ಸಿಎಂ ಬಿಎಸ್‌ವೈ ಬದಲಾಯಿಸದಂತೆ ಸ್ವಾಮೀಜಿಗಳ ನಿರ್ಣಯ

Share

ಬೆಂಗಳೂರು,ಜು.೨೫ :ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಬಾರದು ಅವರನ್ನೇ ಮುಂದುವರೆಸಬೇಕು ಎಂಬ ಒಕ್ಕೊರಲಿನ ನಿರ್ಣಯವನ್ನು ಇಂದು ರಾಜ್ಯ ವಿವಿಧ ಮಠಾಧೀಶರು ಏರ್ಪಡಿಸಿದ್ದ ಮಹಾ ಸಮಾವೇಶದಲ್ಲಿ ತಗೆದುಕೊಂಡರು.
ಅರಮನೆ ಮೈದಾನದಲ್ಲಿ ಏರ್ಪಡಿಸಿದ್ದ ಬೃಹತ್ ಸಮಾವೇಶದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರನ್ನು ಬದಲಿಸಬಾರದು ಒಂದು ವೇಳೆ ಅವರನ್ನು ಬದಲಿಸಿದರೆ ಮುಂದೆ ದೊಡ್ಡ ಅನಾಹುತವೇ ಬಿಜೆಪಿಗೆ ಕಾದಿದೆ ಎನ್ನುವ ಸಂದೇಶವನ್ನು ಹೈಕಮಾಂಡ್‌ಗೆ ಸ್ವಾಮೀಜಿಗಳು ರವಾನಿಸಿದರು.
ಈ ಸಮಾವೇಶ ಬಾಲೆಹೊಸೂರಿನ ಮಠದ ದಿಂಗಾಲೇಶ್ವರ ಸ್ವಾಮೀಜಿ ಮತ್ತು ಷಡಾಕ್ಷರಿ ಮಠದ ರುದ್ರಮುನಿ ಸ್ವಾಮೀಜಿ ಅವರ ನೇತೃತ್ವದಲ್ಲಿ ನಡೆದಿದ್ದು, ಚಿತ್ರದುರ್ಗ ಬೃಹನ್ಮಠದ ಡಾ. ಶಿವಮೂರ್ತಿ ಮುರುಘಾ ಶರಣರು ಈ ಸಮಾವೇಶವನ್ನು ಸಸಿಗೆ ನೀರೆರೆಯುವ ಮೂಲಕ ಉದ್ಘಾಟಿಸಿದರು.
ಮಠಾಧೀಶರು ಶಕ್ತಿ ಪ್ರದರ್ಶನಕ್ಕಾಗಿ ಸಮಾವೇಶ ಮಾಡುತ್ತಿಲ್ಲ. ಈ ಸಮಾವೇಶವನ್ನು ಯಡಿಯೂರಪ್ಪ ಹಾಗೂ ಅವರ ಪುತ್ರು ಅಯೋಜನೆ ಮಾಡಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸಲಾಗಿದೆ. ದೇವರ ಸಾಕ್ಷಿಯಾಗಿ ಸತ್ಯವನ್ನೇ ಹೇಳುತ್ತಿದ್ದೇನೆ. ಈ ಸೂಚನೆಯನ್ನೇ ಕೊಟ್ಟಿಲ್ಲ. ಮಠಾಧಿಪತಿಗಳೇ ಸಮಾವೇಶ ಮಾಡುತ್ತಿರುವುದು ಎಂದರು.
ಬಿಜೆಪಿ, ಕಾಂಗ್ರೆಸ್, ಜೆಡಿಎಸ್ ಹುಟ್ಟುವ ಮೊದಲೇ ಮಠಗಳು ಹುಟ್ಟಿವೆ. ನೂರಾರು ವರ್ಷಗಳಿಂದ ಮಠಗಳು ಇವೆ, ಬಾಲಗಂಗಾಧರ ತಿಲಕರು ಸೇರಿದಂತೆ ಸ್ವಾತಂತ್ರ್ಯ ಸೇನಾನಿಗಳು ಮಠಾಧೀಶರು ಆರ್ಶೀವಾದ ಪಡೆಯುತ್ತಿದ್ದರು. ಯಾವುದೇ ಪಕ್ಷದ ನಾಯಕನಿಗೆ ಸಂಸ್ಕಾರ ಇದ್ದರೆ ಮಠಾಧೀಶರಿಗೆ ಗೌರವ ನೀಡುತ್ತಾರೆ. ಅಂತಹ ಸಂಸ್ಕಾರ ಇರುವ ವ್ಯಕ್ತಿಗಳು ಎಲ್ಲ ಪಕ್ಷದಲ್ಲೂ ಇದ್ದಾರೆ. ಆದರೆ, ಇತ್ತೀಚೆಗೆ ಮಠಾಧೀಶರ ನಡೆಯ ಬಗ್ಗೆ ಆಕ್ಷೇಪ ವ್ಯಕ್ತವಾಗುತ್ತಿದೆ.
