ಬೆಂಗಳೂರು, ಜು. 15:ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ ನ ಎರಡನೇ ಆವೃತ್ತಿಯನ್ನು 2022 ರ ಮಾರ್ಚ್ 5 ರಿಂದ ಆರಂಭಿಸಲು ದಿನಾಂಕ ನಿಗದಿ. ಬೆಂಗಳೂರಿನ ಕಂಠೀರವ ಕ್ರೀಡಾಂಗಣದಲ್ಲಿ ಉದ್ಘಾಟನಾ ಕಾರ್ಯಕ್ರಮ ನಡೆಯಲಿದ್ದು, ಪ್ರಧಾನ ಮಂತ್ರಿಯವರನ್ನು ಆಹ್ವಾನಿಸಲು ತೀರ್ಮಾನಿಸಲಾಗಿದೆ.
ಬೆಂಗಳೂರಿನ ವಿಕಾಸ ಸೌಧದಲ್ಲಿ ಇಂದು ನಡೆದ ಸಭೆಯಲ್ಲಿ ಈ ತೀರ್ಮಾನ ಮಾಡಲಾಗಿದೆ. ಡಿಸಿಎಂ ಡಾ. ಅಶ್ವಥನಾರಾಯಣ ಹಾಗೂ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ಸಭೆ ನಡೆಸಲಾಯಿತು. 158 ಯುನಿವರ್ಸಿಟಿಯಿಂದ 3182 ಕ್ರೀಡಾಪಟುಗಳು ಪಾಲ್ಗೊಳ್ಳಲಿದ್ದಾರೆ. ತಾಂತ್ರಿಕ ಅಧಿಕಾರಿಗಳು, ಸಹಾಯಕ ಸಿಬ್ಬಂದಿ ಸೇರಿದಂತೆ ಒಟ್ಟು 6 ಸಾವಿರ ಜನರು ಭಾಗವಹಿಸಲಿದ್ದಾರೆ.
12 ದಿನಗಳ ಕಾಲ ನಡೆಯುವ ಕ್ರೀಡಾಕೂಟದಲ್ಲಿ ಒಟ್ಟು 18 ಕ್ರೀಡೆಗಳನ್ನು ಆಯೋಜಿಸಲಾಗಿದ್ದು, ಇದರ ಜೊತೆಗೆ ಆತಿಥೆಯ ರಾಜ್ಯವಾಗಿ ಕರ್ನಾಟಕವು ಕರಾಠೆಯನ್ನು ಸೇರಿಸಿದೆ. ವಸತಿ, ಸಾರಿಗೆ, ಕ್ರೀಡಾ ಮೂಲಭೂತ ಸೌಕರ್ಯ, ಕ್ರೀಡಾ ಸಾಮಗ್ರಿ, ಆತಿಥೇಯ ನಗರದಲ್ಲಿ ಪ್ರಚಾರ ಮತ್ತು ಊಟೋಪಚಾರ ವ್ಯವಸ್ಥೆಯನ್ನು ರಾಜ್ಯ ಸರ್ಕಾರ ಹಾಗೂ ಆತಿಥೇಯ ಯುನಿವರ್ಸಿಟಿ ನೋಡಿಕೊಳ್ಳಲಿದೆ.
ಖೇಲೊ ಇಂಡಿಯಾ ಯುನಿವರ್ಸಿಟಿ ಗೇಮ್ಸ್ ನ ಎರಡನೇ ಆವೃತ್ತಿಗೆ ರೂ. 40 ಕೋಟಿ ಬೇಕಾಗಬಹುದು ಎಂದು ಅಂದಾಜಿಸಲಾಗಿದ್ದು, ರಾಜ್ಯ ಸರ್ಕಾರ ರೂ. 20 ಕೋಟಿ ಅನುದಾನ ನೀಡಲಿದೆ.
ಕ್ರೀಡಾಕೂಟದ ಸಂಘಟನೆಗಾಗಿ ಉನ್ನತಾಧಿಕಾರ ಸಮಿತಿ ರಚಿಸಲಾಗುವುದು. ಆಯವ್ಯಯಕ್ಕೆ ಅನುಮೋದನೆ ಸೇರಿದಂತೆ ಪ್ರಮುಖ ನಿರ್ಧಾರ ಕೈಗೊಳ್ಳಲು ಮುಖ್ಯಮಂತ್ರಿಗಳ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗುವುದು. ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಚಿವ ಡಾ. ನಾರಾಯಣಗೌಡ ಅವರ ನೇತೃತ್ವದಲ್ಲಿ ಕಾರ್ಯಕಾರಿ ಸಮಿತಿ ರಚಿಸಲಾಗುವುದು. ಇದರ ಜೊತೆಗೆ ಇನ್ನೂ ಕೆಲವು ಸಮಿತಿಗಳನ್ನು ರಚಿಸಿ ಜವಾಬ್ದಾರಿ ವಹಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಖೇಲೋ ಇಂಡಿಯಾ ಯುನಿವರ್ಸಿಟಿ ಗೇಮ್ಸ್ -2022 ರ ಮೊದಲ ಸಭೆ ಇದಾಗಿದ್ದು, ಸಮಿತಿ ರಚನೆ ಬಳಿಕ ಮತ್ತೆ ಸಭೆ ನಡೆಸಲು ಉದ್ದೇಶಿಸಲಾಗಿದೆ.
ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಡಾ. ಶಾಲೀನಿ ರಜನೀಶ್, ಆಯುಕ್ತ ಡಾ. ಗೋಪಾಲ ಕೃಷ್ಣ, ಖೇಲೊ ಇಂಡಿಯಾದ ಮುಖ್ಯಸ್ಥರು, ರಾಜೀವ್ ಗಾಂಧಿ ವಿವಿ ಹೂಗೂ ಜೈನ್ ವಿವಿ ಮುಖ್ಯಸ್ಥರು ಹಾಗೂ ಮತ್ತಿತರ ಪ್ರಮುಖರು ಸಭೆಯಲ್ಲಿ ಭಾಗವಹಿಸಿದ್ದರು.