ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ:  ಡಿ.ಕೆ. ಶಿ ಭರವಸೆ

Share

ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ:  ಡಿ.ಕೆ. ಶಿ ಭರವಸೆ

by-ಕೆಂಧೂಳಿ

*ಉಡುಪಿ, ಮಾ.02-“ಅನ್ಯಾಯಕ್ಕೆ ಒಳಗಾಗಿರುವವರಿಗೆ ನ್ಯಾಯ ಕೊಡಿಸುವುದು ನಮ್ಮ ಕರ್ತವ್ಯ. ನಿಮ್ಮ ಧ್ವನಿಗೆ ಸರ್ಕಾರ ಮನ್ನಣೆ ನೀಡಿ, ನ್ಯಾಯ ಕೊಡಿಸುವ ಕೆಲಸ ಮಾಡುತ್ತೇವೆ” ಎಂದು ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ ನೀಡಿದರು.

ತಮ್ಮ ಬೇಡಿಕೆಗಳ ಈಡೇರಿಕೆಗೆ ಅಗ್ರಹಿಸಿ ರಾಷ್ಟ್ರೀಯ ಹೆದ್ದಾರಿ 66 ರ ಸಮೀಪ ಬ್ರಹ್ಮಾವರ ಸಹಕಾರಿ ಸಕ್ಕರೆ ಕಾರ್ಖಾನೆ ಎದಿರು ಅನಿರ್ದಾಷ್ಟಾವಧಿ ಅಹೋರಾತ್ರಿ ಪ್ರತಿಭಟನೆ ನಡೆಸುತ್ತಿರುವ ಉಡುಪಿ ಜಿಲ್ಲಾ ರೈತ ಸಂಘದ ಪ್ರತಿನಿಧಿಗಳನ್ನು ಡಿಸಿಎಂ ಡಿ ಕೆ ಶಿವಕುಮಾರ್ ಅವರು ಭಾನುವಾರ ಭೇಟಿ ಮಾಡಿ ಅವರ ಅಹವಾಲು ಆಲಿಸಿದರು.

 

ಈ ವೇಳೆ ಪ್ರತಿಭಟನಾಕಾರರನ್ನು ಉದ್ದೇಶಿಸಿ ಮಾತನಾಡಿದ ಶಿವಕುಮಾರ್ ಅವರು, “ನಿಮ್ಮ ಸಮಸ್ಯೆ ಬಗ್ಗೆ ನನಗೂ ಸ್ವಲ್ಪ ಅನುಭವವಿದೆ. ನಾನು ಸಹಕಾರ ಮಂತ್ರಿಯಾಗಿದ್ದಾಗ, ಆಸ್ಕರ್ ಫರ್ನಾಂಡಿಸ್ ಅವರು ಅಧ್ಯಕ್ಷರಾಗಿದ್ದರು. ಅವರು ನನ್ನ ಬಳಿ ಬಂದು ಸರ್ಕಾರದ ನೆರವು ಬಯಸಿದ್ದರು. ನಾನು ಈ ಜಾಗಕ್ಕೆ ಬಂದಿದ್ದೆ. ಇಲ್ಲಿ ದೊಡ್ಡ ಜಾಗ ಇದೆ. ಸುಮಾರು 100 ಕ್ಕೂ ಹೆಚ್ಚು

Advatisement

ಎಕರೆ ಜಾಗ ಇದೆ. ಆ ಕಾಲದಲ್ಲಿ ಸರ್ಕಾರ ಕಾರ್ಖಾನೆ ಸಿಬ್ಬಂದಿಗೆ ಸಾಕಷ್ಟು ಹಣ ನೀಡಿ ಸಹಾಯ ಮಾಡಿದ್ದು ನನಗೆ ನೆನಪಿದೆ. ಇಲ್ಲಿ ಬದುಕಿಗೆ ಏನಾದರೂ ಸಹಾಯ ಮಾಡಬೇಕು ಎಂದು ನಮ್ಮ ನಾಯಕರು ಆಸೆ ಪಟ್ಟಿದ್ದಾರೆ” ಎಂದು ಹೇಳಿದರು.

“ಇಲ್ಲಿ ಟೆಂಡರ್ ಕರೆದು ಕೆಲಸ ಆರಂಭಿಸಬೇಕು ಎಂದು ತೀರ್ಮಾನ ಆಗಿದೆ. ಆದರೆ ಅಕ್ರಮ ನಡೆದಿದ್ದು ಇದರ ವಿರುದ್ಧ ನೀವು ಹಗಲು ರಾತ್ರಿ ಹೋರಾಟ ಮಾಡುತ್ತಿದ್ದೀರಿ. ಈ ಮಧ್ಯೆ ಸರ್ಕಾರ ಕೂಡ ಆದೇಶ ಹೊರಡಿಸಿರುವ ಬಗ್ಗೆ ನಮ್ಮ ನಾಯಕರು ನನಗೆ ಮಾಹಿತಿ ನೀಡಿದ್ದಾರೆ. ಮಾರ್ಚ್ 8ರ ನಂತರ ನಿಮ್ಮಲ್ಲಿ ಮೂರ್ನಾಲ್ಕು ಜನ ಬೆಂಗಳೂರಿಗೆ ಬಂದರೆ, ಗೃಹಸಚಿವರು ಹಾಗೂ ಸಹಕಾರ ಸಚಿವರು, ಜಿಲ್ಲಾ ಉಸ್ತುವಾರಿ ಸಚಿವರನ್ನು ಕರೆಸಿ ಒಂದು ಸಭೆ ಮಾಡೋಣ” ಎಂದು ಸಲಹೆ ನೀಡಿದರು.

