ಶಿವಮೊಗ್ಗ, ಮೇ 22: ರಾಜ್ಯದಲ್ಲಿ ಕೋವಿಡ್ ಸೋಂಕಿತರ ಸಾವಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ ಆರೋಪಿಸಿದ್ದು ಈ ಬಗ್ಗೆ ಬಹಿರಂಗ ಪತ್ರ ಬರೆದಿದ್ದಾರೆ.
ಸಚಿವ ಕೆ.ಎಸ್ ಈಶ್ವರಪ್ಪ ಅವರು ಎರಡು ಅಂಶಗಳನ್ನು ಒಳಗೊಂಡ ಪತ್ರ ಬರೆದಿದ್ದು, ಇದರಲ್ಲಿ ಪ್ರಮುಖವಾಗಿ ಕೋವಿಡ್ ಲಸಿಕೆ ಮತ್ತು ಅದರ ನಿರ್ವಹಣೆಯ ವಿಷಯವನ್ನು ಪ್ರಸ್ತಾಪಿಸಿದ್ದಾರೆ.
ವಿಷಯ 1: ಬಿಜೆಪಿಗೊಂದು, ಕಾಂಗ್ರೆಸ್‌ಗೊಂದು ಸಂವಿಧಾನವಾ?
ಕೋವಿಡ್ ಸಂಬಂಧ ಸಭೆ ನಡೆಸಲು ಅವಕಾಶ ನೀಡುತ್ತಿಲ್ಲ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಆರೋಪಿಸಿದ್ದರು. ಇದಕ್ಕೆ ಪತ್ರದಲ್ಲಿ ಉತ್ತರ ನೀಡಿರುವ ಸಚಿವ ಕೆ.ಎಸ್ ಈಶ್ವರಪ್ಪ, ತಾವು ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕನಾಗಿದ್ದ ಸಂದರ್ಭದಲ್ಲಿ, ಬರಗಾಲದ ಪರಿಸ್ಥಿತಿ ಚರ್ಚೆಗೆ ಜಿಲ್ಲೆಗಳಿಗೆ ಭೇಟಿ ನೀಡಿದ್ದೆ. ಆಗ ಅಧಿಕಾರಿಗಳ ಸಭೆ ನಡೆಸಲು ಅವಕಾಶ ನೀಡಿರಲಿಲ್ಲ. ತಾವು ತಂಗಿದ್ದ ಪ್ರವಾಸಿ ಮಂದಿರದಲ್ಲೇ ಅನೌಪಚಾರಿಕವಾಗಿ ಅಧಿಕಾರಿಗಳ ಸಭೆ ನಡೆಸಬೇಕಾಯಿತು. ಆಗ ಸಿದ್ದರಾಮಯ್ಯ ಅವರು ಮುಖ್ಯಮಂತ್ರಿಯಾಗಿದ್ದರು. ಈಗಲೂ ಅದೇ ಅಧಿಕಾರಿಗಳಿದ್ದಾರೆ. ಕಾಂಗ್ರೆಸ್‌ಗೊಂದು, ಬಿಜೆಪಿಗೊಂದು ಸಂವಿಧಾನವಿದೆಯಾ ಎಂದು ಪ್ರಶ್ನಿಸಿದರು.
ರಾಜಸ್ಥಾನ, ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ
ವಿಷಯ 2: ಕೋವಿಡ್ ಲಸಿಕೆ ವಿರುದ್ಧ ಅಪಪ್ರಚಾರ
ಕೊರೊನಾ ಲಸಿಕೆ ನೀಡುವಲ್ಲಿ ವಿಫಲವಾಗಿದೆ, ಸರ್ಕಾರ ಸತ್ತು ಹೋಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಆರೋಪಿಸಿದ್ದಾರೆ. ರಾಜಸ್ಥಾನ, ಪಂಜಾಬ್‌ನಲ್ಲಿ ಕಾಂಗ್ರೆಸ್ ಸರ್ಕಾರವೇ ಇದೆ. ಅಲ್ಲಿ ಎಲ್ಲರಿಗೂ ಲಸಿಕೆ ನೀಡಿದ್ದಾರಾ? ಹಾಗಾದರೆ ಅಲ್ಲಿ ಸರ್ಕಾರ ಸುತ್ತು ಹೋಗಿದೆಯಾ ಎಂದು ಪ್ರಶ್ನಿಸಿ ಎಂದು ಪತ್ರದಲ್ಲಿ ತಿರುಗೇಟು ನೀಡಿದ್ದಾರೆ.
ಕೊರೊನಾ ಲಸಿಕೆ ಬಗ್ಗೆ ಕಾಂಗ್ರೆಸ್ ಮುಖಂಡರು ಅಪಪ್ರಚಾರ ನಡೆಸಿದರು. ಇದರಿಂದ ಜನರು ಲಸಿಕೆ ಹಾಕಿಸಿಕೊಳ್ಳದಂತಾಯಿತು. ಇದೇ ಕಾರಣಕ್ಕೆ ಕೊರೊನಾ ವ್ಯಾಪಕವಾಗಿ ಹರಡುತ್ತಿದೆ. ಜನರು ಹೆಚ್ಚಿನ ಸಂಖ್ಯೆಯಲ್ಲಿ ಸಾವನ್ನಪ್ಪುತ್ತಿದ್ದಾರೆ. ಈಗ ಕೋವಿಡ್‌ನಿಂದ ಆಗುತ್ತಿರುವುದು ಬರೀ ಸಾವುಗಳಲ್ಲ, ಅದು ಕೊಲೆ. ಈ ಕೊಲೆಗಳಿಗೆ ಕಾಂಗ್ರೆಸ್ ಪಕ್ಷವೇ ಕಾರಣ ಎಂದು ಸಚಿವ ಕೆ.ಎಸ್ ಈಶ್ವರಪ್ಪ ಆರೋಪಿಸಿದರು.
ಪತ್ರವನ್ನು ಬಹಿರಂಗಪಡಿಸಿದ ಸಚಿವ ಈಶ್ವರಪ್ಪ
ಸಿದ್ದರಾಮಯ್ಯ ಪತ್ರ ಬಂದಿಲ್ಲ ಎಂದು ಹೇಳಬಾರದು
ಸುದ್ದಿಗೋಷ್ಠಿಯಲ್ಲಿ ಬಹಿರಂಗ ಪತ್ರದ ಕುರಿತು ಮಾತನಾಡಿದ ಸಚಿವ ಈಶ್ವರಪ್ಪ, ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪತ್ರ ಬಂದೇ ಇಲ್ಲ ಎಂದು ಹೇಳಬಾರದು. ಆ ಕಾರಣಕ್ಕೆ ಪತ್ರವನ್ನು ಬಹಿರಂಗಪಡಿಸಲಾಗುತ್ತಿದೆ ಎಂದು ತಿಳಿಸಿದರು. ಬಿಜೆಪಿ ಮುಖಂಡರಾದ ದತ್ತಾತ್ರಿ, ಡಿ.ಎಸ್ ಅರುಣ್, ಅಣ್ಣಪ್ಪ, ಜ್ಞಾನೇಶ್ವರ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.