ಸಾಂಬಶಿವಶೆಟ್ಟಿ ಮತ್ತು ಸೈಕಲ್
ಇತ್ತಿಚೆಗೆ ಶಾಲಾ ವೇಳೆಗಿಂತ ಒಂದು ಗಂಟೆ ಮುಂಚಿತವಾಗಿಯೇ ಮನೆಯನ್ನು ಬಿಡುವ ಅಭ್ಯಾಸವೊಂದನ್ನು ರೂಢಿ ಮಾಡಿಕೊಂಡಿದ್ದೆ. ನಾನಿನ್ನೂ ಆಗ ಪ್ರಾಥಮಿಕ ಶಾಲೆಯ ಎರಡನೇ ತರಗತಿಯ ವಿದ್ಯಾರ್ಥಿ. ಹತ್ತು ಗಂಟೆಗೆ ಶುರುವಾಗುವ ಶಾಲೆಗೆ ಬೆಳಿಗ್ಗೆ ಒಂಬತ್ತು ಗಂಟೆಗೇ ಮನೆ ತೊರೆಯುವ ನನ್ನ ಆತುರವನ್ನು ನೋಡಿ ಅವ್ವ “ಏನೋ, ಮಠದಲ್ಲಿ ಕಸ ಹೊಡೆಯಲು ಜವಾನ ಇಲ್ಲವೇ? ಇಷ್ಟು ಜಲ್ದಿ ಮಠಕ್ಕೆ ಹೋಗಿ ಏನು ಕಿಸಿಯುತ್ತೀಯಾ? ನಾನೇ ನಾಳೆ ಮಠಕ್ಕೆ ಬಂದು ನೆವ್ವಾರರ ಲೋಕಪ್ಪನನ್ನು ಕೇಳುತ್ತೇನೆ ತಾಳು”ಎಂದು ಆಗಾಗ ನನ್ನ ಕಾಲು ಎಳೆಯುತ್ತಲೇ ಇರುತ್ತಿದ್ದಳು. ನಾನು ಸ್ಕೂಲಿನ ಹಾದಿಯಲ್ಲಿದ್ದ ಗೆಳೆಯರ ಮನೆಗಳಿಗೆ ಹೋಗಿ ಅವರನ್ನು ಶಾಲೆಗೆ ಕರೆಯುವ ಹೊತ್ತೂ, ಅವರ ಪೋಷಕರವತಿಯಿಂದ ಇಂತಹುದೇ ಪ್ರಶ್ನೆಗಳು ಕೇಳಿ ಬರುತ್ತಿದ್ದವು. “ಇಷ್ಟು ಬೇಗ ಯಾಕೆ ನಮ್ಮ ಹುಡುಗನನ್ನು ಕರೆಯಲು ಬಂದೆ? ಅವನಿನ್ನೂ ಶಾಲೆಗೆ ಹೋಗುವುದಕ್ಕೆ ತಯಾರಾಗಿಲ್ಲ” ಎನ್ನುವ ಸಬೂಬಿನೊಂದಿಗೆ ಹತ್ತು ಹದಿನೈದು ನಿಮಿಷಗಳ ಕಾಲ ನನ್ನನ್ನು ಅವರ ಮನೆಯ ಬಾಗಿಲುಗಳಲ್ಲಿ ಕಾಯಿಸುತ್ತಿದ್ದರು. ಸಹಜವಾಗಿಯೇ ಇದರಿಂದ ಬೇಸತ್ತ ನಾನು ಕೆಲ ದಿನಗಳ ನಂತರದಲ್ಲಿ ಯಾವ ಸಹಪಾಠಿಗಳನ್ನೂ ಒಟ್ಟಿಗೆ ಕರೆದುಕೊಂಡು ಹೋಗುವ ಗೋಜಿಗೆ ಹೋಗದೆ ಒಬ್ಬಂಟಿಯಾಗಿ ಸ್ಕೂಲಿನ ಹಾದಿಯನ್ನು ತುಳಿಯತೊಡಗಿದೆ.
ಬೇಗ ಬೇಗ ಹೆಜ್ಜೆ ಹಾಕುತ್ತಾ, ಊರ ಮುಖ್ಯರಸ್ತೆಯಲ್ಲಿ ಓಡಿಕೊಂಡೇ ಶಾಲೆಗೆ ಹೋಗುತ್ತಿದ್ದವನು, ಕಲ್ಲಪ್ಪ ದೇವಸ್ಥಾನವನ್ನು ದಾಟಿದಂತೆ ಬಲಕ್ಕೆ ಬರುವ ಪರೋತಪ್ಪನವರ ಮನೆಯನ್ನು ಬಿಟ್ಟಂತೆ ಎರಡೋ ಮೂರೋ ಮನೆಗಳನ್ನು ಹಾಯ್ದರೆ ರಸ್ತೆಯ ಬಲಭಾಗದಲ್ಲಿ ಬರುತ್ತಿದ್ದ ಸಾಂಬಶಿವಶೆಟ್ಟರ ಮನೆಯ ಮುಂದೆ ಸರಿಸುಮಾರು ಒಂಬತ್ತೂ ಕಾಲಿನ ವೇಳೆಗೆ ಪ್ರತ್ಯಕ್ಷನಾಗುತ್ತಿದ್ದೆ. ಶೆಟ್ಟರ ಅಂಗಡಿಯ ಮುಂದೆ ನಿಂತು, ಗೋಣನ್ನು ಉದ್ದವಾಗಿ ಹೊರಚಾಚಿ, ಅಂಗಡಿಯ ಬಲಬದಿಯ ಪಡಸಾಲೆಯಲ್ಲಿ ತಮ್ಮ ಸೈಕಲ್ಲನ್ನು ನಿಲ್ಲಿಸಿಕೊಂಡು ಅದರ ಷೋಡಶ ಶೃಂಗಾರದಲ್ಲಿ ತಲ್ಲೀನರಾಗಿರುತ್ತಿದ್ದ ಶೆಟ್ಟರನ್ನು ನೋಡುತ್ತಾ ನಿಲ್ಲುವುದು ನಾನು ಬೇಗನೇ ಮನೆ ಬಿಡುವ ಹಿಂದಿನ ಅಸಲಿ ಉದ್ದೇಶವಾಗಿತ್ತು. ಆ ವೇಳೆಗಾಗಲೇ ಅಂಗಡಿಯ ಗಲ್ಲಾಪೆಟ್ಟಿಗೆ ಮೇಲೆ ಆಸೀನರಾಗಿರುತ್ತಿದ್ದ ಶೆಟ್ಟರ ಪಾಪದ ಹೆಂಡತಿ ರತ್ನಮ್ಮ ನಾನು ಎಷ್ಟು ಹೊತ್ತು ಅಂಗಡಿಯ ಮುಂದೆ ನಿಂತರೂ “ಇಲ್ಲಿ ನಿಲ್ಲಬೇಡ” ಎಂದು ಹೇಳುತ್ತಿರಲಿಲ್ಲ. “ಸ್ವಲ್ಪ ಪಕ್ಕಕ್ಕೆ ಸರಿದು ನಿಂತುಕೋ” ಎಂದು ಅವಳು ಹೇಳಿದಾಗ ಮಾತ್ರ ನನ್ನ ಬಲಭಾಗಕ್ಕೆ ತುಸು ಸರಿದಂತೆ ನಿಲ್ಲುತ್ತಿದ್ದ ನಾನು, ಆ ಹೊತ್ತಿಗಾಗಲೇ ಹೆಚ್ಚಿನ ಸಂಖ್ಯೆಯಲ್ಲಿ ಅಂಗಡಿಗೆ ಧಾವಿಸುತ್ತಿದ್ದ ಗ್ರಾಹಕರಿಗೆ ಯಾವ ರೀತಿಯ ತೊಂದರೆಯೂ ಆಗದಂತೆ ವಿಶೇಷ ಎಚ್ಚರ ವಹಿಸುತ್ತಿದ್ದೆ.
ಸಾಂಬಶಿವಶೆಟ್ಟರ ಏಕೈಕ ಪುತ್ರಿ ಮಂಜುಳಾ ಕಳೆದ ಎರಡು ವರ್ಷಗಳಿಂದ ನಮ್ಮ ಮನೆಗೆ, ಅಪ್ಪನ ಬಳಿ ಪಾಠ ಹೇಳಿಸಿಕೊಳ್ಳಲು ಬರುತ್ತಿದ್ದದ್ದು ರತ್ನಮ್ಮ ನನ್ನ ಬಗ್ಗೆ ಈ ಒಂದು ಧೋರಣೆಯನ್ನು ಪ್ರದರ್ಶಿಸಲು ಕಾರಣವಿದ್ದರೂ ಇರಬಹುದು. ಆ ವೇಳೆಗಾಗಲೇ ಊರಿನ ಹೈಸ್ಕೂಲಿನಲ್ಲಿ ಕಲಿಯುತ್ತಿದ್ದ ಮಂಜುಳಾ, ತಾನು ಶಾಲೆಗೆ ತಯಾರಾಗುವ ಧಾವಂತದಲ್ಲಿ ಮನೆಯ ಮುಂದಿನ ಪಡಸಾಲೆಗೆ ಬಂದು ನನ್ನನ್ನೇನಾದರೂ ನೋಡಿದಳು ಎಂದ ಪಕ್ಷದಲ್ಲಿ “ಪ್ರಕಾಶ, ಅಲ್ಲಿ ಏಕೆ ನಿಂತಿದ್ದೀಯಾ? ಬಾ, ಮನೆಯ ಒಳಗೆ ಬಂದು ನಿಂತುಕೋ” ಎಂದು ತಾಕೀತು ಮಾಡುತ್ತಿದ್ದಳು. “ಅಮ್ಮಾ, ಪ್ರಕಾಶನನ್ನು ಅಲ್ಲೇಕೆ ನಿಲ್ಲಿಸಿಕೊಂಡಿದ್ದೀಯಾ? ಮನೆಯ ಒಳಗೆ ಕರೆಯುವುದಲ್ಲವೇ?” ಎಂದು ಅಮ್ಮನನ್ನು ಆಪೇಕ್ಷಣೆಯ ಧ್ವನಿಯಲ್ಲಿಯೇ ಸಣ್ಣಗೆ ತರಾಟೆಗೆ ತೆಗೆದುಕೊಳ್ಳುತ್ತಿದ್ದವಳು, ಮೂಡು ಬಂತು ಎಂದರೆ ಒಮ್ಮೆಮ್ಮೆ ಅಂಗಡಿಗೂ ಒಂದು, ಅಂಗಡಿಯ ಗಲ್ಲಾಪೆಟ್ಟಿಗೆಯ ಎಡಭಾಗಕ್ಕೆ ಹೊಂದಿಸಿ ಇಡಲಾದ ಮರದ ತೆರೆದ ಕಪಾಟಿನ ಖಾನೆಯೊಂದರಲ್ಲಿ ಇಟ್ಟ ದೊಡ್ಡ ಪ್ಲಾಸ್ಟಿಕ್ ಡಬ್ಬದಿಂದ ಪ್ಯಾರೀಸ್ ಚಾಕೊಲೇಟ್ ಒಂದನ್ನು ತೆಗೆದು ನನಗೆ ಕೊಡುತ್ತಿದ್ದಳು. ಹೀಗೆ ಮಂಜುಳಾ ನನ್ನನ್ನು ನೋಡಿದ ದಿನ ನನ್ನ ಅದೃಷ್ಟ ಖುಲಾಯಿಸಿದಂತೆಯೇ ಸರಿ ಎಂದು ನಾನು ಭಾವಿಸುತ್ತಿದ್ದೆ. ಈ ಭಾವನೆಯ ಉಗಮದಲ್ಲಿ ಆಕೆ ಕೊಡುತ್ತಿದ್ದ ಚಾಕಲೇಟ್ ಸ್ವಾದ ಗೌಣವಾಗಿ, ಶೆಟ್ಟರು ತಮ್ಮ ಸೈಕಲ್ಲಿಗೆ ಮಾಡುತ್ತಿದ್ದ ಪರಿಪರಿಯ ಸಿಂಗಾರಗಳನ್ನು ಕೈ ಅಳತೆಯ ದೂರದಿಂದ ಕಣ್ಣು ತುಂಬಿಸಿಕೊಳ್ಳುವ ವಾಂಛೆ ವಿಪರೀತವಾಗಿರುತ್ತಿತ್ತು.
