ಚನ್ನಪಟ್ಟಣ ,ಜೂ. 26: ರಾಷ್ಟ್ರೀಯ ಪಕ್ಷಗಳ ವಿರುದ್ಧ ಜನರು ಈಗಾಗಲೇ ರೋಸಿ ಹೋಗಿದ್ದಾರೆ, ಇದೇ ಕಾರಣ ರಾಜ್ಯದಲ್ಲಿ ಮಾತ್ರವಲ್ಲದೇ ದೇಶದಲ್ಲಿಯೂ ಕೂಡ ಜನರು ಪ್ರಾದೇಶಿಕ ಪಕ್ಷದ ಕಡೆಗೆ ಒಲವು ತೋರುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದ ಜನರು ಕಾಂಗ್ರೆಸ್- ಬಿಜೆಪಿ ಆಡಳಿತ ಕಂಡು ಈಗಾಗಲೇ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಕಳೆದ ಪಂಚ ರಾಜ್ಯಗಳ ಚುನಾವಣೆಯಲ್ಲೂ ಇದು ಸ್ಪಷ್ಟವಾಗಿದೆ. ಈ ಅಲೆಯನ್ನು ಗಮನಿಸಿದರೆ, ೨೦೨೩ರ ಚುನಾವಣೆಯಲ್ಲಿ ಪ್ರಾದೇಶಿಕ ಪಕ್ಷಕ್ಕೆ ಜನರು ಮಣೆ ಹಾಕುವುದು ಸ್ಪಷ್ಟವಾಗಿದೆ ಎಂದು ತಿಳಿಸಿದರು.
ರಾಜ್ಯದಲ್ಲಿ ಎರಡು ರಾಷ್ಟ್ರೀಯ ಪಕ್ಷಗಳು ಯಾವುದೇ ತೀರ್ಮಾನಕ್ಕೂ ಹೈ ಕಮಾಂಡ್‌ನತ್ತ ಮುಖ ಮಾಡುತ್ತವೆ. ರಾಜ್ಯದಲ್ಲಿ ಆಡಳಿತ ನಡೆಸುವುದು ದೆಹಲಿಯ ಹೈಕಮಾಂಡ್ ನಿಂದ ಅಲ್ಲ. ಕರ್ನಾಟಕದಿಂದ. ಇದೇ ಕಾರಣ ಸ್ಥಳೀಯ ಪಕ್ಷವೇ ಅಧಿಕಾರ ನಡೆಸಲಿ ಎಂಬ ನಿರ್ಧಾರ ಮಾಡುತ್ತಾರೆ. ಆ ನಿಟ್ಟಿನಲ್ಲಿ ನಾವು ಪ್ರಯತ್ನ ಮಾಡುತ್ತೇವೆ ಎಂದರು
ವಿಶೇಷ ಅಧಿವೇಶನ ಕರೆಯಲು ಒತ್ತಾಯ
ವಿಶೇಷ ಅಧಿವೇಶನ ಕರೆಯಲು ರಾಜ್ಯ ಸರ್ಕಾರಕ್ಕೆ ಪತ್ರ ಬರೆದ ವಿಚಾರ ಕುರಿತು ಪ್ರತಿಕ್ರಿಯಿಸಿದ ಅವರು, ಕೋವಿಡ್ ಸಂದರ್ಭದಲ್ಲಿ ಸರ್ಕಾರ ಪ್ಯಾಕೇಜ್ ಘೋಷಣೆ ಮಾಡಿದೆ. ಈ ವಿಚಾರವಾಗಿ ಸರ್ಕಾರ ವಿಶೇಷ ಅಧಿವೇಶನ ಕರೆಯಬೇಕಿತ್ತು. ಸರ್ಕಾರ ಶಾಸಕರ ಅಭಿಪ್ರಾಯ ಕೇಳಬೇಕಿತ್ತು. ಸರ್ಕಾರದಿಂದ ಕೆಲ ಲೋಪದೋಷಗಳು ಆಗಿವೆ. ಈ ಬಗ್ಗೆ ಅಧಿವೇಶನದಲ್ಲಿ ಚರ್ಚೆಯಾಗಬೇಕಿತ್ತು. ಆದರೆ, ಸರ್ಕಾರ ಈ ಬಗ್ಗೆ ಯಾವುದೇ ಕ್ರಮವಹಿಸಿಲ್ಲ. ರಾಜ್ಯದ ಆರುವರೆ ಕೋಟಿ ಜನರು ತೆರಿಗೆ ಕಟ್ಟಿದ್ದಾರೆ. ಆ ತೆರಿಗೆ ಹಣದಲ್ಲಿ ಪ್ಯಾಕೇಜ್ ಘೋಷಣೆ ಮಾಡಲಾಗಿದೆ. ಅದರಲ್ಲಿ ಆಗಿರುವ ಲೋಪದೋಷದ ಬಗ್ಗೆ ಚರ್ಚೆಯಾಗಬೇಕಿದೆ. ಪಕ್ಕದ ಮಹಾರಾಷ್ಟ್ರದಲ್ಲಿ ಎರಡು ದಿನ ಅಧಿವೇಶನ ಕರೆಯಲಾಗಿದೆ. ಆದರೆ ಅಲ್ಲಿನ ಬಿಜೆಪಿ ಶಾಸಕರು ಎರಡು ದಿನ ಸಾಲಲ್ಲ ಎಂದಿದ್ದಾರೆ.
ಇನ್ನು ಕನ್ನಡದ ವಿಚಾರವಾಗಿ ಕೇಂದ್ರ ಸರ್ಕಾರ ಭಾಷೆಯ ಪರವಾಗಿಲ್ಲ. ಈ ವಿಚಾರವಾಗಿ ಕೇಂದ್ರದ ಧೋರಣೆ ಸರಿಯಿಲ್ಲ. ಕೆಲ ಖಾಸಗಿ ಕಂಪನಿಗಳು ಅವಹೇಳನ ಮಾಡಿದರೂ ಇದರ ಬಗ್ಗೆ ಯಾರು ಮಾತನಾಡಲ್ಲ. ರಾಜ್ಯದಲ್ಲಿ ಗೆದ್ದಿರುವ ಬಿಜೆಪಿ ಶಾಸಕರು, ಸಂಸದರು ಈ ಬಗ್ಗೆ ಮಾತನಾಡಲ್ಲ. ಈ ಎಲ್ಲಾ ವಿಚಾರಗಳ ಬಗ್ಗೆ ಚರ್ಚೆ ನಡೆಸಲು ವಿಶೇಷ ಅಧಿವೇಶನ ಕರೆಯಬೇಕು. ಅದಕ್ಕಾಗಿ ಸರ್ಕಾರಕ್ಕೆ ವಯಕ್ತಿಕವಾಗಿ ಪತ್ರ ಬರೆದಿದ್ದೇನೆ. ಸರ್ಕಾರ ಅಧಿವೇಶನ ಕರೆಯದಿದ್ದರೇ ಪಕ್ಷದ ವತಿಯಿಂದಲೇ ಸರ್ಕಾರದ ಮೇಲೆ ಒತ್ತಡ ಹಾಕಲಾಗುತ್ತೆ ಎಂದರು.