ಜಾರಕಿಹೊಳಿ ಸಹೋದರರಿಗೆ ಧನಬಲದ ದುರಹಂಕಾರದ ಆಟ..!

Share

ಜಾರಕಿಹೊಳಿ ಸಹೋದರರಿಗೆ ಧನಬಲದ ದುರಹಂಕಾರದ ಆಟ..!

ಟಿ.ಕೆ.ತ್ಯಾಗರಾಜ್,ಹಿರಿಯ ಪತ್ರಕರ್ತರು

ಬೆಂಗಳೂರು, ಜ,16-ಇದು ಧನಬಲದ ದುರಹಂಕಾರವಲ್ಲದೇ ಬೇರೇನಲ್ಲ.ನಾಲ್ವರು ಜಾರಕೀಹೊಳಿ ಸಹೋದರರು ಕಾಂಗ್ರೆಸ್ ಮತ್ತು ಬಿಜೆಪಿಯಲ್ಲಿದ್ದುಕೊಂಡು ತಮಗೆ ಬೇಕಾದಂತೆ ಆಟವಾಡುತ್ತಿದ್ದಾರೆ. ಹಿರಿಯ ಸಹೋದರ ರಮೇಶ್ ಜಾರಕೀಹೊಳಿ ಬಿಜೆಪಿ ರಾಜ್ಯಾಧ್ಯಕ್ಣ ಬಿ.ವೈ.ವಿಜಯೇಂದ್ರ ಬದಲಾವಣೆಗೆ ಆಗ್ರಹಿಸಿ ಸರ್ವಪ್ರಯತ್ನ ನಡೆಸುತ್ತಿದ್ದರೆ, ನಂತರದ ಸಹೋದರ ಸತೀಶ್ ರಾಜ್ಯ ಕಾಂಗ್ರೆಸ್ ಸರ್ಕಾರದಲ್ಲಿ ಮಂತ್ರಿಯಾಗಿದ್ದುಕೊಂಡೇ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬದಲಾವಣೆಗೆ ಆಗಿಂದಾಗ್ಗೆ ದನಿ ಎತ್ತುತ್ತಿದ್ದಾರೆ. ಓಟು ತರುವವರನ್ನು ಅಧ್ಯಕ್ಷ ಸ್ಥಾನಕ್ಕೆ ತರಬೇಕೆಂದು ಹೈಕಮಾಂಡ್ ಮೇಲೆ ಒತ್ತಡ ತರುತ್ತಿದ್ದಾರೆ.

ಸತೀಶ್ ಈಗ ಉಲ್ಟಾ ಹೊಡೆದಂತೆ ಕಾಣುತ್ತಿದ್ದರೂ ಮನಪರಿವರ್ತನೆ ಆದಂತಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುಮಾರ್ ಹೊರತುಪಡಿಸಿದರೆ ಕಾಂಗ್ರೆಸ್ ಪಕ್ಷದಲ್ಲಿ ಓಟು ತರುವ‌ಸಾಮರ್ಥ್ಯ ಯಾರಿಗಿದೆ? ಹಾಗೆ ನೋಡಿದರೆ ಸಿದ್ದರಾಮಯ್ಯಗೆ ಇರುವಷ್ಟು ಪ್ರಭಾವ ಡಿ.ಕೆ.ಶಿ.ಗೆ ಇಲ್ಲ. ಆದರೆ ಡಿಕೆಶಿ ವಿರುದ್ಧ ಕುಂಯ್ ಗುಟ್ಟುತ್ತಿರುವ‌ಕೆ.ಎನ್.ರಾಜಣ್ಣ, ಸತೀಶ್ ಗಿಂತ ಅದೆಷ್ಟೋ ಪಾಲು ಸಂಘಟನಾ ಸಾಮರ್ಥ್ಯ ಇರುವವರು. ಯಾವುದೇ ಸಂದರ್ಭದಲ್ಲೂ ಪಕ್ಷದ ಜವಾಬ್ದಾರಿ ಹೊರದೇ ಕೇವಲ ಮುಖ್ಯಮಂತ್ರಿ, ಉಪಮುಖ್ಯಮಂತ್ರಿಯಾಗಿಯಷ್ಟೇ ಅಧಿಕಾರ ಅನುಭವಿಸಿರುವ‌ ಸಿದ್ದರಾಮಯ್ಯಗಿಂತ ಪಕ್ಷದ ಜವಾಬ್ದಾರಿ ಪಡೆದು ಹೆಚ್ಚು ರಿಸ್ಕ್ ತೆಗೆದುಕೊಳ್ಳಬಲ್ಲ ಸಾಮರ್ಥ್ಯ ಇರುವುದು ಡಿ.ಕೆ.ಶಿಗೆ. ಸಿದ್ದರಾಮಯ್ಯ ಬಿಟ್ಟರೆ ಈ ಸಾಮರ್ಥ್ಯ, ಶಕ್ತಿ ಇರುವುದು ಡಿ.ಕೆ.ಶಿ.ಯಲ್ಲಿ ಮಾತ್ರ.