ಸಣ್ಣಗೆ, ಕುಳ್ಳಗೆ, ಜೋರಾಗಿ ಗಾಳಿ ಬೀಸಿದರೂ ಬಿದ್ದುಹೋಗುವ ಹಾಗಿದ್ದ ಸಾಂಬಶಿವಶೆಟ್ಟರು ಒಂದು ತುಂಡು ಲುಂಗಿಯನ್ನು ಉಟ್ಟು, ಅದನ್ನು ತಮ್ಮ ಮೊಣಕಾಲುಗಳ ಮೇಲೆ ಬರುವ ಹಾಗೆ ಕಟ್ಟಿಕೊಂಡು, ಜಂಪರ್ ಕೂಡ ಹಾಕದ ಬೆತ್ತಲೆ ಮೈಯಲ್ಲಿಯೇ, ಪಡಸಾಲೆಯ ಮಧ್ಯಭಾಗದಲ್ಲಿ ನಿಲ್ಲಿಸಿಕೊಂಡಿದ್ದ ತಮ್ಮ ಸೈಕಲ್ಲಿನ ಆರೈಕೆಯಲ್ಲಿ ತಲ್ಲೀನರಾದರು ಎಂದರೆ ಸಮಯದ ಪರವೆಯೇ ಇರದೆ ತಮ್ಮ ಕಾಯಕದಲ್ಲಿ ಮುಳುಗಿ ಹೋದರು ಎಂದೇ ಅರ್ಥ. ಶೆಟ್ಟರ ಈ ಅವಾಂತರವನ್ನು ಅಂಗಡಿಯ ಗಲ್ಲಾಪೆಟ್ಟಿಗೆಯ ಮೇಲೆ ಕುಳಿತು ಕಣ್ಣಂಚಿನಲ್ಲಿಯೇ ಗಮನಿಸುತ್ತಿದ್ದ ರತ್ನಮ್ಮ , ಶೆಟ್ಟರ ಕೆಲಸಕ್ಕೆ ಅಡಚಣೆ ತರುವ ಸಾಹಸಕ್ಕೆ ಎಂದೂ ಮುಂದಾಗುತ್ತಿರಲಿಲ್ಲ. ಶಾಲೆಗೆ ಹೊರಟ ಮಗಳು “ಹೋಗಿ ಬರುತ್ತೇನೆ ಅಪ್ಪಾ” ಎಂದು ಶೆಟ್ಟರಿಗೆ ಕೂಗಿ ಹೇಳಿ ಮನೆಯಿಂದ ಹೊರ ನಡೆಯುವ ಹೊತ್ತೂ ಸೈಕಲ್ಲಿನ ಮೇಲೆ ಕೀಲಿಸಿದ್ದ ತಮ್ಮ ಕಣ್ಣೋಟವನ್ನು ಕದಲಿಸದ ಶೆಟ್ಟರು ಮಂಜುಳೆಯ ಈ ಮಾತಿಗೆ “ಹೂಂ”ಕಾರದಿಂದಷ್ಟೆ ಪ್ರತಿಧ್ವನಿಸಿ ಮತ್ತೆ ತಮ್ಮ ಕೆಲಸದಲ್ಲಿ ಧ್ಯಾನವನ್ನು ಕೇಂದ್ರೀಕರಿಸುತ್ತಿದ್ದರು. ಸುಮಾರು ಒಂಬತ್ತೂ ಮುಕ್ಕಾಲರ ವೇಳೆಗೆ ಶೆಟ್ಟರಿಗೆ ತಿಂಡಿಕೊಡಲು ಅಂಗಡಿಯ ಗಲ್ಲಾಪೆಟ್ಟಿಗೆಯಿಂದ ಏಳುತ್ತಿದ್ದ ರತ್ನಮ್ಮ ಒಂದು ಸಣ್ಣ ಸ್ಟೀಲು ತಟ್ಟೆಯಲ್ಲಿ ಹಾಕಿಕೊಂಡು ಬರುತ್ತಿದ್ದ ತಿಂಡಿಯನ್ನು ಶೆಟ್ಟರಿಗೆ ನೀಡುವಾಗ ಅಸಡ್ಡೆಯಿಂದ ಕೂಡಿದ ಭಯಮಿಶ್ರಿತ ಭಾವನೆಯೊಂದು ಅವರ ಮುಖದ ಮೇಲೆ ಮೂಡಿರುತ್ತಿದ್ದುದ್ದನ್ನು ನಾನು ಗಮನಿಸುತ್ತಿದ್ದೆ. ಈ ವೇಳೆಗೆ ಸೈಕಲ್ಲಿನ ಬಾರನ್ನೋ, ರಿಮ್ಮನ್ನೋ, ತಂತಿಗಳನ್ನೋ, ಹ್ಯಾಂಡಲ್ಲನ್ನೋ ತಿಕ್ಕುವ ಮೂಲಕ ಅವುಗಳನ್ನು ಹೊಳೆಯುವಂತೆ ಮಾಡುವ ಕೆಲಸದಲ್ಲಿ ನಿರತಾಗಿದ್ದ ಶೆಟ್ಟರು, ನಿಮಿಷಗಳ ಕಾಲ ಹೆಂಡತಿ ತಿಂಡಿ ತಟ್ಟೆಯನ್ನು ಹಿಡಿದು ಪಕ್ಕದಲ್ಲಿ ನಿಂತಿದ್ದರೂ, ಅದರ ಪರವೆಯೇ ಇಲ್ಲದೆ ತಮ್ಮ ಸೈಕಲ್ ಸ್ವಚ್ಚತಾ ಅಭಿಯಾನದಲ್ಲಿಯೇ ಮೈಮರೆತಿರುತ್ತಿದ್ದರು. ಶೆಟ್ಟರ ದೇಹಗಾತ್ರದ ಸುಮಾರು ಎರಡರಷ್ಟು ದೇಹದಾಕಾರವನ್ನು ಹೊಂದಿದ್ದ ರತ್ನಮ್ಮ, ಶೆಟ್ಟರನ್ನು “ತಿಂಡಿ ತಣ್ಣಗಾಗುತ್ತಿದೆ, ಮೊದಲು ಅದನ್ನು ತಿಂದು ಮುಂದಿನ ಕೆಲಸ ಮಾಡಬಾರದೇ?” ಎನ್ನುವ ಬುದ್ಧಿವಾದವನ್ನು ಹೇಳುವ ಧೈರ್ಯವನ್ನು ಮಾಡುತ್ತಿರಲಿಲ್ಲ. ತಿಂಡಿತಟ್ಟೆಯನ್ನು ಹಿಡಿದು, ಶೆಟ್ಟರ ಪಕ್ಕದಲ್ಲಿ ಹಾಗೆಯೇ, ಶ್ರೀರಾಮನ ಪಕ್ಕದಲ್ಲಿ ನಿಂತಿರುವ ಸೀತಾಮಾತೆಯ ಭಂಗಿಯಲ್ಲಿ ನಿಂತಿರುತ್ತಿದ್ದ ರತ್ನಮ್ಮನ ಮುಖದ ಮೇಲೆ ಪ್ರತಿಫಲಿಸುತ್ತಿದ್ದ ಆ ಹೊತ್ತಿನ ಭಾವನೆಗಳನ್ನು ಓದುವುದು ನನಗೆ ಅತಿಪ್ರಿಯವಾದ ವಿಷಯವಾಗಿತ್ತು. ಹೆಂಡತಿಗೆ ತೋರಬೇಕಾದ ಅಕ್ಕರೆಯನ್ನು ನಿರ್ಜೀವ ಸೈಕಲ್ಲಿಗೆ ತೋರುತ್ತಿದ್ದ ಗಂಡನ ವಿಚಿತ್ರ ಖಯಾಲಿಯಿಂದ ಸೈಕಲ್ಲಿನೆಡೆಗೆ ಸವತಿಯ ಕಡೆಗೆ ಬೀರುವಂತಹ ಈರ್ಷ್ಯೆಯ ನೋಟವನ್ನು ಬೀರುತ್ತಾ ನಿಲ್ಲುತ್ತಿದ್ದ ರತ್ನಮ್ಮ, ಅಂಗಡಿಗೆ ಯಾರಾದರೂ ಗಿರಾಕಿಗಳು ಬಂದರು ಎಂದರೆ, ತಿಂಡಿಪ್ಲೇಟನ್ನು ಅಲ್ಲಿಯೇ ಇದ್ದ ಸಣ್ಣ, ಮರದ ಸ್ಟೂಲೊಂದರ, ಮೇಲೆ ಸ್ವಲ್ಪವೂ ಸದ್ದಾಗದ ಹಾಗೆ ಜಾಗ್ರತೆಯಾಗಿರಿಸಿ, ತನ್ನ ಈ ಕೃತ್ಯದಿಂದ ಗಂಡನ ಏಕಾಗ್ರತೆಗೆ ಭಂಗ ಉಂಟಾಗಿಲ್ಲ ಎನ್ನುವುದನ್ನು ಖಾತ್ರಿ ಪಡಿಸಿಕೊಂಡೇ, ಅಂಗಡಿಮನೆಗೆ ಮರಳುತ್ತಿದ್ದಳು. ಈ ವೇಳೆಗಾಗಲೇ ಹೆಚ್ಚೂ ಕಡಿಮೆ ಗಂಟೆ ಹತ್ತಾಗಲು, “ಎದ್ದೇನೋ, ಬಿದ್ದೆನೋ” ಎನ್ನುತ್ತಲೇ ಶಾಲೆಗೆ ಬರ್ಕೀಸಾಗುತ್ತಿದ್ದ ನಾನು, ಬಗಲಲ್ಲಿ ಆ ಕಡೆಯಿಂದ ಈ ಕಡೆಗೆ ಗಡಿಯಾರದ ಲೋಲಕದೋಪಾದಿಯಲ್ಲಿ ಗಿರಕಿ ಹೊಡೆಯುತ್ತಿದ್ದ, ನನ್ನ ದೇಹದ ಎಡ, ಬಲದ ಒಂದಡಿ ಫಾಸಲೆಯಲ್ಲಿ ರುದ್ರನರ್ತನವನ್ನು ಮಾಡುತ್ತಿದ್ದ, ಸಾಕಷ್ಟು ವಜನವಿದ್ದ ಸ್ಕೂಲು ಬ್ಯಾಗಿನೊಟ್ಟಿಗೆ ಶಾಲೆ ಸೇರುತ್ತಿದ್ದೆ. ಶೆಟ್ಟರ ಅಂಗಡಿಗೆ ಸಾಕಷ್ಟು ಸಮೀಪವಾಗಿಯೇ ಇದ್ದ ಶಾಲೆಗೆ ಕ್ರಮಿಸಲು ಹೆಚ್ಚೆಂದರೆ ಎರಡು ಮೂರು ನಿಮಿಷಗಳನ್ನು ಮಾತ್ರ ತೆಗೆದುಕೊಳ್ಳುತ್ತಿದ್ದುದರಿಂದ ನಾನು ಸಾಧ್ಯವಾದಷ್ಟೂ ಕೊನೇ ಕ್ಷಣಗಳಲ್ಲಿಯಷ್ಟೇ ಶೆಟ್ಟರ ಮನೆಯನ್ನು ಒಲ್ಲದ ಮನಸ್ಸಿನಿಂದಲೇ ತೊರೆಯುತ್ತಿದ್ದೆ.
“ಜನಮನಗಣ”ದ ನಂತರ ನಮ್ಮ ತರಗತಿಯನ್ನು ಸೇರಿಕೊಳ್ಳುತ್ತಿದ್ದ ನಾನು ತಿಪ್ಪಯ್ಯ ಮೇಷ್ಟ್ರು ಬಂದು ಮೊದಲನೇ ಪಿರಿಯಡ್ ಪಾಠವನ್ನು ಶುರುಮಾಡಿದರೂ ಶೆಟ್ಟರ ಮನೆಯ ಬೆಳಗಿನ ವಿದ್ಯಮಾನಗಳ ಗುಂಗಿನಲ್ಲಿಯೇ ಇರುತ್ತಿದ್ದೆ. ಶೆಟ್ಟರು ಹೆಂಡತಿ ತಂದ ಉಪಾಹಾರವನ್ನು ಸೇವಿಸಿದರೇ? ಇಲ್ಲವೇ? ಎನ್ನುವುದು ನನ್ನ ತಲೆಯನ್ನು ಕೀಟದಂತೆ ಕೊರೆಯುತ್ತಿದ್ದರೆ, ಈ ವೇಳೆಗಾಗಲೆ ಶೆಟ್ಟರ ಸೈಕಲ್ಲಿನ ಅಲಂಕಾರ ಮುಗಿದಿರಬೇಕಲ್ಲವೇ? ಎನ್ನುವ ಅನುಮಾನಗಳೂ ನನ್ನನ್ನು ಎಡಬಿಡದೆ ಕಾಡುತ್ತಿದ್ದವು. ಸ್ಕೂಲಿನ ಪಾಠ, ಪ್ರವಚನಗಳು ಮೊದಲಿನಂತೆ ರುಚಿಸದೆ ಶೆಟ್ಟರ ಮನೆಯ ಆಗುಹೋಗುಗಳೇ ನನ್ನ ಮನಸ್ಸಿನ ತುಂಬಾ ಆವರಿಸಿಕೊಂಡಿರಲು, ಎರಡು ಪಿರಿಯಡ್ ನಂತರ ಹನ್ನೊಂದೂವರೆಯ ರೀಸಸ್ ವೇಳೆ, ಗೆಳೆಯರ ಗುಂಪಿನ ಕಣ್ಣುತಪ್ಪಿಸಿ, ಶೆಟ್ಟರ ಮನೆ ಕಡೆ ದೌಡಾಯಿಸುತ್ತಿದ್ದೆ.
ಅಂಗಡಿಯ ಮುಂದೆ ನಿಂತು ಮತ್ತೆ ಪಡಸಾಲೆಗೆ ಇಣುಕಿದವನಿಗೆ ಶೆಟ್ಟರ ಮನೆಯ ವಸ್ತುಸ್ಥಿತಿಯಲ್ಲಿ ಯಾವುದೇ ಬದಲಾವಣೆಗಳು ಸಂಭವಿಸಿದ ಹಾಗೆ ಕಂಡು ಬರುತ್ತಿರಲಿಲ್ಲ. ಕಳೆದ ಒಂದೂವರೆ ಗಂಟೆಯಲ್ಲಿ ಶೆಟ್ಟರ ಮನೆ ಯಾವ ಗಮನಾರ್ಹ ಬದಲಾವಣೆಗಳಿಗೂ ಸಾಕ್ಷಿಯಾಗದೆ, ಅಲ್ಲಿ ಸಮಯ ತಟಸ್ಥವಾಗಿ ನಿಂತಂತೆ ನನಗೆ ಭಾಸವಾಗುತ್ತಿತ್ತು. ಈಗಲೂ ಗಲ್ಲಾಪೆಟ್ಟಿಗೆಯ ಮೇಲೇ ವಿರಾಜಮಾನಳಾಗಿರುತ್ತಿದ್ದ ರತ್ನಮ್ಮನ ಕೈಯಲ್ಲಿ ಅಂದಿನ “ಪ್ರಜಾವಾಣಿ” ದಿನಪತ್ರಿಕೆ ರಾರಾಜಿಸುತ್ತಿದ್ದರೆ, ಶೆಟ್ಟರು ತಮ್ಮ ಸೈಕಲನ್ನು ಇನ್ನೂ ಉಜ್ಜಿ ಉಜ್ಜಿ, ಇಲ್ಲದ ಹೊಳಪನ್ನು ಅದರ ಮೇಲೆ ಮೂಡಿಸುವ ತಮ್ಮ ಭಗೀರಥರೂಪದ ಪ್ರಯತ್ನವನ್ನು ಮುಂದುವರೆಸುತ್ತಲೇ ಇರುತ್ತಿದ್ದರು. ರತ್ನಮ್ಮ ಶೆಟ್ಟರ ಪಕ್ಕದ ಸ್ಟೂಲ್ ಮೇಲಿಟ್ಟ ತಿಂಡಿ ತಟ್ಟೆ ಹಾಗೆಯೇ ಇರುತ್ತಿರಲಾಗಿ ಈ ಹೊತ್ತಿಗೆ ನೂರಾರು ನೊಣಗಳು ತಟ್ಟೆಯಲ್ಲಿದ್ದ ಉಪ್ಪಿಟ್ಟನ್ನೋ, ಅವಲಕ್ಕಿ ಒಗ್ಗರಣೆಯನ್ನೋ, ಇಡ್ಲಿ, ಪಡ್ಡುಗಳನ್ನೋ ಗುಂಪು ಗುಂಪಾಗಿ ಆವರಿಸಿರುತ್ತಿದ್ದವು. ಗಂಡ ತಾನು ತಂದ ತಿಂಡಿಯನ್ನು ಮುಟ್ಟುವುದಿರಲಿ ಅದರ ಕಡೆ ಕಣ್ಣೆತ್ತಿಯೂ ನೋಡಿಲ್ಲ ಎಂದು ಅಂಗಡಿ ಮನೆಯಿಂದಲೇ ಗಮನಿಸುತ್ತಿದ್ದ ರತ್ನಮ್ಮ “ಮೊದಲು ತಿಂಡಿ ತಿನ್ನಿ, ನಂತರ ನಿಮ್ಮ ಕೆಲಸವನ್ನು ಮುಂದುವರೆಸಿ” ಎಂದು ಶೆಟ್ಟರಿಗೆ ಮತ್ತೆ ತಿಂಡಿಯ ನೆನಪನ್ನು ಮಾಡುವ ಧೈರ್ಯವನ್ನು ತೋರದೇ ಇರುತ್ತಿದ್ದದ್ದು ನನಗೆ ಸದಾ ಆಶ್ಚರ್ಯ ತರುತ್ತಿತ್ತು. ಶೆಟ್ಟರು ತುಂಬಾ ಕೋಪಿಷ್ಟರು, ತೂತುಮುಖದ ಶೆಟ್ಟರ ಸಿಡುಕು ಮುಖ ಯಾವಾಗಲೂ ಗಂಟು ಹಾಕಿಕೊಂಡಿರುತ್ತಿತ್ತಲ್ಲದೆ ಯಾವ ಕ್ಷಣದಲ್ಲಿಯಾದರೂ ಬೆಂಕಿಉಂಡೆಗಳನ್ನು ಉಗುಳಬಹುದಾದ ಜೀವಂತ ಜ್ವಾಲಾಮುಖಿಯಾಗಿಯೇ ತೋರಿ ಬರುತ್ತಿತ್ತು. ತಾವು ಸೈಕಲ್ಲಿನ ಸೇವೆ ಮಾಡುವ ವೇಳೆಯಲ್ಲಿ ಬೇರೆ ಯಾರೂ ತಮ್ಮ ತಪಸ್ಸಿಗೆ ಭಂಗ ತರುವುದನ್ನು ಸಹಿಸದ ವಿಶ್ವಾಮಿತ್ರ ಗೋತ್ರದವರಾದ ಶೆಟ್ಟರ ತಪೋಭಂಗವನ್ನು ಮೇನಕೆಯಾಗಿ ನಿರ್ವಹಿಸುವಲ್ಲಿ ರತ್ನಮ್ಮ ವೈಫಲ್ಯ ಅನುಭವಿಸಿದಳು ಎನ್ನುವ ಕಾರಣಕ್ಕಾಗಿಯೇ ಮನ ಬಂದಷ್ಟು ಹೊತ್ತು, ಮನಕ್ಕೆ ತೋಚಿದ ರೀತಿಯಲ್ಲಿ ಸೈಕಲ್ ಸೇವೆಯಲ್ಲಿ ಶೆಟ್ಟರು ನಿರತರಾಗಿರುತ್ತಿದ್ದರು ಎನ್ನುವುದು ವಾಸ್ತವಕ್ಕೆ ಹತ್ತಿರವಾದ ವಿಷಯವಾಗಿರಬೇಕು.
ಹೀಗೆ ರೀಸಸ್ ಸಮಯವನ್ನು ಶೆಟ್ಟರ, ಸಮಯದ ಹಂಗಿಲ್ಲದ, ಸಮಯಾತೀತವೇ ಅನ್ನಬಹುದಾದ, ಅಂಗಡಿಮನೆಯ ಮುಂದೆ ಕಳೆದ ನಾನು ಮತ್ತೆ ಬೆಳಗಿನಂತೆಯೇ ಸ್ಕೂಲಿಗೆ ಬರ್ಕೀಸಾಗುತ್ತಿದ್ದೆ. ಬೆಳಿಗ್ಗೆ ನನ್ನ ವೇಗಕ್ಕೆ ಒಂದಷ್ಟು ಕಡಿವಾಣ ಹಾಕುತ್ತಿದ್ದ ಸ್ಕೂಲುಬ್ಯಾಗಿನ ಹಂಗು ಈಗ ಇರುತ್ತಿಲ್ಲವಾಗಿ ಗಣನೀಯವೆನ್ನುವ ಕಡಿಮೆ ಸಮಯದಲ್ಲಿಯೇ ತರಗತಿ ಸೇರುತ್ತಿದ್ದೆ. ರೀಸಸ್ ಸಮಯದಲ್ಲಿ ನಾನು ಎಲ್ಲಿ ಮಾಯವಾಗಿದ್ದೆ ಎಂದು ಗೆಳೆಯರು ಯೋಚಿಸುತ್ತಿದ್ದ ಹೊತ್ತಿನಲ್ಲಿಯೇ ತಿಪ್ಪಯ್ಯ ಮೇಷ್ಟ್ರು ಕಪ್ಪುಹಲಗೆಯ ಮೇಲೆ ಅಂಕಿಸುತ್ತಿದ್ದ ಕೂಡಿ ಕಳೆಯುವ ಅಂಕಗಣಿತ ಲೆಕ್ಕಗಳು ವಿದ್ಯಾರ್ಥಿಗಳ ಯೋಚನಾಶಕ್ತಿಯನ್ನು ಅನಾಯಾಸವಾಗಿ ಉಡುಗಿಸಿಬಿಡುತ್ತಿದ್ದವು.
