ವಿಜಯನಗರ ಕಾಲದ ಶೌಚಾಲಯಗಳು

Share

ವಿಜಯನಗರ ಕಾಲದ ಶೌಚಾಲಯಗಳು

ಆಧುನಿಕ ಯುಗದಲ್ಲಿ ನೈರ್ಮಲ್ಯ ಮತ್ತು ಶುಚಿತ್ವಕ್ಕೆ ವಿಶೇಷ ಆದ್ಯತೆಯನ್ನು ನೀಡುವ ಪ್ರಯತ್ನಗಳು ನಿರಂತರವಾಗಿ ನಡೆಯುತ್ತಿವೆ. ಅದರಲ್ಲೂ ಬಯಲು ಬಹಿರ್ದೆಸೆಯನ್ನು ನಿರ್ಮೂಲ ಮಾಡಲು ಸರ್ಕಾರಗಳು ಇನ್ನಿಲ್ಲದ ಪ್ರಯತ್ನ ಮಾಡುತ್ತಿವೆ. ಸ್ವಚ್ಚ ಭಾರತ ನಿರ್ಮಾಣಕ್ಕೆ ಸುಸ್ಥಿರ ಆರೋಗ್ಯ ಮುಖ್ಯ, ಇದಕ್ಕೆ ಸ್ವಚ್ಚ ಪರಿಸರ ಅತ್ಯಗತ್ಯವೆಂಬುದನ್ನು ನಿತ್ಯವೂ ಬಿತ್ತರಿಸುತ್ತಿದೆ. ಈ ಪರಿಪಾಠ ಇಂದು ನಿನ್ನೆಯದಲ್ಲ. ಶೌಚಾಲಯದ್ದೂ ಒಂದು ಇತಿಹಾಸವೇ. ಭಾರತದ ಮಟ್ಟಿಗೆ ನಗರೀಕರಣವೆಂಬುದು ಸಿಂಧೂ ನಾಗರೀಕತೆಯಷ್ಟೇ ಪ್ರಾಚೀನ. ಅಂದಿನ ಜನರು ನೈರ್ಮಲ್ಯಕ್ಕೆ ನೀಡಿದ ಮಹತ್ವ ಅನನ್ಯವಾದದ್ದು. ಅಂತೆಯೇ ನಂತರ ಕಾಲದಲ್ಲೂ ಸ್ವಚ್ಚತೆಗೆ ವಿಶೇಷ ಆದ್ಯತೆಯನ್ನು ಆಯಾ ಕಾಲದ ಆಡಳಿತ ನೀಡುತ್ತಾ ಬಂದಿದೆ. ಅಂತಹ ಪ್ರಯತ್ನವನ್ನು ಕೈಗೊಂಡವರಲ್ಲಿ ವಿಜಯನಗರ ಅರಸರೂ ಮುಖ್ಯರಾಗಿದ್ದಾರೆ.
