ಬೆಂಗಳೂರು,ಏ.3- ನೈಸ್ ಸಂಸ್ಥೆ ಎಲ್ಲ ನಿಯಮಗಳನ್ನು ಗಾಳಿಗೆ ತೂರಿ ಟೋಲ್ ಹಣವನ್ನು ಹೆಚ್ಚಿಸಿದೆ. ಸರ್ಕಾರಿ ಭೂಮಿಯನ್ನು ಮೆಟ್ರೋಗೆ ಮಾರಿ ದುಡ್ಡು ಮಾಡಲು ಹೊರಟಿದೆ. ಈ ಬಗ್ಗೆ ಸರ್ಕಾರಕ್ಕೆ ಅನೇಕ ಪತ್ರ ಬರೆದಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎಂದು ಮಾಜಿ ಪ್ರಧಾನಿಎಚ್ ಡಿ ದೇವೇಗೌಡ ನೈಸ್ ವಿರುದ್ಧ ಮತ್ತೆ ಗುಡುಗಿದ್ದಾರೆ.
ಜೆಡಿಎಸ್ ಪಕ್ಷದ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತುಂಬಾ ಆಸೆಯಿಟ್ಟುಕೊಂಡು ಈ ನೈಸ್ ಪ್ರಾಜೆಕ್ಟ್ಗೆ ಒಪ್ಪಿಗೆ ನೀಡಿದ್ದೆ. ಇದು ನನ್ನ ಕನಸಿನ ಪ್ರಾಜೆಕ್ಟ್ ಆಗಿತ್ತು. ಆದರೆ ನೈಸ್ ಕಂಪನಿ ರೈತರಿಗೆ ಸರಿಯಾಗಿ ಪರಿಹಾರ ನೀಡದೆ ಅನ್ಯಾಯ ಮಾಡಿತು. ನನಗೆ ಬಹಳ ನೋವಾಗಿದೆ ಎಂದರು.
ಈ ಹಿಂದೆ ತಾವು ಮಾಡಿದ್ದ ನಿಯಮಗಳನ್ನು ಬದಲಾವಣೆ ಮಾಡಿದ್ದಾರೆ. ನೈಸ್ ರಸ್ತೆಯ ಅಕ್ರಮದ ಬಗ್ಗೆ ನ್ಯಾಯಾಲಯಕ್ಕೆ ಅರ್ಜಿ ಹಾಕಿಯೇ ಇಲ್ಲ. ಎಷ್ಟೇ ಪತ್ರ ಬರೆದರೂ ಸರ್ಕಾರ ಕ್ರಮಕೈಗೊಂಡಿಲ್ಲ. ಈಗಿನ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿರವರಿಗೂ ಪತ್ರ ಬರೆದಿದ್ದೇನೆ. ನೈಸ್ ಸಂಸ್ಥೆಗೆ ಕೊಮ್ಮಘಟ್ಟ ಬಳಿ ನೀಡಿರುವ ೪೧ ಎಕರೆ ಜಾಗದ ಮಾರಾಟ ಒಪ್ಪಂದವನ್ನು ರದ್ದುಗೊಳಿಸುವಂತೆ ಒತ್ತಾಯಿಸಿದ್ದೇನೆ ಎಂದರು.
ನೈಸ್ ಸಂಸ್ಥೆ ಮೈಸೂರು ರಸ್ತೆ ಮಾಡದೆ, ಕಾಂಕ್ರಿಟ್ ರಸ್ತೆ ಮಾಡದೆ ಟೋಲ್ ಹಣ ಸಂಗ್ರಹಿಸುವಂತಿಲ್ಲ. ಆದರೆ, ಎಲ್ಲ ನಿಯಮಗಳನ್ನು ಮೀರಿ ಟೋಲ್ ಹಣ ಹೆಚ್ಚಳ ಮಾಡಲಾಗಿದೆ. ಅಧಿಕಾರಿಗಳು ಸ್ಥಳಕ್ಕೆ ಹೋಗಿ ಪರಿಶೀಲನೆ ಮಾಡುತ್ತಿಲ್ಲ. ಈಗಲಾದರೂ ಬೊಮ್ಮಾಯಿರವರು ನೈಸ್ ಸಂಸ್ಥೆ ವಿರುದ್ಧ ಕ್ರಮ ತೆಗೆದುಕೊಳ್ಳಲಿ ಎಂದು ಒತ್ತಾಯಿಸಿದರು.
ನೈಸ್ ಅಕ್ರಮದ ಬಗ್ಗೆ ಸದನ ಸಮಿತಿಯನ್ನೂ ಮಾಡಲಾಗಿತ್ತು. ಕಮಿಟಿಯಲ್ಲಿ ಪದೇ ಪದೇ ಬದಲಾವಣೆಗಳನ್ನು ಮಾಡುತ್ತಾ ಹೋದರು. ಸಚಿವ ಮಾಧುಸ್ವಾಮಿ ಅವರು ಈ ಕಂಪನಿ ವ್ಯವಹಾರಗಳು ಸರಿಯಿಲ್ಲ ಎಂದು ೫ ಲಕ್ಷ ಮಾತ್ರ ದಂಡ ಹಾಕಿದ್ದರು. ಈಗ ಮಾಧುಸ್ವಾಮಿ ಅವರನ್ನೂ ಕಮಿಟಿಯಿಂದ ಕೈಬಿಟ್ಟಿದ್ದಾರೆ. ಸದನ ಸಮಿತಿ ಟೋಲ್ ಸಂಗ್ರಹವನ್ನು ರದ್ದು ಮಾಡಿ ಎಂದು ವರದಿ ಕೊಟ್ಟಿತ್ತು. ಆದರೆ, ೨೦೧೬ ರಂದು ನೈಸ್ ಸಂಸ್ಥೆ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿತ್ತು. ತಡೆಯಾಜ್ಞೆ ತೆರವುಗೊಳಿಸುವ ಕೆಲಸವನ್ನು ಸರ್ಕಾರ ಮಾಡಿಲ್ಲ ಎಂದರು.
ನೈಸ್ ಸಂಸ್ಥೆ ಕೆಐಡಿಬಿಗೆ ಸೇರಿದ ಜಾಗವನ್ನು ಮೆಟ್ರೊಗೆ ೧೪ ಕೋಟಿ ರೂ.ಗೆ ಮಾರಾಟ ಮಾಡಿದೆ. ಈಗ ಮತ್ತೆ ೧೦೦ ಕೋಟಿ ರೂ.ಗೆ ಮಾರಾಟ ಮಾಡಿ ದುಡ್ಡು ಮಾಡಲು ಹೊರಟಿದೆ ಎಂದು ದೂರಿದರು.
ಸರ್ಕಾರ ಈಗಲಾದರೂ ಎಚ್ಚೆತ್ತು ನೈಸ್ ಸಂಸ್ಥೆ ವಿರುದ್ಧ ಕ್ರಮಕೈಗೊಳ್ಳಬೇಕೆಂದು ಮಾಜಿ ಪ್ರಧಾನಿ ದೇವೇಗೌಡರು ಆಗ್ರಹಿಸಿದರು.
 
                                         
					
										
												
				
 
									 
									