ಮಧ್ಯಾಹ್ನ ಒಂದು ಗಂಟೆಯ ವೇಳೆಗೆ ನಮಗೆ ಭೋಜನ ವಿರಾಮದ ಸಮಯ. ಇಂದಿನಂತೆ ಶಾಲೆಗೆ ಅಂದಿನ ದಿನಗಳಲ್ಲಿ ಊಟವನ್ನು ತೆಗೆದುಕೊಂಡು ಹೋಗುವ ಪರಿಪಾಠ ನಮ್ಮೂರಿನಲ್ಲಿರಲಿಲ್ಲ. ಮಧ್ಯಾಹ್ನ ಬಿಸಿಯೂಟದ ಭಾಗ್ಯವೂ ಇಂದಿನಂತೆ ಅಂದು ವಿದ್ಯಾರ್ಥಿಗಳ ಪಾಲಿಗಿರಲಿಲ್ಲ. ಬಿರುಬಿಸಿಲಿನಲ್ಲಿ ಮಧ್ಯಾಹ್ನ ಮನೆಗೆ ನಡೆದೇ ಬಂದು, ಮನೆಯ ಊಟ ಸೇವಿಸಿ ಮತ್ತೆ ಶಾಲೆಗೆ ವಾಪಸಾಗುವುದು ಅನೂಚನವಾಗಿ ನಡೆದುಬಂದ ಪದ್ಧತಿ. ಹೀಗೆ ದಿನಂಪ್ರತಿ ಪ್ರಾಪ್ತವಾಗುತ್ತಿದ್ದ ಒಂದರಿಂದ ಎರಡು ಗಂಟೆಯವರೆಗಿನ, ಒಂದು ತಾಸಿನ ಅವಧಿಯ ಊಟದ ಸಮಯದ ಬಹುಪಾಲನ್ನೂ, ನಾನು ಶೆಟ್ಟರ ಅಂಗಡಿಯ ಮುಂಗಟ್ಟಿನಲ್ಲಿ ನಿಂತೇ ಕಳೆಯುತ್ತಿದ್ದೆ. ಮನೆಗೆ ಬರುವಾಗ ಶೆಟ್ಟರ ಮನೆಯ ಒಳಗೆ ಇಣುಕಿದವನಿಗೆ ಶೆಟ್ಟರು ತಮ್ಮ ಸೈಕಲ್ಲಿನ ಸ್ವಚ್ಚತಾಕಾರ್ಯವನ್ನು ಅಂತ್ಯಗೊಳಿಸಿದ್ದು ಒಂದು ರೀತಿಯ ನೆಮ್ಮದಿಯನ್ನು ತಂದರೆ, ಸ್ವಚ್ಚತೆಯ ನಂತರ ಸೈಕಲ್ಲಿನ ಅಲಂಕಾರದಲ್ಲಿ ತೊಡಗಿಕೊಂಡ ಶೆಟ್ಟರು ಮತ್ತೊಂದು ಕುತೂಹಲದ ಅಲೆಯ ಸೃಷ್ಟಿಗೆ ಕಾರಣೀಭೂತರಾಗುತ್ತಿದ್ದರು. ಬಣ್ಣಬಣ್ಣದ ರಿಬ್ಬನ್, ಬಲೂನುಗಳಿಂದ ಸೈಕಲ್ಲನ್ನು ಶೃಂಗರಿಸುವ ಶೆಟ್ಟರ ಕೆಲಸ ಮತ್ತೆ ತಾಸುಗಟ್ಟಲೇ ನಡೆಯಬಹುದು ಎಂದು ಊಹಿಸಿ, ಓಡುತ್ತಲೇ ಮನೆ ಸೇರಿತ್ತಿದ್ದವನು ಗಬಗಬನೆ ಹತ್ತಾರು ಮುದ್ದೆಯ ತುತ್ತುಗಳನ್ನು ಗಂಟಲಲ್ಲಿ ಇಳಿಸಿ ಮತ್ತೆ ಶಾಲೆಗೆ ಓಡುತ್ತಿದ್ದ ಬದಲಾದ ನನ್ನ ಉಣ್ಣುವ ರೀತಿಯನ್ನು ಬಹಳ ದಿನಗಳವರೆಗೆ ಅವ್ವನ ತೀಕ್ಷ್ಣದೃಷ್ಟಿಯಿಂದ ಮರೆಮಾಚಲಾಗಲಿಲ್ಲ. “ಯಾಕೋ, ಇತ್ತೀಚೆಗೆ ಸರಿಯಾಗಿ ಉಣ್ಣುತ್ತಿಲ್ಲ, ಹೊಟ್ಟೆ ಹಸಿವಾಗುವುದಿಲ್ಲವೇನೋ?” ಎಂದು ಆತಂಕಪೂರಿತ ಸ್ವರದಲ್ಲಿಯೇ ಪ್ರಶ್ನಿಸುತ್ತಿದ್ದ ಅವ್ವನ ಪ್ರಶ್ನೆಗಳಿಗೆ ಹಾರಿಕೆ ಉತ್ತರ ಕೊಡುತ್ತಿದ್ದ ನಾನು, ಊಟವಾದ ನಂತರ ಸರಿಯಾಗಿ ನೀರನ್ನೂ ಕುಡಿಯದೆ, ಮತ್ತೆ ಓಡುತ್ತಲೇ ಹೋಗಿ ಶೆಟ್ಟರ ಅಂಗಡಿಯ ಮುಂದೆ ಝಾಂಡ ಹೂಡುತ್ತಿದ್ದೆ. ನನಗೆ ಈ ಹೊತ್ತಿನಲ್ಲಿ ಪ್ರಾಪ್ತವಾದ ಒಂದರ್ಧ ಗಂಟೆಯ ಸಮಯದಲ್ಲಿ ಶೆಟ್ಟರು ತಾವು ದುರ್ಗದ ಹೋದ ವಾರದ ಸಂತೆಯಲ್ಲಿ ತಂದಿದ್ದ ವಿವಿಧ ಅಲಂಕಾರಿಕ ಸಾಮಾಗ್ರಿಗಳನ್ನು ಯಥೇಚ್ಚವಾಗಿ ಬಳಸಿ ತಮ್ಮ ಸೈಕಲ್ಲಿನ ಅಲಂಕಾರದ ಅಂತಿಮ ಘಟ್ಟವನ್ನು ತಲುಪಿದ ಹಾಗೆ ಕಂಡು ಬರುತ್ತಿದ್ದರು. ಶೆಟ್ಟರು ಬೆಳಗಿನ ಉಪಾಹಾರವನ್ನು ಸೇವಿಸಿದ್ದರೋ ಇಲ್ಲವೋ ಎನ್ನುವುದನ್ನು ಹೇಳಲು, ಸ್ಟೂಲಿನ ಮೇಲಿಂದ ಈ ಹೊತ್ತಿಗಾಗಲೇ ಮಾಯವಾದ ತಿಂಡಿ ತಟ್ಟೆಯ ಕಾರಣ ಕಷ್ಟಸಾಧ್ಯವಾಗಿತ್ತು. ಬಾಲಕನಾದ ನನಗೆ ಆ ಹೊತ್ತಿನಲ್ಲಿ ಗೊತ್ತಿಲ್ಲದೇ ಇದ್ದ ನಾನಾ ತರಹದ ಶೃಂಗಾರ ವಸ್ತುಗಳನ್ನು ಬಳಸಿ ತಮ್ಮ ಸೈಕಲನ್ನು ಸಿಂಗರಿಸುತ್ತಿದ್ದ ಸಾಮಾಗ್ರಿಗಳಲ್ಲಿ ಝರಿಯ ಪೇಪರಿನಲ್ಲಿ ಮಾಡಿದ ಗೊಂಚಲುಗಳೂ, ದೀಪಾವಳಿಯ ವೇಳೆ ಮನೆಯ ಮುಂದೆ ತೂಗುಬಿಡುತ್ತಿದ್ದ ದೀಪದ ಬುಟ್ಟಿಗಳನ್ನು ಹೋಲುತ್ತಿದ್ದ ಸಣ್ಣಗಾತ್ರದ ಆಕಾಶಬುಟ್ಟಿಗಳೂ, ಬಸ್ಸಿನ ಹಾರ್ನ್ ಗಳೂ, ವಿವಿಧ ಆಕಾರದಲ್ಲಿ ಆಕರ್ಷಕವಾಗಿ ಕಟ್ ಮಾಡಿರುತ್ತಿದ್ದ ಕಲರ್ ಪೇಪರುಗಳೂ, ಸಣ್ಣಸಣ್ಣ ಗಾತ್ರದ ಬೆಳ್ಳಿ ಲೇಪಿಸಿದ ಗೆಜ್ಜೆಯ ಗೊಂಚಲುಗಳೂ ಮೊದಲುಗೊಂಡಂತೆ ಒಂದು ದೊಡ್ಡ ಬಿದಿರಿನ ಪುಟ್ಟಿಯ ತುಂಬಾ ತುಳುಕುವಂತೆ ಪೇರಿಸಿಟ್ಟಿದ್ದ ಅಲಂಕಾರಿಕ ವಸ್ತುಗಳನ್ನು ಬಳಸಿ ಶೆಟ್ಟರು ತಮ್ಮ ಸೈಕಲ್ಲಿನ ಶೋಭೆಯನ್ನು ಹೆಚ್ಚಿಸುವ ಯಾವತ್ತೂ ಕಾರ್ಯದಲ್ಲಿ ಮಗ್ನರಾಗಿರುತ್ತಿದ್ದರು. ಈ ವೇಳೆಗೆ ಮಧ್ಯಾಹ್ನದ ಊಟಕ್ಕಾಗಿ ಮನೆಗೆ ಬರುತ್ತಿದ್ದ ಮಂಜುಳಾ, ತಂದೆ ಇನ್ನೂ ಸೈಕಲ್ಲಿನ ಸಿಂಗಾರದಲ್ಲಿ ತೊಡಗಿರುವ ಪರಿಯನ್ನು ನೋಡಿ, ಉರಿದು ಬೀಳುತ್ತಿದ್ದಳು. ಬೆಳಗಿನಿಂದಲೂ ಗಂಡನ ಹುಚ್ಚಾಟಕ್ಕೆ ಗಲ್ಲಾಪೆಟ್ಟಿಗೆಯ ತನ್ನ ಸ್ವಸ್ಥಾನದಿಂದಲೇ ಸಾಕ್ಷಿಯಾಗಿರುತ್ತಿದ್ದ ರತ್ನಮ್ಮನ ತಾಳ್ಮೆಯ ಕಟ್ಟೆಯೂ ಒಡೆದು ಆಕ್ರೋಶದ ನೊರೆ ಉಕ್ಕಿ ಬರಲಿಕ್ಕೆ ಮೊದಲಾಗುತ್ತಿತ್ತು.
“ಬೆಳಗಿನಿಂದ ಒಂದೇ ಸಮನೆ ಸೈಕಲನ್ನು ಉಜ್ಜುತ್ತಿದ್ದೀರಿ? ತಿಂಡಿಯನ್ನೂ ತಿನ್ನದೆ ಸೈಕಲನ್ನು ಕ್ಲೀನ್ ಮಾಡುತ್ತಿದ್ದೀರಿ, ಇದೆಂತಹಾ ಹುಚ್ಚಾಟ? ದಿನವೂ ಸ್ವಚ್ಚಮಾಡುವ ಸೈಕಲನ್ನು ಪ್ರತೀದಿನ ತಾಸುಗಟ್ಟಲೇ ಉಜ್ಜಿ ಉಜ್ಜಿ ಕ್ಲೀನು ಮಾಡುವ ಅವಶ್ಯಕತೆ ಏನಿದೆ? ಸಾಯಂಕಾಲ ಮೂರ್ನಾಲ್ಕು ಬಾರಿಯಷ್ಟೆ ನೀರಬಾವಿಗೆ ಹೋಗಿ ಬರುವ ಸೈಕಲ್ಲಿಗೆ ಅಂತಹಾ ಕೊಳೆ ಹೇಗೆ ಮೆತ್ತಿಕೊಳ್ಳುತ್ತದೆ? ನೀರು ತರಲು ಬಳಸುವ ಸೈಕಲ್ಲಿಗೆ ಈ ಪರಿಯ ಅಲಂಕಾರ ಯಾಕೆ? ಸಾಯಂಕಾಲ ನೀವು ನೀರು ತರಲು ಹೊರಟರೆ ನಿಮ್ಮ ಹಿಂದೆ ಹಿಂಡಾಗಿ ಬರುವ ಮಕ್ಕಳ ಗುಂಪನ್ನು ನೋಡಿದ್ದೀರಾ? ನಿಮ್ಮನ್ನು ಕಂಡು ಮುಸಿಮುಸಿ ನಗುವ ಊರ ಜನರನ್ನು ನೋಡಿ ನಿಮಗೆ ಏನೂ ಅನ್ನಿಸುವುದಿಲ್ಲವೇ?” ಎಂದು ರತ್ನಮ್ಮ ಮೈ ಮೇಲೆ ದೆವ್ವ ಬಂದವರ ಹಾಗೆ ನಿರ್ದಾಕ್ಷಿಣ್ಯವಾಗಿ ಶೆಟ್ಟರನ್ನು ವಿಚಾರಿಸಲು ಶುರುವಿಟ್ಟುಕೊಂಡರೆ, ಮಂಜುಳಾ ಸಮರ್ಥವಾದ ರೀತಿಯಲ್ಲಿ ಅಮ್ಮನಿಗೆ ಸಾಥ್ ಕೊಡುತ್ತಿದ್ದಳು. “ಅಪ್ಪಾ, ನನ್ನ ಸ್ನೇಹಿತರೆಲ್ಲಾ ನನ್ನನ್ನು ಗೇಲಿ ಮಾಡುತ್ತಾರೆ, ನಿಮಗೆ ಏನೂ ಅನ್ನಿಸುವುದಿಲ್ಲವೇ? ಸೈಕಲನ್ನು ಊರ ಮುಖ್ಯರಸ್ತೆಯಲ್ಲಿ ತಳ್ಳಿಕೊಂಡೇ ಯಾಕೆ ಹೋಗುತ್ತೀರಿ? ಸೈಕಲ್ಲನ್ನು ಯಾಕೆ ಸವಾರಿ ಮಾಡಿಕೊಂಡು ಹೋಗುವುದಿಲ್ಲ? ಸೈಕಲ್ಲು ತಳ್ಳಿಕೊಂಡು ಹೋಗುವಾಗಲೂ ಯಾಕೆ ನಿಮಿಷಕೊಮ್ಮೆಯಂತೆ ಬಸ್ಸಿನ ಹಾರ್ನ್ ನಂತಹ ಶಬ್ದ ಹೊರಡಿಸುವ ಸೈಕಲ್ ಹಾರ್ನ್ ಗಳನ್ನು ಬಾರಿಸುತ್ತೀರಿ? ಸಾಲದೆಂಬಂತೆ ಸೈಕಲ್ ಗಂಟೆಯನ್ನೂ ಎಡಬಿಡದೆ ಮೀಟುತ್ತಲೇ ಇರುತ್ತೀರಿ. ನಿಮ್ಮ ಸೈಕಲ್ಲಿಗೆ ಕಟ್ಟಿದ ಪೀಪಿಗಳನ್ನು, ಟೇಪುಗಳನ್ನು ಹುಡುಗರು ಕಿತ್ತುಕೊಳ್ಳುತ್ತಿದ್ದರೆ ನೀವೇಕೆ ಏನನ್ನೂ ಹೇಳುವುದಿಲ್ಲ?” ಎಂದು ತಂದೆಗೆ ಸವಾಲುಗಳ ಬಾಣ ಎಸೆಯುತ್ತಿದ್ದರೆ, ಬೆಳಗಿನಿಂದ ಸೈಕಲ್ಲಿನ ಸ್ವಚ್ಚತೆ, ಅಲಂಕಾರದಲ್ಲಿ, ಏನನ್ನೂ ಸೇವಿಸದೆ ಏಕಾಗ್ರಚಿತ್ತದಿಂದ ನಿರತರಾದ ಶೆಟ್ಟರ ಸಿಟ್ಟೂ ನೆತ್ತಿಗೆ ಏರುತ್ತಿತ್ತು. “ನನಗೆ ಇಷ್ಟವಾದ ಕೆಲಸವನ್ನು ನಾನು ಮಾಡುತ್ತೇನೆ, ಇದರಿಂದ ನೀವು ತಾಯಿಮಗಳಿಗೆ ಏನು ನಷ್ಟ? ನಾನೆಂದಾದರೂ ನಿಮ್ಮನ್ನು ಸೈಕಲ್ಲಿನ ಸ್ವಚ್ಚತೆ, ಅಲಂಕಾರದ ವಿಷಯದಲ್ಲಿ ಕೈಜೋಡಿಸಲು ಕೇಳಿಕೊಂಡಿದ್ದೇನೆಯೇ? ನನ್ನ ಪಾಡಿಗೆ ನಾನು ಈ ಕೆಲಸದಲ್ಲಿ ತೊಡಗಿದರೆ ನಿಮಗೇನು ಅಭ್ಯಂತರ? ನಿಮಗೇನು ಕಷ್ಟ?” ಎನ್ನುವ ಗುಟುರನ್ನು ಶೆಟ್ಟರು ಹಾಕತೊಡಗಿದರು. “ನಿಮಗೆ ಸೈಕಲ್ ಬಿಟ್ಟರೆ ಬೇರೆ ಏನೂ ಕಾಣುವುದಿಲ್ಲವೇ? ಬೆಳಗಿನಿಂದ ಒಂಟಿ ಹೆಣ್ಣೆಂಗಸು ಅಂಗಡಿಯನ್ನು ಸಂಭಾಳಿಸುತ್ತಿದ್ದೇನೆ. ತಿಂಡಿ, ಊಟ ತಯಾರಿಸಿ, ಅಂಗಡಿಯ ವ್ಯವಹಾರವನ್ನೂ ನೋಡಿಕೊಳ್ಳುತ್ತಿದ್ದೇನೆ, ನಿಮಗೆ ಏನೂ ಅನ್ನಿಸುವುದಿಲ್ಲವೇ? ನಿಮ್ಮ ಪಾಡಿಗೆ ನೀವು ಸೈಕಲ್ ಸೇವೆಯಲ್ಲಿ ವ್ಯಸ್ತವಾದರೆ ನಾನೇನು ಮಾಡಬೇಕು?” ಎನ್ನುತ್ತಲೇ ತನ್ನ ಆಕ್ರೋಶವನ್ನು ಕಣ್ಣೀರಿಗೆ ಬದಲಾಯಿಸುತ್ತಾ ರತ್ನಮ್ಮ ನಡೆದಿರಲು, ಅಮ್ಮನ ಸೆರಗಿನ ಹಿಂದಿನ ಮುಸುಮುಸು ಅಳುವಿಗೆ ಮತ್ತಷ್ಟು ಕೆರಳಿ ಕೆಂಡವಾಗುತ್ತಿದ್ದ ಮಂಜುಳಾ “ಇವತ್ತೇ ಕೊನೆ, ಸೈಕಲ್ಲನ್ನು ಮುಟ್ಟಿದರೆ ಜೋಕೆ, ಸಂಜೆ ನೀರು ತರಲಷ್ಟೆ ನೀವು ಸೈಕಲ್ ಬಳಸಬೇಕು, ನಿಮ್ಮ ಈ ಹುಚ್ಚಾಟದಿಂದ ನನಗೆ ವಿಪರೀತ ಮುಜುಗರವಾಗುತ್ತದೆ, ಶಾಲೆಯಲ್ಲಿ ಸಹಪಾಠಿಗಳ ಅದರಲ್ಲೂ ಗಂಡುಹುಡುಗರ ಕುಹಕ ನೋಟ, ನಗೆ ನನಗೆ ವಿಪರೀತ ನೋವನ್ನು ಕೊಡುತ್ತದೆ” ಎನ್ನುತ್ತಲೇ ತಾನೂ ಅಮ್ಮನ ಶೋಕಾಚರಣೆಯ ಭಾಗವಾಗತೊಡಗಿದಳು. ಮಂಜುಳಾ ತುಂಬಾ ಬುದ್ದಿವಂತ ವಿದ್ಯಾರ್ಥಿನಿ, ಚಿಕ್ಕ ವಯಸ್ಸಿನಿಂದಲೂ ಊರಿನ, ತಾನು ಓದಿದ ಎಲ್ಲಾ ಶಾಲೆಗಳಲ್ಲಿ ಪ್ರಥಮ ಸ್ಥಾನ ಶೆಟ್ಟರ ಈ ಹುಡುಗಿಗೆ ಕಟ್ಟಿಟ್ಟ ಬುತ್ತಿಯಾಗಿತ್ತು ಎನ್ನುವ ಮಾತು ಊರಮಟ್ಟಿಗೆ ಜನಜನಿತವಾಗಿತ್ತು. ಶೆಟ್ಟರು ತಮ್ಮ ಪುತ್ರಿಯನ್ನು ಹೆಚ್ಚು ಪ್ರೀತಿಸುತ್ತಿದ್ದರೋ ಅಥವಾ ತಮ್ಮ ಸೈಕಲ್ಲನ್ನು ಹೆಚ್ಚು ಪ್ರೀತಿಸುತ್ತಿದ್ದರೋ ಎನ್ನುವ ಗೊಂದಲದಲ್ಲಿ ನಾನು ಆಗಾಗ ಸಿಲುಕುತ್ತಿದ್ದೆ.
ಈ ಸ್ಪರ್ಧೆಯಲ್ಲಿ ಶೆಟ್ಟರ ಹೆಂಡತಿ ರತ್ನಮ್ಮ ಎಲ್ಲಿಯೂ ತೋರಿಬರದೇ ಇರುವುದು ಆಶ್ಚರ್ಯಜನಕ ಸಂಗತಿಯಾದರೂ ವಾಸ್ತವಕ್ಕೆ ಹೆಚ್ಚು ಹತ್ತಿರವಾದ ಸಂಗತಿಯೇ ಆಗಿತ್ತು. ಹೆಂಡತಿಯ ಕಣ್ಣೀರಿಗೆ ಬೆಲೆ ಕಟ್ಟಲು ವಿಫಲರಾದ ಶೆಟ್ಟರು ಮಗಳ ಕಣ್ಣೀರಿಗೆ ಕರಗುವ ಹಾಗೆ ತೋರಿ ಬಂದರು. “ಆಯ್ತಮ್ಮ, ನಾನು ಸೈಕಲ್ಲಿನ ಸಿಂಗಾರವನ್ನು ಬಿಟ್ಟಿದ್ದೇನೆ ನೋಡು” ಎನ್ನುತ್ತಲೇ ಸೈಕಲ್ಲನ್ನು ಪಡಸಾಲೆಯ ಮೂಲೆಯೊಂದಕ್ಕೆ ತಳ್ಳಿದ ಶೆಟ್ಟರು “ರತ್ನಾ, ಹೊಟ್ಟೆ ಹಸಿದಿದೆ, ನಡಿ, ಊಟ ಬಡಿಸು. ಮಂಜುಳಾ ಬಾರಮ್ಮ, ಎಲ್ಲರೂ ಒಟ್ಟಿಗೇ ಊಟ ಮಾಡೋಣ” ಎನ್ನುತ್ತಾ ಅಡುಗೆಮನೆಯ ಕಡೆ ಹೊರಡುವ ವೇಳೆಗೆ ನಾನೂ ನನ್ನ ಸ್ಕೂಲಿನೆಡೆಗೆ ದೌಡಿಡುತ್ತಿದ್ದೆ.
ಬೆಳಗಿನಿಂದ ಮದುವಣಗಿತ್ತಿಯಂತೆ ಶೆಟ್ಟರ ಕೈಯಲ್ಲಿ ಸಿಂಗರಿಸಿಕೊಂಡ ಅವರ ಎರಡನೇ ಅಧರ್ಮಪತ್ನಿಯಾದ ಸೈಕಲ್ಲು ಸಂಜೆ ಸುಮಾರು ಐದರ ವೇಳೆಗೆ ತನ್ನ ದೈನಂದಿನ ಚೆಲುವಿನ ಪುರಪ್ರದರ್ಶನಕ್ಕೆ ಅನುವಾಗುತ್ತಿತ್ತು. ಈ ವೇಳೆಗಾಗಲೇ ಸ್ನೇಹಿತರ ದಂಡಿನೊಟ್ಟಿಗೆ ಶೆಟ್ಟರ ಮನೆಯ ಮುಂದೆ ಜಮಾಯಿಸಿ, ಹ್ಯಾಂಡಲ್ ಎರಡೂ ಬದಿಗೆ ಇಳಿಬಿಟ್ಟಿದ್ದ ಪ್ಲಾಸ್ಟಿಕ್ ಕೊಡಗಳನ್ನು ತನ್ನ ಕಿವಿಯ ಓಲೆಗಳಂತೆ ಧರಿಸಿ, ಶೆಟ್ಟರ ಮನೆಯ ಮುಂದಿನ ಮೂರು ಮೆಟ್ಟಲುಗಳನ್ನು ಸಾವಕಾಶವಾಗಿ ಇಳಿದು ಮುಂದಿನ ರಸ್ತೆಯನ್ನು ಸೇರುತ್ತಿದ್ದ ಸೈಕಲ್ಲಿನ ಅಂದಚೆಂದಗಳನ್ನ ಮಾತುಗಳಲ್ಲಿ ಕಟ್ಟಿಕೊಡುವುದು ಸವಾಲಿನ ಕೆಲಸವೇ. ಚೆಂದುಳ್ಳಿ ಚೆಲುವೆ, ರತಿರೂಪಿ ಹೆಂಡತಿಯನ್ನು ಊರ ರಸ್ತೆಯಲ್ಲಿ ಕರೆದುಕೊಂಡು ಹೊರಡುವ ನವಮದಣಿಗನ ಹಾಗೆ, ಸೈಕಲ್ಲನ್ನು ಸಾವಕಾಶವಾಗಿ ತಳ್ಳುತ್ತಾ, ತಮ್ಮ ಕೆಂಪಾದ, ಸಣ್ಣ ಕಣ್ಣುಗಳಿಂದ ಸುತ್ತಮುತ್ತ ಚಲಿಸುತ್ತಿದ್ದ, ಊರಹರಟೆ ಕಟ್ಟೆಗಳಿಗೆ ಆ ವೇಳೆಗಾಗಲೇ ವಿಚಿತ್ರ ಶೋಭೆಯನ್ನು ತಂದುಕೊಡುತ್ತಿದ್ದ ಊರಿನ ಅಬಾಲವೃದ್ದರೆಡೆಗೆ ನೋಡುತ್ತಾ, ಅವರ ಕಣ್ಣುಗಳಲ್ಲಿ ಇಣುಕಬಹುದಾದ ಮೆಚ್ಚುಗೆಗಳ ನೋಟವನ್ನು ಅರಸುತ್ತಾ, ನಿಮಿಷಕ್ಕೊಮ್ಮೆ ಸೈಕಲ್ಲಿನ ಹ್ಯಾಂಡಲಿನ ಎರಡೂ ಬದಿಗೆ ಕಟ್ಟಿದ್ದ ಬಸ್ ಹಾರ್ನ್ ಗಳ ರಬ್ಬರ್ ಚೆಂಡುಗಳನ್ನು ಶಕ್ತಿಮೀರಿ ಬಾರಿ ಬಾರಿ ಅದುಮುವ ಮೂಲಕ ಕರ್ಕಶ, ಗಟ್ಟಿಯಾದ ಮತ್ತು ಸರ್ವಜನತೆಯ ಗಮನವನ್ನು ತನ್ನೆಡೆ ಸೆಳೆಯುವಂತಿದ್ದ ಸ್ವರಗಳ ಉಗಮಕ್ಕೆ ಕಾರಣಕರ್ತನೆನ್ನಿಸಿ, ಒಂದು ಕ್ಷಣವೂ ವಿರಾಮ ಕೊಡದಂತೆ ತನ್ನ ಕತ್ತನ್ನು ನೂರಾಎಂಬತ್ತು ಡಿಗ್ರಿಗಳ ಕೋನದಲ್ಲಿ ನಿಯಮಿತ ಆವರ್ತನದ ಮಾದರಿಯಲ್ಲಿ, ಗಡಿಯಾರದ ಚಲನೆಯ ಪಥದಲ್ಲಿ ತಿರುಗಿಸುತ್ತಾ ಹೊರಟ ಶೆಟ್ಟರ ಹಿಂದೆ ಏನಿಲ್ಲವೆಂದರೂ ಒಂದು ಐವತ್ತು ಊರ ಹುಡುಗರ ಗುಂಪು ಕೇಕೆ, ಶಿಳ್ಳೆಗಳನ್ನ ಹಾಕುತ್ತಾ, ಶೆಟ್ಟರ ಹಾರ್ನ್ ಗಳು ಅಕಸ್ಮಾತಾಗಿ ಬಿಟ್ಟಿದ್ದ ಶಬ್ದಮಾಲಿನ್ಯದ ಕೊರತೆಯನ್ನು ತುಂಬಿಕೊಡುತ್ತಾ, ನಿತ್ಯನೂತನ ರೂಪದ, ಊರ ನೀರು ಬಾವಿಯಿಂದ ನೀರು ತರುವ ಶೆಟ್ಟರ ನಿತ್ಯದ ಮೆರವಣಿಗೆಗೆ ಚಾಲನೆ ನೀಡುತ್ತಿದ್ದೆವು. ಶೆಟ್ಟರ ಮನೆಯಿಂದ ಊರ ಭಾವಿಗೆ ಏನಿಲ್ಲವೆಂದರೂ ಎರಡು ಕಿಮೀ ಮೀರಿದ ಫಾಸಲೆಯಿತ್ತು. ಈ ದೂರವನ್ನು ಸೈಕಲ್ ತಳ್ಳುತ್ತಲೇ ಸವೆಸುತ್ತಿದ್ದ ಶೆಟ್ಟರು ದಿನವೂ ಒಟ್ಟು ಮೂರು ಇಂತಹಾ ಯಾತ್ರೆಗಳನ್ನು ಕೈಗೊಳ್ಳುತ್ತಿದ್ದರು. ಇದರಿಂದ ಶೆಟ್ಟರ ಮನೆಗೆ ಒಟ್ಟು ಆರು ಕೊಡಪಾನಗಳ ನೀರು ಸಂದಾಯವಾಗುತ್ತಿದ್ದರೆ, ಶೆಟ್ಟರ ಕೊನೆಯ ಶೋಭಾಯಾತ್ರೆ ಮುಗಿಯುವ ಹೊತ್ತಿಗೆ ಸಂಜೆಯ ಏಳೂವರೆ ಎಂಟು ಗಂಟೆಯಾಗುತ್ತಿತ್ತು. ಅವ್ವನ ಭಯದಿಂದಾಗಿ ಶೆಟ್ಟರ ಮೂರೂ ಯಾತ್ರೆಗಳ ಯಾತ್ರಾರ್ಥಿಯಾಗುವ ಭಾಗ್ಯ ನನಗೆ ಯಾವತ್ತೂ ದೊರಕದೇ ಹೋದರೂ, ಒಂದೂ ದಿನವೂ ತಪ್ಪದ ಹಾಗೆ ನಾನು ವರ್ಷಗಳ ಕಾಲ ಶೆಟ್ಟರ ಒಂದಾದರೂ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದೇನೆ. ಯಾತ್ರೆಯ ಹೊತ್ತು ಬಾಲಕರಾದ ನಮಗೆ ದೊರಕುತ್ತಿದ್ದ ಮೋಜುಮಸ್ತಿಗಳು ಮುಂದೆ ಬೆಳೆದು ದೊಡ್ಡವರಾದ ಬಳಿಕ ಭಾಗವಹಿಸಿದ ಯಾವ ಯಾತ್ರೆಗಳ ವೇಳೆಯೂ ನನ್ನ ಅನುಭವದ ಪಾಲಾಗದೇ ಇರುವುದು ಸೋಜಿಗದ ಸಂಗತಿಯಾಗಿಯೆ ಉಳಿದಿದೆ. ಶೆಟ್ಟರು ಸೈಕಲ್ ತಳ್ಳುವ ಹೊತ್ತು ಅವರು ಸೈಕಲ್ಲನ್ನು ಸಿಂಗರಿಸಲು ಬಳಸಿದ್ದ ಬಲೂನ್, ರಿಬ್ಬನ್ ಮುಂತಾದ ಅಲಂಕಾರಿಕ ವಸ್ತುಗಳನ್ನು ಕೀಳಲು ಮಕ್ಕಳಾದ ನಮ್ಮಲ್ಲಿ ದೊಡ್ಡ ಮಟ್ಟದ ಸ್ಪರ್ಧೆಯೇ ಏರ್ಪಡುತ್ತಿತ್ತು. ಬಾಲಕರು ಸೈಕಲ್ಲಿನಿಂದ ಏನನ್ನು ಕಿತ್ತು ಕೊಳ್ಳೆಹೊಡೆದರೂ ಅವರನ್ನು ಗದರದೆ, ತಡೆಯದೆ ಇರುತ್ತಿದ್ದ ಶೆಟ್ಟರಿಗೆ ತನ್ನ ಶೋಭಾಯಾತ್ರೆಯಲ್ಲಿ ಹುಡುಗರು ವಹಿಸುತ್ತಿದ್ದ ಅತ್ಯಮೂಲ್ಯ ಪಾತ್ರದ ಕಲ್ಪನೆ ಚೆನ್ನಾಗಿಯೇ ಇತ್ತು ಎನ್ನಿಸುತ್ತದೆ. ಊರಮಂದಿಯ ಗಮನವನ್ನು ತನ್ನ ನಿತ್ಯಸುಮಂಗಲಿ ಸೈಕಲ್ ಕಡೆಗೆ ಸೆಳೆಯುವ ಶೆಟ್ಟರ ಬೆಳಗಿನಿಂದ ನಡೆಯುತ್ತಿದ್ದ ಪ್ರಯತ್ನಗಳ ಗೋಪುರಕ್ಕೆ ಸಂಜೆಯ ವೇಳೆಯ ಬಾಲಕರ ಸಾಥ್ ಕಲಶಪ್ರಾಯವಾದದ್ದು ಎನ್ನುವ ಸಂಗತಿ ಸಾಂಬಶಿವಶೆಟ್ಟರಿಗೆ ಚೆನ್ನಾಗಿ ಅರಿವಿದ್ದಿದ್ದೇ. ಹೀಗಾಗಿ ಸಾಲಂಕೃತಗೊಂಡಿರುತ್ತಿದ್ದ ಸೈಕಲ್ ತನ್ನ ಮೊದಲನೇ ಯಾತ್ರೆಯ ಅಂತ್ಯದ ವೇಳೆಗೆ ತನ್ನ ಸಿಂಗಾರದ ಬಹುಪಾಲನ್ನು ಕಳೆದುಕೊಂಡು ಬೋಳುಬೋಳಾಗಿ ಗೋಚರಿಸುತ್ತಿದ್ದರೂ, ತನ್ನ “ನಿರಾಭರಣಸುಂದರಿ” ಸೈಕಲ್ಲಿನಲ್ಲಿಯೂ ಶೆಟ್ಟರು ಒಂದು ವಿಶೇಷ ಕಳೆಯನ್ನು ಅರಸುತ್ತಿದ್ದರು.
