ಮನ ತಾಕುವ ಮಂಡಕ್ಕಿಯ ಪುರಾಣವು…
ತುಂತುರು ಮಳೆಗೆ ನೆಲವೆಲ್ಲಾ ನೆನೆದ ಸೆರಗಂತೆ ತಂಡಿ ಹಿಡಿದು ಎಲ್ಲವನ್ನೂ ಎಲ್ಲರನ್ನೂ ನಡುಗಿಸುತಿತ್ತು.ಸೂರ್ಯ ಹುಟ್ಟಿ ಕೈಗೆ ಕಾಫಿಯ ಬಿಸಿ ತಾಗಿ ಹಬೆಯೊಳೆ ತೇಲಿದಂತೆಲ್ಲಾ ಜೀವಗಳ ಸಂಚಾರ.ಬಿದುರು ಪುಟ್ಟಿ ಎತ್ತಿದೊಡನೆಯೇ ನೆಗೆ ನೆಗೆದು ಕುಣಿಯುತ್ತಾ…ತಾಯಿ ಕೋಳಿಯ ಜೊತೆಗೆ ಅಂಗಳದ ತುಂಬಾ ಹತ್ತಿಯ ಬಣ್ಣ ಬಣ್ಣದ ಉಂಡೆಗಳಂತೆ ಸುಳಿವ ಕೋಳಿಮರಿಗಳು,ಪುಟಾಣಿಗಳನ್ನೇ ಎಗರಿಸಿ ಹೊತ್ತೊಯ್ಯಲೆಂದೇ ಹೊಂಚು ಹಾಕುವ ಕಾಗೆಗಳು,ಎಲ್ಲೆಲ್ಲೋ ದೂರದ ಮೋಡಗಳಿಂದ ಬಾಣದಂತೆ ಬಂದೆರಗೋ ಹದ್ದುಗಳು..,
ಕಪ್ಪು ನೀರು ಕವಿದ ತಿಪ್ಪೆಗುಂಡಿಯಲಿ ಪೈಪೋಟಿಗೆ ಬಿದ್ದು ವಟಗುಟ್ಟುವ ಕಪ್ಪೆ ಹಿಂಡು,ಆಗತಾನೇ ಮುಖದ ತುಂಬಾ ತುಂತರು ಮಂಜುಹನಿ ಬಳಕೊಂಡು ಅರಳಿ ನಗುವ ಬೇಲಿಯ ಹೂಗಳು,ಸರುವೊತ್ತಿನ ತನಕ ಅಜ್ಜನ ರಾಕ್ಷಸರ ಕಥೆ ಕೇಳಿ ಕನಸಿನೊಳಗೆ ಅದರ ಕೆಂಗಣ್ಣಿಗೆ ಸಿಕ್ಕು ಕಾಡಿನ ತುಂಬಾ ಓಡುತ್ತಾ,ಆಣೆ ಕಟ್ಟೆಗಳ ಮೇಲೆ,ಬೆಟ್ಟ ಹತ್ತುವಾಗ ಕಾಲಿನಡಿಯ ಕಲ್ಲೇ ಕಳಚಿ ಜಾರಿ ದರ್ರನೇ..ಬೀಳುವ ರಭಸಕ್ಕೆ ಕಾಕಿ ಚಣ್ಣದಲ್ಲಿ ಉಚ್ಚೆಹೋಗಿದ್ದೇ ನೆನಪಾಗದೇ ಅಷ್ಟು ಹೊತ್ತಿನ ಮೇಲೆ ಮೆಲ್ಲಗೆ ಚಣ್ಣ ಬೆಚ್ಚಗಿದ್ದದ್ದು ತಣ್ಣಗಾಗಲು ಮುದ್ದು ಕೃಷ್ಣನಂತೆಯೇ …! ಕದ್ದು ಎದ್ದು ಮೆಲ್ಲಗೆ ಬಿಚ್ಚಿ ಬೇರೊಂದು ಸಿಕ್ಕಿಸಿಕೊಂಡು ಈಚಲು ಚಾಪೆಯ ಮತ್ತೊಂದು ಮಗ್ಗುಲಲಿ ಮಲಗಲು ಮುಂಜಾನೆ ಹೊಯ್ದ ಕಡೆ ಹೊರಳಿದವರೇ ಉಚ್ಚೆಬುರುಕರೆಂದು ಸಿಕ್ಕಿಬಿದ್ದು ಅವ್ವನೊಂದಿಗೆ ಒದೆಸಿಕೊಳ್ಳುತ್ತಾ… ಬೈಸಿಕೊಳ್ಳುತ್ತಾ ತೊಯ್ದು ಮತ್ತೊಂದು ಬಣ್ಣಕ್ಕೆ ಬಂದ ಚಾಪೆಯನ್ನ ಕವುಚಿ ಬಿದ್ದ ಮನೆ ಮುಂದಲ ಮೋಟು ಗೋಡೆ ಮೇಲೆ ಮತ್ತೊಬ್ಬರು ಹಾಕುವಾಗ ಒಲೆ ಮೇಲಿನ ಮಂಡಾಳೊಗ್ಗಣ್ಣಿಯ ವಾಸನೆ ಎಲ್ಲವನ್ನೂ ಮರೆಸಿ ಆಹಾ..! ಎನ್ನಿಸಿ ಎಲ್ಲರ ನಾಲಿಗೆಗಳಲ್ಲಿ ನೀರಿನ ಒರತೆ ತುಳುಕುತಿತ್ತು.
ಮಂಡಕ್ಕಿ ಎಂಬ ಈ ಮಾಯಕಾರ ತಿಂಡಿ ಹಳ್ಳಿಗಳ ನೆರಿಕೆ ಹೋಟಲುಗಳಲ್ಲಿ ನಿತ್ಯ ರಾಸುಗಳು ರಸ್ತೆ ದಾಟಿ ಕೆರೆ ಅಂಗಳ ಸೇರುವಾಗ,ಸಂಜೆ ಸೂರ್ಯ ಮುಳುಗುವ ಗೋಧೂಳಿಗಳಲಿ ರೆಡಿಯಾಗುತಿತ್ತು.ಈರುಳ್ಳಿ ಬೆಳ್ಳುಳ್ಳಿ,ಹರಿಷಿಣ,ಶೇಂಗಾ ಬೀಜ,ಕರಿಬೇವು,ಟಮೋಟೋ,ಹಸಿರು ಮೆಣಸಿನ ಕಾಯಿ,ಕಾಯಿತುರಿ,ಉಪ್ಪು ಮತ್ತು ಹುಣಿಸೇರಸ ಗಳೊಂದಿಗೆ ಸೇರಿದ ವಗ್ಗರಣಿಯೊಂದಿಗೆ ಹೊರಡಿಸುತ್ತಿದ್ದ ಅದರ ಘಮಕ್ಕೆ ನಿಂಬೆ ಹಣ್ಣುಗಳ ರಸ ಸೇರಿಸಿಕೊಂಡು ಎರಡು ಮೂರು ಬಾರಿ ತೊಯ್ದು ಬಡಕಲಾದ ಬಿಳಿ ಮಂಡಕ್ಕಿಯನ್ನ ಆವರಿಸಿ ಹೊಸ ಬಣ್ಣ ಜೊತೆಗೆ ಮಂಡಕ್ಕಿಗೆ ಕುಟ್ಟಿದ ಪುಟಾಣಿ ಪುಡಿ ಹಾಕಿ ತಿರುವ್ಯಾಡಿದ ಮೇಲೆ ಕಂಪಿನ ಜೊತೆಗೆ ಬಂಗಾರದ ಮೈಬಣ್ಣ ಹೊತ್ತು ಕುಳಿತ ಅದಕ್ಕೆ ಕೊತ್ತಂಬರಿಯ ಹಸಿರು ಶಾಲು ಹೊದಿಸುತ್ತಲೇ ದೊಡ್ಡ ಪರಾತ,ಸಿಲವರ್ ಬಾಣಲಿಗಳಲ್ಲಿ ಕಾಣಿಸುವ ಮಂಡಕ್ಕಿ ಎಂಬ ಮಹಾರಾಣಿಯ ಸೊಗಸೇ..ಸೊಗಸು!ಆ ರೂಪಕ್ಕೆ ಒಲಿಯದವರಾರು!? ಮರುಳಾಗಿ ಮಂಡಿ ಊರದವರಾರು!?