ರಾಜಣ್ಣ ಗೀಜಣ್ಣಗಳು ತಮ್ಮ ಕ್ಷೇತ್ರ ಹೊರತುಪಡಿಸಿ ಒಂದಾದರೂ ಓಟು ತರುವ‌ ಸಾಮರ್ಥ್ಯ ಪಡೆದಿದ್ದಾರೆಯೇ? ಇನ್ನೂ ಹೇಳಬೇಕೆಂದರೆ ಜಾರಕೀಹೊಳಿ ಬ್ರದರ್ಸ್ ತತ್ವನಿಷ್ಠೆಯಿಂದೇನೂ ವಿವಿಧ ಪಕ್ಷಗಳಲ್ಲಿ ಹಂಚಿ ಹೋಗಿಲ್ಲ. ಅಧಿಕಾರ ಪಡೆಯುವ ತಹತಹ, ಒಣಪ್ರತಿಷ್ಠೆಯಿಂದಷ್ಟೇ ಬೇರೆ ಬೇರೆ ಕಡೆ ಇದ್ದಾರೆ. ವಿವಿಧ ಪಕ್ಷಗಳಲ್ಲಿರುವ ಸಹೋದರರು ಪರಸ್ಪರ ಟೀಕೆಗಳನ್ನು ಮಾಡುವಷ್ಟು ಸಂಬಂಧ ಹಳಸಿಕೊಂಡವರೂ ಅಲ್ಲ. ಒಬ್ಬರಿಗೊಬ್ನರು ಪರಸ್ಪರ ವಿಶ್ವಾಸದಿಂದಲೇ ಇದ್ದಾರೆ.

ಹಾಗೇ ಯಡಿಯೂರಪ್ಪ ಕಾರಣಕ್ಕಾಗಿಯೇ ವಿಜಯೇಂದ್ರನನ್ನು ಬಿಜೆಪಿ ರಾಜ್ಯಾಧ್ಯಕ್ಷನಾಗಿ ಅವರ ಹೈಕಮಾಂಡ್ ನೇಮಕ ಮಾಡಿಲ್ಲ. ರಮೇಶ್, ಯತ್ನಾಳ್, ಕುಮಾರ್ ಬಂಗಾರಪ್ಪ ರಾಜ್ಯದಲ್ಲಿ ಸಂಚರಿಸಿ ಪಕ್ಷಕ್ಕೆ ಓಟು ತರುವ ನಾಯರಾಗಿ ರೂಪುಗೊಂಡಿದ್ದಾರೆಯೇ? ಇದ್ದುದರಲ್ಲೇ ವಿಜಯೇಂದ್ರ ವಯಸ್ಸು, ಉತ್ಸಾಹ, ಆಡಳಿತ ಪಕ್ಷಕ್ಕೆ ತಿರುಗೇಟು ನೀಡುವ ಸಾಮರ್ಥ್ಯ ಇರುವವರು. ಆರ್. ಅಶೋಕಗೂ ಈ ಶಕ್ತಿ ಇಲ್ಲ. ವಿಧಾನಸಭೆಯ ವಿರೋಧಪಕ್ಷದ ನಾಯಕರಾಗಿ ಸಂಪೂರ್ಣ ವಿಫಲರಾದವರು. ಆದರೆ ವಿಧಾನಪರಿಷತ್ ವಿರೋಧಪಕ್ಷದ ನಾಯಕರಾಗಿರುವ ಛಲವಾದಿ ನಾರಾಯಣಸ್ವಾಮಿ ಈ ಎಲ್ಲರಿಗಿಂತ ಹೆಚ್ಚು ಸಮರ್ಥರು ಎಂದು ಈಗಾಗಲೇ ಸಾಬೀತುಪಡಿಸಿದ್ದಾರೆ. ಹಾಗೇನಾದರೂ ವಿಜಯೇಂದ್ರಗೆ ಪೈಪೋಟಿ ನೀಡುವ ಸಾಮರ್ಥ್ಯ ಇದ್ದಂತೆ ಕಾಣುವುದು ಕಾಂಗ್ರೆಸ್ ಗರಡಿಯಲ್ಲಿ ಬೆಳೆದ ಈ ಛಲವಾದಿಯಲ್ಲಿ ಮಾತ್ರ.