ಸುಮಾರು ಇಪ್ಪತ್ತು ವರ್ಷಗಳಿಗೂ ಮೀರಿದ ಸೈಕಲ್ ಒಡನಾಟದಲ್ಲಿ ಶೆಟ್ಟರು ತಮ್ಮ ಸೈಕಲ್ಲಿನ ಅಂತರಂಗ-ಬಹಿರಂಗಗಳನ್ನ ಭಲೇಭಾತಿ ಅರಿತವರಾಗಿದ್ದರು. ಸೈಕಲ್ಲಿಗೆ ಹವಾ ತುಂಬುವುದರಿಂದ ಮೊದಲ್ಗೊಂಡು, ಸೈಕಲ್ಲಿಗೆ ಪಂಕ್ಚರ್ ಹಾಕುವ ಕಲೆಯನ್ನೂ ಆವರಿಸಿಗೊಂಡಂತೆ, ಶೆಟ್ಟರು ಸೈಕಲ್ ಕುರಿತಂತೆ ಇರಬಹುದಾದ ಅರವತ್ನಾಲ್ಕು ಕಲೆಗಳಲ್ಲಿಯೂ ಸುತ್ತಮುತ್ತಲ ಐವತ್ತು ಅವರತ್ತು ಗ್ರಾಮಗಳ ಯಾವೊಬ್ಬ ಪ್ರಭೂತಿಗೂ ಮೀರಿದ ಪರಿಯ ಸೈಕಲ್ ವಿಷಯದ ತಜ್ಞರೆಂದೇ ಹೆಸರುವಾಸಿಯಾಗಿದ್ದರು. ಬಾಲ್ಯದ ವರ್ಷಗಳಲ್ಲಿಯೇ ಶೆಟ್ಟರ ಬೆನ್ನು ಬಿದ್ದ ಸೈಕಲ್ ಹವ್ಯಾಸ, ವರ್ಷಗಳು ಕಳೆದಂತೆ ಒಂದು ರೀತಿನ ಉನ್ಮಾದದ ಮಟ್ಟವನ್ನು ತಲುಪಿತ್ತು. ತುರುವನೂರಿಗೆ ಸುಮಾರು ಹದಿನೈದು ಕಿಮೀ ದೂರವಿರುವ ಗುಡ್ಡದರಂಗವ್ವನ ಹಳ್ಳಿಯ ರತ್ನಮ್ಮರನ್ನು ಮದುವೆಯ ಹುಡುಗನಾಗಿ ಹೋಗಿ ವಧುಪರೀಕ್ಷೆ ಕೈಗೊಂಡ ವೇಳೆಯೂ ಶೆಟ್ಟರು ತಮ್ಮ ಸೈಕಲ್ಲನ್ನೇ ಏರಿ ಹುಡುಗಿಯನ್ನು ನೋಡುವ ಶಾಸ್ತ್ರ ಮುಗಿಸಿದ್ದರು. ಹುಡುಗಿಯೇ ಆಗಲೀ, ಹುಡುಗಿಯ ತಂದೆತಾಯಿಯರೇ ಆಗಲೀ, ಮೊದಲ ಹೆಂಡತಿಯ ಮೇಲೇ ಸವಾರನಾಗಿ ಬಂದ ಅಳಿಯನ ಹುಚ್ಚಾಟವನ್ನು ಆ ವೇಳೆಗೇನಾದರೂ ಗಮನಿಸಿದ್ದರೆ ಬಹುಶಃ ತಾಯಿಮಗಳು ಮಧ್ಯಾಹ್ನದ ವೇಳೆಯಲ್ಲಿ ಪ್ರತೀದಿನ ಕಣ್ಣೀರಿನಲ್ಲಿ ಕೈತೊಳೆಯುವ ಪ್ರಮೇಯವೇ ಬರುತ್ತಿರಲಿಲ್ಲವೇನೋ. ಸೈಕಲ್ ಶೆಟ್ಟರ ಮೊದಲ ಪತ್ನಿಯ ಸ್ಥಾನವನ್ನು ನ್ಯಾಯಬದ್ಧ ರೀತಿಯಲ್ಲಿ ಆಕ್ರಮಿಸುವಲ್ಲಿ ಇರುವ ಬಹಳ ಮುಖ್ಯ ಕಾರಣವೆಂದರೆ ರತ್ನಮ್ಮನನ್ನು ವರಿಸುವ ಒಂದು ದಶಕಗಳ ಮೊದಲೇ ಸಾಂಬಶಿವಶೆಟ್ಟರು ತಮ್ಮ ತನುಮನವನ್ನು ಸೈಕಲ್ಲಿಗೆ ಧಾರೆಯೆರೆದಿದ್ದರು ಎನ್ನುವುದು. ಮತ್ತೊಂದು ವಿಧದಲ್ಲಿಯೂ, ಅರವತ್ತರ ದಶಕದ ಅಟ್ಲಾಸ್ ಬ್ರ್ಯಾಂಡ್ ಸೈಕಲ್ ಶೆಟ್ಟರ “ಅರ್ಧಾಂಗಿಣಿ” ಎಂದು ಹೇಳುವುದಕ್ಕೆ ಬಲವಾದ ಕಾರಣ ಎಂದರೆ ಪ್ರತೀ ತಿಂಗಳೂ ತಮ್ಮ ಹೆಂಡತಿಯ ಮೇಲೆ ಮಾಡುವ ಖರ್ಚಿಗಿಂತ ಹೆಚ್ಚಿನ ಖರ್ಚನ್ನು ಶೆಟ್ಟರು ತಮ್ಮ ಸೈಕಲ್ ಮೇಲೆ ಮಾಡುತ್ತಲೇ ಬಂದಿದ್ದರು. ಪ್ರತೀ ಸೋಮವಾರ ಅಂಗಡಿಯ ಸಾಮಾನುಗಳನ್ನು ತರಲಿಕ್ಕೆ ದುರ್ಗದ ಸಂತೆಗೆ ಹೋಗುತ್ತಿದ್ದ ಶೆಟ್ಟರು ಅಗತ್ಯ ಸಾಮಾಗ್ರಿಗಳ ಖರೀದಿಯ ನಂತರ ಸಂತೆ ಬಯಲಿನಲ್ಲಿದ್ದ ಬಷೀರ್ ಸಾಹೇಬರ ಸೈಕಲ್ ಶಾಪಿಗೆ ತಪ್ಪದೇ ಭೇಟಿಕೊಡುತ್ತಿದ್ದರು. ಇವರ ದಾರಿಯನ್ನೇ ಕಾಯುತ್ತಿದ್ದಂತೆ ಶೆಟ್ಟರನ್ನು ಆದರದಿಂದ ಬರಮಾಡಿಕೊಳ್ಳುತ್ತಿದ್ದ ಸಾಹೇಬರು, ಆ ವಾರ ದುರ್ಗದ ಮಾರುಕಟ್ಟೆಯಲ್ಲಿ ಬಂದಿರುವ ಸೈಕಲ್ ಸಂಬಂಧೀ ವಸ್ತುಗಳನ್ನು ಶೆಟ್ಟರ ಅವಗಾಹನೆಗೆ ತರುತ್ತಿದ್ದರು. ತಮ್ಮ ಮುಂದೆ ಬಷೀರ್ ಹರಡಿದ ಎಲ್ಲಾ ಸಾಮಾಗ್ರಿಗಳ ಕೂಲಂಕುಷ ತನಿಖೆ ಮಾಡಿ ಮುಗಿಸುವ ಶೆಟ್ಟರು ತಮ್ಮ ವಧುವಿನ ಮಾನಸಿಕ, ದೈಹಿಕ ಸ್ಥಿತಿಗತಿಗಳಿಗೆ ಹೊಂದುವ ವಸ್ತುಗಳನ್ನು ಎಷ್ಟೇ ಹಣ ಸಂದಾಯ ಮಾಡಿಯಾದರೂ ಕೊಂಡುಕೊಳ್ಳುತ್ತಲಿದ್ದರು. ಬಷೀರ್ ಒಟ್ಟಿಗೆ ಹೆಚ್ಚು ಚೌಕಾಸಿ ಮಾಡದೆ ಆ ಕಾಲಕ್ಕೆ ದುಬಾರಿ ಎನ್ನಬಹುದಾದ ಮೊತ್ತವನ್ನು ಕೊಟ್ಟು ಸೈಕಲ್ ಸಾಮಾನುಗಳನ್ನು ಖರೀದಿಸುತ್ತಿದ್ದ ಶೆಟ್ಟರು ಈ ನವೀನ ರೀತಿಯ ವಸ್ತುಗಳ ಒಟ್ಟಿಗೇ ಡಜನ್ ಗಟ್ಟಲೆ ಬಲೂನ್, ರಿಬ್ಬನ್ ಮುಂತಾದ ಮಾಮೂಲಿ ಅಲಂಕಾರಿಕ ವಸ್ತುಗಳನ್ನೂ ಖರೀದಿಸುತ್ತಿದ್ದರು. ವರ್ಷಕ್ಕೆ ಎರಡು ಬಾರಿಯೂ ರತ್ನಮ್ಮನಿಗೆ ಸೀರೆ ತೆಗೆದುಕೊಡುವ ಗೋಜಿಗೆ ಹೋಗದ ಶೆಟ್ಟರ ಈ ಸ್ವಭಾವ ರತ್ನಮ್ಮನ ಒಡಲಾಳದ ಮಿತಿಮೀರಿದ ಸಂಕಟಕ್ಕೆ ಮೂಲಕಾರಣವಾಗಿತ್ತು. ಸೈಕಲ್ ನಿರ್ಜೀವ ವಸ್ತು ಎನ್ನುವ ಕಾರಣವೊಂದಕ್ಕೇ ರತ್ನಮ್ಮ ತನಗಾದ ನೋವನ್ನು ನುಂಗಿಕೊಂಡಿದ್ದಳೇ ಹೊರತು ಜೀವವಿದ್ದ ಯಾವುದಾದರೂ ವಸ್ತುವಿನೊಂದಿಗೆ ಶೆಟ್ಟರು ಈ ತೆರನಾದ ಸಾವಯವ ಸಂಬಂಧವನ್ನೇನಾದರೂ ಹೊಂದಿದಲ್ಲಿ ಈ ಹೊತ್ತಿಗಾಗಲೇ ಶೆಟ್ಟರನ್ನು ಮತ್ತು ಅವರ ಪ್ರೀತಿಯ ಜೀವವನ್ನು ಕೊಲೆ ಮಾಡಿರುತ್ತಿದ್ದ ರತ್ನಮ್ಮ ಜೈಲು ಸೇರಿ ವರ್ಷಗಳೇ ಉರುಳಿ ಹೋಗಿರುತ್ತಿದ್ದವು.
ದಿನಗಳು ಕಳೆದ ಹಾಗೆ ಸಾಂಬಶಿವಶೆಟ್ಟರ ಸೈಕಲ್ ಹುಚ್ಚು ಮಿತಿಮೀರುತ್ತಲೇ ಸಾಗಿತ್ತು. ರತ್ನಮ್ಮ ಮತ್ತು ಮಂಜುಳಾ, ಶೆಟ್ಟರ ಈ ದಿನೇದಿನೇ ಹೆಚ್ಚುತ್ತಿದ್ದ ಉನ್ಮಾದದಿಂದ ಮೈ ಪರಚಿಕೊಳ್ಳುವ ಮಟ್ಟದ ಮುಜುಗರಕ್ಕೆ ಒಳಗಾಗುತ್ತಾ ಸಾಗಿದ್ದರು. ಈ ವೇಳೆಗೆ ಎಸ್ಸೆಸ್ಸೆಲ್ಸಿ ಪ್ರವೇಶಿಸಿದ್ದ ಮಂಜುಳಾ ಶಾಲೆಯಲ್ಲಿ ಸಹಪಾಠಿಗಳಿಂದ, ಶಿಕ್ಷಕವರ್ಗದವರಿಂದ ಹೆಚ್ಚಿನ ಮಾನಸಿಕ ಹಿಂಸೆಗೆ ಒಳಗಾಗಿದ್ದಳು. ಊರ ಶೆಟ್ಟರ ಪೈಕಿ ಹಿರಿಯರಾದ ಪಾಲಾ ಅನಂತಶೆಟ್ಟರನ್ನು ಮನೆಗೆ ಕರೆಯಿಸಿ ಅವರಿಂದ ಸಾಂಬಶಿವಶೆಟ್ಟರಿಗೆ ಬುದ್ದಿವಾದವನ್ನು ಹೇಳಿಸುವ ಪ್ರಯತ್ನವೂ ನಡೆಯಿತು. ದುರ್ಗದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಮಠದ ಹಿರಿಯ ಬುದ್ದಿಯೊಬ್ಬರಿಂದ ಉಪದೇಶವನ್ನು ಹೇಳಿಸಿಯೂ ಆಯ್ತು. ಈ ಯಾವ ಉಪಾಯಗಳೂ ಶೆಟ್ಟರ ಮೇಲೆ ನಿರೀಕ್ಷಿತ ಪ್ರಮಾಣದಲ್ಲಿ ಪ್ರಭಾವ ಬೀರದೇ ಹೋದದ್ದು ತಾಯಿಮಗಳ ಚಿಂತೆಯನ್ನು ನೂರ್ಮಡಿಸಿತ್ತು. ಶೆಟ್ಟರ ಹುಚ್ಚಾಟದಿಂದ ದಾರಿ ಕಾಣದಾದ ತಾಯಿಮಗಳು, ಕೊನೆಗೂ “ಅಪಾಯಕಾರಿ” ಎನ್ನಬಹುದಾದ ತಂತ್ರವೊಂದರ ಮೊರೆ ಹೋಗುವ ನಿರ್ಧಾರಕ್ಕೆ, ಅನೇಕ ರಾತ್ರಿಗಳ ಉಭಯ ಸಮಾಲೋಚನೆಯ ನಂತರದಲ್ಲಿ, ಬಂದರು.
ತಮ್ಮ ಸೈಕಲ್ಲಿನ ಆರೈಕೆಯ ನೆಪದಲ್ಲಿ ಸಾಮಾನ್ಯವಾಗಿ ಊರನ್ನು ತೊರೆಯದೇ ಇರುತ್ತಿದ್ದ ಶೆಟ್ಟರು ತನ್ನ ಅಣ್ಣನ ಮಗಳ ಮದುವೆಗೆ ಜಗಳೂರಿಗೆ ಎರಡು ದಿನಗಳ ಮಟ್ಟಿಗೆ ಹೋಗಲೇಬೇಕಾದ ಅನಿವಾರ್ಯ ಪರಿಸ್ಥಿತಿಯೊಂದು ಎದುರಾಯಿತು. “ನನಗೆ ಹುಷಾರಿಲ್ಲ” ಎನ್ನುವ ನೆಪವನ್ನು ಒಡ್ಡಿ, ಪೂರ್ವನಿರ್ಧಾರಿತ ಯೋಜನೆಯಂತೆ, ವಿವಾಹ ಸಮಾರಂಭದಿಂದ ದೂರವೇ ಉಳಿದ ರತ್ನಮ್ಮ, ಶೆಟ್ಟರು ಜಗಳೂರಿಗೆ ಹೋದ ದಿನ ರಾತ್ರಿಯೇ ಗುಡ್ಡದರಂಗವ್ವನ ಹಳ್ಳಿಯಿಂದ ತನ್ನ ತವರು ಮನೆಯವರು ಕಳುಹಿಸಿದ್ದ ಇಮ್ರಾನ್ ಸಾಬಿಗೆ ಶೆಟ್ಟರ ಸೈಕಲ್ಲನ್ನು ಹಸ್ತಾಂತರಿಸಿದಳು. ಶೆಟ್ಟರ ವಧುವಿನ ಅಪಹರಣವನ್ನು ಶೆಟ್ಟರ ಮತ್ತೋರ್ವ ವಧುವಿನ ಸಹಾಯದಿಂದ ಮಾಡಿ ಮುಗಿಸಿ, ರಾತ್ರಿಯ ಅಂಧಕಾರದಲ್ಲಿ ತವರಿನ ಸಾಬಿ ಕರಗಿ ಹೋಗುತ್ತಿದ್ದರೆ, ಸವತಿಯಿಂದ ಚುಟ್ಕಾರ ಪಡೆದ ಸಂತಸಕ್ಕೆ ರತ್ನಮ್ಮ ಭಾಜನರಾಗಿದ್ದಳು. “ಇಮ್ರಾನಣ್ಣಾ, ಹುಷಾರು, ಸೈಕಲ್ಲಿಗೆ ಏನೂ ಆಗದ ಹಾಗೆ ನೋಡಿಕೊಳ್ಳಿ, ಸೈಕಲ್ಲು ಭದ್ರ” ಎಂದು ಕಣ್ಣಿಂದ ಮರೆಯಾಗುತ್ತಾ ನಡೆದಿದ್ದ ತನ್ನ ಸವತಿಯ ಕುರಿತು ಸ್ತ್ರೀ ಸಹಜವಾದ ಕಾಳಜಿಗೆ ಧ್ವನಿಯಾದಳು. “ರತ್ನಮ್ಮ, ನೀವು ಯದಾರ ಪಡಬೇಡಿ, ಸೈಕಲ್ಲಿಗೆ ಏನೂ ಆಗದಂತೆ ನಾನು ನೋಡಿಕೊಳ್ಳುತ್ತೇನೆ” ಎನ್ನುವ ಅಭಯ ಕೊಡುತ್ತಲೇ ಅಮಾವಾಸ್ಯೆಯ ಕತ್ತಲೆಯನ್ನು ಸೀಳುತ್ತಾ ನಡೆದಿದ್ದ ಇಮ್ರಾನ್ ಕೂಗಿ ಕೂಗಿ ಹೇಳಿದ್ದು ರತ್ನಮ್ಮನ ಮನಸ್ಸಿಗೆ ಸಮಾಧಾನದ ಪನ್ನೀರನ್ನು ಚಿಮುಕಿಸಿತು. ಇವೆಲ್ಲಾ ವಿದ್ಯಮಾನಕ್ಕೆ, ಅಂಗಡಿಯ ಮುಂಬಾಗಿಲಿನಲ್ಲಿಯೇ ನಿಂತೇ ಸಾಕ್ಷಿಯಾಗಿದ್ದ ಮಂಜುಳಾ ತನ್ನ ತಲೆಯ ಮೇಲಿದ್ದ ಬಹು ದೊಡ್ಡ ಭಾರವೊಂದು ಇಳಿಸಿಕೊಂಡ ಅನುಭೂತಿಗೆ ಪಾತ್ರವಾದಳು.
ಎರಡು ದಿನಗಳ ನಂತರ ಶೆಟ್ಟರು ಮನೆಗೆ ಬಂದಾಗ ರಾತ್ರಿ ಎಂಟರ ವೇಳೆಯಾಗಿತ್ತು. ಹೊಸ್ತಿಲ ಒಳಗೆ ಕಾಲಿಟ್ಟ ಶೆಟ್ಟರು ಪಡಸಾಲೆಯಲ್ಲಿ ನಿಲ್ಲಿಸಿದ್ದ ಸೈಕಲ್ ಕಾಣದೆ ಅತೀವ ಗಾಬರಿಗೊಳಗಾದರು. “ರತ್ನಾ, ನನ್ನ ಸೈಕಲ್ ಎಲ್ಲಿ?” ಎಂದು ಉಚ್ಚಸ್ವರದಲ್ಲಿ ಕೂಗಾಡತೊಡಗಿದ ಶೆಟ್ಟರ ಅರ್ತನಾದವನ್ನು ರತ್ನಮ್ಮ ಮತ್ತು ಮಂಜುಳಾ ಊಹಿಸಿದ್ದವರೇ. ಶೆಟ್ಟರಿಗೆ ಯಾವ ಕಾರಣಗಳನ್ನು ಹೇಳಬೇಕು? ಎನ್ನುವ ಬಗ್ಗೆ ಈಗಾಗಲೇ ಹಲವು ಬಾರಿ ರಿಹರ್ಸಲ್ ಮಾಡಿದ್ದ ತಾಯಿಮಗಳ ಜೋಡಿ, ಶೆಟ್ಟರು ಜಗಳೂರಿಗೆ ಹೋದ ಮಾರನೇದಿನ ಬೆಳಿಗ್ಗೆ ಸೈಕಲ್ಲನ್ನು, ಪಡಸಾಲೆಯ ನೆಲವನ್ನು ಒರೆಸುವ ವೇಳೆ ಹೊರಗಡೆ ಬಿಟ್ಟಿದ್ದಾಗಿಯೂ, ಸ್ವಲ್ಪ ಸಮಯದ ನಂತರ ಸೈಕಲ್ ಒಳತರಲು ಹೋದಾಗ, ಸೈಕಲ್ ಹೊರಗಡೆ ಇಲ್ಲದ್ದು ಗಮನಕ್ಕೆ ಬಂದಿದ್ದಾಗಿಯೂ ನುಡಿಯಲಾಗಿ, ಊರಿಂದ ಮದುವೆಯ ತಿಂಡಿಗಳನ್ನ ತುಂಬಿ ತಂದಿದ್ದ ಕೈಚೀಲವನ್ನು ಧಪ್ಪೆಂದು ನೆಲದ ಮೇಲೆ ಚೆಲ್ಲಿದ ಶೆಟ್ಟರು ಅಲ್ಲಿಯೇ ಇದ್ದ ಸ್ಟೀಲ್ ಫೋಲ್ಡಿಂಗ್ ಕುರ್ಚಿಯಲ್ಲಿ ಉಸ್ಸೆಂದು ಕುಸಿದು ಕುಳಿತರು. ಸುಮಾರು ಹೊತ್ತು, ನೋವು ತುಂಬಿದ ಮುಖಮುದ್ರೆಯಲ್ಲಿಯೇ ಕುಳಿತ ಶೆಟ್ಟರ ಸ್ಥಿತಿ ನೋಡಿ ರತ್ನಮ್ಮನಿಗೂ ಕರುಳು ಕಿವಿಚಿದಂತಾಯಿತು. ಛೇ, ತಾವು ಇದನ್ನು ಮಾಡಬಾರದಿತ್ತು ಎನ್ನುವ ಆಲೋಚನೆಯೂ ತಲೆಯಲ್ಲಿ ಮೂಡಿತು. ಆದರೆ ಮಂಜುಳಾ ಮಾತ್ರ “ಆಗಿದ್ದೆಲ್ಲವೂ ಒಳ್ಳೆಯದಕ್ಕೇ, ಇನ್ನೆರೆಡು ದಿನದಲ್ಲಿ ಅಪ್ಪ ಸರಿ ಹೋಗುತ್ತಾರೆ ನೋಡುತ್ತಿರು. ಅವರ ಪಾಡಿಗೆ ಅವರನ್ನು ಬಿಡು” ಎಂದು ಅಮ್ಮನಿಗೆ ತಾಕೀತು ಮಾಡಿದಳು. ಅಂದು ರಾತ್ರಿ ಊಟವನ್ನೂ ಸೇವಿಸದೆ ಮಲಗಿದ ಶೆಟ್ಟರು ನಿದ್ದೆಯಿಲ್ಲದೆ ತಮ್ಮ ಹಾಸಿಗೆಯಲ್ಲಿ ಹೊರಳಾಡುತ್ತಾ ರಾತ್ರಿಯನ್ನು ಬೆಳಗು ಮಾಡಿದರು.
ಮಾರನೇ ದಿನ ಬೆಳಿಗ್ಗೆ ಎಂದಿನಂತೆ ಶೆಟ್ಟರ ಅಂಗಡಿಯ ಮುಂದೆ ನಿಂತು ಪಡಸಾಲೆಯ ಕಡೆಗೆ ಕಣ್ಣಾಯಿಸಿದ ನನಗೆ ದೊಡ್ಡ ಆಶ್ಚರ್ಯವೇ ಕಾದಿತ್ತು. ಹಲವು ತಿಂಗಳುಗಳ ಕಾಲ ನಾನು ನೋಡಿ, ನೋಡಿ ಅಭ್ಯಾಸವಾಗಿ ಹೋಗಿದ್ದ ನೋಟವೊಂದು ಇಲ್ಲವಾಗಿತ್ತು. ರಾತ್ರಿಯಿಡೀ ನಿದ್ದೆಯಿಲ್ಲದೆ ಕಾಲ ಕಳೆದ ಶೆಟ್ಟರು ಮುಂಜಾವಿನಲ್ಲಿ ಕಣ್ಣು ಹತ್ತಿದ ಕಾರಣ ಇನ್ನೂ ಹಾಸಿಗೆಯಿಂದ ಎದ್ದಿರಲಿಲ್ಲ. ಅಂದು ನನ್ನನ್ನು ನೋಡಿದ ಮಂಜುಳಾ ಏನನ್ನೂ ನುಡಿಯದೆ ತನ್ನ ಪಾಡಿಗೆ ತಾನು ಶಾಲೆಗೆ ನಡೆದಳು. ಶೆಟ್ಟರ ಮನೆಯಲ್ಲಿ ಏನೋ ಆಗಬಾರದ ಅನಾಹುತ ಆಗಿ ಹೋಗಿದೆ ಎಂದು ಗ್ರಹಿಸಿದ ನಾನು ಮ್ಲಾನವದನನಾಗಿಯೇ ಶಾಲೆ ಸೇರಿದೆ. ಯಾಕೋ ರೀಸಸ್ ಸಮಯದಲ್ಲಿ ಶೆಟ್ಟರ ಮನೆಯ ಕಡೆ ಸುಳಿಯಲು ಮನಸ್ಸಾಗದ ಕಾರಣ ಮಧ್ಯಾಹ್ನದ ಊಟದ ವೇಳೆ ಶೆಟ್ಟರ ಅಂಗಡಿಯ ಮುಂದೆ ಬಂದು ನಿಂತವನಿಗೆ ಬೆಳಗಿನ ಪರಿಸ್ಥಿತಿಯಲ್ಲಿ ಏನೂ ವ್ಯತ್ಯಾಸವಾದ ಹಾಗೆ ತೋರಲಿಲ್ಲ. ಶೆಟ್ಟರ ಮನೆಯಲ್ಲಿ ಕಾಲಸ್ತಂಭನವಾಗುವುದು ಯಾವ ಪರಿಯ ವಿಸ್ಮಯದಿಂದ ಎಂದು ಯೋಚಿಸುತ್ತಾ, ಇಷ್ಟು ಹೊತ್ತಾದರೂ ಮನೆಯಲ್ಲಿ ತಮ್ಮ ಇರುವಿನ ಸುಳಿವನ್ನೇ ನೀಡದ ಶೆಟ್ಟರಿಗಾಗಿ ಪರಿತಪಿಸುತ್ತಾ, ಮನೆಯ ಹಾದಿ ಹಿಡಿದೆ. ಬಹಳ ದಿನಗಳ ನಂತರ ಊಟದ ತಟ್ಟೆಯ ಮುಂದೆ ಸಾಕಷ್ಟು ಸಮಯ ವ್ಯಯಿಸಿದವನಿಗೆ ಅವ್ವನ ಮೆಚ್ಚುಗೆಯ ನೋಟ ಮಾತ್ರ ಅಂದು ದೊರೆತ ಏಕೈಕ ಬಳುವಳಿಯಾಗಿತ್ತು. ಮನೆಯಿಂದ ಶಾಲೆಗೆ ಹಿಂದಿರುಗಿವನು ಶೆಟ್ಟರ ಮನೆಯ ಮುಂದೆ ಹಾದು ಹೋದರೂ, ಆ ಕಡೆ ಮುಖ ಮಾಡುವ ದುಸ್ಸಾಹಸಕ್ಕೆ ಕೈ ಹಾಕಲಿಲ್ಲ. ಅಂದು ಸಾಯಂಕಾಲ ನಮ್ಮ ದಿನನಿತ್ಯದ ಪ್ರಭಾತ್ ಫೇರಿ ಇಲ್ಲದೇ ಹೋಗಿದ್ದು ಅತೀವ ದುಃಖವನ್ನು ತರಿಸಿತ್ತು. ಸಾಂಬಶಿವಶೆಟ್ಟರ ಸೈಕಲ್ಲು ಕಳುವಾಗಿದೆ ಎನ್ನುವ ವಿಷಯ ಅದಾಗಲೇ ಊರ ತುಂಬಾ ಹರಡಿತ್ತು.
ಈ ಘಟನೆಯ ನಂತರ ಶೆಟ್ಟರ ಬದುಕಿನಲ್ಲಿ ಬಹಳ ದೊಡ್ಡ ಪರಿವರ್ತನೆ ಕಂಡು ಬಂದಿತು. ಬೆಳಿಗ್ಗೆ ಮುಂಜಾನೆಯೇ ಎದ್ದು ಸೈಕಲ್ ಸೇವೆಯಲ್ಲಿ ನಿರತವಾಗುತ್ತಿದ್ದ ಶೆಟ್ಟರು ಈಗ ಏಳುವಾಗಲೇ ಬೆಳಗ್ಗಿನ ಒಂಬತ್ತು ಗಂಟೆ ದಾಟಿರುತ್ತಿತ್ತು. ಎದ್ದ ನಂತರ ಏನನ್ನೂ ಮಾಡದೆ, ಮುಂಕು ಬಡಿದವರಂತೆ ಮನೆಯ ಮುಂದಿನ ಕಟ್ಟೆಯ ಮೇಲೆ ಗಂಟೆಗಟ್ಟಲೆ ಕುಳಿತಿರುತ್ತಿದ್ದ ಶೆಟ್ಟರು ಅನ್ನ ಅಹಾರಾದಿಗಳಲ್ಲಿ ಇದ್ದಬದ್ದ ಆಸಕ್ತಿಯನ್ನೂ ಕ್ರಮೇಣ ಕಳೆದುಕೊಳ್ಳುತ್ತಾ ಸಾಗಿದ್ದರು. “ಶಾಲೆಗೆ ಹೋಗಿ ಬರುತ್ತೇನೆ” ಎಂದು ಮಂಜುಳ ಹೇಳುವ ಹೊತ್ತೂ ಏನೂ ಪ್ರತಿಕ್ರಿಯೆಯನ್ನು ತೋರದ ಶೆಟ್ಟರು ಮನೆ ಮುಂದಿನ ಹಾದಿಯನ್ನು ಶೂನ್ಯದೃಷ್ಟಿಯಿಂದ, ನೆಟ್ಟ ಕಣ್ಣುಗಳಿಂದ ನೋಡುತ್ತಾ ಕುಳಿತೇ ಇರುತ್ತಿದ್ದರು. ಕೆಲವು ದಿನಗಳಲ್ಲಿ ಶೆಟ್ಟರು ಸರಿ ಹೋಗುತ್ತಾರೆ ಎಂದು ನಂಬಿದ್ದ ರತ್ನಮ್ಮ ಹಾಗು ಮಂಜುಳಾರವರ ನಿರೀಕ್ಷೆ ದಿನ ಕಳೆದಂತೆ ಹುಸಿಯಾಗುತ್ತಾ ಸಾಗಿತ್ತು. ಮನೆ ಮುಂದಿನ ರಸ್ತೆಯಲ್ಲಿ ಯಾವುದಾದರೂ ಸೈಕಲ್ ಸಂಚರಿಸಿದ ವೇಳೆಯಷ್ಟೇ ಜೀವ ಬಂದವರಂತೆ ತೋರಿ ಬರುತ್ತಿದ್ದ ಶೆಟ್ಟರು ಸೈಕಲ್ ಮರೆಯಾಗುವವರೆಗೂ ಅದರ ಕಡೆಗೇ ಕಣ್ಣು ಕೀಲಿಸಿ ಎವೆಯಿಕ್ಕದೆ ನೋಡುತ್ತಿದ್ದರು. ಜೀವನದಲ್ಲಿ ಉತ್ಸಾಹವನ್ನೇ ಕಳೆದುಕೊಂಡಂತೆ ತೋರಿಬರುತ್ತಿದ್ದ ಶೆಟ್ಟರು ತಾಯಿಮಗಳನ್ನು ಮೊದಲಿಗಿಂತ ಹೆಚ್ಚಿನ ಮಾನಸಿಕ ಕುಸಿತಕ್ಕೆ ಈಡು ಮಾಡಿದರು. “ಗಣಪನನ್ನು ಮಾಡಲು ಹೋಗಿ ಅವರಪ್ಪನನ್ನು ಮಾಡಿ”ದ ರೀತಿಯ ಸ್ವಯಂಕೃತಾಪರಾಧಕ್ಕೆ ಸಿಲುಕಿದ ರತ್ನಮ್ಮ ಮತ್ತು ಮಂಜುಳಾ ಸಾಂಬಶಿವಶೆಟ್ಟರನ್ನು ಮತ್ತೆ ಸರಿದಾರಿಗೆ ತರುವ ತಮ್ಮ ಎಲ್ಲಾ ಪ್ರಯತ್ನಗಳಿಗೆ ಮೂರ್ತರೂಪವನ್ನು ಕೊಡಲು ಮುಂದಾದರು.