ಮಂಡಕ್ಕಿಯ ಜೊತೆಗೆ ಹೊರಗೆ ಮಣ್ಣಿನ ಒಲೆಯಲ್ಲಿ ಅದರ ಒಲವಿನ ಇನಿಯ!ರಾಜಾಧಿ ರಾಜ ಖಾರದ ಮಹಾರಾಜ ಮೆಣಸಿನಕಾಯಿಯು ಬೆನ್ನು ಸೀಳಿಸಿಕೊಂಡು ಉಪ್ಪು ಜೀರಿಗೆ ತುಂಬಿಸಿಕೊಂಡು ಕಬ್ಬಿಣದ ಅಷ್ಟುದೊಡ್ಡ ಕಡಾಯಿಯಲ್ಲಿ ಕಲಸಿಕೊಂಡ ಹೊಂಬಣ್ಣದ ಕಡಲೆ ಹಿಟ್ಟಿನಲ್ಲಿ ಜಿಗಿಯುತ್ತಾ ಮುಳುಗುತ್ತಾ..ಹೋಟೇಲ್ ಚಂದ್ರಪ್ಪನ ಕೈ ಚಳಕದಲ್ಲಿ ಬಿಸಿ ಎಣ್ಣೆಗೆ ಹಾರಿ ಊದಿಕೊಳ್ಳುತ್ತಾ ತಂತಿಯಲ್ಲಿ ಅರಳುತ್ತಾ.. ಹದಕಾಣುವಾಗ ಊರು ಕೇರಿ ತುಂಬಾ ಮುಖ ತೊಳೆದು ವಿಭೂತಿ ಧರಿಸಿದ ಜನರು ಮಳೆಗೆ ಎದ್ದ ದೀಪದ ಹುಳುಗಳಂತೆ ಹೋಟೆಲಿನ ಮಂಡಕ್ಕಿ ಒಗ್ಗಣ್ಣಿ ಮೆಣಸಿನ ಕಾಯಿ ರುಚಿಗೆ ನಾ ಮುಂದು ತಾಮುಂದು ಎಂದು ನುಗ್ಗುವವರೇ…
ಒಗ್ಗಣ್ಣಿ ಮಂಡಕ್ಕಿಯ ರುಚಿಯು ಆಗೆಲ್ಲಾ ಕಣ್ಣಿಗೆ; ಕುರ್ಚಿ,ನೆಲ,ಮೂಲೆ,ಅಂಗಳಗಳೆಂಬ ತಾರತಮ್ಯ ಮೂಡಿಸುತ್ತಿರಲಿಲ್ಲ.ಅಜ್ಜನೊಂದಿಗೋ ಮಾವನೊಂದಿಗೋ ಹೋಟೆಲಿಗೆ ಮನೆಯ ಹಿಂಡು ಹಿಂಡು ಮಕ್ಕಳು ಹೋದಾಗ ಪುಟಾಣಿ ಕೈಗಳಲ್ಲಿ ಅಷ್ಟೇ ಚಿಕ್ಕ ಪೇಪರ್ ಗಳಲ್ಲಿ ಮುದುರಿಕೊಂಡು ಪ್ಯಾರಾಚೂಟ್ ನಂತೆ ಕೈಗೆ ಇಳಿಯುತಿದ್ದ ಸೊಗಸಿಗೆ ಮತ್ತೊಂದು ಹೋಲಿಕೆಯುಂಟೆ..?