ವಿಜಯನಗರ ಅಥವಾ ಹಂಪೆಯು ಮಧ್ಯಯುಗದ ಪ್ರಸಿದ್ಧ ರಾಜಧಾನಿಯೆಂಬುದು ತಿಳಿದ ವಿಷಯ. ಇದರ ಹರಹು ಉಪಪಟ್ಟಣಗಳನ್ನು ಗಮನಿಸಿ ಹೇಳುವುದಾದರೆ ಇಪ್ಪತ್ತೈದು ಚದರ ಕಿ.ಮೀ. ವಿಸ್ತೀರ್ಣವನ್ನೇ ಹೊಂದಿದ್ದಿತು. ಇದು ದಕ್ಷಿಣ ಭಾರತದ ಬಹುದೊಡ್ಡ ನಗರ ಮಾತ್ರವಲ್ಲದೆ ದೇಶೀಯ ಮತ್ತು ವಿದೇಶೀಯ ಮಾರುಕಟ್ಟೆಯೂ ಆಗಿತ್ತು. ಇದೊಂದು ರಾಜಧಾನಿಯಾಗಿ ಆಡಳಿತ ಕೇಂದ್ರವಲ್ಲದೆ ಧಾರ್ಮಿಕ, ಸಾಮಾಜಿಕ, ರಾಜಕೀಯ ಮತ್ತು ಆರ್ಥಿಕ ಚಟುವಟಿಕೆಗಳ ಆಗರವೂ ಆಗಿತ್ತು. ಇದರಿಂದ ಇಲ್ಲಿ ಅಪಾರ ಜನಸಂಖ್ಯೆ ನೆಲೆಸಿ, ನಗರವೂ ವಿಸ್ತಾರವಾಗಿ ಬೆಳೆಯಿತು. ನಗರ ಬೆಳೆದಂತೆಲ್ಲಾ ಜನಸಂಖ್ಯೆಗೆ ಅನುಗುಣವಾಗಿ ಮೂಲಭೂತ ಸೌಲಭ್ಯಗಳನ್ನು ಒದಗಿಸುವುದು ಅನಿವಾರ್ಯ. ಈ ಹಿನ್ನೆಲೆಯಲ್ಲಿ ಜನಸಂಖ್ಯೆಯ ಅವಶ್ಯಕತೆಗೆ ಅನುಗುಣವಾಗಿ ನಗರದಲ್ಲಿ ಉಪಪಟ್ಟಣಗಳೂ ನಿರ್ಮಾಣವಾದವು. ಪಟ್ಟಣದ ಬೆಳವಣಿಗೆಗೆ ಅನುಗುಣವಾಗಿ ಜನರಿಗೆ ಅಗತ್ಯವಾದ ನೀರಿನ ಸರಬರಾಜಿಗಾಗಿ ತೊಟ್ಟಿ, ಬಾವಿ, ಕೊಳ, ಹೊಂಡ, ಕೆರೆ ಮತ್ತು ಕಾಲುವೆಗಳನ್ನು ನಿರ್ಮಿಸುವುದು ಅನಿವಾರ್ಯವಾದದ್ದನ್ನು ಹಂಪೆ-ವಿಜಯನಗರ ಪರಿಸರದಲ್ಲಿ ಕಾಣುತ್ತೇವೆ.

ಇದಕ್ಕೆ ಇಂದಿಗೂ ಉಳಿದುಬಂದಿರುವ ನೀರಿನ ಸಂಗ್ರಹಾಗಾರಗಳು ಪ್ರಮುಖ ಸಾಕ್ಷ್ಯಗಳಾಗಿವೆ. ಇವುಗಳಲ್ಲಿ ವರ್ಷದುದ್ದಕ್ಕೂ ನೀರಿರಲು ಕೆರೆಗಳನ್ನು, ಕೆರೆಗಳು ಸದಾ ತುಂಬಿರಲು ಅಣೆಕಟ್ಟೆ ಮತ್ತು ಅವುಗಳ ಜೋಡಣೆಗೆ ಕಾಲುವೆಗಳನ್ನು ತೋಡಿಸಿದ್ದರು. ಒಟ್ಟಿನಲ್ಲಿ ನಗರಕ್ಕೆ ನೀರನ್ನು ಹರಿಸುವ ಬಹುದೊಡ್ಡ ಯೋಜನೆಯನ್ನೇ ವಿಜಯನಗರ ಅರಸರು ಹಮ್ಮಿಕೊಂಡಿದ್ದರೆನ್ನಬಹುದು. ಈ ಬಗೆಯಲ್ಲಿ ಕೈಗೊಂಡ ನೀರಿನ ಯೋಜನೆಗಳು ಹಂಪೆ ಪರಿಸರವನ್ನು ಇಂದಿಗೂ ಹಚ್ಚಹಸಿರಾಗಿಸಿವೆ.