ಚಂದ್ರಮೌಳೇಶ್ವರ ದೇವಸ್ಥಾನದ ಕಾರ್ತೀಕದಿಂದ ಹಿಡಿದು ದುರ್ಗದ ಕನ್ನಿಕಾ ಪರಮೇಶ್ವರಿ ದೇವಸ್ಥಾನದ ಪೂಜಾರ್ಚನೆಗಳು ನಿರೀಕ್ಷಿತ ಮಟ್ಟದ ಫಲಿತಾಂಶ ಕೊಡದೇ ಹೋದ ಹೊತ್ತು ಚಿತ್ರದುರ್ಗದ ಜಿಲ್ಲಾ ಆಸ್ಪತ್ರೆಗೂ ಶೆಟ್ಟರನ್ನು ಕರೆದುಕೊಂಡು ಹೋಗಿ ಚಿಕಿತ್ಸೆಯನ್ನು ಕೊಡಿಸಲಾಯಿತು. ಇದರಿಂದ ಹೇಳಿಕೊಳ್ಳುವ ಮಟ್ಟದಲ್ಲಿ ಪ್ರಯೋಜನವಾಗಲಿಲ್ಲ. ಬದಲಾಗಿ ದಿನ ಕಳೆದ ಹಾಗೆ ದಾರಿಯಲ್ಲಿ ಹೋಗುವ ಸೈಕಲ್ಲುಗಳನ್ನು ನೋಡಿದ ಒಡನೆಯೇ ಅವುಗಳ ಹಿಂದೆ, ತಾನುಟ್ಟ ವಸ್ತ್ರಗಳ ಅರಿವೂ ಇಲ್ಲದೆ, ಓಡಲು ಮೊದಲು ಮಾಡುತ್ತಿದ್ದ ಶೆಟ್ಟರ ಹುಚ್ಚನ್ನು ಕಂಡು ತಾಯಿಮಗಳ ಜೋಡಿ ಅಕ್ಷರಶಃ ನಡುಗಿ ಹೋದರು. ದುರ್ಗದ ವೈದ್ಯರೋರ್ವರ ಸಲಹೆಯ ಮೇರೆಗೆ ಶಿವಮೊಗ್ಗೆಯ ಖ್ಯಾತ ಮನಶಾಸ್ತ್ರಜ್ಞ, “ಮಾನಸ ಆಸ್ಪತ್ರೆ”ಯ ಡಾ. ಚಂದ್ರಶೇಖರ್ ಅವರಿಗೆ ಶೆಟ್ಟರನ್ನು ತೋರಿಸಲಾಗಿ, ಶೆಟ್ಟರ ಮೇಲೆ ಹಲವು ಗಂಟೆಗಳ ಕಾಲ ವಿವಿಧ ರೀತಿಯ ಪರೀಕ್ಷೆಗಳನ್ನು ನಡೆಸಿದ ಡಾಕ್ಟರ್, ತದನಂತರದಲ್ಲಿ ಶೆಟ್ಟರನ್ನು ಹೊರಗಿನ ಕೋಣೆಯಲ್ಲಿ ಕೂರಿಸಿ, ರತ್ನಮ್ಮ ಮತ್ತು ಮಂಜುಳಾರ ಜೊತೆಗೆ ಒಂದು ಗಂಟೆಯ ಸುಧೀರ್ಘ ಸಮಾಲೋಚನೆ ನಡೆಸಿ, “ನಾನು ಹೇಳಿದ ಹಾಗೆ ಮಾಡಿ. ಮುಂದಿನ ತಿಂಗಳು ಮತ್ತೆ ಬಂದು ಪರೀಕ್ಷೆ ಮಾಡಿಸಿಕೊಳ್ಳಿ” ಎನ್ನುವ ಸಲಹೆಯೊಟ್ಟಿಗೆ ರೋಗಿಯ ಪರಿವಾರವನ್ನು ಬೀಳ್ಕೊಟ್ಟರು. ಪತಿಯನ್ನು ಮಗಳ ಜೊತೆಗೆ ಊರಿಗೆ ಕಳುಹಿಸಿದ ರತ್ನಮ್ಮ ತಾನು ಗುಡ್ಡದರಂಗವ್ವನಹಳ್ಳಿಯ ಅಮ್ಮನ ಮನೆಗೆ ಹೋಗಿ ಬರುವುದಾಗಿ ಹೇಳಿ ಶಿವಮೊಗ್ಗದಿಂದಲೇ ತವರೂರಿಗೆ ಪಯಣ ಬೆಳೆಸಿದಳು.
ತವರೂರಿನಿಂದ ಮಾರನೇ ದಿನವೇ ಗಂಡನ ಮನೆಗೆ ರತ್ನಮ್ಮ ವಾಪಸ್ಸಾದ ಮುಂದಿನ ಎರಡು ದಿನಗಳಲ್ಲಿಯೇ, ಮುಸ್ಸಂಜೆಯ ಏಳರ ವೇಳೆಗೆ ಶೆಟ್ಟರ ಮನೆಯ ಮುಂದೆ ಶೆಟ್ಟರ ಕಳೆದುಹೋದ ಸೈಕಲ್ ಪ್ರತ್ಯಕ್ಷವಾಗಿತ್ತು. ಮಾತುಮಾತಿನಲ್ಲಿ ಶೆಟ್ಟರನ್ನು ಮನೆಯಿಂದ ಹೊರಗೆ ಕರೆತಂದ ತಾಯಿಮಗಳ ಜೋಡಿ ಶೆಟ್ಟರ ಗಮನ ಮನೆ ಹೊರಗೆ ನಿಲ್ಲಿಸಿದ್ದ ಸೈಕಲ್ ಮೇಲೆ ಬೀಳುವ ಹಾಗೆ ನೋಡಿಕೊಂಡಿತ್ತು. ತಮ್ಮ ಸೈಕಲ್ ಕಣ್ಣಿಗೆ ಬೀಳುತ್ತಲೇ ಶರೀರದಲ್ಲಿ ಸಾವಿರ ವೋಲ್ಟ್ ವಿದ್ಯುತ್ ಹರಿದಂತಾದ ಶೆಟ್ಟರು ದಡಬಡಿಸುತ್ತಲೇ ಮೆಟ್ಟಿಲು ಇಳಿದವರು ಸೈಕಲ್ ಬಳಿ ಸಾರಿ ಎರಡೂ ಕೈಗಳಿಂದ ಸೈಕಲ್ ತಬ್ಬಿ ಬಳಸಿ ನಿಂತರು. ಸುಮಾರು ಹತ್ತುಹದಿನೈದು ನಿಮಿಷಗಳ ಕಾಲ ಬೀದಿಯಲ್ಲಿಯೇ ನಡೆದ ಶೆಟ್ಟರ, ಈ ತಮ್ಮ ತಾತ್ಕಾಲಿಕ ರೂಪದಲ್ಲಿ ಅಗಲಿದ ಪ್ರೇಯಸಿಯೊಟ್ಟಿಗಿನ ಪುನರ್ಮಿಲನಕ್ಕೆ, ವಿರಹವೇದನೆಯನ್ನು ನಿವೇದಿಸಿಕೊಳ್ಳುವ ಭರಾಟೆಗೆ ತಾಯಿಮಗಳು ಮೂಕಪ್ರೇಕ್ಷಕರಾಗಿ ನಿಂತಿದ್ದರು. ಹೆಂಡತಿ ಮಗಳ ಸಹಾಯದಿಂದ ಸೈಕಲ್ಲನ್ನು ಪಡಸಾಲೆಗೆ ತಂದು ನಿಲ್ಲಿಸಿದ ಶೆಟ್ಟರ ಕಣ್ಣಾಲಿಗಳು ತುಂಬಿ ಬಂದಿದ್ದವು. ಕಳೆದ ಕೆಲವು ತಿಂಗಳುಗಳಿಂದ ಸ್ವಚ್ಛತೆಯಿಂದ ದೂರವೇ ಉಳಿದ ಪರಿಣಾಮವಾಗಿ ಮೈ ಕೈ ತುಂಬ ಧೂಳನ್ನೇ ಧಾರಾಳವಾಗಿ ಮೆತ್ತಿಕೊಂಡಿದ್ದ ತಮ್ಮ ಸಂಗಾತಿಯ ಸ್ವಚ್ಛತೆಗೆ ಶೆಟ್ಟರು ರಾತ್ರಿಯ ಆ ಹೊತ್ತಿನಲ್ಲೂ ಆದ್ಯ ಗಮನವನ್ನು ನೀಡಿದರು. ತಿಂಗಳುಗಳ ಸೇವೆಯನ್ನು ಒಂದು ರಾತ್ರಿಯೇ ಮುಗಿಸುವ ಹುರುಪಿನಲ್ಲಿ ರಾತ್ರಿಯಿಡೀ ನಿದ್ದೆಗೆಟ್ಟು ಸೈಕಲ್ಲನ್ನು ತೊಳೆದು ಉಜ್ಜುವ ಕಾರ್ಯಕ್ಕೆ ಸಾಂಬಶಿವಶೆಟ್ಟರು ಮುಂದಾದರು. ಶೆಟ್ಟರ ಉತ್ಸಾಹ ನೋಡಿ ಡಾಕ್ಟರ್ ತಮಗೆ ಹೇಳಿ ಕೊಟ್ಟ ಉಪಾಯ ಫಲಿಸಿತು ಎಂದು ಮನದಲ್ಲಿಯೇ ಸಂತೋಷಪಟ್ಟ ರತ್ನಮ್ಮ ಮತ್ತು ಮಂಜುಳಾ, ಶೆಟ್ಟರನ್ನು ಅವರ ಸ್ವಚ್ಚತಾಕಾರ್ಯದಿಂದ ವಿಮುಖಗೊಳಿಸುವ ಯಾವ ಪ್ರಯತ್ನಗಳನ್ನೂ ಮಾಡಲಿಲ್ಲ. ಎರಡು ಗಂಟೆಗಳ ಸ್ವಚ್ಚತಾಸೇವೆಯ ತರುವಾಯ ತಾವೇ ಖುದ್ದಾಗಿ ಅಡುಗೆಮನೆಗೆ ಬಂದು ಹೆಂಡತಿ ಬಡಿಸಿದ ಭೋಜನವನ್ನು ಭರ್ಜರಿಯಾಗಿಯೇ ಸೇವಿಸಿದ ಶೆಟ್ಟರು, ಊಟದ ಬಳಿಕ, ತಾವು ಅರ್ಧದಲ್ಲಿಯೇ ಬಿಟ್ಟು ಬಂದ ಕಾರ್ಯವನ್ನು ಪೂರ್ಣಗೊಳಿಸುವ ಕಡೆ ಗಮನಕೊಟ್ಟರು. ಸುಮಾರು ದಿನಗಳಿಂದ ಶೆಟ್ಟರ ಚಿಂತೆಯಲ್ಲಿ ಕೊರಗಿ ಕೊರಗಿ ಹೈರಾಣಾಗಿದ್ದ ತಾಯಿಮಗಳು ಕಣ್ಮುಚ್ಚಿ ಸುಖನಿದ್ರೆಗೆ ಜಾರಿದರು.
ಮಾರನೇ ದಿನ, ಕಾಕತಾಳೀಯವೋ ಎನ್ನುವಂತೆ, ತಿಂಗಳುಗಳ ನಂತರ ಶೆಟ್ಟರ ಅಂಗಡಿಗೆ ಮುಖಾಮುಖಿಯಾದ ನನಗೆ ಸಖೇದಾಶ್ಚರ್ಯ ಕಾದಿತ್ತು. ಪಡಸಾಲೆಯಲ್ಲಿ ಎಂದಿನಂತೆ ತಮ್ಮ ಸೈಕಲ್ಲನ್ನು ನಿಲ್ಲಿಸಿಕೊಂಡಿದ್ದ ಶೆಟ್ಟರು ಅದರ ಸಿಂಗಾರದಲ್ಲಿ ಸ್ವಲ್ಪ ಹೆಚ್ಚೇ ಎನ್ನಬಹುದಾದ ಉತ್ಸಾಹದಲ್ಲಿ ನಿರತರಾಗಿದ್ದರು. ಅಂದು ನನ್ನನ್ನು ಕಂಡು ಪ್ರತಿಬಾರಿಯ ಪ್ರೀತಿಗಿಂತ ತುಸು ಹೆಚ್ಚಾದ ವಾತ್ಸಲ್ಯದಿಂದಲೇ ಮಾತನಾಡಿಸಿದ ಮಂಜುಳಾ ಎರಡು ಕ್ಯಾಡ್ ಬರೀಸ್ ಚಾಕಲೇಟುಗಳನ್ನ ನನಗೆ ಕೊಟ್ಟಳಲ್ಲದೆ ಪಡಸಾಲೆಯಲ್ಲಿ ನಿಂತು ಶೆಟ್ಟರ ಶೃಂಗಾರ ಕಾರ್ಯವನ್ನು ಕಣ್ತುಂಬಿಕೊಳ್ಳಲು ಅನುವು ಮಾಡಿಕೊಟ್ಟಳು. ಅಂದಿನ ಸಂಜೆಯ ಸೈಕಲ್ ಮೆರವಣಿಗೆಯಂತೂ ಅಭೂತಪೂರ್ವ ರೀತಿಯಲ್ಲಿ ಸಂಪನ್ನವಾಯಿತು. ಅಂದು ತುಸು ಹೆಚ್ಚಿನ ಸಂಖ್ಯೆಯಲ್ಲಿಯೇ ಭಾಗವಹಿಸಿದ್ದ ಊರ ಬಾಲಕರಿಗೆ ಶೆಟ್ಟರು ರತ್ನಮ್ಮನಿಗೆ ಹೇಳಿ ವಿಶೇಷರೂಪದಲ್ಲಿ ಮಾಡಿಸಿದ್ದ ತುಪ್ಪದ ಮೈಸೂರುಪಾಕನ್ನು ಹಂಚಿ ಸಂಭ್ರಮಿಸಿದರು.