“ನ್ಯಾಯ ಎಲ್ಲರಿಗೂ ಒಂದೇ, ಅನ್ಯಾಯಕ್ಕೆ ಒಳಗಾದವರಿಗೆ ಕಾನೂನು ರೀತಿ ನೆರವು ಕೊಡಿಸಲು ನೀವು ಹೋರಾಟ ಮಾಡುತ್ತಿದ್ದು, ನಿಮ್ಮ ಹೋರಾಟಕ್ಕೆ ನಾವು ಅಗತ್ಯ ಸಹಕಾರ ನೀಡುತ್ತೇವೆ. ತಪ್ಪಿತಸ್ಥರಿಗೆ ಶಿಕ್ಷೆ ಆಗಬೇಕು. ಈ ವಿಚಾರವನ್ನು ಅಧಿವೇಶನದಲ್ಲಿ ಪ್ರಸ್ತಾಪಿಸಲು ವಿಧಾನ ಪರಿಷತ್ ಸದಸ್ಯರಿಗೆ ಸೂಚಿಸುವೆ” ಎಂದರು.

“ನೀವು ನನಗೆ ನೀಡಿರುವ ಬೇಡಿಕೆಗಳನ್ನು ಮುಖ್ಯಮಂತ್ರಿಗಳು ಹಾಗೂ ಗೃಹಮಂತ್ರಿಗಳ ಗಮನಕ್ಕೆ ತರಲಾಗುವುದು. ಈ ಬಗ್ಗೆ ಸಭೆ ಕರೆದು ನಿಮಗೆ ಯಾವ ರೀತಿ ನ್ಯಾಯ ಕೊಡಿಸಲು ಸಾಧ್ಯವೋ, ಚರ್ಚೆ ಮಾಡೋಣ. ಕೆಲವು ವಿಚಾರಗಳನ್ನು ಬಹಿರಂಗವಾಗಿ ಮಾತನಾಡಲು ಸಾಧ್ಯವಿಲ್ಲ. ಇಲ್ಲಿ ಯಾರು ಕಳ್ಳರು, ಯಾರು ಕಳ್ಳರಲ್ಲ ಎಂದು ಹೇಳಲು ಹಿಂಜರಿಯುತ್ತಾರೆ. ನಮ್ಮ ಪಕ್ಷದ ನಾಯಕರು ಉತ್ತಮ ವಿಚಾರಕ್ಕೆ ಹೋರಾಟ ಮಾಡುತ್ತಿದ್ದಾರೆ ಎಂದು ಅಧಿಕೃತ ಕಾರ್ಯಕ್ರಮ ಇಲ್ಲದಿದ್ದರೂ ನಿಮ್ಮನ್ನು ಭೇಟಿ ಮಾಡಿ ಅಹವಾಲು ಸ್ವೀಕರಿಸಲು ಬಂದಿದ್ದೇನೆ” ಎಂದು ಹೇಳಿದರು.

“ನಿಮ್ಮ ಹೋರಾಟಕ್ಕೆ ಜಯವಾಗಲಿ, ನಿಮಗೆ ನ್ಯಾಯ ಒದಗಿಸುವುದು ನಮ್ಮ ಕರ್ತವ್ಯ. ಈ ತನಿಖೆಯನ್ನು ಸರಿಯಾಗಿ ಮಾಡಬೇಕು ಎಂಬುದು ನಿಮ್ಮ ಅರ್ಜಿಯ ಸಾರ. ನ್ಯಾಯ ಪೀಠದಿಂದ ಅನ್ಯಾಯ ಆಗಬಾರದು. ಪೊಲೀಸರು ಇದರಲ್ಲಿ ಶಾಮೀಲಾಗಿ ಒಬ್ಬೊಬ್ಬರಿಗೆ ಒಂದೊಂದು ರೀತಿ ಮಾಡುತ್ತಿದ್ದಾರೆ ಎಂಬುದು ನಿಮ್ಮ ಭಾವನೆ. ಇದನ್ನು ಸರಿಪಡಿಸುವ ಕೆಲಸ ಮಾಡೋಣ. ನಿಮ್ಮ ಕೂಗಿಗೆ ಸರ್ಕಾರ ಮನ್ನಣೆ ನೀಡುತ್ತದೆ. ಹೀಗಾಗಿ ಈ ಹೋರಾಟವನ್ನು ಇಲ್ಲಿಗೆ ನಿಲ್ಲಿಸಿ” ಎಂದು ಮನವಿ ಮಾಡಿದರು.

Girl in a jacket
error: Content is protected !!