ನೀರಿನ ಪೂರೈಕೆಯು ವ್ಯವಸ್ಥೆಗೊಂಡಂತೆ ಅದರ ಬಳಕೆಯತ್ತಲೂ ವಿಜಯನಗರ ಅರಸರು ಗಮನ ಹರಿಸಿದ್ದರು. ನೀರನ್ನು ಅರಮನೆ, ಜನವಸತಿ, ಸಾರ್ವಜನಿಕ ಸ್ಥಳ, ದೇಗುಲ ಮೊದಲಾದೆಡೆ ಸಂಗ್ರಹಿಸಲು ಕೊಳ, ಬಾವಿ, ತೊಟ್ಟಿಗಳನ್ನು ನಿರ್ಮಿಸಿದ್ದರು. ಅವುಗಳಿಗೆ ಕಲ್ಲು ಮತ್ತು ಗಾರೆಗಚ್ಚಿನ ಕಾಲುವೆ, ಸುಟ್ಟ ಮಣ್ಣಿನ ಕೊಳವೆಗಳ ಮೂಲಕ ಅಚ್ಚುಕಟ್ಟಾಗಿ ಸರಾಗವಾಗಿ ಹರಿಸುವ ವ್ಯವಸ್ಥೆಯನ್ನೂ ಕಲ್ಪಿಸಿದ್ದುದು ವಿಜಯನಗರ ಅರಸರ ಸಾಧನೆಯೇ ಸರಿ. ಇದು ಒಂದೆಡೆಯಾದರೆ ವಿಜಯನಗರವೆಂಬ ಮಹಾಪಟ್ಟಣದಲ್ಲಿ ಇದ್ದ ಜನರ ಮಲಮೂತ್ರಗಳ ನಿರ್ವಹಣೆಯ ಶೌಚಾಲಯಗಳು ಹೇಗಿದ್ದವೆಂಬ ಕುತೂಹಲ ಹಾಗೂ ಅಂದು ಕೈಗೊಂಡ ಕ್ರಮಗಳೇನೆಂಬ ಪ್ರಶ್ನೆಗಳು ಸಹಜವಾಗಿಯೇ ಮೂಡುತ್ತವೆ. ಮಹಾನಗರದಲ್ಲಿ ನೀರೇನೋ ಕೆರೆ, ಕಾಲುವೆಗಳ ಮೂಲಕ ವ್ಯವಸ್ಥಿತವಾಗಿ ಹರಿದುಬರುತ್ತಿತ್ತು. ಆದರೆ ನೈರ್ಮಲ್ಯವೂ ಅಗತ್ಯ ತಾನೆ. ಬಳಸಿದ ಮತ್ತು ಕಲುಷಿತ ನೀರಿನ ನಿರ್ವಹಣೆಯೂ ಅತ್ಯಗತ್ಯ. ಇಂತಹ ವ್ಯವಸ್ಥೆಯ ಕುರುಹುಗಳನ್ನು ವಿಜಯನಗರದಲ್ಲಿ ಕಾಣುತ್ತೇವೆ. ನೀರನ್ನು ಇಂಗಿಸುವ, ಇಲ್ಲವೆ ವ್ಯವಸ್ಥಿತವಾಗಿ ಹರಿದು ಹೋಗಲೆಂದು ನಿರ್ಮಿಸಿದ ಚರಂಡಿಗಳು ನಗರದಾದ್ಯಂತ ಕಂಡುಬರುತ್ತವೆ. ಅಲ್ಲದೆ ಬಹಿರ್ದೆಸೆಗೆಂದು ನಿರ್ಮಿಸಿದ ಶೌಚಾಲಯಗಳ ಅಳಿದುಳಿದ ಅವಶೇಷಗಳು ನಗರದ ಕೆಲಭಾಗಗಳಲ್ಲಿ ಇಂದಿಗೂ ಉಳಿದುಬಂದಿವೆ. ಆದರೆ ಅವು ಹೆಚ್ಚಾಗಿ ಅರಸರು ಮತ್ತು ಅಧಿಕಾರಿಗಳ ವಸತಿಗಳಲ್ಲಿ ಮಾತ್ರ ಉಳಿದುಬಂದಿವೆ. ಇದಕ್ಕೆ ಶೌಚಾಲಯ ಕಟ್ಟಡಕ್ಕೆ ಬಳಸಿದ ಕಲ್ಲು, ಗಾರೆಗಳು ಕಾರಣವಾಗಿವೆ. ವಿಜಯನಗರ ಪಟ್ಟಣದಲ್ಲಿ ಉಳಿದುಬಂದಿರುವ ಈ ಶೌಚಾಲಯಗಳೋ, ಇಂದಿನ ಆಧುನಿಕ ಶೌಚಾಲಯಗಳಿಗಿಂತ ಕಡಿಮೆಯೇನೂ ಇಲ್ಲ. ಅತ್ಯಂತ ವ್ಯವಸ್ಥಿತವಾಗಿ ನಿರ್ಮಿಸಿದ ಪ್ರತ್ಯೇಕ ಕೋಣೆಗಳೇ ಆಗಿವೆ. ಇವು ಸ್ನಾನದ ಕೋಣೆಗಳಿಗೆ ಅಂಟಿಕೊಂಡಂತಿವೆ.

ಇವುಗಳ ನಿರ್ಮಿತಿಯು ಅಂದಿನವರ ಶುಚಿತ್ವ ಮತ್ತು ನೈರ್ಮಲ್ಯಕ್ಕೆ ಹಿಡಿದ ಕನ್ನಡಿಯಾಗಿವೆ. ನೈರ್ಮಲ್ಯ ಅಥವಾ ಶುಚಿತ್ವವೆಂದರೆ ರೋಗಗಳ ಹರಡುವಿಕೆಯನ್ನು ತಡೆಗಟ್ಟಿ, ಸಾರ್ವಜನಿಕ ಆರೋಗ್ಯವನ್ನು ರಕ್ಷಿಸಬಲ್ಲ ವಿಧಾನ. ನೈರ್ಮಲ್ಯವು ಮಾನವರ ಮಲ, ಮೂತ್ರ ಹಾಗೂ ಅದರ ತ್ಯಾಜ್ಯಜಲದ ನಿರ್ವಹಣೆಯೇ ಆಗಿದೆ. ಶೌಚಾಲಯದ ನಿರ್ವಹಣೆ ಸಾಮಾನ್ಯ ವಿಷಯವೇನಲ್ಲ. ಇದು ಉತ್ತಮ ಆರೋಗ್ಯದ ಭಾಗವೇ ಆಗಿದೆ. ರೋಗ ಬಂದ ಮೇಲೆ ಸಾಮಾನ್ಯವಾಗಿ ಅದನ್ನು ವಾಸಿ ಮಾಡಲು ಯತ್ನಿಸುವ, ಹಣ ವ್ಯಯಿಸುವ ಪರಿಪಾಠವೇ ನಮ್ಮಲ್ಲಿ ಹೆಚ್ಚು. ಆದರೆ ರೋಗಕ್ಕೆ ಕಾರಣಗಳನ್ನು ಹುಡುಕಿ ಅದಕ್ಕೆ ಪರಿಹಾರ ಕಂಡುಕೊಳ್ಳುವ ಪ್ರಯತ್ನಗಳು ಇಂದಿಗೂ ಕಡಿಮೆಯೆಂದೇ ಹೇಳಬೇಕು. ಇಂದು ನೈರ್ಮಲ್ಯ ನಿರ್ವಹಣೆಯೇ ಸ್ವಚ್ಚ ಭಾರತದ ಕಲ್ಪನೆಗೆ ದೊಡ್ಡ ಸವಾಲಾಗಿದೆ. ಈ ನಿಟ್ಟಿನಲ್ಲಿ ನೋಡಿದಾಗ ಪ್ರಾಚೀನರ ಕ್ರಮಗಳು ಅನುಕರಣೀಯ ಮಾದರಿಗಳೆಂಬುದನ್ನು ಮರೆಯುವಂತಿಲ್ಲ. ಆದಕಾರಣ ಶೌಚಾಲಯ ಹಾಗೂ ಸ್ವಚ್ಛ ಪರಿಸರಗಳು ಜನಜೀವನದ ಗುಣಮಟ್ಟದ ಮಾಪಕವೂ, ಅಭಿವೃದ್ಧಿಯ ದ್ಯೋತಕವೂ ಹೌದು. ಇದನ್ನು ವ್ಯವಸ್ಥಿತವಾಗಿ ನಿರ್ವಹಿಸಿದವರಲ್ಲಿ ವಿಜಯನಗರದ ಅರಸರು ಪ್ರಮುಖರಾಗಿದ್ದಾರೆ. ಇದು ವಿಜಯನಗರ ಪಟ್ಟಣದಲ್ಲಿ ನಿರ್ಮಿಸಿದ ಶೌಚಾಲಯಗಳಿಂದ ದೃಢವಾಗುತ್ತದೆ. ತೆರೆದ ಬಯಲಿನ ಮಲಮೂತ್ರ ವಿಸರ್ಜನೆಯು ಕಾಲರಾ, ಮಲೇರಿಯಾ, ಅತಿಸಾರ, ಮುಂತಾದ ಜಲಜನ್ಯ ರೋಗಗಳಿಗೆ ಕಾರಣ. ಈ ಸಮಸ್ಯೆಗೆ ಶೌಚಾಲಯ ನಿರ್ವಹಣೆಯು ಪ್ರಮುಖ ಪರಿಹಾರ. ವಿಜಯನಗರದ ಅರಸರು ತಮ್ಮ ರಾಜಧಾನಿಯಾದ್ಯಂತ ಅನೇಕ ಶೌಚಾಲಯಗಳನ್ನು ನಿರ್ಮಿಸಿದ್ದರು, ಆದರೆ ಕಾಲದ ದವಡೆಗೆ ಸಿಕ್ಕು ಅವು ನಾಶವಾಗಿದ್ದು, ಕೆಲವೇ ಪ್ರದೇಶಗಳಲ್ಲಿ ಅದರಲ್ಲೂ ರಾಜಮಾನ್ಯರ ವಸತಿ ನೆಲೆ, ವೀರಹರಿಹರರಾಯನ ಅರಮನೆ, ಮಹಾನವಮಿ ದಿಬ್ಬ, ದಣ್ಣಾಯನ ಆವರಣ, ರಾಜಾಂಗಣದಲ್ಲಿ ಮಾತ್ರ ಗತವನ್ನು ಕುರಿತು ಹೇಳುವ ಶೌಚಾಲಯದ ಕುರುಹುಗಳು ಕಾಣಸಿಗುತ್ತವೆ. ಅವುಗಳನ್ನು ಉತ್ಖನನದ ಮೂಲಕ ಬೆಳಕಿಗೆ ತಂದ ಶ್ರೇಯ ರಾಜ್ಯ ಮತ್ತು ಕೇಂದ್ರ ಪುರಾತತ್ವ ಇಲಾಖೆಗಳಿಗೆ ಸಲ್ಲುತ್ತದೆ.
ಹಜಾರ ರಾಮಚಂದ್ರ ದೇವಾಲಯದ ಹಿಂಭಾಗದಲ್ಲಿ ಸಂಗಮ ಮನೆತನದ ವೀರಹರಿಹರರಾಯರ ಅರಮನೆಯಿದೆ.