ಮಠಾಧೀಶರಿಗ್ಯಾಕೆ ರಾಜಕೀಯ ಅಂತೆಲ್ಲ ಮಾತನಾಡುತ್ತಿದ್ದಾರೆ. ಯಾರೋ ವದರಿದರೋ ಎಂದು ನಮ್ಮ ಕರ್ತವ್ಯ ನಿಲ್ಲಸಬಾರದು. ಒಂದು ನಾಯಿ ಬೊಗಳಲು ಆರಂಭಿಸುತ್ತದೆ ಹಲವು ನಾಯಿಗಳು ಜತೆಗೂಡುತ್ತವೆ. ಕೊನೆ ನಾಯಿಗೆ ಏಕೆ ಬೊಗಳುತ್ತಿದ್ದೇನೆ ಎಂಬುದೇ ಗೊತ್ತೇ ಇರಲ್ಲ, ಪಕ್ಕದ ನಾಯಿ ಬೊಗಳಿದ್ದಕ್ಕೆ ನಾನು ಬೊಗಳಿದೆ ಎಂದು ಆ ನಾಯಿ ಹೇಳುತ್ತದೆ ಎಂದು ಪರೋಕ್ಷವಾಗಿ ಮಾಧ್ಯಮ ನಡೆ ಬಗ್ಗೆ ನಾಯಿಗಳ ಕಥೆ ಹೇಳುವ ಮೂಲಕ ಅಸಮಾಧಾನ ಹೊರ ಹಾಕಿದರು.
ಮಾಧ್ಯಮದವರು ಪದೇ ಪದೇ ಮಠಗಳು ಮಾರಾಟವಾಗಿವೆ ಎಂದು ವರದಿ ಮಾಡುತ್ತಿವೆ. ಮಠಾಧೀಶರು ಏನೇ ಕಾಣಿಕೆ ತೆಗೆದುಕೊಂಡರೂ ಮಠಗಳಿಗೆ ಮಾಧ್ಯಮದವರೂ ಸೇರಿದಂತೆ ಜನ ಸಾಮಾನ್ಯರು ಬಂದಾಗ ಅವರ ದಾಸೋಹ ಮತ್ತು ವಸತಿಗೆ ಉಪಯೋಗ ಆಗುತ್ತದೆ. ಮಾಧ್ಯಮದವರ ಹಾಗೆ ಬೀರ್, ಬ್ರಾಂದಿ ಕುಡಿದು, ಮೋಜು ಮಾಡಲು ಅಲ್ಲ ಎಂದು ಅವರು ಮಾಧ್ಯಮಗಳ ವಿರುದ್ಧ ಹರಿಹಾಯ್ದರು.
ಯಡಿಯೂರಪ್ಪರವು ಇಳಿ ವಯಸ್ಸಿನಲ್ಲೂ ಒಳ್ಳೆಯ ಕೆಲಸ ಮಾಡಿದ್ದಾರೆ.ಮಠ-ಮಾನ್ಯಗಳಿಗೆ ಅನುದಾನ ನೀಡಿ ಮೇಲ್ಪಂಕ್ತಿ ಹಾಕಿದ್ದಾರೆ.ಅವರು ಜಾತ್ಯಾತೀತ ನಾಯಕರು, ಅವರನ್ನು ಬೆಂಬಲಿಸಿದ್ದೇವೆ ಎಂದ ಅವರು, ಮಠಾಧೀಶರು ಎಂದೂ ಅನುದಾನಕ್ಕೆ ಕೈ ಚಾಚಿದವರಲ್ಲ ಎಂದರು.
