ನಾಳೆ ಬಿಜೆಪಿ ರಾಜ್ಯ ಕೋರ್ ಕಮಿಟಿ ಸಭೆ: ವಿಜಯೇಂದ್ರ
By ಕೆಂಧೂಳಿ
ಬೆಂಗಳೂರು,ಜ,20-ನಾಳೆ (ಜ.21) ಸಂಜೆ 7 ಗಂಟೆಗೆ ಬಿಜೆಪಿ ರಾಜ್ಯದ ಕೋರ್ ಕಮಿಟಿ ಸಭೆ ನಡೆಯಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಮತ್ತು ಶಾಸಕ ಬಿ.ವೈ.ವಿಜಯೇಂದ್ರ ಅವರು ತಿಳಿಸಿದ್ದಾರೆ.
ಇಂದು ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ರಾಜ್ಯ ಬಿಜೆಪಿ ಉಸ್ತುವಾರಿ ಹಾಗೂ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ರಾಧಾಮೋಹನ್ ದಾಸ್ ಅಗರವಾಲ್, ತಮಿಳುನಾಡಿನಿಂದ ಪೊನ್ನು ರಾಧಾಕೃಷ್ಣನ್, ರಾಜ್ಯದ ಸಹ ಉಸ್ತುವಾರಿ ಸುಧಾಕರ ರೆಡ್ಡಿ ಅವರು ನಾಳೆ ಬೆಂಗಳೂರಿಗೆ ಬರಲಿದ್ದಾರೆ. ಮಧ್ಯಾಹ್ನ 3 ಗಂಟೆಗೆ ರಾಜ್ಯ ಕಾರ್ಯಾಲಯ ಜಗನ್ನಾಥ ಭವನದಲ್ಲಿ ಶಾಸಕರು, ಸಂಸದರು, ವಿಧಾನಪರಿಷತ್ ಸದಸ್ಯರನ್ನು ಒಳಗೊಂಡ ನಮ್ಮ ಚುನಾಯಿತ ಪ್ರತಿನಿಧಿಗಳ ಸಭೆ ನಡೆಯಲಿದೆ ಎಂದರು.
ಅಲ್ಲಿ ಅವರ ಅಭಿಪ್ರಾಯ ಪಡೆಯಲಿದ್ದಾರೆ. ಸಂಘಟನೆ ಸಂಬಂಧ ಚರ್ಚಿಸಲಿದ್ದಾರೆ. 4 ಗಂಟೆಗೆ ರಾಜ್ಯದಲ್ಲಿ ನಡೆಯುತ್ತಿರುವ ಸಂಘಟನಾ ಪರ್ವದ ಕುರಿತು ಚರ್ಚೆ ನಡೆಸಲಿದ್ದಾರೆ. ಮಂಡಲ ಅಧ್ಯಕ್ಷರ ಚುನಾವಣೆ ನಡೆದಿದೆ. ಜಿಲ್ಲಾಧ್ಯಕ್ಷರ ನಿಯೋಜನೆ ಪ್ರಕ್ರಿಯೆ ನಡೆಯುತ್ತಿದೆ. ರಾಜ್ಯಾಧ್ಯಕ್ಷರ ಚುನಾವಣೆ ಬಗ್ಗೆ ಕೂಡ ಚರ್ಚೆ ನಡೆಯಲಿದೆ ಎಂದು ವಿವರಿಸಿದರು. ಪಕ್ಷದ ಚುನಾವಣಾ ಅಧಿಕಾರಿಗಳು, ಸಹ ಅಧಿಕಾರಿಗಳು, 13 ಜನ ಮೇಲ್ವಿಚಾರಕರ ಸಭೆಯೂ ನಡೆಯಲಿದೆ ಎಂದು ತಿಳಿಸಿದರು.
ಈ 3 ಸಭೆಗಳಲ್ಲಿ ಸಂಸದರು, ಶಾಸಕರು, ವಿಧಾನಪರಿಷತ್ ಸದಸ್ಯರು ಭಾಗವಸಲಿದ್ದಾರೆ. ರಾಜ್ಯದ ಪರಿಸ್ಥಿತಿ, ಸಂಘಟನಾ ವಿಚಾರವಾಗಿ, ರಾಜ್ಯದ ಅಧ್ಯಕ್ಷರ ವಿಚಾರವಾಗಿ ಎಲ್ಲವೂ ಕೂಡ ಸಮಗ್ರವಾಗಿ ನಾಳೆ ಚರ್ಚೆ ಆಗಲಿದೆ ಎಂದು ತಿಳಿಸಿದರು.