ಶ್ರೀರಾಮುಲುಗೂ ಬಿಜೆಪಿ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣು
by ಕೆಂಧೂಳಿ
ಚಿತ್ರದುರ್ಗ, ಫೆ,01-ರಾಜ್ಯ ಬಿಜೆಪಿಯಲ್ಲಿ ಅಧ್ಯಕ್ಷ ಸ್ಥಾನದ ಆಕಾಂಕ್ಷಿಗಳ ಸಂಖ್ಯೆ ದಿನೇ ದಿನೇ ಹೆಚ್ಚಾಗುತ್ತಿದ್ದು ಈಗ ಮಾಜಿ ಸಚಿವ ಶ್ರೀರಾಮುಲು ಸೇರ್ಪಡೆಗೊಂಡಿದ್ದಾರೆ.
ಚಿತ್ರದುರ್ಗದಲ್ಲಿ ಸುದ್ದಿಮಾಧ್ಯಮಗಳ ಜೊತೆ ಮಾತನಾಡಿದ ಅವರು ದೆಹಲಿ ಚುನಾವಣೆ ನಂತರ ಹೈಕಮಾಂಡ್ ಬೇಟಿಯಾಗಿ ಮಾತುಕತೆ ನಡೆಸಲಿದ್ದೇನೆ ಎಂದಿದ್ದಾರೆ.
ಸಮಯ ನೋಡಿಕೊಂಡು ಹೋಗಿ ಎಲ್ಲಾ ವಿಚಾರಗಳನ್ನು ತಿಳಿಸುತ್ತೇನೆ. ಬಿಜೆಪಿಯಲ್ಲಿ ನಾನು ತುಂಬಾ ವರ್ಷ ಸೀನಿಯರ್ ಕಾರ್ಯಕರ್ತನಾಗಿ ಕೆಲಸ ಮಾಡಿದ್ದೇನೆ. ರಾಜಕಾರಣದಲ್ಲಿ ನಾನು ಬಿಜೆಪಿಯಲ್ಲಿ ಇದ್ದೇನೆ. ಒಬ್ಬರಿಗೆ ನೋವಾದಾಗ ಬೇರೆ ಪಕ್ಷದವರು ಕರೆಯೋದು ಸಹಜ. ಎಲ್ಲಾ ಸ್ನೇಹಿತರು ಕೂಡ ಆಹ್ವಾನಿಸಿದ್ದಾರೆ. ಅದು ಅವರ ದೊಡ್ಡ ಗುಣ. ಆದರೆ ನಾನು ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷ ಬಿಟ್ಟು ಹೋಗಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.
ಇನ್ನು ಮುಂದುವರಿದು ಮಾತನಾಡಿದ ಅವರು, ಮುಂದಿನ ದಿನಗಳಲ್ಲಿ ಪಕ್ಷ ಗಟ್ಟಿಯಾಗಬೇಕಿದೆ. ಜನರ ಜೊತೆ ಇದ್ದು ರಾಜಕಾರಣ ಮಾಡುವುದು ಮುಖ್ಯವಾಗಿದೆ. ಇವತ್ತು ನನಗೆ ಕೆಲಸ ಇಲ್ಲ. ನನಗೆ ಯಾವುದೇ ಸ್ಥಾನ ಕೊಟ್ಟರೂ ಕೆಲಸ ಮಾಡುತ್ತೇನೆ. ರಾಜ್ಯಾಧ್ಯಕ್ಷ ಹುದ್ದೆಗೆ ಯತ್ನಾಳ್, ರಾಮುಲು, ವಿಜಯೇಂದ್ರಗೆ ಸಿಗಲಿ ಎಂಬ ಮಾತುಗಳು ಕೇಳಿಬರುತ್ತಿವೆ. ಈ ಎಲ್ಲಾ ಶಕ್ತಿ ಕುರಿತು ಚರ್ಚೆ ನಡೆಯುತ್ತಿದೆ. ನಾನು ಕೂಡ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡುತ್ತೇನೆ ಎಂದು ಹೇಳಿದರು.