ಮೂಲ ದೇವರಿಗೆ ಮೂರೇ ಕಾಲು…!?
ಬೇಸಿಗೆ ಎಂದರೆ ಶಾಲೆಗೆ ಬಿಡುವು ‘ಇನ್ನೇನು ಎಲ್ಲಾ ಅರಾಮು’ ಎಂಬುದು ನಗರದ ಮಕ್ಕಳ ಹೇಳಿಕೆಯಾದರೆ,ಹಳ್ಳಿಯ ಒಕ್ಕಲ ಮಕ್ಕಳಿಗೆ ಹಲವು ತಯಾರಿಗಳ ಕಾಲ.ಹೊತ್ತೇರುವ ತನಕ ರೈತರು ಕೃಷಿ ಪರಿಕರಗಳನ್ನ ಹೊತ್ತು ಬಡಿಗೇರು,ಕಮ್ಮಾರು ಅಂತ ತಿರುಗಾಡುತ್ತಾ,ಎತ್ತುಗಳಿಗೆ ಲಾಲ್ ಕಟ್ಟಿಸುವುದು,ಹೊಲ ಹಸನು ಮಾಡುವುದು, ಗೊಬ್ಬರ ಹೇರುವುದು,ಮೇರೆಯ ಬದಿ ಕಳ್ಳಿ ಸಾಲು,ಮುಳ್ಳು ಬೇಲಿಗಳ ಸಮ ಮಾಡಿ ಏನು ಬಿತ್ತುವುದು ಎಂದು ತಯಾರಾದರೆ,ಅಪ್ಪ ಅವ್ವರಿಗೆ ಸಹಾಯಕರಾಗುವ ಕೆಲಸ ಮಕ್ಕಳದೇ.ದನ, ಎಮ್ಮೆ ಮೇಯಿಸಲು ಹೋಗುವವರು,ಕುರಿ ಆಡುಗಳನ್ನ ಕಾಯುವವರು ಇವರೇ!ಮನೆಯ ರಾಸುಗಳಿಗೆ ಹೊಟ್ಟು ಹೊರುವ,ಸೊಪ್ಪೆ ತರುವ,ಕತ್ತರಿಸಿ ಗೋದಲೆಗಳಿಗೆ ಹಾಕುವ,ನೀರು,ಮುಸುರೆ ,ಕಸ,ಗಂಜಲು,ಸಗಣಿ ಹೊರುವ, ಕಾಯಕಗಳೆಲ್ಲಾ ಒಕ್ಕಲು ಮಕ್ಕಳದೇ.
ಬೇಸಿಗೆಯ ಓಣಿಯು ಒಕ್ಕಲು ಮಕ್ಕಳನ್ನ ಒಟ್ಟಾಗಿಸಿ ದುಡಿಸುವ ಕಾಲವೂ ಹೌದು. ಕೆಂಚ,ಬುಳುಸ,ಸಣ್ಣ ಬಸ್ಯಾ,ಹನುಮಾ,
ಹೇಮಗಾ,ಈಶ,ಪ್ರಕಾಶ,ಪ್ರೇಮಕ್ಕ,ಈರವ್ವ,ಪಾರವ್ವ,ಸುವರ್ಣ ಎಲ್ಲರೂ ದುಂಡಗಾಗಿ ಹೊಲಗಳ ಸುತ್ತುವ ಚಿಟ್ಟೆಗಳಂತೆ ಗೋಣಿಚೀಲ, ಪ್ಲಾಸ್ಟಿಕ್ ಚೀಲಗಳನ್ನ ಹಿಡಿದು ಕೊಂಡು ಜಿಗಿದಾಡುತ್ತಾ ಸಿಕ್ಕ ಸಿಕ್ಕ ಬಂಡೆಗಳ ಮೇಲೆ ಒಬ್ಬೊಬ್ಬರು ತಂದ ಹುಣಿಸೇ ಹಣ್ಣು,ಉಪ್ಪು,ಒಣ ಮೆಣಸಿನ ಕಾಯಿ,ಜೀರಗಿ ಹಾಕಿ ಕುಟ್ಟಿ ಒಂದೊಂದು ಉಂಡೆ ಮಾಡಿ ಕಡ್ಡಿಗಳಿಗೆ ಚುಚ್ಚಿಕೊಂಡು ಚೀಪುತ್ತ ಜಿಗಿಯುತ್ತ ಹೊಲದ ಬಯಲುಗಳಿಗೆ ನುಗ್ಗಿ ಅಲ್ಲಿರುವ ಕುಳ್ಳುಗಳನ್ನ ಒಂದು ದಿನ,ಕವಲಿಗಳನ್ನ ಒಂದು ದಿನ ತಂದು ತಂದು ಮನೆ ಮುಂದೆ ಒಟ್ಟುವ ಸೊಗಸೇ ಬೇರೆ.