕ್ಕೆ ಯಾವ ಬಗೆಯ ಚಿಕಿತ್ಸೆ ನೀಡಬೇಕೆಂದು ಈ ಸಮಿತಿ ಸಲಹೆ ನೀಡಲಿದೆ. *ಬ್ಲ್ಯಾಕ್ ಫಂಗಸ್ ಚಿಕಿತ್ಸೆ ಸತತ ಏಳು ವಾರಗಳ ಕಾಲ ನೀಡಬೇಕಿದ್ದು, 2-3 ಲಕ್ಷ ರೂ. ಖರ್ಚಾಗುತ್ತದೆ. ಇದನ್ನು ಉಚಿತವಾಗಿ ನೀಡಲು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು.* ಯಾರಿಗೇ ಈ ಸಮಸ್ಯೆ ಇದ್ದರೂ ತಕ್ಷಣ ವೈದ್ಯರ ಬಳಿ ಹೋಗಿ ಪರೀಕ್ಷೆ ಮಾಡಿಸಬೇಕು. ಇದಕ್ಕೆ ಬೇಕಿರುವ ಆಂಪೊಟೆರಿಸಿನ್ ಔಷಧಿಯನ್ನು ಕೇಂದ್ರ ಸರ್ಕಾರ ನೀಡಲಿದ್ದು, 20 ಸಾವಿರ ಡೋಸ್ ಗೆ ಮನವಿ ಮಾಡಲಾಗಿದೆ ಎಂದರು.

ಯಾರೂ ವೈದ್ಯರ ಬಳಿ ಸಲಹೆ ಪಡೆಯದೆ ಸ್ಟೀರಾಯಿಡ್ ಮೊದಲಾದ ಔಷಧಿ ಪಡೆಯಬಾರದು. ವೈದ್ಯರು ಕೂಡ ಜನರಿಗೆ ರೋಗ ನಿರೋಧಕ ಹೆಚ್ಚಿಸುವ ಔಷಧಿಯನ್ನು ಅನಗತ್ಯವಾಗಿ ನೀಡಬಾರದು ಎಂದರು.

ಬೆಂಗಳೂರು ಹೊರತುಪಡಿಸಿ ಬೇರೆ ಜಿಲ್ಲೆಗಳಲ್ಲಿ ಪಾಸಿಟಿವಿಟಿ ದರ ಕಡಿಮೆಯಾಗಿಲ್ಲ. ಈ ಕುರಿತು ಪ್ರತಿಪಕ್ಷ ನಾಯಕರಿಗೆ ಮನವರಿಕೆ ಮಾಡಲಾಗುವುದು ಎಂದರು.

 

Girl in a jacket
error: Content is protected !!