ಬೆಂಗಳೂರು ಮೂಲಭೂತ ಸೌಕರ್ಯಕ್ಕೆ ನಿರಂತರ ಶ್ರಮ; ಬಿಎಸ್ ವೈ

Share

ಬೆಂಗಳೂರು,ಜೂ.27: ನಗರದಲ್ಲಿ ಮೂಲಭೂತ ಸೌಕರ್ಯ ಕಲ್ಪಿಸಲು ಸರ್ಕಾರ ನಿರಂತರವಾಗಿ ಶ್ರಮಿಸುತ್ತಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.ವಿಧಾನಸೌಧದ ಬಾಂಕ್ವೆಟ್‍ನಲ್ಲಿ ಇಂದು ನಡೆದ ನಾಡಪ್ರಭು ಕೆಂಪೇಗೌಡರ 512ನೇ ಜಯಂತಿ ಕಾರ್ಯಕ್ರಮದಲ್ಲಿ ಅಂಚೆಚೀಟಿ ಬಿಡುಗಡೆ ಹಾಗೂ ಬೆಂಗಳೂರು ವಿವಿ ಆವರಣದಲ್ಲಿ ಕೆಂಪೇಗೌಡರ ಪುತ್ಥಳಿ ನಿರ್ಮಾಣಕ್ಕೆ ಚಾಲನೆ ನೀಡಿ ನಂತರ ಅವರು ಮಾತನಾಡಿದರು.

ಬೆಂಗಳೂರನ್ನು ಮಾದರಿ ನಗರವನ್ನಾಗಿ ಮಾಡುವ ಸಂಕಲ್ಪ ತೊಡಲಾಗಿದೆ. ಇದಕ್ಕೆ ಪ್ರಧಾನಿ ನರೇಂದ್ರ ಮೋದಿ ಅವರು ಕೂಡ ಹಲವಾರು ಯೋಜನೆಗಳನ್ನು ನೀಡಿದ್ದಾರೆ. ಪೆರಿಪರಲ್ ರಸ್ತೆ ನಿರ್ಮಾಣ, ಉಪನಗರ ರೈಲು ಯೋಜನೆ ಸೇರಿದಂತೆ ಹಲವಾರು ಅಭಿವೃದ್ದಿ ಕಾರ್ಯಕ್ರಮಗಳನ್ನು ಕೈಗೆತ್ತಿಕೊಳ್ಳಲು ಈಗಾಗಲೇ ಸರ್ಕಾರ ಸಕಲ ಸಿದ್ದತೆ ಮಾಡಿಕೊಂಡಿದೆ ಎಂದು ಹೇಳಿದರು.

ಕೆಂಪೇಗೌಡರು ನಾಡಿನ ಅಭಿವೃದ್ಧಿಗೆ ನೀಡಿದ ಕೊಡುಗೆ ಅವಿಸ್ಮರಣೀಯ. ಅವರು ಐದು ಶತಮಾನಗಳ ಹಿಂದೆಯೇ ಬೆಂಗಳೂರನ್ನು ಕಟ್ಟಿ ಹಲವಾರು ಸಮಾಜಮುಖಿ ಕಾರ್ಯಗಳನ್ನು ನಡೆಸಿ ನಗರವನ್ನು ಅಭಿವೃದ್ಧಿಪಡಿಸಿದ್ದರು. ಅವರ ಹೆಸರು ಅಜರಾಮರವಾಗಿಸುವ ನಿಟ್ಟಿನಲ್ಲಿ ಕೆಂಪೇಗೌಡ ಅಧ್ಯಯನ ಪೀಠಕ್ಕೆ ಚಾಲನೆ ನೀಡಲಾಗಿದೆ. ಇದರಿಂದ ವಿದ್ಯಾರ್ಥಿಗಳಿಗೆ ಅನುಕೂಲವಾಗಲಿದೆ ಎಂದರು.

ಆದಿಚುಂಚನಗಿರಿ ಮಹಾಸಂಸ್ಥಾನದ ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ, ಕೊಲಂಬಸ್ ಅಮೆರಿಕಕ್ಕೆ ಹೋಗಿ ಅಲ್ಲಿನ ಮೂಲ ನಿವಾಸಿಗಳನ್ನು ಕೊಲೆ ಮಾಡುತ್ತಿದ್ದ. ಆದರೆ ಇದೇ ಸಂದರ್ಭದಲ್ಲಿ ಕೆಂಪೇಗೌಡರು ಇಲ್ಲಿ ನಾಡನ್ನು ಕಟ್ಟಿದರು. ಕೆಂಪೇಗೌಡರ ಹೆಸರನ್ನು ಕೇವಲ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಇಟ್ಟರೆ ಸಾಲದು, ಕೆಂಪೇಗೌಡರ ವಿಶ್ವವಿದ್ಯಾನಿಲಯ ಸ್ಥಾಪಿಸುವ ಬಹುಕಾಲದ ಬೇಡಿಕೆ ಇನ್ನು ನೆನೆಗುದಿಗೆ ಬಿದ್ದಿದೆ. ಸಮಸ್ತ ಸಮುದಾಯದ ಮಠಗಳ ಆರ್ಶೀವಾದ ಸಿಎಂ ಯಡಿಯೂರಪ್ಪ ಹಾಗೂ ಡಿಸಿಎಂ ಅಶ್ವಥ್ ನಾರಾಯಣ ಅವರ ಮೇಲಿದೆ ಎಂದು ಹೇಳಿದರು.
ಬೆಂಗಳೂರನ್ನು ವಿಶ್ವದರ್ಜೆಯ ನಗರವಾಗಿ ರೂಪಿಸಲು ನಮ್ಮ ಸರ್ಕಾರ ಎಲ್ಲ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ. ಬೆಂಗಳೂರು ಮಿಷನ್-2022 ಯೋಜನೆಯ ಮೂಲಕ ಸುಗಮ ಸಂಚಾರ, ಹಸಿರು ಬೆಂಗಳೂರು ಕಾರ್ಯಕ್ರಮ, ಸ್ವಚ್ಛ, ಸುಂದರ ನಗರವನ್ನಾಗಿ ಮಾರ್ಪಡಿಸುವುದು, ಜನರ ಕುಂದುಕೊರತೆಗಳಿಗೆ ಶೀಘ್ರ ಸ್ಪಂದಿಸುವುದು, ಮೂಲಸೌಕರ್ಯಗಳ ಆಮೂಲಾಗ್ರ ಸುಧಾರಣೆ ಮೂಲಕ ಜನಜೀವನವನ್ನು ಸಹನೀಯಗೊಳಿಸುವುದು ನಮ್ಮ ಸರ್ಕಾರದ ಗುರಿಯಾಗಿದೆ ಎಂದು ಸಿಎಂ ಹೇಳಿದರು.

Girl in a jacket
error: Content is protected !!