ಮತ್ತೊಂದು ದಿನ ಪರುಶುರಾಮರ ಸೇನೆಯಂತೆ ಹಗ್ಗಗಳನ್ನ ಹೆಗಲಿಗೆ ನೇತಾಕಿಕೊಂಡು ಕೊಡ್ಲಿ, ಮಚ್ಚು, ಕುಡುಗೋಲುಗಳನ್ನ ಹಿಡಿದುಕೊಂಡು ಹೊಲಗಳ ಬದಿಯ ಕಾರಿ ಟೆಂಗು,ಕಾರಿ ಹಣ್ಣು,ಗಳನ್ನ ತಿನ್ನುವ ಸವಿ ಮತ್ತೊಂದು ತೆರ,ಈ ನಡುವೆ ಮುಳ್ಳು ಹೊದ್ದ ದಬ್ಬಗಾಳಿ ಹಣ್ಣನ್ನ ಹರಿದು ಬಂಡೆಗೆ ಮುಳ್ಳು ತಿಕ್ಕಿ ತುಟಿಗಳನ್ನ ಕೆಂಪು ಮಾಡಿಕೊಂಡು ನಗುವ ರೀತಿಯೇ ಬೇರೆ.ಕಾಣುವ ಲಂಟಾನ ಹೂಗಳ ಮಕರಂದ ಹೀರುವುದು,ಹಣ್ಣುಗಳನ್ನ ಸೀಪುವುದು,ಹುಲಿ ಹಣ್ಣು,ಬಿಕ್ಕಿ ಹಣ್ಣು,ಹುಡುಕುವುದು,ಒಂದಾ …ಎರಡಾ .. ಅವರ ಕೆಲಸ ನೆನಪಾಗುವುದು ಹೊತ್ತೇರಿದ ನಂತರವೇ! ಆಗ ಅವಸರ ಅವಸರವಾಗಿ ಸಿಕ್ಕ ಸಿಕ್ಕ ಕಳ್ಳಿ,ತುಗ್ಲಿ,ಜಾಲಿ,ತಂಗಟಿ ಗಿಡ ಮರಗಳೆನ್ನದೇ ಸಿಕ್ಕವನ್ನ ಕಡಿ ಕಡಿದು ಗೊಬ್ಬೆ ಆಗುವುದನ್ನೂ ಮರೆಯುವುದು.
ಸವಡು ಸಿಕ್ಕಾಗಲೆಲ್ಲಾ ಊರೇ ಮರೆತ ದೇವರುಗಳ ಗುಡಿ ಹೊಕ್ಕು ಕಂಬ ಕಂಬಗಳ ಬಳಿ ನಿಂತು “ಉಪ್ಪಮ್ಮಾ.. ಉಪ್ಪು… ಮುಂದ್ಲೂರ್ಗೋಗು,” ಆಡುವುದು.ಬಾಡಿ ನಿಂತ ಬಯಲಹೊಕ್ಕು ಲಗೋರಿ, ಆಡುವುದು,ಹುಡಿಗಿಯರೆಲ್ಲಾ ಅಷ್ಟುದ್ದ ಗೆರೆ ಬರೆದು ಮುಖ ಮೇಲೆ ಮಾಡಿ ಚೌಕಗಳಲ್ಲಿ ಎಗರುತ್ತ
” ಕಾಲ್ ಮೇಲೆ ಕರೆದಾರ
ನನ್ನ ಗಂಡ ಜಿಲ್ಲೆದಾರ” ಎಂದು ಹಾಡುವುದು.