ಹೀಗೆಯೇ ಅಲ್ಲಿಂದ ಮುಂದೆ ಸಾಂಗವಾಗಿ ವರುಷಗಳ ಕಾಲ ಊರಿನ ನಿತ್ಯದ ಘಟನಾವಳಿಗಳ ಕ್ರಮದ ಒಂದು ಭಾಗವಾಗಿ ನಡೆದುಹೋದ ಶೆಟ್ಟರ ಸೈಕಲ್ ಶೋಭಾಯಾತ್ರೆಗಳು ಆ ಹೊತ್ತಿನ ಚಿಣ್ಣರಿಗೆ ಕೊಟ್ಟ ಖುಷಿಗೆ ಸಮಾನಾಂತರವಾದ, ವಿಕಲ್ಪ ಎನ್ನಬಹುದಾದ ಮತ್ತೊಂದು ಮನೋರಂಜನಾತ್ಮಕ ಘಟನೆಯ ನೆನಪೂ ಈ ಹೊತ್ತು ನನ್ನ ನೆನಪಿನ ಖಜಾನೆಯಲ್ಲಿ ಇಲ್ಲ. ಅಂದು ಊರಿನಲ್ಲಿ ಇದ್ದ ಏಳೆಂಟು ಸೈಕಲ್ಲುಗಳಲ್ಲಿ ಶೆಟ್ಟರ ಬಳಿ ಇದ್ದ ಸೈಕಲ್ಲೂ ಸೇರಿತ್ತು. ತಮ್ಮ ಸೈಕಲ್ ನೊಟ್ಟಿಗೆ ಅವಿನಾಭಾವ ಸಂಬಂಧವೊಂದನ್ನು ಪ್ರತಿಷ್ಠಾಪಿಸಿದ ಶೆಟ್ಟರು ಮಾನವ ಮತ್ತು ಯಂತ್ರಗಳ ನಡುವೆ ಸಾಧಿಸಬಹುದಾದ ಮಧುರಸಖ್ಯವೊಂದಕ್ಕೆ ಅಪರೂಪದ ಉದಾಹರಣೆಯಾಗಿಯೇ ಉಳಿಯುತ್ತಾರೆ. ಮಾನವ ಮತ್ತು ಆತನೇ ನಿರ್ಮಿಸಿದ ಯಂತ್ರವೊಂದರ ಮಧ್ಯೆ ಉಂಟಾಗುವ ಈ ಬಂಧವನ್ನು “ಮಾಮರವೆಲ್ಲೋ, ಕೋಗಿಲೆಯೆಲ್ಲೋ” ಎನ್ನುವ ಚಲನಚಿತ್ರ ಗೀತೆಯಿಂದಲೂ ಪೂರ್ಣರೂಪದಲ್ಲಿ ಅರ್ಥೈಸಲಾಗದು. ಉಳಿದವರಿಗೆ ನಿರ್ಜೀವವೆಂದೇ ತೋರಿಬರುವ ಅನೇಕ ವಸ್ತುಗಳು, ಮನುಷ್ಯನೊಬ್ಬ ಅವುಗಳನ್ನು ಬಳಸುತ್ತಾ ಹೋದ ಹಾಗೆ ಅವುಗಳಲ್ಲಿ ಅಂತರ್ಗತವಾಗಿರುವ ಜೀವಸೆಲೆಗೆ ಮುಖಾಮುಖಿಯಾಗುವ ಈ ವಿಷಯಕ್ಕೆ ಏನೆಂದು ಹೆಸರಿಡುವುದು? ಒಂದು ವಸ್ತುವನ್ನು ಅಗತ್ಯದ ಕಾರಣ ಒಡ್ಡಿ “ಬೇಕು” ಎನ್ನುವ ಕಾರಣಕ್ಕಷ್ಟೆ ಬಳಸಲು ಮೊಡಲಿಡುವ ಮಾನವ, ದಿನಗಳು ಕಳೆದ ಹಾಗೆ ಅದೇ ವಸ್ತುವಿನೊಡನೆ, ಅಗತ್ಯಕ್ಕೆ ಮೀರಿದ ಮಟ್ಟದ ಭಾವನಾತ್ಮಕ ಬೆಸುಗೆಯೊಂದರಲ್ಲಿ ಸಿಲುಕುವ ಪವಾಡಗಳು ಘಟಿಸುವುದಾದರೂ ಯಾವ ಕಾರಣಕ್ಕಾಗಿ? ನಿರ್ಜೀವ ವಸ್ತುಗಳಲ್ಲಿಯೂ ಜೀವದ ಸೆಲೆಗಳನ್ನು, ಆರ್ದತೆಯನ್ನು ಅರಸುವ, ಪಡೆಯುವ ಬಹಳ ದೊಡ್ಡ ಗುಣ ಮಾನವೀಯ ನೆಲೆಗಳ ಗಡಿಗಳನ್ನು ಯಾವತ್ತೂ ವಿಸ್ತರಿಸುವಷ್ಟು ಶಕ್ತಿಯುತವಾದುದೇ? ಜೀವಂತ ವಸ್ತುಗಳನ್ನು ಮೀರಿ ನಿರ್ಜೀವ ವಸ್ತುಗಳನ್ನೂ ತನ್ನ ಪ್ರೀತಿಯ ಸುಳಿಯಲ್ಲಿ ಸಿಲುಕಿಸುವ ಈ ಮಟ್ಟದ ಉತ್ಕಟಪ್ರೇಮ ಹುಟ್ಟುವ ಪರಿಯಾದರೂ ಎಂತಹುದು? ಇದು ಕೇವಲ ಮಾನವಜೀವಿಗಷ್ಟೇ ಸೀಮಿತವಾಗದೆ, ಪ್ರಾಣಿಪ್ರಪಂಚವೂ ಇಂತಹ ಸೋಜಿಗಕ್ಕೆ ಪಾತ್ರವಾಗಬಲ್ಲದೆ? ವಸ್ತುವೊಂದನ್ನು ಅತಿಯಾಗಿ ಪ್ರೀತಿಸುತ್ತಾ ನಡೆಯುವ ಮಾನವನಿಗೆ, ಆ ವಸ್ತುವಿನಲ್ಲಿ ಮೊದಲು ಕಾಣದ ವಿಶೇಷವಾದ ಗುಣಗಳು ಗೋಚರಿಸುತ್ತಾ ಹೋಗಬಲ್ಲವೆ? ಆಖೈರಾಗಿ, ಮನುಷ್ಯ ಮತ್ತು ನಿರ್ಜೀವ ವಸ್ತುಗಳ ಮಧ್ಯದ ಈ ವಿಶಿಷ್ಟ ಅನುಬಂಧವನ್ನು ಮೂರ್ತಿಪೂಜೆಯಂತಹ ವಿಧಾನಕ್ಕೂ ಅನ್ವಯಿಸಲಾದೀತೆ? ನಾವು ಪೂಜಿಸುವ ಮೂರ್ತಿಗಳಲ್ಲಿ ಹೊಸ,ಹೊಸ ಪವಾಡಸದೃಶ್ಯ ಶಕ್ತಿಯ ಅನುಭೂತಿಯನ್ನು ಅರಸುತ್ತಲೇ ಸಾಗುವ ಭಕ್ತವೃಂದಕ್ಕೂ, ಸಾಂಬಶಿವಶೆಟ್ಟರ ಸೈಕಲ್ ಆರಾಧನೆಗೂ ಏನಾದರೂ ಸಾಮ್ಯತೆಗಳಿವೆಯೇ? ಮೀರಾಬಾಯಿಯ ಗಿರಿಧರನೆಡೆಯ ಉತ್ಕಟಪ್ರೇಮ, ಅಕ್ಕಮಹಾದೇವಿಯ ಮಲ್ಲಿಕಾರ್ಜುನನೆಡೆಯ ಉತ್ಕಟತುಡಿತ ಮತ್ತು ಇಂತಹುದೇ ಹತ್ತಾರು ವಿಲಕ್ಷಣ ಸಂಗತಿಗಳ ಬೆಳಕಿನಲ್ಲಿಯೇ ಸಾಂಬಶಿವಶೆಟ್ಟರ ಸೈಕಲ್ ಮೇಲಿನ, ಲೌಕಿಕತೆಯನ್ನು ಮೀರಿ ಧಾರೆಯಾಗಿ ಹರಿದ, ಪ್ರೇಮದ ಮೂಲವನ್ನು ಅರಸಬಹುದೇ? ತಾವು ಆರಾಧಿಸುತ್ತಿದ್ದ ಸೈಕಲ್ ಕಣ್ಮರೆಯಾದಾಗ ವಿಲವಿಲ ಒದ್ದಾಡಿದ ಶೆಟ್ಟರ ಸಂಕಟವನ್ನು ತನ್ನ ಇಷ್ಟದೈವ ಗೋಚರಿಸದೇ ಹೋದಲ್ಲಿ ಭಕ್ತನೊಬ್ಬ ಪರಿತಪಿಸುವ ತೊಳಲಾಟದೊಂದಿಗೆ ಸಮೀಕರಿಸಬಹುದೆ? ಮೀರಾಬಾಯಿಯ ಜೀವನದಿಂದ ಹೇಗೆ ಗಿರಿಧರನನ್ನು ಬೇರ್ಪಡಿಸಲು ಅಶಕ್ಯವೋ ಅದೇ ರೀತಿಯಲ್ಲಿ ಸಾಂಬಶಿವಶೆಟ್ಟರ ಜೀವನದಿಂದ ಸೈಕಲ್ಲನ್ನು ಪ್ರತ್ಯೇಕಿಸುವುದು ಅಸಾಧ್ಯ, ಹೌದೇ? ಇದು ಅಕ್ಕನಾಗಮ್ಮನ ಜೀವನವನ್ನು ಶ್ರೀಶೈಲದ ಮಲ್ಲಿಕಾರ್ಜುನನಿಂದ ಪ್ರತ್ಯೇಕಿಸಿ ನೋಡಿದ ಹಾಗೆಯೇ ಅಲ್ಲವೇ? ಹೇಗೆ ಮೀರಾಬಾಯಿ ಗಿರಿಧರನನ್ನಲ್ಲದೆ ಅನ್ಯದೈವವನ್ನು ಸ್ವೀಕರಿಸಲಾರಳೋ, ಅಕ್ಕನಿಗೆ ಹೇಗೆ ಮಲ್ಲಿಕಾರ್ಜುನನೇ ಪರಮ ಜೀವಾಪ್ತನೋ ಥೇಟ್ ಅದೇ ರೀತಿಯಲ್ಲಿ ತಮ್ಮ ಕಳೆದುಹೋದ ಸೈಕಲ್ ನಲ್ಲದೆ ಬೇರೆ ಯಾವ ಸೈಕಲ್ಲನ್ನೂ ಶೆಟ್ಟರು ಒಪ್ಪಿ, ಅಪ್ಪುವ ಸಾಧ್ಯತೆಗಳು ಗೌಣವೆಂದೇ ನಿಮಗೂ ಈಗಾಗಲೇ ಮನವರಿಕೆಯಾಗಿರಬೇಕಲ್ಲವೇ? ಇದೇ ಸಂಗತಿಯನ್ನು ಗಮನದಲ್ಲಿ ಇರಿಸಿಯೇ ಶಿವಮೊಗ್ಗೆಯ ಡಾಕ್ಟರ್ ಶೆಟ್ಟರ ಕಳೆದುಹೋದ ಸೈಕಲ್ಲನ್ನು ತಂದುಕೊಟ್ಟರಷ್ಟೇ ಶೆಟ್ಟರು ಮಾನಸಿಕವಾಗಿ ಚೇತರಿಸಿಕೊಂಡಾರು ಎಂದು ತಾಯಿಮಗಳಿಗೆ ಖಡಕ್ಕಾದ ಚಿತಾವಣೆ ಕೊಟ್ಟಿರಬೇಕಲ್ಲವೇ? ಬೇರೆ ಬೇರೆ ವ್ಯಕ್ತಿಗಳು ತಮ್ಮ ಇಷ್ಟದ ವಸ್ತುಗಳನ್ನು ಪ್ರೀತಿಸುವ, ಪ್ರೇಮಿಸುವ, ಆರಾಧಿಸುವ ಪರಿಗಳು ಮೇಲ್ನೋಟಕ್ಕೆ ವಿಭಿನ್ನವಾಗಿ ತೋರಿ ಬಂದರೂ ಅವುಗಳೆಲ್ಲದರ ಅಂತರ್ಗತವಾಹಿನಿಯಾದ ನಿಷ್ಕಲ್ಮಷ ಪ್ರೇಮದ ಸೆಲೆ ಒಂದೇ ಸ್ವರೂಪದ್ದು ಎಂದು ನೀವೂ ಊಹಿಸಿರುತ್ತೀರಿ ಅಲ್ಲವೇ? ಊರಿನಲ್ಲಿ ತಮ್ಮ ಸೈಕಲ್ಲನ್ನು ಏರಿ ಎಂದೂ ಸವಾರಿ ಮಾಡದ ಶೆಟ್ಟರು ಅದನ್ನು ಜೀವನಾಧಾರವಾಗಿದ್ದ ನೀರನ್ನು ಊರಭಾವಿಯಿಂದ ತರುವ ಕಾಯಕಕ್ಕಷ್ಟೆ ಸೀಮಿತಗೊಳಿಸಿದ್ದರು. ಸೈಕಲ್ಲನ್ನು ತನ್ನ ಜೀವಕ್ಕಿಂತ, ಪತ್ನಿಗಿಂತ, ಪುತ್ರಿಸಮಾನವಾಗಿ ಪ್ರೀತಿಸಿದ್ದ ಶೆಟ್ಟರ ಸರ್ವಸ್ವವೂ ಸೈಕಲ್ಲೇ ಅಡಗಿತ್ತು. ಸೈಕಲ್ಲನ್ನು ತಮ್ಮ ಸುಖದುಃಖಗಳಲ್ಲಿ ಭಾಗಿಯಾಗಿ ಮಾಡಿ, ಅದರ ಮನವನ್ನು ಓದುವ ಹಾಗೆ, ಅದರೊಟ್ಟಿಗೆ ಮಾತನಾಡುವ ಮಟ್ಟಿಗಿನ ಉನ್ಮಾದವನ್ನು ಕಡೆಯವರೆಗೂ ಪ್ರದರ್ಶಿಸುತ್ತಲೇ ನಡೆದ ಶೆಟ್ಟರು ಮಗಳ ವಿಷಯದಲ್ಲಿ ಬಹಳ ಅದೃಷ್ಟವಂತರು. ಎಸ್ಸೆಸ್ಸೆಲ್ಸಿ ನಂತರ ಬೆಂಗಳೂರಿಲ್ಲಿ ಓದು ಮುಂದುವರೆಸಿದ ಮಂಜುಳಾ ಬೆಂಗಳೂರು ವಿಶ್ವವಿದ್ಯಾನಿಲಯದಿಂದ ಬಿ.ಕಾಂ. ಪದವಿಯನ್ನು ಪ್ರಥಮದರ್ಜೆಯಲ್ಲಿ ಉತ್ತೀರ್ಣಳಾಗಿ ಭದ್ರಾವತಿಯ ಓರ್ವ ಯೋಗ್ಯವರನೊಂದಿಗೆ ವಿವಾಹ ಬಂಧನದಲ್ಲಿ ಬಂಧಿಸಲ್ಪಟ್ಟಳು. ಭದ್ರಾವತಿಯ ಆಕಾಶವಾಣಿ ಕೇಂದ್ರದಲ್ಲಿ ಸರ್ಕಾರಿ ಉದ್ಯೋಗಗಿಟ್ಟಿಸಿಕೊಂಡ ಮಂಜುಳೆಯ ಮದುವೆಯ ಹಿಂದಿನ ದಿನದ ವರಪೂಜೆ ಕಾರ್ಯಕ್ರಮದಲ್ಲಿ ಶೆಟ್ಟರು ತಮ್ಮ ಸೈಕಲ್ಲಿಗೆ ಪುರೋಹಿತರಿಂದ ವಿಶೇಷಪೂಜೆಯೊಂದನ್ನು ಮಾಡಿಸಿದರು.
ಶೆಟ್ಟರ ಭಾವಿ ಅಳಿಯನೂ ಮಾಮನ ಈ ಕಾರ್ಯದಲ್ಲಿ ಅತ್ಯಂತ ಉತ್ಸಾಹದಿಂದ ಪಾಲ್ಗೊಂಡು ತನಗೂ ಇರುವ ಸೈಕಲ್ ಪ್ರೇಮದ ಬಗೆಗಿನ ಕುರುಹನ್ನು ಢಾಳಾಗಿ ಪ್ರದರ್ಶಿಸಿದ್ದನ್ನು ಕಂಡ ರತ್ನಮ್ಮ ಅದ್ಯಾವ ಕಾರಣಕ್ಕೋ ಮಗಳನ್ನು ತಬ್ಬಿಕೊಂಡು ಗಂಟೆಗಟ್ಟಲೆ ಅಶ್ರುಧಾರೆಯನ್ನು ಹರಿಸುತ್ತಲೇ ಮುಹೂರ್ತದ ಹಿಂದಿನ ರಾತ್ರಿಯನ್ನು ಕಳೆದಳು. ಸೈಕಲ್ ಬ್ರ್ಯಾಂಡ್, ಮಾಡೆಲ್, ಊರು, ಸೈಕಲ್ ಪೂಜಾರಿ, ಪೂಜಾರಿಯ ಹೆಂಡತಿ ಬದಲಾದರೂ ತುರುವನೂರಿನ ಶೆಟ್ಟರ ಸೈಕಲ್ ಸೇವೆ ಭದ್ರಾವತಿಯ ಮಗಳ ಮನೆಯಲ್ಲಿಯೂ ಅಭಾದಿತವಾಗಿ ನಡೆದೀತು ಎನ್ನುವ ಆಪತ್ತಿನ ಮುನ್ಸೂಚನೆ ಸಿಕ್ಕ ರತ್ನಮ್ಮನ ತಾಯಿಕರಳು ಮರುಗಿದ ಪರಿಯನ್ನು ಸುಲಭದಲ್ಲಿ ಅರುಹಲಾಗದು. ಆದರೆ ಮಂಜುಳೆಯ ವಿಚಾರವಾಗಿ ಈ ವಿಷಯ ಎಷ್ಟರಮಟ್ಟಿಗೆ ಸತ್ಯವಾಯಿತೋ, ಬಿಟ್ಟಿತೋ ಎನ್ನುವುದನ್ನು ಖಾತ್ರಿಪಡಿಸಬಲ್ಲ ಯಾವ ಸಂಪನ್ಮೂಲಗಳೂ ನನ್ನ ಶಕ್ತಿಯ ದಾಯಿರೆಯನ್ನು ಮೀರಿ ನಿಂತವುಗಳಾದ ಕಾರಣವರ್ಷ ಈ ಬಗ್ಗೆ “ಇದಂಮಿಥಂ” ಎಂದು ನುಡಿಯಲಾರೆ.