ಐದು ರಾಜ್ಯ ವಿಧಾನ ಸಭಾ ಚುನಾವಣೆಯಲ್ಲಿ ದೂಳೀಪಟವಾಗಿರುವ ಕಾಂಗ್ರೆಸ್ ತಪ್ಪುಗಳಿಂದ ಪಾಠ ಕಲಿಯುವುದಕ್ಕೂ ಎಳ್ಳುನೀರು ಬಿಟ್ಟಿದೆ. ಸೋಲಿಗೆ ಯಾರು ಕಾರಣ ಏನು ಕಾರಣ ಎನ್ನುವುದರ ಆತ್ಮಾವಲೋಕನ ಅದಕ್ಕೆ ಬೇಕಾಗಿಲ್ಲ. ಈ ಹಿಂದಿನ ಚುನಾವಣೆಗಳಲ್ಲಿ ಸೋಲಿಗೆ ಕಾರಣರಾದವರೆ ಈ ಬಾರಿಯ ಸೋಲಿಗೂ ಕಾರಣವಾಗಿರುವುದು ಮತ್ತು ಸೋನಿಯಾ ಗಾಂಧಿ ಪಟಾಲಮ್ಮು ಆರೋಪಿಯಾಗಿರುವುದು ಆಕಸ್ಮಿಕವೂ ಅಲ್ಲ; ಕಾಕತಾಳಿಯವೂ ಅಲ್ಲ.
ಹೀಗೂ ಕಸ ಗುಡಿಸಬಹುದೆ?
ಕಸ ಗುಡಿಸುವುದು ಎಂದರೆ ಹೇಗೆ ಎನ್ನುವುದನ್ನು ಅರ್ಥ ಮಾಡಿಕೊಳ್ಳುವ ಅಗತ್ಯವಿರುವವರು ಪಂಜಾಬ್ ವಿಧಾನ ಸಭಾ ಚುನಾವಣಾ ಫಲಿತಾಂಶವನ್ನು ನೋಡಬೇಕು. ಕಾಂಗ್ರೆಸ್ ಆಡಳಿತ ಸಾಕು; ಬಿಜೆಪಿ ಬೇಡ; ಶಿರೋಮಣಿ ಅಕಾಲಿದಳದ ಸಹವಾಸ ಸಾಕೋಸಾಕು ಎಂಬ ತೀರ್ಮಾನಕ್ಕೆ ಬಂದಿರುವ ಅಲ್ಲಿಯ ಮತದಾರರು ಆಮ್ ಆದ್ಮಿ ಪಕ್ಷವನ್ನು (ಆಪ್) ಆ ವಿಧಾನ ಸಭೆ ಹಿಂದೆಂದೂ ಕಾಣದ ಬಹುಮತದೊಂದಿಗೆ ಆಯ್ಕೆ ಮಾಡಿದ್ದಾರೆ. ಆಪ್‌ನ ಚುನಾವಣಾ ಚಿಹ್ನೆ ಪೊರಕೆ ಎನ್ನುವುದು ನಿಮಿತ್ತ ಮಾತ್ರ. ಪಂಜಾಬ್ ವಿಧಾನ ಸಭಾ ಸಾಮರ್ಥ್ಯ ೧೧೭ ಸೀಟು. ಇದರಲ್ಲಿ ೯೨ ಸೀಟುಗಳನ್ನು ಬಾಚಿಕೊಂಡಿರುವ ಆಪ್ ಉಳಿದೆಲ್ಲ ರಾಷ್ಟ್ರೀಯ, ಪ್ರಾದೇಶಿಕ ಪಕ್ಷಗಳನ್ನು ಅಕ್ಷರಶಃ ಅಪ್ರಸ್ತುತವನ್ನಾಗಿಸಿದೆ. ಮೂರು ದಶಕದ ಹಿಂದಿನವರೆಗೂ ತಾನುಂಟೋ ಮೂಲೋಕವೊಂಟೋ ಎಂಬ ಅಹಂಕಾರದಲ್ಲಿ ಬೀಗುತ್ತಿದ್ದ ದೇಶದ ಅತ್ಯಂತ ಹಿರಿಯ ಪಕ್ಷ ಕಾಂಗ್ರೆಸ್ಸು ಪಂಜಾಬ್ ಜೊತೆಜೊತೆಗೇ ಉತ್ತರ ಪ್ರದೇಶದಲ್ಲಿಯೂ ನೆಲಕಚ್ಚಿರುವ ಪರಿಯನ್ನು ನೋಡಿದರೆ ಭವಿಷ್ಯದಲ್ಲಿ ಅದರ ಚೇತರಿಕೆ ವಿಚಾರದಲ್ಲಿ ಅನುಮಾನ ಮೂಡುತ್ತದೆ.