ಆದರೆ ಬಿಜೆಪಿಯಲ್ಲಿ ದಲಿತ ಸಮುದಾಯಕ್ಕೆ ಸೇರಿದ ಛಲವಾದಿಗೆ ಇದಕ್ಕಿಂತ‌ ಉನ್ನತ‌ ಸ್ಥಾನ ನೀಡಬಹುದೆಂಬ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ. ಧನಬಲ, ವಂಶದ ಹಿನ್ನೆಲೆ ಸೇರಿದಂತೆ ಯಾವುದೇ ಪ್ರಭಾವ ಇಲ್ಲದ ಛಲವಾದಿ ಬೆಳೆದಿರುವುದು ಮತ್ತು ಈ ಮಟ್ಟಕ್ಕೆ ತಲುಪಿರುವುದು ಅವರ ಸ್ವಂತ‌ ಸಾಮರ್ಥ್ಯದಿಂದ ಮಾತ್ರ.ಕಾಂಗ್ರೆಸ್ ನಲ್ಲಿ ಅವಗಣನೆಗೆ ಒಳಗಾಗದೇ ಇದ್ದಿದ್ದರೆ ಛಲವಾದಿ ಇವತ್ತಿಗೂ ಕಾಂಗ್ರೆಸ್ ಪಕ್ಷದಲ್ಲೇ ಇರುತ್ತಿದ್ದರು. ಜಾರಕೀಹೊಳಿ ಸಹೋದರರ ಧನಬಲದ ದುರಹಂಕಾರವೂ ಛಲವಾದಿಯಲ್ಲಿಲ್ಲ. ಅವರಲ್ಲಿರುವುದು ಇರುವ ಪಕ್ಷದಲ್ಲಿನ ನಿಷ್ಠೆ ಮಾತ್ರ. ಅಂಬೇಡ್ಕರ್ ಕುರಿತ ಅಮಿತ್ ಶಾ ಹೇಳಿಕೆ ವಿವಾದದಲ್ಲಿ ಅವರು ಶಾ ಪರವಾಗಿ ಮಾತಾಡಿರುವುದೂ ಬಿಜೆಪಿಯಲ್ಲಿರುವುದರಿಂದಲೇ.

ಅವರು ಬಿಜೆಪಿ ಸೇರಿರುವುದು ನನಗೇನೂ ಇಷ್ಟದ ವಿಷಯವಲ್ಲ. ಆದರೆ ಅವರ ಸಾಮರ್ಥ್ಯ ಕಾಂಗ್ರೆಸ್ಸಿಗರೂ ಅಚ್ಚರಿಗೊಳ್ಳುವಂತೆ ಬೆಳಕಿಗೆ ಬಂದಿದೆ.ಕಾಂಗ್ರೆಸ್ ಪಕ್ಷದಲ್ಲಿ ಅವಗಣನೆಗೆ ಒಳಗಾದ ದಲಿತರು, ಶೂದ್ರರು ಬಿಜೆಪಿ ಸೇರಿರುವುದು ರಾಜಕೀಯದಲ್ಲಿ‌ ತಮ್ಮ ಅಸ್ತಿತ್ವ ಉಳಿಸಿಕೊಳ್ಳುವ ಉದ್ದೇಶದಿಂದ. ಅವಕಾಶವಂಚಿತರು ಕಾಂಗ್ರೆಸ್ ಪಕ್ಷದಲ್ಲೇ ಇರಬೇಕಿತ್ತು, ತಾತ್ಚಿಕವಾಗಿ ರಾಜಿ ಮಾಡಿಕೊಳ್ಳಬಾರದಿತ್ತು ಎಂದು ಬಯಸುವುದು ವರ್ತಮಾನದ ರಾಜಕಾರಣಕ್ಕೆ ಹೊಂದಿಕೆಯಾಗುವುದಿಲ್ಲ. ತತ್ವ, ಪಕ್ಷ, ನಾಯಕ ನಿಷ್ಠೆಗಳ ಕಾಲ ಯಾವತ್ತೋ ಮುಗಿದಿದೆ. ಈಗೇನಿದ್ದರೂ ಸ್ವಾರ್ಥದ ರಾಜಕಾರಣ.

Girl in a jacket
error: Content is protected !!