ಯಡಿಯೂರಪ್ಪರವರು ಬಿಜೆಪಿಯನ್ನು ಕಟ್ಟಿ ಬೆಳೆಸಿದ್ದಾರೆ. ಗೆದ್ದಲು ಕಟ್ಟಿದ ಮನೆಯಲ್ಲಿ ಹಾವು ವಾಸ ಮಾಡಿದಂತೆ, ಯಡಿಯೂರಪ್ಪರವರು ಕಟ್ಟಿದ ಮನೆಯಲ್ಲಿ ಯಾರೋ ವಾಸಮಾಡುವುದು ಸರಿಯಲ್ಲ ಎಂದವರು ಪರೋಕ್ಷವಾಗಿ ನಾಯಕತ್ವ ಬದಲಾವಣೆಗೆ ವಿರೋಧ ವ್ಯಕ್ತಪಡಿಸಿದರು.
ಮುರುಘಾ ಶ್ರೀ ಹೇಳಿಕೆ
ಇದೇ ಸಂದರ್ಭದಲ್ಲಿ ಮಾತನಾಡಿದ ಚಿತ್ರದುರ್ಗದ ಮುರುಘಾ ಶ್ರೀಗಳು ಮಠಗಳಿಗೆ ಅದರದೇ ಆದ ಜವಾಬ್ದಾರಿ ಇರುತ್ತದೆ. ಸಂಕಷ್ಟದ ಕಾಲದಲ್ಲಿ ಮಠಗಳು ಜನರಿಗೆ ನೆರವಾಗಿವೆ. ಮಠಾಧೀಶರು ಎಂದರೆ ಜವಾಬ್ದಾರಿ ವ್ಯಕ್ತಿತ್ವ ಇರುವವರು ಇದನ್ನು ಅರ್ಥ ಮಾಡಿಕೊಳ್ಳಬೇಕು
ನಾಯಕತ್ವ ಬದಲಾವಣೆ ವಿಚಾರದ ಬಗ್ಗೆ ಪ್ರಸ್ತಾಪಿಸಿದ ಅವರು ರಾಜ್ಯದಲ್ಲಿ ರಾಜಕೀಯ ಅಸ್ಥಿರತೆ ಮುಕ್ತಾಯ ಆಗಬೇಕಿದೆ. ನಾವು ನಮ್ಮ ಅಹವಾಲನ್ನು ಹೇಳಬಹುದು. ನಿರ್ಧಾರಗಳನ್ನು ತೆಗೆದುಕೊಳ್ಳುವವರು ಬಿಜೆಪಿ ಹೈಕಮಾಂಡ್ ಅವರೇ ಒಂದು ಸರಿಯಾದ ನಿರ್ಧಾರ ತೆಗೆದುಕೊಳ್ಳಬೇಕು ಎಂದರು.
ರಾಜಕಾರಣ, ಮುಖ್ಯಮಂತ್ರಿ ಪದವಿ ಎಲ್ಲವೂ ಸಾರ್ವಜನಿಕರ ಆಸ್ತಿ, ನಮ್ಮ ನಿಮ್ಮೆಲ್ಲರ ಆಸ್ತಿಯಲ್ಲ, ಯಡಿಯೂರಪ್ಪರವರು ಉತ್ತಮ ಕೆಲಸ ಮಾಡಿದ್ದಾರೆ. ಅಭಿವೃದ್ಧಿ ಪರವಾದ ರಾಜಕಾರಣ ಅವರದು. ಹಾಗಾಗಿ ಮಠಾಧೀಶರು ಅವರಿಗೆ ಬೆಂಬಲ ನಿಂತಿದ್ದಾರಷ್ಟೆ. ಸ್ವಾಮಿಗಳೆಲ್ಲ ಜಾತಿವಾದಿಗಳು ಎಂಬ ಭಾವನೆ ತಾಳಬಾರದು, ಮಠಾಧೀಶರು ಜಾತಿಯನ್ನು ಮೀರುವ ಕೆಲಸ ಮಾಡುತ್ತಾರೆ. ೭ ವರ್ಷಗಳ ಹಿಂದೆ ಅಹಿಂದ ಚಳವಳಿ ನಡೆಯಿತು. ಜಾತಿ ಬೇಧ ಮರೆತು ಸಿದ್ದರಾಮಯ್ಯ ಅವರಿಗೆ ಬೆಂಬಲ ನೀಡಿದೆವು. ಮಠಾಧೀಶರಿಗೆ ಅಭಿಮಾನಕ್ಕಿಂತ ಜಾತ್ಯಾತೀತ ನಿಲುವು ಮತ್ತು ರಾಜ್ಯ ಮತ್ತು ಜನರ ಹಿತ ಮುಖ್ಯ ಎಂದರು.

Girl in a jacket
error: Content is protected !!