ಪಂಜಾಬಿನಲ್ಲಿ ಐದು ವರ್ಷ ಅಧಿಕಾರದಲ್ಲಿದ್ದ ಕಾಂಗ್ರೆಸ್‌ನ ಹೀನಾಯ ಹಿನ್ನಡೆಗೆ ಕಾರಣವನ್ನು ಪಕ್ಷದ ದೆಹಲಿ ಹಂತದ ನಾಯಕತ್ವದ ಬೇಜವಾಬ್ದಾರಿಯಲ್ಲಿ ಗುರುತಿಸಬಹುದು. ಐದು ವರ್ಷದ ಹಿಂದೆ ಆ ರಾಜ್ಯದಲ್ಲಿ ಇದ್ದುದು ಶಿರೋಮಣಿ ಅಕಾಲಿದಳ/ ಬಿಜೆಪಿ (ಎನ್‌ಡಿಎ) ಸರ್ಕಾರ. ಸ್ಥಳೀಯವಾಗಿ ಪಂಜಾಬಿಗಳಲ್ಲಿ ಎಣೆಯಿಲ್ಲದ ಸಂಪತ್ತಿದೆ; ಕೃಷಿ ಹೈನುಗಾರಿಕೆ ಮೂಲಕ ಬಂದ ಆರ್ಥಿಕ ಬಲ ಕಾರಣವಾದ ಸುಖ ವೈಭೋಗವಿದೆ. ಹೊರಗಿನಿಂದ ನೋಡುವವರಿಗೆ ಪಂಜಾಬಿಗಳ ಮುಂದೆ ಸುಖವೈಭವ ಕಾಲು ಮುರಿದುಕೊಂಡು ಬಿದ್ದಿದೆ. ಆದರೆ ವಾಸ್ತವ ಬೇರೆ. ಹಣ ಸಂಪತ್ತು ಸುಖನೆಮ್ಮದಿಯನ್ನು ಎಲ್ಲ ಕಾಲಕ್ಕೂ ತರುವುದಿಲ್ಲ. ಅಲ್ಲಿಯ ಜನರಿಗೆ ಎಲ್ಲವೂ ಇದ್ದೂ ಇಲ್ಲದಂತೆ ಮಾಡಿರುವುದು; ಸುಖದ ತೃಪ್ತಿ ಮರೀಚಿಕೆ ಆಗುವಂತೆ ಮಾಡಿರುವುದು ಅಲ್ಲಿಯ ಯುಜನರನ್ನು ಹಿಂಡಿಹಿಪ್ಪೆ ಮಾಡಿರುವ ವ್ಯಸನ. ಮಾದಕ ವಸ್ತು ಮತ್ತು ಕುಡಿತದ ವ್ಯಸನ ರಾಜ್ಯದ ಯುಜನತೆಯಲ್ಲಿ ಸರ್ವೆಸಾಮಾನ್ಯವಾಗಿದೆ. ವ್ಯಸನ ಮುಕ್ತ ಸಮಾಜ ಮಾಡಿರಿ ಎನ್ನುವುದು ಎಲ್ಲ ರಾಜಕೀಯ ಪಕ್ಷಗಳ ಮುಂದೆ ಪಂಜಾಬಿಗಳ ಮುಖ್ಯವಾಗಿ ಹಿರಿಯರ ಬಯಕೆ, ಒತ್ತಾಸೆಯಾಗಿತ್ತು. ಶಿರೋಮಣಿ ಅಕಾಲಿ ದಳ/ ಬಿಜೆಪಿ ಸರ್ಕಾರ ಆ ಮನವಿಗೆ ಕಿವಿಗೊಡಲಿಲ್ಲ. ಬದಲಿಗೆ ಆ ಪಕ್ಷಗಳ ಮುಖಂಡರನೇಕರು ವ್ಯಸನಕ್ಕೆ ಕಾರಣವಾದ ಮಾಫಿಯಾ ಜೊತೆ ಕೈ ಜೋಡಿಸಿದರು.
