ಮೈಸೂರು, ಮೇ 31: ಮೈಸೂರು ಜಿಲ್ಲಾಧಿಕಾರ ಹಾಗೂ ಜನಪ್ರತಿನಿಧಿಗಳ ಜತೆಗಿನ ಕತ್ತಾಟ ದಿನದಿಂದ ದಿನಕ್ಕೆ ಹೆಚ್ಚಾಗುತ್ತಲೆ ಇದೆ..ಆದರೆ ಇದ್ಯಾವುದಕ್ಕೂ ಜಗ್ಗದ ರೋಹಿಣಿ ತಮ್ಮ ಮೇಲಿನ ಆರೋಪಗಳಿಗೆ ಕಡಕ್ಕಾಗಿಯೇ ಉತ್ತರ ನೀಡುತ್ತಾ ಬಂದಿದ್ದಾರೆ.
ಈಗ ಸಂಸದ ಪ್ರತಾಪ್ ಸಿಂಹ ಮಾಡಿರುವ ಆರೋಪಕ್ಕೆ ದಾಖಲೆ ಸಮೇತ ಉತ್ತರಿಸಿದ್ದಾರೆ.
ರೋಹಿಣಿ ಸಿಂಧೂರಿ ವಿರುದ್ಧ ಸಿಡಿದೆದ್ದ ಸಂಸದ ಪ್ರತಾಪ್ ಸಿಂಹ, ಜಿಲ್ಲಾಧಿಕಾರಿಗಳ ಕಾರ್ಯವೈಖರಿ ಕುರಿತು ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದರು. ಇವರ ಬೆನ್ನಲ್ಲೇ ಶಾಸಕ ಸಾ.ರಾ ಮಹೇಶ್ ಸಹ ಡಿಸಿ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದರು.
ಜನಪ್ರತಿನಿಧಿಗಳು ತಮ್ಮ ಮೇಲೆ ಮಾಡಿರುವ ಆರೋಪಗಳಿಗೆಲ್ಲಾ ಸೈಲೆಂಟ್ ಆಗಿಯೇ ಉತ್ತರ ನೀಡಿರುವ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ, ಕೋವಿಡ್ ನಿರ್ವಹಣೆಯಲ್ಲಿ ಮಾಡಿರುವ ಖರ್ಚು-ವೆಚ್ಚದ ಲೆಕ್ಕಪತ್ರ ಬಿಡುಗಡೆ ಮಾಡಿದ್ದು, ಆ ಮೂಲಕ ತಮ್ಮ ವಿರುದ್ಧ ಧ್ವನಿ ಎತ್ತಿದವರಿಗೆ ತಿರುಗೇಟು ನೀಡಿದ್ದಾರೆ.
ಕೋವಿಡ್ ನಿರ್ವಹಣೆಗೆ ಸಂಬಂಧಿಸಿದಂತೆ ಸರ್ಕಾರ ಬಿಡುಗಡೆ ಮಾಡಿರುವ ಅನುದಾನದ ಹಣದ ಲೆಕ್ಕ ನೀಡುವಂತೆ ಪ್ರತಾಪ್ ಸಿಂಹ ಜಿಲ್ಲಾ ಉಸ್ತುವಾರಿ ಸಚಿವರಿಗೆ ಪತ್ರ ಬರೆದಿದ್ದರು. ಈ ಹಿನ್ನೆಲೆಯಲ್ಲಿ ಸರ್ಕಾರದ ಹಣವನ್ನು ಬಳಕೆ ಮಾಡಿರುವ ಬಗ್ಗೆ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿ ವಿವರ ಕೊಟ್ಟಿದ್ದಾರೆ. ಅಲ್ಲದೇ ತಮ್ಮ ಗಮನ ಕೊರೊನಾ ನಿಯಂತ್ರಣದ ಕಡೆಗೆ ಮಾತ್ರ. ಯಾವುದೇ ವೈಯಕ್ತಿಕ ಆರೋಪಗಳಿಗೆ ಗಮನ ಕೊಡುವುದಿಲ್ಲ ಎಂದು ತಿಳಿಸಿದ್ದಾರೆ.
ನಾನು ಮೈಸೂರು ಜಿಲ್ಲಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿದ ದಿನದಿಂದ ವೈಯಕ್ತಿಕ ಆರೋಪಗಳನ್ನು ಮಾಡಲಾಗುತ್ತಿದೆ. ಅದೆಲ್ಲವನ್ನು ಗಮನಕ್ಕೆ ತೆಗೆದುಕೊಳ್ಳದೆ ಕೋವಿಡ್ ನಿರ್ವಹಣೆಯಲ್ಲಿ ಗಮನಹರಿಸುತ್ತೇನೆ. ನಾನು ನನ್ನ ಕೆಲಸ ಮಾಡುತ್ತಿದ್ದೇನೆ, ವೈಯಕ್ತಿಕ ಆರೋಪಗಳಿಂದ ಜಿಲ್ಲಾಡಳಿತದ ಕೆಲಸಕ್ಕೆ ಧಕ್ಕೆ ತರಲು ಸಾಧ್ಯವಾಗದ ಕಾರಣ ಕೊರೊನಾ ನಿರ್ವಹಣೆ ಕುರಿತು ಸುಳ್ಳು ಮತ್ತು ಬೇಜವಾಬ್ದಾರಿ ಹೇಳಿಕೆಗಳು ಹೊರ ಬರುತ್ತಿವೆ ಎಂದಿದ್ದಾರೆ.