ಮಂಡಕ್ಕಿಯೇ.. ಬಯಲು ಸೀಮೆಯ ಶೂನ್ಯ ಸಿಂಹಾಸನಾಧೀಶ್ವರ!! ಬಡವರ ಮಕ್ಕಳ ಸಂಜೀವಿನಿ!!.ಎಣ್ಣೆ ಚಿಮುಟು ಹಿಡಿದ ಸೀರೆಯ ಹೋಟೇಲ್ ಪಾರೇತವ್ವ,ಶಾರದವ್ವರ ಚಲುವಾಗಲೀ,ನಿಲುವಾಗಲೀ ಕಾಣುತ್ತಲೇ ಇರಲಿಲ್ಲ.ಮನೆಗೆ ಹೋದರೆ ಎಲ್ಲಿ ಮಂಡಕ್ಕಿ ಸರುಪಾಲಾದೀತೆಂದು ಮಕ್ಕಳು ಅಲ್ಲೇ ನಿಂತು ಮುಕ್ಕುವಾಗ, ದೊಡ್ಡವರ ಕೈಗೆ ತಗುಲುತಿದ್ದ ಗಾಜಿನ ಗ್ಲಾಸು,ತಲೆ ತಲೆಗಳಿಂದಲೂ ತಳವರ್ಗಗಳಿಗೆ ಮೀಸಲಾದ ನೆರಿಕೆಯ ಸೊಂಟದೊಳಗೇ ಕುಳಿತ ನೆಗ್ಗಿ ನೆಗ್ಗಿ ವಿಶಿಷ್ಟ ಆಕಾರ ಪಡೆದ ಸಿಲವರ್ ಗ್ಲಾಸು,ತೆಂಗಿನ ಕಾಯಿ ಚಿಪ್ಪುಗಳು ಮಂಡಕ್ಕಿಯೆಂಬ ಮರುಳುಸಿದ್ದೇಶ್ವರನಿಂದಾಗಿ ಭಿನ್ನ ಬೇಬಿಷ್ಟಿ ಅನಿಸುತ್ತಿರಲಿಲ್ಲ! ಎಲ್ಲಾ ಮುಗಿದಮೇಲೆ ಕಿವಿ ಸಂದಿಯಲ್ಲಿ ಉಳಿದಿದ್ದ ಗಣೇಶ,ಸಣ್ಣ ಕಾಳಸ್ತರಿ,ದೊಡ್ಡ ಕಾಳಸ್ತರಿ ಕೊರಬೀಡಿಗಳಿಗೆ ಬೀಳುತಿದ್ದ ಬೆಂಕಿ ಅವರ ಆ ಒಡಲಾಳವನ್ನೇ ಸಂಕೇತಿಸುತಿದ್ದವೋ.. ಏನೋ.. ತಿಳಿಯದು.