ಜನಕ್ಕೆ ಸಾಕುಸಾಕೆನಿಸಿತ್ತು. ಆ ಹೊತ್ತಿಗೆ ರಾಜ್ಯದ ಆಶಾಕಿರಣವಾಗಿ ಕ್ಯಾಪ್ಟನ್ ಅಮರೀಂದರ್ ಸಿಂಗ್ ಬಂದರು. ಜನ ಅವರನ್ನು ನಂಬಿ ಕಾಂಗ್ರೆಸ್‌ಗೆ ಓಟು ಹಾಕಿದರು. ಆದರೆ ಅಮರೀಂದರ್‌ಗೆ ಪೂರ್ಣ ಸ್ವಾತಂತ್ರ್ಯವನ್ನು ಅವರದೇ ಪಕ್ಷ ಕೊಡಲಿಲ್ಲ. ಬಿಜೆಪಿ ತೊರೆದು ಕಾಂಗ್ರೆಸ್‌ಗೆ ಬಂದಿದ್ದ ನವಜೋತಸಿಂಗ್ ಸಿಧು ಎಂಬ ಕಮೆಡಿಯನ್ ಜೊತೆಯಲ್ಲಿ ಪ್ರಿಯಾಂಕಾ ಗಾಂಧಿ, ರಾಹುಲ್ ಗಾಂಧಿ ನಿಂತರು. ಮಕ್ಕಳು ಮಾಡುತ್ತಿರುವ ರಾಜಕೀಯ ಸರಿಯಲ್ಲವೆಂದು ಸೋನಿಯಾ ಹೇಳಲಿಲ್ಲ. ಪರಿಣಾಮ, ಅಮರೀಂದರ್ ಕಾಂಗ್ರೆಸ್‌ಗೆ ವಿದಾಯ ಹೇಳಿದರು. ಆದರೆ ಬಿಜೆಪಿ ಜೊತೆ ಕೈಜೋಡಿಸಿ ತಪ್ಪು ಮಾಡಿದ ರಾಜಕೀಯ ಅವರಿಗೆ ಏನನ್ನೂ ತರಲಿಲ್ಲ. ಕಾಂಗ್ರೆಸ್ ಮಾತ್ರ ಹೇಳಹೆಸರಿಲ್ಲದಂತೆ ನಿರ್ನಾಮವಾಯಿತು. ಅಲ್ಲಿ ಈಗ ಆಪ್ ಆಡಳಿತ. ಜನ ಬಯಸಿದ ವ್ಯಸನಮುಕ್ತ ಸಮಾಜವನ್ನು ಸೃಷ್ಟಿಸುವ ಹೊಣೆ ಆಪ್ ನಾಯಕತ್ವದ ಮೇಲಿದೆ. ಆದೀತೇ…? ಗೊತ್ತಿಲ್ಲ. ಚುನಾವಣೋತ್ತರ ನಡೆದ ಆಪ್ ರ‍್ಯಾಲಿಯಲ್ಲಿ ಖಲಿಸ್ತಾನ್ ಜಿಂದಾಬಾದ್, ಪಾಕಿಸ್ತಾನ್ ಜಿಂದಾಬಾದ್ ಎಂಬಂಥ ಘೋಷಣೆ ಮೊಳಗಿರುವುದು ವರದಿಯಾಗಿದೆ. ಘೋಷಣೆ ಮಾಡಿದವರು ಆಪ್ ಕಾರ್ಯಕರ್ತರೇ ಆಗಿದ್ದಲ್ಲಿ ಆ ಪಕ್ಷಕ್ಕೂ ಮುಂದೆ ಸಂಕಷ್ಟದ ಕಾಲ ಕಾಡಲಿದೆ.
ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್‌ನದು ಶಬ್ದಕ್ಕೆ ನಿಲುಕದ ಪರಾಭವ. ಆ ರಾಜ್ಯವನ್ನು ಶತಾಯಗತಾಯ ತೆಕ್ಕೆಗೆ ತೆಗೆದುಕೊಳ್ಳುವ ಮತ್ತು ಅಲ್ಲಿ ಕಾಂಗ್ರೆಸ್ ಆಳ್ವಿಕೆಯನ್ನು ಪುನಃ ಸ್ಥಾಪಿಸುವ ಪ್ರಿಯಾಂಕಾ ಗಾಂಧಿ ಯತ್ನ ಹೊಳೆಯಲ್ಲಿ ಹುಣಿಸೆ ಹಣ್ಣು ತೊಳೆದಂತಾಗಿದೆ. ರಾಜ್ಯದಲ್ಲಿ ಪಕ್ಷ ಅಧಿಕಾರಕ್ಕೆ ಬಂದೇ ಬರುತ್ತದೆ; ಪ್ರಿಯಾಂಕಾ ಗಾಂಧಿ ಮುಖ್ಯಮಂತ್ರಿ ಆಗುತ್ತಾರೆ ಎಂಬ ಕಾರ್ಯಕರ್ತರ ಪ್ರಚಾರಕ್ಕೆ ಮತದಾರರು ತೆರೆ ಎಳೆದಿದ್ದಾರೆ. “ನಾನು ಹೆಣ್ಣು, ನಾನು ಹೋರಾಡುತ್ತೇನೆ” “ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗುವ ಅರ್ಹತೆ ಯೋಗ್ಯತೆ ನನಗಲ್ಲದೆ ಬೇರೆ ಯಾರಿಗೆ ಇದೆ” ಎಂಬಂಥ ಪ್ರಿಯಾಂಕಾ ಮಾತುಗಳಿಗೆ ಜನ ಕವಡೆ ಕಾಸಿನ ಕಿಮ್ಮತ್ತನ್ನೂ ನೀಡಿಲ್ಲ ಎನ್ನುವುದು ಆಶ್ಚರ್ಯಕರವೇನೂ ಅಲ್ಲ. ಐದು ವರ್ಷದ ಹಿಂದೆ ಕಾಂಗ್ರೆಸ್ಸು ಆ ರಾಜ್ಯದಲ್ಲಿ ಏಳು ಸ್ಥಾನ ಗಳಿಸಿತ್ತು. ಪ್ರಿಯಾಂಕಾ ಕಾರಣವಾಗಿ ಇಬ್ಬರು ಶಾಸಕರು ಪಕ್ಷಕ್ಕೆ ಟಾಟಾ ಹೇಳಿದ್ದರು. ಈ ಬಾರಿ ಗೆದ್ದವರು ಕೇವಲ ಇಬ್ಬರು ಮಾತ್ರ.
ಕಳೆದ ಲೋಕಸಭಾ ಚುನಾವಣೆಯಲ್ಲಿ ೮೦ ಸ್ಥಾನದ ಪೈಕಿ ಸೋನಿಯಾ ಗಾಂಧಿ ಮಾತ್ರವೇ ರಾಯ್‌ಬರೈಲಿ ಕ್ಷೇತ್ರದಿಂದ ಗೆದ್ದಿದ್ದರು. ಅಮೇಠಿಯಲ್ಲಿ ರಾಹುಲ್ ಗಾಂಧಿ ಸೋತಿದ್ದರು. ಬರಲಿರುವ ಲೋಕಸಭಾ ಚುನಾವಣೆಯಲ್ಲಿ ಸೋನಿಯಾ ಗಾಂಧಿ ಅಲ್ಲಿಂದಲೇ ಸ್ಪರ್ಧಿಸುವ ಸಾಹಸ ಮಾಡಿಯಾರೇ…? ಕಳೆದುಕೊಂಡಿದ್ದನ್ನು ಕಳೆದುಕೊಂಡಲ್ಲೇ ಹುಡುಕಬೇಕೆಂದು ರಾಹುಲ್ ಗಾಂಧಿ ಮತ್ತೆ ಅಮೇಠಿಯತ್ತ ದೃಷ್ಟಿ ಹರಿಸಿಯಾರೆ…? ಈ ಎರಡು ಪ್ರಶ್ನೆಗಳು ಉತ್ತರ ಪ್ರದೇಶದ ಆ ಮೂಲಕ ದೇಶದ ಕಾಂಗ್ರೆಸ್ ಸ್ಥಿತಿಯನ್ನು ಅವಲೋಕಿಸಲಿವೆ. ಸೋನಿಯಾ ಗಾಂಧಿಯವರಿಗೆ ಆರೋಗ್ಯ ಸರಿಯಾಗಿಲ್ಲ. ಸಣ್ಣಪುಟ್ಟ ಸಭೆಗಳನ್ನುದ್ದೇಶಿಸಿ ಅಥವಾ ದೊಡ್ಡ ದೊಡ್ಡ ರ‍್ಯಾಲಿಯಲ್ಲಿ ಪಾಲ್ಗೊಂಡು ಭಾಷಣಗಳ ಮೂಲಕ ಜನರನ್ನು ಸೆಳೆಯುವುದು ಅವರಿಗೆ ಕಷ್ಟವಾಗುತ್ತದೆ. ದೆಹಲಿಯಲ್ಲಿ ಮನೆಯಲ್ಲೇ ಕುಳಿತು ಓಟು ಹಾಕುವಂತೆ ಮಾಡಿಕೊಳ್ಳುವ ಮನವಿಗೆ ಜನ ಸ್ಪಂದಿಸಿಯಾರೆಂಬ ಭರವಸೆ ಇಲ್ಲ. ಸುರಕ್ಷಿತ ಕ್ಷೇತ್ರ ಎನ್ನುವುದು ಕಾಂಗ್ರೆಸ್ ಪಾಲಿಗೆ ಉತ್ತರ ಭಾರತದಲ್ಲಿಲ್ಲ.
ರಾಜಸ್ತಾನ, ಚತ್ತೀಸಘಡದಲ್ಲಿ ಕಾಂಗ್ರೆಸ್ ಸರ್ಕಾರವಿದೆ. ಆದರೆ ಸೋನಿಯಾರನ್ನು ಅಲ್ಲಿ ಕಣಕ್ಕೆ ಇಳಿಸಿ ಗೆಲ್ಲಿಸಿ ಕಳಿಸುವ ಸಾಮರ್ಥ್ಯ ಆ ಎರಡೂ ರಾಜ್ಯದ ಕಾಂಗ್ರೆಸ್‌ಗೆ ಇಲ್ಲ. ತುರ್ತು ಪರಿಸ್ಥಿತಿ ನಂತರದ ಚುನಾವಣೆಯಲ್ಲಿ ಅಂದಿನ ಪ್ರಧಾನಿ ಇಂದಿರಾ ಗಾಂಧಿ ಅವರ ಮಗ ಸಂಜಯ್ ಗಾಂಧಿ ಸೋತು ಹೋಗಿದ್ದರು. ಆದರೆ ೧೯೭೯ರಲ್ಲಿ ಇಂದಿರಾರನ್ನು ಚಿಕ್ಕಮಗಳೂರು ಕ್ಷೇತ್ರದಿಂದ ಗೆಲ್ಲಿಸಿ ಲೋಕಸಭೆಗೆ ಕಳಿಸಲಾಗಿತ್ತು. ಈ ಜವಾಬ್ದಾರಿಯನ್ನು ಸಂಪೂರ್ಣವಾಗಿ ಹೊತ್ತಿದ್ದವರು ದೇವರಾಜ ಅರಸು. ರಾಜಸ್ತಾನದಲ್ಲಾಗಲೀ ಚತ್ತೀಸಘಡದಲ್ಲಾಗಲೀ ಅರಸು ಸಾಮರ್ಥ್ಯಕ್ಕೆ ಸರಿಸಮ ವ್ಯಕ್ತಿತ್ವದವರಿಲ್ಲ. ಇದು ಸೋನಿಯಾಗೂ ಗೊತ್ತಿದೆ. ಕಳೆದ ಬಾರಿ ಅಮೇಠಿ ಜೊತೆಗೆ ಕೇರಳದ ವೈನಾಡಿನಲ್ಲಿ ಸ್ಪರ್ಧಿಸಿದ್ದ ರಾಹುಲ್ ಅಲ್ಲಿ ಗೆದ್ದಿದ್ದರು. ಸೋನಿಯಾಗೂ ದಕ್ಷಿಣದ ರಾಜ್ಯವೊಂದು ಅಭಯಹಸ್ತ ಚಾಚಬಲ್ಲುದೆ ಈಗಲೇ ಹೇಳುವುದು ಕಷ್ಟ.
