ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸರ್ಕಾರ ಅಸ್ತು: ಮುಖ್ಯಮಂತ್ರಿ ಸಿದ್ದರಾಮಯ್ಯ

Share

ಬೆಂಗಳೂರು, ಆ, 20 -ಪರಿಶಿಷ್ಟ ಜಾತಿಗಳ ಒಳಮೀಸಲಾತಿ ಜಾರಿಗೆ ಸರ್ಕಾರ ಕಟಿಬದ್ಧವಾಗಿದ್ದು ಈ‌ ಕುರಿತು ಶೀಘ್ರವೇ ಆದೇಶ
ಹೊರಡಿಸಲಾಗುವುದೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ವಿಧಾನ ಪರಿಷತ್ ನಲ್ಲಿ ಇಂದು ತಿಳಿಸಿದರು

ಒಳಮೀಸಲಾತಿ ಕುರಿತು ವಿಧಾನ‌ ಪರಿಷತ್‌ನಲ್ಲಿ ಉತ್ತರಿಸಿದ ಮುಖ್ಯಮಂತ್ರಿಗಳು   ಸರ್ವೋಚ್ಛ ನ್ಯಾಯಾಲಯವು 2024ರಲ್ಲಿ ಪಂಜಾಬ್ ರಾಜ್ಯ ಮತ್ತು ಇತರರು ವರ್ಸಸ್ ದೇವಿಂದರ್ ಸಿಂಗ್ ಪ್ರಕರಣದಲ್ಲಿ ನೀಡಲಾದ ತೀರ್ಪಿನಲ್ಲಿ, ರಾಜ್ಯ ಸರ್ಕಾರಗಳಿಗೆ ಪರಿಶಿಷ್ಟ ಜಾತಿಗಳ ಉಪವರ್ಗೀಕರಣ ಮಾಡುವ ಅಧಿಕಾರವಿದ್ದು, ಸಂವಿಧಾನದ ಅನುಚ್ಚೇದ 14, 15 ಮತ್ತು 16 ರ ಮೂಲ ಆಶಯವನ್ನು ಸದೃಢಗೊಳಿಸುವ ನಿಟ್ಟಿನಲ್ಲಿ ಒಳ ಮೀಸಲಾತಿ ವ್ಯವಸ್ಥೆ ಕಲ್ಪಿಸಬಹುದು ಎಂದು ಅಭಿಪ್ರಾಯಪಟ್ಟಿದೆ. ಈ ಹಿನ್ನೆಲೆಯಲ್ಲಿ, ಸರ್ಕಾರವು 12.11.2024 ರ ಆದೇಶದಂತೆ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನ್‌ ದಾಸ್ ಅವರ ಏಕ ಸದಸ್ಯ ಆಯೋಗವನ್ನು ರಚಿಸಲಾಗಿತ್ತು. ಸೂಕ್ತ ದತ್ತಾಂಶಗಳನ್ನು ಸಂಗ್ರಹಿಸಿ ಒಳ ಮೀಸಲಾತಿ ನೀಡುವ ಕುರಿತು ಶಿಫಾರಸ್ಸುಗಳನ್ನು ಮಾಡುವಂತೆ ಆಯೋಗವನ್ನು ಕೋರಲಾಗಿತ್ತು.

ಆಯೋಗವು ರಾಜ್ಯದ 101 ಪರಿಶಿಷ್ಟ ಜಾತಿಗಳ ಸಮಗ್ರ ಅಧ್ಯಯನ ನಡೆಸಿ 1,05,09,871 ಜನರ ದತ್ತಾಂಶಗಳನ್ನು ಸಂಗ್ರಹಿದ್ದು ಶೇ.93 ರಷ್ಟು ಪರಿಶಿಷ್ಟ ಜಾತಿಗಳ ಜನಸಂಖ್ಯೆ ಈ ಸಮೀಕ್ಷೆಯ ಭಾಗವಾಗಿದೆ.
ಅಂತಿಮವಾಗಿ ಆಯೋಗವು ಇದೇ ಆಗಸ್ಟ್ 1 ರಂದು ಸರ್ಕಾರಕ್ಕೆ ವರದಿ ಸಲ್ಲಿಸಿತ್ತು ಎಂದರು

ಆಯೋಗದ ಶಿಫಾರಸ್ಸುಗಳನ್ನು ಕೂಲಂಕುಷವಾಗಿ ಪರಿಶೀಲಿಸಿ, ಕೆಲವು ಮಾರ್ಪಾಡುಗಳೊಂದಿಗೆ ಇದೇ ಮಂಗಳವಾರ ನಡೆದ ಸಚಿವ ಸಂಪುಟ ಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದರು.