ಬೇಸಿಗೆ ದಿನಗಳ ಗುಡಿಗಳು ಊರವರಿಗೆ ಅಡ್ಡಲಾಗುವ ತಾಣಗಳಾದರೆ, ಹುಡುಗರಿಗೆ ನಿರ್ಲಕ್ಷ ಗುಡಿಗಳ ಅಂಗಳಗಳು ,ದಿಕ್ಕಿಲ್ಲದ ಕಣಗಳು,ಮೋಟುಗೋಡೆಯ ಬಯಲುಗಳೆಂದರೆ ಬಲು ಪ್ರೀತಿ. ಮದುವೆ ಆಟ,ಉಳುವ ಆಟ,ದೇವರು ಬರಿಸುವ,ದೆವ್ವ ಬಿಡಿಸುವ,ಜಗಳ ಕಾಯುವ, ಸಾಮಾಜಿಕ ಸಂಗತಿಗಳೆಲ್ಲಾ ಅಲ್ಲಿ ಪ್ರತಿಬಿಂಬಿಸುತ್ತವೆ.
ಬೇಸಿಗೆಯಲ್ಲಿ ಮಕ್ಕಳ ದಂಡೆಲ್ಲಾ ಈಜಾಟಕ್ಕೆ ನುಗ್ಗುತ್ತವೆ. ಮಳೆ ಹುಳ ಸಂಗ್ರಹಿಸಿ ಬಂಡೆಗಳ ಮೇಲೆ ಕುಳಿತು ಮೀನು,ಮಟ್ಟು ಹಿಡಿಯುವುದು,ಏಡಿ ಗುದ್ದಿಗೆ ಕೈ ಹಾಕುವುದು,ಕೆಸರು ನೀರಿನೊಳಗೇ ಮೆಲ್ಲಗೆ ತೆವಳುತ್ತ ಮಳಲಿ ಮೀನು ಹಿಡಿಯುವುದು,ಅಪ್ಪನ ವಸ್ತ್ರವನ್ನೋ,ಅವ್ವನ ಸೀರೆ ಸೆರಗನ್ನೋ ತಂದು ಆಕಡೆ ಈಕಡೆ ಹಿಡಿದು ಬಲೆ ಮಾಡಿ ಮೀನುಗಳ ಎತ್ತುವುದು ನಡೆಯುತ್ತದೆ.
ಬೇಸಿಗೆ ಹುಣಿಸೇ ಬೋಟುಗಳನ್ನ ಸಂಗ್ರಹಿಸುವುದು.ಹೊತ್ತೇರಿದಂತೆಲ್ಲಾ ಉಂಡು ಮತ್ತೆ ಅವರಿಗಾಗಿಯೇ ಬೇವಿನ ಹಣ್ಣುಗಳ ಸಂಗ್ರಹಕ್ಕೆ ಹೊರಡುವುದು ಮೊದಲಾದ ಸಣ್ಣ ಪುಟ್ಟ ಪುಡಿಗಾಸಿನ ವ್ಯವಹಾರಗಳೂ ನಡೆಯುತ್ತವೆ.ರೋಡ್ ಕೆಲಸ ಮಾಡಿ,ಪತ್ರೋಳಿ ಎಲೆಗಳನ್ನ ಮಾರಿ ತಮ್ಮ ಓದಿನ ಹಣ ತಾವೇ ಸಂಗ್ರಹಿಸುವ ಅಷ್ಟು ಮನೆಯ ಸಂತೆಗೂ ನೀಡುವ ಕಿರು ಜವಾಬ್ದಾರಿ ಈ ಬಿಡುವಿಗಿದೆ.
ಬೇಸಿಗೆ ಆಶ್ರಯಿಸಿ ಹುಲಿಮನಿ ಕಟ್ಟಿಮನಿ ಆಡುತ್ತಾರೆ.ಮನೆಗಳಲ್ಲಿ ಬಿಸಿಲ ತಾಪಕ್ಕೆ ನಿಲ್ಲಲಾರದ ಹೆಣ್ಣು ಮಕ್ಕಳೂ ದೊಡ್ಡ ಮನೆಗಳ ಅಂಗಳ ಸೇರಿಕೊಂಡು ಚಾವಿ ಆಡುತ್ತಾರೆ.ಈ ನಡುವೆ ಓಣಿ ಓಣಿಯ ಲೈಂಗಿಕ ಹಗರಣಗಳೂ ಬಣ್ಣ ಹಚ್ಚಿಕೊಂಡು ಗಾಳಿ ಧೂಳುಗಳ ಸೇರಿಕೊಳ್ಳುತ್ತವೆ.ಕುಡುಕ ಗಂಡನನ್ನ ನಿತ್ರಿಸಿಕೊಳ್ಳಲಾರದ ಬಸವ್ವ ದನಿ ಎತ್ತಿ ” ಅವನ್ನದ್ದೇನೇಳ್ತಿಬೇ ಆ ಬಾಡ್ಯ ರಾತ್ರಿ ಮೈ ಮೇಲೆ ಕುಂತು ಉಚ್ಚಿ ಹೊಯ್ತಾನೇ..ಥುತ್ ಅವನ್ನ ಸಾ…ಕ್ಕ ನನ್ನ ಕೆರ ಕಟ್ಟ”ಎಂದು ಧ್ವನಿ ತಗೆದರೆ,ಅಳನಾರ ಸಂಗವ್ವ ಅತೀ ಮೆಲ್ಲಗೆ ಕುರುಬರ ಮಾಳಕ್ಕನ ಬಸುರಿ ಪುರಾಣ ಓದುತ್ತಾಳೆ.ಓಡಿ ಹೋದ ಶೈಲಕ್ಕ, ಕಲೆತು ಕೊಳ್ಳೋ ಅನ್ನಕ್ಕ,ಆಡುವರ ಬಾಯ ಎಲೆ ಅಡಿಕೆಯಂತೆ ವರ್ಣಕ ಕಾವ್ಯಗಳಾಗುತ್ತಾರೆ!!.