ಇದು ಪಟ್ಟಣದ ಅತ್ಯಂತ ವ್ಯವಸ್ಥಿತವಾದ ಕಟ್ಟಡಗಳಲ್ಲಿ ಒಂದು. ಇಲ್ಲಿ ಅರಮನೆಯು ಅನೇಕ ಸುರಕ್ಷಿತ ಸೌಲಭ್ಯಗಳನ್ನು ಹೊಂದಿತ್ತು. ಅರಮನೆಯ ಸುತ್ತಲೂ ಸುಂದರವಾದ ಉದ್ಯಾನವನ, ಎತ್ತರದ ಮತ್ತು ಎರಡು ಮೂರು ಸುತ್ತಿನ ರಕ್ಷಣಾ ಗೋಡೆಗಳಿಂದ ಆವರಿಸಿದ ವಸತಿಯಿದು. ಇದಕ್ಕೆ ಪ್ರತ್ಯೇಕ ಶೌಚಾಲಯವೂ ಇದ್ದುದು ವಿಶೇಷ. ಅರಮನೆಯ ಆಗ್ನೇಯಕ್ಕೆ ಗಾರೆಗಚ್ಚಿನಲ್ಲಿ ನಿರ್ಮಿಸಲಾದ ವಿಶಿಷ್ಟ ರೀತಿಯ ಸೌಲಭ್ಯಗಳಿಂದ ಕೂಡಿದ ಶೌಚಾಲಯವಿದು. ಹಂಪಿಯ ಉತ್ಖನನದಲ್ಲಿ ಇದುವರೆಗೆ ಬೆಳಕಿಗೆ ಬಂದಿರುವ ಎಲ್ಲ ಶೌಚಾಲಯಗಳಿಗಿಂತ ಉತ್ತಮ ರೀತಿಯಲ್ಲಿದೆ. ಶೌಚಾಲಯದ ಬೇಸಿನನ್ನು ಕಲ್ಲು ಮತ್ತು ಗಾರೆಯನ್ನು ಬಳಸಿ ಲಾಳಾಕಾರದಲ್ಲಿ ನಿರ್ಮಿಸಿದ್ದಾರೆ. ಸ್ನಾನದ ಕೋಣೆಗೆ ಹೊಂದಿಕೊಂಡಿರುವ ಈ ಶೌಚಾಲಯದಲ್ಲಿ ಬಹಿರ್ದೆಸೆಗಾಗಿ ಕುಳಿತುಕೊಳ್ಳಲು ಮತ್ತು ನೀರಿನ ಬಿಂದಿಗೆ ಇಡಲು ಅನುವಾಗುವಂತೆ ಸ್ಥಳಾವಕಾಶವನ್ನೂ ಕಲ್ಪಿಸಲಾಗಿದೆ. ಹಾಗೆಯೇ ಮಲಮೂತ್ರದ ಮಲಿನ ನೀರು ಹೊರಹೋಗಲು ಗೋಡೆಯಲ್ಲಿ ಕೊಳವೆಯನ್ನು ಮಾಡಿದ್ದು, ಅದರ ಮೂಲಕ ಹೊರಹೋದ ನೀರಿಗಾಗಿ ಪ್ರತ್ಯೇಕವಾದ ಶೌಚ ಗುಂಡಿಯನ್ನೂ ನಿರ್ಮಿಸಿರುವುದು ಇಲ್ಲಿನ ವಿಶೇಷ. ಇದೇ ಬಗೆಯ ಶೌಚಾಲಯಗಳು ನಗರದಾದ್ಯಂತ ಇವೆ. ಅವುಗಳಲ್ಲಿ ನೆಲಮಾಳಿಗೆ ಶಿವಾಲಯ ಅಥವಾ ಪ್ರಸನ್ನ ವಿರೂಪಾಕ್ಷ ದೇವಾಲಯದ ಈಶಾನ್ಯಕ್ಕಿರುವ ಸ್ಥಳವನ್ನು ರಾಜಮಾನ್ಯರ ವಸತಿನೆಲೆಯೆಂದು ಗುರುತಿಸಿದ್ದಾರೆ.

