ಶಾಸಕರ ಅಮಾನತು, ರಾಜ್ಯಪಾಲರೊಂದಿಗೆ ಚರ್ಚೆ, ಇದು ಪ್ರಜಾಪ್ರಭುತ್ವ ವಿರೋಧಿ ನಡೆ: ಆರ್‌.ಅಶೋಕ

Share

ಬೆಂಗಳೂರು, ಏ, 28-ಬಿಜೆಪಿಯ 18 ಶಾಸಕರ ಅಮಾನತಿಗೆ ಸಂಬಂಧಿಸಿದಂತೆ ರಾಜ್ಯಪಾಲರ ಜೊತೆ ಚರ್ಚಿಸಲಾಗಿದೆ. ರಾಜ್ಯಪಾಲರು ಈ ಕುರಿತು ಸರ್ಕಾರ ಹಾಗೂ ಸ್ಪೀಕರ್‌ ಜೊತೆ ಚರ್ಚಿಸಲಿದ್ದಾರೆ ಎಂದು ಪ್ರತಿಪಕ್ಷ ನಾಯಕ ಆರ್‌.ಅಶೋಕ ತಿಳಿಸಿದರು.

ರಾಜಭವನದಲ್ಲಿ ರಾಜ್ಯಪಾಲರನ್ನು ಭೇಟಿ ಮಾಡಿದ ಬಳಿಕ ಅವರು ಸುದ್ದಿಗಾರರೊಂದಿಗೆ ಮಾತನಾಡಿದರು.ರಾಜ್ಯಪಾಲರಾದ ಥಾವರ್‌ ಚಂದ್‌ ಗೆಹ್ಲೋಟ್‌ ಅವರನ್ನು ಭೇಟಿ ಮಾಡಲಾಗಿದೆ. ಕಳೆದ ಅಧಿವೇಶನದಲ್ಲಿ ಸಚಿವ ರಾಜಣ್ಣ ಅವರ ಹನಿಟ್ರ್ಯಾಪ್‌ ಕುರಿತು ಹಾಗೂ ಮುಸ್ಲಿಂ ಮೀಸಲಾತಿ ವಿರುದ್ಧ ಬಿಜೆಪಿಯಿಂದ ಪ್ರತಿಭಟಿಸಲಾಗಿತ್ತು. ಈ ವೇಳೆ ಸ್ಪೀಕರ್‌ ಯು.ಟಿ.ಖಾದರ್‌ ಬಿಜೆಪಿಯ ಶಾಸಕರನ್ನು ಆರು ತಿಂಗಳ ಕಾಲ ಅಮಾನತು ಮಾಡಿರುವುದು ಪ್ರಜಾಪ್ರಭುತ್ವ ವಿರೋಧಿ ನಡೆ. ದೇಶದಲ್ಲಿ ಕಾಂಗ್ರೆಸ್‌ ತುರ್ತು ಪರಿಸ್ಥಿತಿಯನ್ನು ತಂದಿದ್ದನ್ನು ನಾವೆಲ್ಲರೂ ನೋಡಿದ್ದೇವೆ. ಅಧಿವೇಶನದಲ್ಲಿ ಮಾತಾಡಿ ಎಂದೇ ಜನರು ನಮಗೆ ಮತ ನೀಡಿದ್ದಾರೆ. ನಿತ್ಯದ ಕೆಲಸಗಳಿಗೂ ಈ ಅಮಾನತು ಕ್ರಮ ಅಡ್ಡಿಯಾಗಿದೆ ಎಂದರು.