ಸಂಜೆಗೆ ಅಂಗಳದ ತುಂಬಾ ಗೂಡ ಸೇರಿಕೊಂಡ ಕೋಳಿ ಹಿಂಡಿನಂತೆ ಮಕ್ಕಳ ಮೇಳ.
” ಕಾಗಿ ಕಾಗಿ ಕವ್ವ ಯಾರ ಬಂದಾರವ್ವ ,ಮಾವ ಬಂದಾನವ್ವ,ಏನ್ ತಂದಾನವ್ವಾ,ಹಂಡೆದಂತ ಕುಂಡಿ ಬುಟುಗಂಡು ಹಂಗಾ ಬಂದಾನವ್ವಾ,ಮಾವಗೇನು ಊಟ,ಬಿಸಕಲ್ಲು ಗೂಟ,”
” ಅಂಟಿ ಮಿಂಟಿ ಚಾವಲ ಗಂಟಿ,ಪಂಚಂ ಪಗಡಮ್ ನೆಲ ಮುಟ್ಟ ಹನುಮಾ,ದಾಸರ ಭರಮ,ತಿಪ್ಪಿ ಮುಂದೆ ಕೋಳಿ ರಗುತ್ತ ಬೋಳಿ,ಕೈ ಕಟ್ ಬಾಯಿ ಮುಚ್ ”
” ಕೈ ಎಲ್ಲಿಗಿ ಹೋದ್ವು,ಕದ್ದಿಂದಕೆ ಹೋದ್ವು,ಕದ ಏನ್ ಕೊಡ್ತು ಚಕ್ಕಿ ಕೊಡ್ತು,ಚಕ್ಕಿ ಏನ್ ಮಾಡ್ದೆ,ಒಲಿಗೆ ಹಾಕ್ದೆ,ಒಲಿ ಏನ್ ಕೊಡ್ತು,ಬೂದಿ ಕೊಡ್ತು,ಬೂದಿ ಏನ್ ಮಾಡ್ದೆ,ತಿಪ್ಪಿಗೆ ಹಾಕ್ದೆ,ತಿಪ್ಪಿ ಏನ್ ಕೊಡ್ತು,ಗೊಬ್ಬರ ಕೊಡ್ತು,ಗೊಬ್ಬರ ಏನ್ ಮಾಡ್ದೆ,ಹೊಲಕ್ಕ ಹಾಕ್ದೆ,ಹೊಲ ಏನ್ ಕೊಡ್ತು,ಜ್ವಾಳ ಕೊಡ್ತು,ಜ್ವಾಳ ಏನ್ ಮಾಡ್ದೆ,ಕುಂಬಾರ್ ಗ ಕೊಟ್ಟೆ,ಕುಂಬಾರ್ ಏನ್ ಕೊಟ್ಟ,ಗಡಿಗಿ ಕೊಟ್ಟ,ಗಡಿಗಿ ಏನ್ ಮಾಡ್ದೆ,ನೀರ್ ಹಿಡಕಂಡು ಬರ್ತಿದ್ದೆ ನೆಲಕ್ಕ ಬಿದ್ದು ಹೊಡ್ದೋಯ್ತು..ಕೈ ಬಂದ್ವು ಕೈ ಬಂದ್ವು..”