ಅಲ್ಲಿ ಅನೇಕ ರಾಜಮಾನ್ಯರ ಭವನಗಳಿವೆ. ಅವುಗಳಲ್ಲಿ ಎರಡು ಕಡೆ ಶೌಚಾಲಯ ಕೊಠಡಿಗಳು ಕಂಡುಬಂದಿದೆ. ಅವುಗಳಲ್ಲಿ ಒಂದು ಕೊಠಡಿಯು ೩ಮೀ. ಉದ್ದ, ೨ಮೀ. ಅಗಲವಾಗಿದ್ದು, ಅದನ್ನು ಕಲ್ಲು ಮತ್ತು ಗಾರೆ ಬಳಸಿ ನಿರ್ಮಿಸಿದ್ದಾರೆ. ಇದರ ಒಳಗೆ ಪಾನವಟ್ಟದಂತೆ ಗೋಚರಿಸುವ ಕಲ್ಲಿನಲ್ಲಿ ಕಡೆದ ಶೌಚಾಲಯದ ಬೇಸಿನ್ ಇದೆ. ಅದು ೪೫ ಸೆಂ.ಮೀ ವೃತ್ತಾಕಾರವಾಗಿ ಮತ್ತು ಮಲಿನನೀರು ಹೊರಹೋಗಲು ಅನುವಾಗುವಂತೆ ೫೦ ಸೆಂ.ಮೀ. ಉದ್ದವಾಗಿದೆ. ಹಾಗೆಯೇ ಮಲಿನ ನೀರು ಹೊರಹೋಗಿ ಒಳಚರಂಡಿಗೆ ಸೇರುವಂತೆ ಮಾಡಿದ್ದಾರೆ. ಇದೇ ಬಗೆಯ ಶೌಚಾಲಯಗಳನ್ನು ದಣ್ಣಾಯಕನ ಆವರಣ, ಮಹಾನವಮಿ ದಿಬ್ಬ ಮೊದಲಾದೆಡೆ ಕಾಣಬಹುದಾಗಿದೆ. ಅಲ್ಲಿನ ಶೌಚಾಲಯಗಳೂ ವ್ಯವಸ್ಥಿತವಾದ ಬೇಸಿನ್, ಶೌಚಗುಂಡಿಗಳನ್ನು ಹೊಂದಿದ್ದುದು ಗಮನಾರ್ಹ.
ಒಟ್ಟಿನಲ್ಲಿ ಅಳಿದುಳಿದ ಇಂತಹ ಕೆಲವೇ ಶೌಚಾಲಯಗಳು ಅಂದಿನ ನಗರೀಕರಣ ಮತ್ತು ನೈರ್ಮಲ್ಯೀಕರಣ ವ್ಯವಸ್ಥೆಯನ್ನು ಅರಿಯಲು ಸಾಧ್ಯತೆಯನ್ನು ಒದಗಿಸಿವೆ. ವಿಜಯನಗರ ಅರಸರು ತಮ್ಮ ರಾಜಧಾನಿ ಪಟ್ಟಣದ ಸ್ವಾಸ್ತ್ಯವನ್ನು ಕಾಪಾಡಲು ಅಳವಡಿಸಿಕೊಂಡ ನೈರ್ಮಲ್ಯೀಕರಣದ ಬಹುಮುಖ್ಯ ಭಾಗವಾದ ಶೌಚಾಲಯಗಳ ನಿರ್ಮಾಣ, ನಿರ್ವಹಣೆ ಹಾಗೂ ಶುಚಿತ್ವಕ್ಕೆ ನೀಡಿದ ಆದ್ಯತೆ ಮತ್ತು ಮಾರ್ಗೋಪಾಯಗಳು ಅನುಸರಣೀಯವಾಗಿವೆ.

Girl in a jacket
error: Content is protected !!