ಈ ಹಿಂದೆ ಕಾಂಗ್ರೆಸ್‌ ಶಾಸಕರು ಸ್ಪೀಕರ್‌ ಪೀಠಕ್ಕೆ ನುಗ್ಗಿದ್ದರು. ಆಗ ಪ್ರಜಾಪ್ರಭುತ್ವದ ಆಶಯದಂತೆಯೇ ಬಿಜೆಪಿ ಸರ್ಕಾರ ನಡೆದುಕೊಂಡಿತ್ತು. ಆಡಳಿತ ಪಕ್ಷದಂತೆ ವಿರೋಧ ಪಕ್ಷವೂ ಮುಖ್ಯ. ಕಾನೂನು ಸಚಿವರ ಜೊತೆಗೆ ಹಾಗೂ ಸ್ಪೀಕರ್‌ ಜೊತೆಗೆ ಮಾತಾಡಲಾಗಿದೆ. ಈ ಅಮಾನತು ಆದೇಶವನ್ನು ವಾಪಸ್‌ ಪಡೆಯಬೇಕೆಂದು ಆಗ್ರಹಿಸಲಾಗಿದೆ. ಈ ಕುರಿತು ರಾಜ್ಯಪಾಲರ ಗಮನಕ್ಕೆ ತರಲಾಗಿದೆ. ರಾಜ್ಯಪಾಲರು ಸ್ಪೀಕರ್‌ ಜೊತೆ ಮಾತಾಡುತ್ತೇನೆ ಹಾಗೂ ಪತ್ರ ಬರೆಯುತ್ತೇನೆ ಎಂದು ತಿಳಿಸಿದ್ದಾರೆ ಎಂದರು.

ಕಳೆದ ಮೂರು ದಿನಗಳಿಂದ ಮುಖ್ಯಮಂತ್ರಿಯಿಂದ ಹಿಡಿದು ಸಚಿವರು, ಶಾಸಕರು, ಭಯೋತ್ಪಾದಕ ದಾಳಿಯ ಬಗ್ಗೆ ತಪ್ಪಾಗಿ ಹೇಳುತ್ತಿದ್ದಾರೆ. ಹಿಂದೂ ಧರ್ಮದ ಬಗ್ಗೆ ಕೇಳಿಯೇ ಉಗ್ರರು ಶೂಟ್‌ ಮಾಡಿದ್ದಾರೆ. ಸಚಿವ ಆರ್‌.ಬಿ.ತಿಮ್ಮಾಪುರ ಅವರ ಪ್ರಕಾರ, ಉಗ್ರರು ಬಹಳ ಅವಸರದಲ್ಲಿದ್ದು, ಕೂಡಲೇ ಹತ್ಯೆ ಮಾಡಿದ್ದಾರೆ. ಹತ್ಯೆಯಾದ ಕುಟುಂಬದವರೇ ಘಟನೆಯನ್ನು ವಿವರಿಸಿದ್ದಾರೆ. ಇಷ್ಟಿದ್ದರೂ ಧರ್ಮದ ಆಧಾರದಲ್ಲಿ ಮಾಡಿಲ್ಲ ಎನ್ನುತ್ತಿದ್ದಾರೆ. ಕಾಂಗ್ರೆಸ್‌ ನಾಯಕರಿಗೆ ಓಟು ಮುಖ್ಯವೇ ಹೊರತು ರಾಷ್ಟ್ರ ಮುಖ್ಯವಲ್ಲ ಎಂದು ಟೀಕಿಸಿದರು.

ರೈಲ್ವೆ ಇಲಾಖೆಯ ಪರೀಕ್ಷೆಯಲ್ಲಿ ತಾಳಿ, ಜನಿವಾರ ತೆಗೆಯಬೇಕು ಎಂಬ ಸೂಚನೆ ಬಂದಿದೆ ಎಂಬ ಮಾಹಿತಿ ಇದೆ. ಈ ಬಗ್ಗೆ ಕೇಂದ್ರ ಸಚಿವರಾದ ಪ್ರಹ್ಲಾದ್‌ ಜೋಶಿ ಬಳಿ ಚರ್ಚಿಸಿದ್ದು, ಈ ರೀತಿ ನಿಯಮ ಮಾಡುವಂತಿಲ್ಲ ಎಂದು ಕಟ್ಟುನಿಟ್ಟಿನ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು.

Girl in a jacket
error: Content is protected !!