ಸೋನಿಯಾ ಲೋಕಸಭೆಗೆ ಸ್ಪರ್ಧಿಸುವ ಧೈರ್ಯ ಮಾಡುವುದು ಬೇಡ ಎಂಬ ಸಲಹೆ ಒಳ ವಲಯದಲ್ಲಿದೆ. ಗೆಲ್ಲುವುದು ಕಷ್ಟ ಎನ್ನುವುದು ಒಂದಾದರೆ ಸೋತರೆ ಅದನ್ನು ಅರಗಿಸಿಕೊಳ್ಳುವುದು ಇನ್ನೂ ಕಷ್ಟ ಎಂಬುದು ಸಲಹೆಗೆ ಕಾರಣ. ರಾಹುಲ್ ಉತ್ತೇಜಿಸುತ್ತಿರುವ ಗುಂಪುಗಾರಿಕೆ ಕಾರಣವಾಗಿ ಕೇರಳದಲ್ಲಿ ಕಾಂಗ್ರೆಸ್ ಪಕ್ಷ ಮೇಲಿನಿಂದ ಕೆಳಗಿನವರೆಗೂ ಸೀಳಿಹೋಗಿದೆ. ಏಐಸಿಸಿ ಪ್ರಧಾನ ಕಾರ್ಯದರ್ಶಿಯೂ ಆಗಿರುವ ಕೆ.ಸಿ.ವೇಣುಗೋಪಾಲ್ ಅವರಿಗೆ ಒತ್ತಾಸೆಯಾಗಿ ರಾಹುಲ್ ನಿಂತಿದ್ದು ಅಲ್ಲಿ ಪಕ್ಷದ ಒಡಕಿಗೆ ಕಾರಣವಾಗಿದೆ ಎಂಬ ಮಾತು ಬಹಿರಂಗವಾಗಿಯೇ ಕೇಳಿಬರುತ್ತಿದೆ. ಇಂಥದೇ ಸ್ಥಿತಿ ಸೋನಿಯಾರನ್ನು ಆರಿಸಿ ಕಳಿಸುವ ರಾಜ್ಯದ ಕಾಂಗ್ರೆಸ್ಸಿಗೂ ಬರಲಾರದೆ ಎಂಬ ಸಂಶಯದಲ್ಲಿ ಇದೆಲ್ಲ ಮಾತುಕತೆ ನಡೆಯುತ್ತಿದೆ.
ಸೋನಿಯಾ ಸ್ವತಃ ತಮಿಳುನಾಡು ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಜೊತೆ ಮಾತಾಡಿ ನೆರವು ಯಾಚಿಸಿದರೆ ಡಿಎಂಕೆ ಬೆಂಬಲದಿಂದ ಲೋಕಸಭೆಗೆ ಆಯ್ಕೆ ಆಗಬಹುದು ಎನ್ನಲಾಗುತ್ತಿದೆ. ಅದಕ್ಕೆ ಸೋನಿಯಾ ಗಾಂಧಿಯವರು ಸ್ಟಾಲಿನ್ ಮುಂದೆ ಸೆರಗೊಡ್ಡಿ ಯಾಚಿಸಬೇಕಿದೆ. ಕೃಪಾಭಿಕ್ಷೆಯನ್ನು ಅಷ್ಟೆಲ್ಲ ಸುಲಭದಲ್ಲಿ ಕರುಣಿಸುವ ಕರುಣಾಳು ಸ್ವಭಾವ ಸ್ಟಾಲಿನ್ ಅವರದಲ್ಲ. ಕರ್ನಾಟಕದಲ್ಲಿ ಕಾಂಗ್ರೆಸ್ ಇದೆ. ಆದರೆ ದೇವರಾಜ ಅರಸು ಇಲ್ಲ. ಇಲ್ಲಿಯ ಹಾಲಿ ಕಾಂಗ್ರೆಸ್ ಸ್ಥಿತಿ ಅರಸು ಕಾಲದಲ್ಲಿದ್ದಂತೆಯೂ ಇಲ್ಲ. ಕಳೆದ ಲೋಕಸಭಾ ಚುನಾವಣೆಯಲ್ಲಿ ೨೮ರಲ್ಲಿ ಒಂದು ಸೀಟನನ್ನು ಮಾತ್ರವೇ ಗೆದ್ದ ಕಾಂಗ್ರೆಸ್ ಪಕ್ಷಕ್ಕೆ ಸೋನಿಯಾರನ್ನು ಗೆಲ್ಲಿಸಿಕೊಡುವ ಧೈರ್ಯ ಇಲ್ಲವೇ ಇಲ್ಲ. ರಾಜ್ಯದಲ್ಲಿ ಬೆಂಗಳೂರು ಗ್ರಾಮಾಂತರ ಕಾಂಗ್ರೆಸ್‌ಗೆ ಸೇಫ್ ಸೀಟು ಎನ್ನಲಾಗುತ್ತಿದೆ. ಆ ಪಕ್ಷದ ಏಕೈಕ ಮತ್ತು ಕ್ಷೇತ್ರದ ಹಾಲಿ ಸದಸ್ಯ ಡಿ.