ಈಚಲು ಚಾಪೆಗಳ ಕವಿದ ಮಕ್ಕಳನ್ನ ಕವುಚಲು ಕಾದ ಕವುದಿಯ ಮುಂದೆ ಅಜ್ಜಿ ರಾಜಕುಮಾರನ ಕಥೆಗಳು, ಮಾವನ ಸಿನಿಮಾ ಕಥೆಗಳು, ಈ ನಡುವೆ ಒಗಟುಗಳ ತುಳುಕಾಟ
” ಉದ್ದನಾಕಿ ಬುದ್ದಿಲ್ಲದಾಕಿ,ಮಕ್ಕಳ ಹಡದು ಮಂದಿಗೆ ಕೊಡಾಕಿ” ಏನೇಳ..ಬೇ?, ” ಐ, ತೆಂಗಿನ ಮರ ಬಿಡಾ,” ನೆಲನೆಲ್ಲಾ ನೆಕ್ಕತಾಳ ಮೂಲ್ಯಾಗ ಕುಂದ್ರುತಾಳ” ಏನೇಳಲೋ..” ಯಕ್ಕಾ ಕಸಬರಗೀ…” ಲೇ ತಮ್ಮ ನಂದ ಕೇಳು,ಬೆಳ್ಳಿ ಕೊಡಿ ನೆಲಕ್ಕ ಹೊಡಿ” ಏನೇಳಲೇ..,” ಯಣ್ಣಾ … ಸಿಂಬಳಾ ಬಿಡೋ..
” ಈರಣ್ಣಾ, ಗುಡ್ಡದ ಮುಂದ ಗುಂಡಕಲ್ಲು ” ಏನೇಳಾ?..”ಐ ಬಿಡವ್ವಾ ತುರುಬು.ರಾಮ ನುಗ್ಗಿದವನೇ ” ಹಿಡಕಂಬಾ ಅವನ ದುಬ್ಬ ಕೆತ್ತಾನು” ಏನೇಳ್ಲೇ.. ” ಈರಿಕಾಯಿ ಬುಡಪ್ಪಾ”, ಮಾವ ನುಗ್ಗಿದವನೇ ” ಥೂ.. ನಿನ್ನ ಮುಕಳಾಗ ಏನೇಳ್ರಲೇ..” ಊದಾಗಳಿಬಿ ಬುಡೋ ಮಾವ.ಹೌದಾ..ಇಡ ಕಂಡು ಬಾ ಅವನ ಮುಕಳಾಕ ಬೆಳ್ಳಿಡನು ಏನೇಳಾ”,ಏನಪಾ?…ಹಾ..ಉಂಗುರಾ!..” ಲೇ ನಿನ್ನ ತಂಗಿ.. ನನ್ನ ತಮ್ಮನ ಗೆಂಡಿ” ಏನೇಳಲೇ… ಬೀಗ ಬೀಗದ ಕೈ ಬಿಡಪ್ಪಾ ಮಾವಾ ..
ಲೇ ಹೊಲಸು ಒಗಟು ಬಿಟ್ಟು ಚೊಲವು ಹೇಳ್ರಲೇ ಅಂತ ಅಪ್ಪ ಗದರಲು ಮಾವ ಮೆಲ್ಲಗೆ ಚಾಪಿ ಹಿಡಕೊಂಡ.” ಕೆಂದೆತ್ತು ಮಕ್ಕಂತೈತಿ ಬಿಳಿ ಎತ್ತು ಓಡ ತೈತಿ ಏನೇಳಾ ಯಕ್ಕಾ” ಕಾರಾ ಮಂಡಕ್ಕಿ ಬಿಡಾ ರಾಮಾ,ಸೀತವ್ವ ನುಗ್ಗಿ ” ಸಂತ್ಯಾಗ ತರ್ತಾರೆ ಮುಂದಿಟ್ಟಕಂಡು ಅಳತಾರೆ” ಏನೇಳ್ರೋ.. ” ಉಳ್ಳಾ ಗಡ್ಡಿ ಬಿಡಕ್ಕಾ”,ಏ ಜಾಣಿ ಇದನೇಳು ನೋಡೋಣ ” ಹಿಡಿದರೆ
ಹಿಡಿಯಾಗಲ್ಲ,ಕಡದರೆ ಕಚ್ಚಾಗಲ್ಲ ” ಏನೇಳು. ” ನೀರು ಬಿಡಾ ಯಪ್ಪಾ”, ಮದ್ಯದೊಳಗೇ ಅಜ್ಜಿ ನುಸುಳಿ ” ಸೂಜಿ ಸಣ್ಣ ಕಾಗಿ ಬಣ್ಣ, ನಾನ್ಯಾರು ಹೇಳಣ್ಣ” ಎನ್ನಲು. ಹುಡುಗರು ಬೆಪ್ಪಾಗಿ ನೋಡಲು.. ಅಜ್ಜಿನೇ ..ಕೂದಲು ಕಣ್ರಪ್ಪಾ ಎಂತು.