ಮಂಡಕ್ಕಿಯ ಹಿಂದೆ ತಾರತಮ್ಯಗಳ ಕೈ ಇರುವಂತೆಯೇ ಮಂಡಕ್ಕಿಗೆ ಎಲ್ಲರನ್ನೂ ಕಲೆಸುವ ಸಹಕರಿಸಿ ಕೂಡಿಸುವ ಸೆಕ್ಯುಲರ್ ಶಕ್ತಿಯೂ ಇತ್ತು.ಈ ಶಕ್ತಿಯೇ ಊರ ಸಾಹುಕಾರನಿಗೆ ಛೇರಮನ್ ಸೀಟ್ ಕೊಡಿಸುತಿತ್ತು.ಚುನಾವಣೆಯೆಂದರೆ ಆಗ ಎರಡು ಮುರು ಚೀಲಗಳ ಮಂಡಕ್ಕಿಯ ಒಗ್ಗಣ್ಣಿಯ ಸಾಕಿತ್ತು.ಗೋಡೋನ್ ಅಂಗಳಕ್ಕೆ ಹೋಗಿ ಒಂದು ಬಾರಿ ತಿಂದು ಬಂದ ಹಿರೀಕರು ಆತನ “ಋಣ ತಿಂದು ಬೊಂದ್ನೆಪ್ಪೋ ಓಟು ಆತನಿಗೇ ಸೈ” ಅನ್ನುತ್ತಿದ್ದರು.ವಿಶಿಷ್ಟವೆಂದರೆ ಅವರೆಲ್ಲಾ ಇಂದಿರಾ ಗಾಂಧಿ ಭಕ್ತರೇ..! ಆಕೆ ಅವರ ಪಾಲಿಗೆ ಆದಿ ಶಕ್ತಿ.ಹಿಂದಿನ ಆಕಳು ಮತ್ತು ಕರು ನಮ್ಮ ಕಾಲದ ಕೈ ಅವರ ಪ್ರಶ್ನಾತೀತ ಚುನಾವಣಾ ಗುರುತಾಗಿತ್ತು.ಮುಂದೆ ಮಂಡಕ್ಕಿ ಚೀಲ ಹಿಡಿದು ಸಾಹುಕಾರ ಬೇರೆ ಪಕ್ಷಗಳ ಕಡೆ ವಾಲಿದರೂ ಜನ ಇಂದಿರಮ್ಮನ ಕಡೆಯವರ ಮಂಡಕ್ಕಿ ತಿಂದೇ ಓಟು ಹಾಕುತಿದ್ದದ್ದು ಸಂಪತ್ತಿಗೇ ಸವಾಲ್ ನಂತೆಯೂ ಕಾಣುತಿತ್ತು.ಊರ ಗೌಡರು ಇಂದಿರಮ್ಮನ ಈ ಚುಂಗಿಡಿದು ಸಾಹುಕಾರನ ಪಾಳೇಗಾರಿಕೆ ತುಳಿದು ಊರೊಳಗೆ ಹೊಸ ಆಡಳಿತ ತಂದದ್ದು ಬೆಳದದ್ದು ಮಂಡಕ್ಕಿ ಚೀಲಗಳಿಂದಲೇ ಎಂಬುದು ಈಗ ಇತಿಹಾಸ!
ಅಕ್ಕಿಗೆ ಮದುವೆ ಮೊದಲಾದ ಮಂಗಳ ಕಾರ್ಯಗಳಲ್ಲಿ ,ಪೂಜಾ ಮಂದಿರಗಳಲ್ಲಿ ಸ್ಥಾನ ಸಿಕ್ಕಂತೆ ಅಕ್ಕಿಯಿಂದ ರೂಪುಗೊಳ್ಳುವ ಮಂಡಕ್ಕಿಗೆ ಮದುವೆಯ ಬೀಗರ ಎದುರುಗೊಳ್ಳುವ ಅವಕಾಶ ಈಗಲೂ ಹಳ್ಳಿಗಳಲ್ಲಿ ದೊರಕಿದೆ.ಊರಿಗೆ ಬಂದ ಬೀಗರು ಆಂಜಿನೇಯನ ಗುಡಿಯೊಳಗೆ ಕುಳಿತು ಸುಧಾರಿಸುವಾಗಲೇ ಬೀಗರ ಕಡೆಯಿಂದ ಬಿದಿರು ಬುಟ್ಟಿ ಅಥವಾ ಸಿಲವರ್ ಬಾಣಲೆಗಳಲ್ಲಿ ತುಂಬಿಕೊಂಡ ಕಾರಾ ಮಂಡಕ್ಕಿ ಪೇಪರ್ ಗಳೊಂದಿಗೆ ಬೀಗರ ಕೈಗಳಿಗೆ ಇಳಿದು ಅದರ ರುಚಿ ಅವರ ಧಣಿವನ್ನ ಆರಿಸುತ್ತಾ ಚಹಾದೊಂದಿಗೆ ಬಗೆ ಬಗೆಯ ನಗೆಗಳನ್ನ ಉಕ್ಕಿಸುತ್ತದೆ.
