ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ವಿರುದ್ಧ ಯತ್ನಾಳ ಸ್ಪರ್ಧೆ?
ಬೆಂಗಳೂರು,ಜ,೧೮- ಬಿಜೆಪಿಯಲ್ಲಿ ರಾಜ್ಯಾದ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯುವುದು ಖಚಿತವಾಗಿದೆ. ಹಾಲಿ ಅಧ್ಯಕ್ಷ ಬಿ.ವೈ.ವಿಜಯೇಂದ್ರ ಅವರೇ ಸ್ಪರ್ಧಿಸಿ ಜಯಗಳಿಸುವ ಮೂಲಕ ರೆಬಲ್‌ನಾಯಕರ ಬಾಯಿಮುಚ್ಚಿಸಲು ತಗೆದುಕೊಂಡಿರುವ ಈ ನಿರ್ಧಾರಕ್ಕೆ ಈಗ ಮತ್ತೊಂದು ಟ್ವಿಸ್ಟ್ ದೊರೆತಿದೆ.
ಒಂದು ಮೂಲದ ಪ್ರಕಾರ ಬಿ.ವೈ.ವಿಜಯೇಂದ್ರ ರಾಜ್ಯಾಧ್ಯಕ್ಷ ಸ್ಥಾನಕ್ಕೆ ಚುನಾವಣೆಯಲ್ಲಿ ಸ್ಪರ್ಧಿಸಲಿದ್ದಾರೆ ಇವರ ವಿರುದ್ಧ ರೆಬಲ್ ನಾಯಕ ಬಸವನಗೌಡ ಪಾಟೀಲ್ ಯತ್ನಾಳ್ ಅವರನ್ನು ನಿಲ್ಲಿಸಲು ರೆಬಲ್ ನಾಯಕರು ನಿರ್ಧರಿಸಿದ್ದಾರೆ .ಈ ಕುರಿತಂತೆ ಯತ್ನಾಳ್ ಮತ್ತು ಇತರರು ನಡೆಸಿದ ಗುಪ್ತ ಸಭೆಯಲ್ಲಿ ಈ ವಿಚಾರ ಮುನ್ನಲೆಗೆ ಬಂದಿದ್ದು ತಾವು ಸ್ಪರ್ಧಿಸುವುದಾಗ ತಿಳಿಸಿದ್ದಾರೆ ಎನ್ನವುದು ಈಗ ಬಿಜೆಪಿಯಲ್ಲಿ ಮತ್ತೊಂದು ಆಯಾಮ ಪಡೆಯಲಿದೆ ಎನ್ನುವುದು ಕುತೂಹಲ ಕೆರಳಿಸಿದೆ.
ಒಂದು ರೀತಿ ಪಕ್ಷದ ಈ ಚುನಾವಣೆ ಪಕ್ಷದ ಚೌಕಟ್ಟಿನಲ್ಲಿಯೆ ನಡೆಯಲಿದೆ ಆದರೂಉ ಕೂಡ ಈಗಾಗಲೇ ಅಧ್ಯಕ್ಷ ಹುದ್ದೆಯ ಚುನಾವಣೆಯ ಬರಾಟೆ ನಡೆಯುತ್ತಿದೆ ಈ ಹಂತದಲ್ಲೇ ಯತ್ನಾಳ್ ಬಣ ವಿಜಯೇಂದ್ರ ವಿರುದ್ಧ ನಿಲ್ಲುವ ಸೂಚನೆಯನ್ನು ಕೊಟ್ಟಿದ್ದಾರೆ ಎನ್ನುವುದು ವಿಜಯೇಂದ್ರ ಒಂದಿಷ್ಟು ವಿಚಲಿತರಾಗಿದ್ದಾರೆ ಎನ್ನಲಾಗಿದೆ.
ಪರೋಕ್ಷವಾಗಿ ಮತದಾನದಂತೆ ಪ್ರಕ್ರಿಯೆ ನಡೆಯುತ್ತದೆ. ಒಬ್ಬರಿಗಿಂತ ಹೆಚ್ಚು ಮಂದಿ ಪ್ರಬಲ ಆಕಾಂಕ್ಷೆ ವ್ಯಕ್ತಪಡಿಸಿದಲ್ಲಿ ಅಥವಾ ಪ್ರತಿಸ್ಪರ್ಧಿಗಳಿದ್ದಲ್ಲಿ ಆಗ ರಾಜ್ಯ ಪದಾಧಿಕಾರಿಗಳು, ರಾಜ್ಯ ಪರಿಷತ್ ಸದಸ್ಯರು ಹಾಗೂ ಶಾಸಕರ ಅಭಿಪ್ರಾಯ ಸಂಗ್ರಹಕ್ಕೆ ಮುಂದಾಗಬೇಕಾಗುತ್ತದೆ.