ಕೆ. ಸುರೇಶರ ಬದಲಿಗೆ ಸೋನಿಯಾರನ್ನು ಅಲ್ಲಿ ಕಣಕ್ಕೆ ಇಳಿಸುವುದಕ್ಕೆ ಸ್ವತಃ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ರವರೇ ಒಪ್ಪಲಿಕ್ಕಿಲ್ಲ! ಬ್ಲಡ್ ಈಸ್ ಥಿಕ್ಕರ್ ದ್ಯಾನ್ ವಾಟರ್ ಎನ್ನುವುದು ಡಿಕೆಶಿ ಜಾಯಮಾನ. ಇಷ್ಟಕ್ಕೂ ಲೋಕಸಭಾ ಚುನಾವಣೆಗೆ ಮೊದಲೇ ಕರ್ನಾಟಕ ವಿಧಾನಸಭಾ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಒಂದು ರೀತಿ ಬಾರದಿದ್ದರೆ ಪಕ್ಷಕ್ಕೆ ಮತ್ತೊಂದು ಭೀತಿ.
ಅನಾರೋಗ್ಯದಲ್ಲಿ ಬಳಲುತ್ತಿರುವ ಸೋನಿಯಾರನ್ನು ಕರೆತಂದು ಕಣಕ್ಕೆ ಇಳಿಸಬೇಕೆ ಬದಲಿಗೆ ಪ್ರಿಯಾಂಕಾರಿಗೆ ಅನುವು ಮಾಡಿಕೊಡಬಾರದೇಕೆ ಎಂಬ ವಿಚಾರವೂ ಕಾಂಗ್ರೆಸ್ ವಲಯದಲ್ಲಿ ಗಂಭೀರವಾಗಿ ಚರ್ಚೆಯಾಗುತ್ತಿದೆ. ರಾಜಸ್ತಾನದಂಥ ಪಕ್ಷದ ಆಡಳಿತವಿರುವ ರಾಜ್ಯದಿಂದ ಸೋನಿಯಾರನ್ನು ರಾಜ್ಯಸಭೆಗೆ ಕರೆತರುವುದರಿಂದ ಚುನಾವಣಾ ಸೋಲಿನ ಭಯದಿಂದ ಪಾರಾಗಬಹುದೆಂಬ ಲೆಕ್ಕಾಚಾರವೂ ನಡೆದಿದೆ. ಪ್ರಿಯಾಂಕಾ ಕರ್ನಾಟಕದಿಂದ; ರಾಹುಲ್ ಕೇರಳದಿಂದ; ಸೋನಿಯಾ ರಾಜಸ್ತಾನದಿಂದ ಎನ್ನುವುದು ಕೇಳುವುದಕ್ಕೆ ಚೆನ್ನಾಗಿ ಇರುತ್ತದೆ. ಆದರೆ ಈ ಮೂವರೂ ಒಲ್ಲೆ ಎನ್ನುವ ಉತ್ತರ ಪ್ರದೇಶದಲ್ಲಿ ಕಾಂಗ್ರೆಸ್ ಗತಿ ಏನಾಗಬಹುದು…? ಶಾಶ್ವತವಾಗಿ ಆ ರಾಜ್ಯದಿಂದ ಸ್ವತಃ ಗಡಿಪಾರಾಗಲು ಪಕ್ಷ ಬಯಸುತ್ತದೆಯೇ ಎಂಬ ಪ್ರಶ್ನೆಯೂ ಎದ್ದಿದೆ.