ಸಿದ್ದರಾಮಯ್ಯ ಅವರನ್ನು ಕೇಳಿ ಮೋದಿ ಅವರನ್ನು ಭೇಟಿಯಾಗಬೇಕಿತ್ತಾ ಸಿದ್ದು ವಿರುದ್ಧ ದೇವೇಗೌಡ ಕಿಡಿ

Share

ಚಿಕ್ಕಬಳ್ಳಾಪುರ,ಡಿ,02: ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಲು ಸಿದ್ದರಾಮಯ್ಯ ಅವರ ಅನುಮತಿ ಬೇಕೆ ಎಂದು ಮಾಜಿ ಪ್ರಧಾನಿ ಹಾಗೂ ಜೆಡಿಎಸ್​ ರಾಷ್ಟ್ರೀಯ ಅಧ್ಯಕ್ಷ ಎಚ್​.ಡಿ.ದೇವೇಗೌಡ ಪ್ರಶ್ನಿಸಿದರು.
ವಿಧಾನ ಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಶಿಡ್ಲಘಟ್ಟದಲ್ಲಿ ನಡೆದ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ನರೇಂದ್ರ ಮೋದಿ ಅವರು ಪ್ರಧಾನಿಯಾದ ಬಳಿಕ ಏಳೆಂಟು ಬಾರಿ ಭೇಟಿಯಾಗಿದ್ದೇನೆ. ಈ ಹಿಂದೆ ಡಾ.ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದಾಗ 10 ಬಾರಿ ಭೇಟಿಯಾಗಿದ್ದೆ. ಮೋದಿ ಅವರನ್ನು ಭೇಟಿಯಾದ ತಕ್ಷಣ ಜೆಡಿಎಸ್​​ ಅವರಿಗೆ ಒಪ್ಪಿಸಿದಂತೆ ಆಗುತ್ತದೆಯೇ? ಎಂಥ ಮೂರ್ಖತನದ ಮಾತು ಎಂದು ಆಕ್ಷೇಪಿಸಿದರು.

ಜೆಡಿಎಸ್​ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂಬ ಸಿದ್ದರಾಮಯ್ಯ ಆಕ್ಷೇಪದ ಬಗ್ಗೆ ಪ್ರಸ್ತಾಪಿಸಿದ ಅವರು, ನಾವು ಬಿಜೆಪಿ ಅಥವಾ ಕಾಂಗ್ರೆಸ್​ ಪಕ್ಷದ ಪೈಕಿ ಯಾರಿಗೆ ಬೆಂಬಲ ನೀಡಬೇಕು ಎನ್ನುವ ಬಗ್ಗೆ 2023ರ ವಿಧಾನಸಭೆ ಚುನಾವಣೆ ನಂತರ ತೀರ್ಮಾನಿಸುತ್ತೇವೆ. ನನ್ನದು ಒಳಗೊಂದು ಹೊರಗೊಂದು ರಾಜಕೀಯ ಪ್ರವೃತ್ತಿಯಿಲ್ಲ. ಕಾಂಗ್ರೆಸ್​ನವರು ನನ್ನ ಮನೆ ಬಾಗಿಲಿಗೆ ಬಂದು ಬೇಡಿಕೊಂಡರು. ಅವರ ಒತ್ತಾಯದಿಂದ ಸಮ್ಮಿಶ್ರ ಸರ್ಕಾರ ಮಾಡಿದ್ದೆವು. ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ತೆಗೆದವರು ಯಾರು? ಕಾಂಗ್ರೆಸ್​ನವರು ಉತ್ತರ ಕೊಡುತ್ತಾರಾ ಎಂದು ಪ್ರಶ್ನಿಸಿದರು. ಬಿಜೆಪಿ ಸರ್ಕಾರ ಭ್ರಷ್ಟ ಸರ್ಕಾರ ಅನ್ನುವವರ ಹಣೆಬರಹವೇನು? ಕಾಲ ಬಂದಾಗ ಎಲ್ಲವನ್ನೂ ಬಹಿರಂಗ ಮಾಡುತ್ತೇನೆ ಎಂದು ಸವಾಲು ಹಾಕಿದರು.

ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಅತ್ಯಂತ ಕೆಟ್ಟ ಸರ್ಕಾರ. ದೇಶದ ರಾಜಕಾರಣ ಈಗ ಹದಗೆಟ್ಟು ಹೋಗಿದೆ. ಈವರೆಗೆ ಯಾವ ವ್ಯಕ್ತಿಯೂ ನನ್ನ ರಾಜಕೀಯವನ್ನು ಪ್ರಶ್ನಿಸಿಲ್ಲ. ಯಾವ ನಾಯಕರಿಗೂ ಜೆಡಿಎಸ್ ಪಕ್ಷ ಮುಗಿಸಲು ಸಾಧ್ಯವಿಲ್ಲ. ಜೆಡಿಎಸ್ ಪಕ್ಷವನ್ನು ಬಿಜೆಪಿಯ ಬಿ ಟೀಂ ಎಂದು ಕರೆಯುತ್ತಿದ್ದಾರೆ. ಆದರೆ ಕಾಂಗ್ರೆಸ್ ವರಿಷ್ಠರು ಎಚ್‌ಡಿಕೆಯನ್ನು ಮುಖ್ಯಮಂತ್ರಿ ಮಾಡಲು ಅನುಮತಿ ನೀಡಿದ್ದರು ಎಂದು ನೆನಪಿಸಿಕೊಂಡರು. ಯಲಹಂಕ ಶಾಸಕ ಎಸ್.ಆರ್.ವಿಶ್ವನಾಥ್ ಹತ್ಯೆಗೆ ಸುಪಾರಿ ನೀಡಿದ ಪ್ರಕರಣ ಕುರಿತು ಪ್ರಸ್ತಾಪಿಸಿದ ಅವರು, ರಾಜ್ಯದಲ್ಲಿ ಮುಖ್ಯಮಂತ್ರಿಯೊಬ್ಬರು ಇದ್ದಾರೆ. ಅವರು ಕಾನೂನು ಕ್ರಮ ಕೈಗೊಳ್ತಾರೆ. ಸರ್ಕಾರವೇ ಈ ನಿಟ್ಟಿನಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಲಿದೆ ಎಂದರು.

Girl in a jacket
error: Content is protected !!