ನ್ಯಾಯಮೂರ್ತಿ ನಾಗಮೋಹನ್ ದಾಸ್ ಆಯೋಗವು ಎ,ಬಿ,ಸಿ,ಡಿ,ಇ ಎಂದು ಪ್ರವರ್ಗಗಳನ್ನಾಗಿ ವಿಭಾಗೀಕರಿಸಿ ಮಾಡಿದ್ದ ಶಿಫಾರಸ್ಸನ್ನು ಸಚಿವ ಸಂಪುಟವು ಎ,ಬಿ,ಸಿ ಎಂದು ಮೂರು ಪ್ರವರ್ಗಗಳನ್ನಾಗಿ ವಿಭಾಗೀಕರಿಸಲು ಒಪ್ಪಿಗೆ ನೀಡಿದೆ. ಎಡಗೈ ಸಂಬಂಧಿತ ಜಾತಿಗಳುಳ್ಳ ಎ ಪ್ರವರ್ಗಕ್ಕೆ – ಶೇ. 6, ಬಲಗೈ ಸಂಬ0ಧಿತ ಜಾತಿಗಳುಳ್ಳ ಬಿ ಪ್ರವರ್ಗಕ್ಕೆ – ಶೇ. 6 ಹಾಗೂ ಸ್ಪೃಶ್ಯ ಜಾತಿಗಳುಳ್ಳ ಸಿ ಪ್ರವರ್ಗಕ್ಕೆ – ಶೇ.5 ರಷ್ಟು ಒಳಮೀಸಲಾತಿ ನೀಡಲು ಸರ್ಕಾರ ತೀರ್ಮಾನಿಸಿದೆ.

ಪರಿಶಿಷ್ಟ ಜಾತಿಯ ಎಲ್ಲ ಸಮುದಾಯಗಳಿಗೆ ಶಿಕ್ಷಣ, ಉದ್ಯೋಗಾವಕಾಶ ಹಾಗೂ ಇನ್ನಿತರ ಅವಕಾಶಗಳನ್ನು ಸಮಾನವಾಗಿ ಹಂಚುವ ಆಶಯದೊಂದಿಗೆ, ಮಾನ್ಯ ಸರ್ವೋಚ್ಛ ನ್ಯಾಯಾಲಯದ ತೀರ್ಪನ್ನು ಗಮನದಲ್ಲಿಟ್ಟುಕೊಂಡು, ಕೆಲ ಮಾರ್ಪಾಡುಗಳೊಂದಿಗೆ ಒಳಮೀಸಲಾತಿ ಸೌಲಭ್ಯವನ್ನು ಕಲ್ಪಿಸಲಾಗಿದೆ ಎಂದರು.

ಇದೇ ಸಂದರ್ಭದಲ್ಲಿ ಶಾಶ್ವತ ಪರಿಶಿಷ್ಟ ಜಾತಿ ಆಯೋಗದ ರಚನೆ ಸೇರಿದಂತೆ ಒಳಮೀಸಲಾತಿ ಹೋರಾಟಗಾರರ ಮೇಲಿನ ಎಲ್ಲ ಮೊಕದ್ದಮೆಗಳನ್ನು ಹಿಂಪಡೆಯಲಾಗುವುದೆಂದು ತಿಳಿಸಿದರು

ಒಳ ಮೀಸಲಾತಿಯ ಆದೇಶ ಹೊರಬಿದ್ದ ನಂತರ ಎಲ್ಲಾ ನೇಮಕಾತಿ ಪ್ರಕ್ರಿಯೆಗಳು ಪ್ರಾರಂಭಗೊಳಲಿದ್ದು, ಒಂದು ಬಾರಿಗೆ ವಯೋಮಿತಿ ಸಡಿಲಿಕೆ ಮಾಡಲಾಗುವುದು ಎಂದರು

ಒಳಮೀಸಲಾತಿಗಾಗಿ ದಶಕಗಳಿಂದ ನಡೆಯುತ್ತಿದ್ದ ಹೋರಾಟಕ್ಕೆ ನಮ್ಮ ಸರ್ಕಾರ ನ್ಯಾಯಯುತವಾಗಿ ಸ್ಪಂದಿಸಿದೆ. ನಮ್ಮ ರಾಜ್ಯವು ಅಭಿವೃದ್ಧಿಯ ಜೊತೆಜೊತೆಗೆ ಸಾಮಾಜಿಕ ನ್ಯಾಯವನ್ನು ಒದಗಿಸುವ ನಿಟ್ಟಿನಲ್ಲೂ ಮುಂಚೂಣಿಯಲ್ಲಿದೆ ಎಂದವರು ತಿಳಿಸಿದರು

Girl in a jacket
error: Content is protected !!