ಈ ಹಿಂದೆ ಅನಂತ ಕುಮಾರ್, ಕೆ.ಎಸ್.ಈಶ್ವರಪ್ಪ, ಬಸವರಾಜ ಪಾಟೀಲ್ ಸೇಡಂ ಅವರು ರಾಜ್ಯಾಧ್ಯಕ್ಷರಾಗುವ ವೇಳೆ ಒಬ್ಬರಿಗಿಂತ ಹೆಚ್ಚು ಮಂದಿ ಆಕಾಂಕ್ಷಿಗಳಿದ್ದರು. ಅನಂತ ಕುಮಾರ್ ಅವರಿಗೆ ಯಡಿಯೂರಪ್ಪ, ಈಶ್ವರಪ್ಪ ಅವರಿಗೆ ರಾಮಚಂದ್ರಗೌಡರು, ಸೇಡಂ ಅವರಿಗೆ ಡಾ.ಎಂ.ಆರ್.ತಂಗಾ ಅವರು ಪ್ರತಿಸ್ಪರ್ಧಿಗಳಾಗಿದ್ದರು. ಆಗ ಪಕ್ಷದ ಚುನಾವಣಾ ವೀಕ್ಷಕರಾಗಿ ಆಗಮಿಸಿದ್ದ ಕೇಂದ್ರದ ನಾಯಕರು ರಾಜ್ಯ ಘಟಕದ ಅಭಿಪ್ರಾಯ ಸಂಗ್ರಹ ಮಾಡಿ ತೀರ್ಮಾನ ಮಾಡಿದ್ದರು.
ಈಗಲೂ ಅದೇ ರೀತಿ ಅಭಿಪ್ರಾಯ ಸಂಗ್ರಹವಾಗಲಿ ಎಂಬ ಉದ್ದೇಶವನ್ನು ಯತ್ನಾಳ ಬಣದ ನಾಯಕರು ಹೊಂದಿದ್ದು, ವಿಜಯೇಂದ್ರ ಅವರಿಗೆ ಪ್ರತಿಸ್ಪರ್ಧಿಯಾಗಿ ಯತ್ನಾಳರ ಹೆಸರನ್ನು ಸೂಚಿಸಲು ಪ್ರಯತ್ನ ನಡೆಸಿದ್ದಾರೆ ಎಂದು ತಿಳಿದು ಬಂದಿದೆ.
ರಾಜ್ಯ ಬಿಜೆಪಿ ಚುನಾವಣೆಗೆ ಈಗಾಗಲೇ ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರನ್ನು ಸಂಚಾಲಕರನ್ನಾಗಿ ನೇಮಿಸಲಾಗಿದೆ. ರಾಜ್ಯದಲ್ಲಿ ಈಗ ಸಂಘಟನಾ ಪರ್ವ ನಡೆದಿದ್ದು, ಕೆಳಹಂತದಲ್ಲಿ ಚುನಾವಣಾ ಪ್ರಕ್ರಿಯೆ ಮುಗಿದ ಬಳಿಕ ರಾಜ್ಯಾಧ್ಯಕ್ಷ ಹುದ್ದೆಯ ಆಯ್ಕೆ ಪ್ರಕ್ರಿಯೆ ಆರಂಭವಾಗಲಿದೆ. ಬಹುತೇಕ ಬರುವ ಫೆಬ್ರವರಿಯಲ್ಲಿ ರಾಜ್ಯಾಧ್ಯಕ್ಷ ಹುದ್ದೆಯ ಚುನಾವಣಾ ಪ್ರಕ್ರಿಯೆ ನಡೆಯುವ ನಿರೀಕ್ಷೆಯಿದೆ.
ವಿಜಯೇಂದ್ರ ಅವರನ್ನು ರಾಜ್ಯಾದ್ಯಕ್ಷ ಸ್ಥಾನದಿಂದ ಕಿತ್ತೊಗೆಯ ಬೇಕು ಎನ್ನುವ ಬಣವೊಂದು ಇನ್ನಿಲ್ಲದ ಪ್ರಯತ್ನಗಳನ್ನು ಮಾಡುತ್ತಿದೆ ಇದಕ್ಕೆ ಪುಷ್ಟಿ ಕೊಡುವಂತೆ ಈ ಹಿಂದೆ ರಾಜ್ಯಾಧ್ಯಕ್ಷ ಹುದ್ದೆಗೆ ಚುನಾವಣೆ ನಡೆಯಲಿದೆ ಎಂದು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಹೇಳಿದ್ದರು. ಇದರ ಹಿಂದಿನ ಮಸಲತ್ತು ಈಗ ಬಹಿರಂಗವಾಗುತ್ತಿದೆ.