ಅಜ್ಜಿ ” ಊರೆಲ್ಲಾ ತಿರುಗುತಾವು ಕದ್ದ ಮುಂದೇ ಕುಂದುರುತಾವು ” ಏನೇಳಬೇ .. “ಚಪ್ಪಲಿ”ಅಂತ ಅಜ್ಜಿ ನಕ್ಕಿತು. ತಿರುಗಾ ಅಜ್ಜಿ ” ಅಲ್ಲಿ ಪುಳು ಪುಳು,ಇಲ್ಲಿ ಪುಳು ಪುಳು ಕಲ್ಯಾಣದಲ್ಲೂ ಪುಳು ಪುಳು” ಏನೇಳೋ ರಾಮ್ಯಾ ಎನ್ನಲು.ಅವ ತಲೆ ಕೆರೆವುದನ್ನ ಕಂಡ ಕೆಂಚ ಅಜ್ಜಿ ಕುರಿ ಹಿಕ್ಕಿ ಎಂದು ನಕ್ಕ.ಸೀತ ಅಜ್ಜಿಗೆ ಅಟ್ಟದ ಮೇಲೆ ಪುಟ್ಟ ಲಕ್ಷ್ಮಿ ಏನೇಳಜ್ಜಿ” ಎನ್ನಲು ..ಅಜ್ಜಿ ” ಕುಂಕುಮಾ” ಎಂದು ಕತ್ತಲೊಳಗೇ ಉಕ್ಕಿ ಬಂದ ಕಣ್ಣೀರು ಒರೆಸಿಕೊಳ್ಳುತ್ತಾ ಸುಮ್ಮನಾಯಿತು.
ಮತ್ತೆ ಮಾವ ಎದ್ದು ” ಇದನ್ರೇಪ್ಪಾ ಅಂಕು ಡೊಂಕಾದ ಬಾವಿಯೊಳಗೆ ಬಗ್ಗಿ ನೋಡಿದರೂ ನೀರಿಲ್ಲ” ಬರೇ ನಿಂದು ..ನಾ ಹೇಳಾಕೊಲ್ಲೆಪ್ಪಾ ಅಂತ ಶಿವಕ್ಕ ಹೇಳಲು.”ಹೇ..ಕಿವಿಯಬೇ..” ಅಂತ ನಕ್ಕ.ಅಜ್ಜಿ ಮತ್ತೆ ಸಾವರಿಸಿಕೊಂಡು ” ಅಂಗೈ ಅಗಲದ ಗದ್ದೆ ,ಗದ್ದೆ ತುಂಬಾ ನೀರು,ನೀರಿಗೆ ಬೇರು,ಬೇರಿಗೆ ಬೆಂಕಿ” ಏನೇಳ್ರಪ್ಪಾ ಅಂತು.ಅವರು ಸುಮ್ಮನಾಗಲು ಅಜ್ಜಿಯೇ ” ಪ್ರಣತಿ” ಅಂದು ನಕ್ಕಿತು.ಹಳ್ಳಿಯ ಬೇಸಿಗೆಗೆ ಹಲವು ಕವಲು,ಹಲವಾರು ಸೊಗಸು,ಈಗ ಹಳ್ಳಿಯ ಅಂಗಳಕ್ಕೆ ವಾಣಿಜ್ಯ ಪ್ರಧಾನ ಕ್ರಿಕೆಟ್,ಮನೆಗೆ ರಿಯಾಲಿಟಿ ಷೋ ತರದ ಟಿ.ವಿ.ಆಟಗಳು ನುಗ್ಗಿ ಹಳ್ಳಿ ಸಂಸ್ಕøತಿಯ ಆಟಗಳನ್ನೇ ಮರೆವಿಗೆ ನೂಕುತ್ತಿವೆ.ಹಣವೇ ಪ್ರಧಾನವಾದ ಜಾಗದಲ್ಲಿ ಆನಂದ ಇದ್ದೀತೆ..ಅಂತಹ ಆನಂದವಾದರೂ ಎಂತಹದು… !?