ಆನಂತರ ಅಲ್ಲಿಯ ಜಗಲಿಯಲ್ಲಿ ಹೆಣ್ಣಿನ ಕಡೆಯವರ ಹುಸಿ ಮದುವೆಯ ಆಚರಣೆ ಶುರುವಾಗುತ್ತದೆ.ಗಂಡು ಮಕ್ಕಳಿಗೆ ಚಿತ್ರ ವಿಚಿತ್ರವಾಗಿ ಅಲಂಕರಿಸಿ,ಜೋಳದ ದಂಟಿನ ಚಾಳೀಸು ಹಾಕಿ ಈರುಳ್ಳಿ,ಬದನೇ ಕಾಯಿ,ಮೆಣಸಿನ ಕಾಯಿ ಸರಗಳನ್ನ ಹಾಕಿ ಛತ್ರಿ ಹಿಡಿದು,ಸೇರು ಬೀಸುವ ಕೋಲು ಹಿಡಕೊಂಡು,ಗಂಡು ಗಂಡುಗಳೇ ಜೋಡಿಗಳಾಗಿ ಮೆರವಣಿಗೆ ಮೂಲಕ ಬರುತ್ತಾರೆ ಅಲ್ಲಿ ಅವರನ್ನ ಕೂಡಿಸಿ ಎರಡೂ ಕಡೆಯವರು ಕಲೆತು ಹುಡುಗಾಟಗಳ ಆಚರಣೆ ನಡೆಸುತ್ತಾರೆ ಇದು ಸಂಪೂರ್ಣ ನಗೆಗಾಗಿ ಮೀಸಲಾಗಿರುವ ಆಚರಣೆಯಾಗಿರುತ್ತದೆ.
ದರ್ಗಾದ ಅಜ್ಜಯ್ಯನ ಗುರುವಾರದ,ಪ್ರಸಾದದೊಳಗೂ,ಪುಟಾಣಿ ಮತ್ತು ಬೆಲ್ಲದ ಪುಡಿಯೊಂದಿಗೆ ಮಂಡಕ್ಕಿ ತನ್ನ ಮತ್ತೊಂದು ರುಚಿಯನ್ನೂ ನೀಡಿ ಭಕ್ತಿಯನ್ನೂ, ಗೌರವವನ್ನೂ ಹುಟ್ಟಿಸುತಿತ್ತು.
ಮಂಡಕ್ಕಿಗೆ ಹೊಸ ಜೋಡಿಗಳನ್ನ ಬೆಸೆಯುವ ಅವಕಾಶ ಸಿಕ್ಕಂತೆಯೇ,ಮಂಡಕ್ಕಿ ರುಚಿ ರಹಿತವಾಗಿ,ತಿನ್ನಲಾರದೇ ಮುಟ್ಟಲಾರದೇ ..ಚಿಲ್ಲರೆ ಹಣಗಳ ಜೊತೆಗೆ ಆಕಾಶಕ್ಕೆ ನೆಗೆಯುತ್ತಾ ಇಹದ ಜೀವಿಯ ಕೊನೆಯ ಯಾತ್ರೆಯ ಪಾಲುದಾರನಾಗಿಯೂ ಸ್ಮಶಾನದ ತನಕ ಹೊರಡುವುದು ವಿಸ್ಮಯಕಾರಿ ಅಲ್ಲವೇ…!
ವರ್ಷಕ್ಕೊಂದು ಬಾರಿ ಬರುವ ಶಿವರಾತ್ರಿಯ ಉಪವಾಸದ ಸಂಜೆಯಂತೂ ಮಂಡಕ್ಕಿಗೆ ಎಲ್ಲಿಲ್ಲದ ಗೌರವ,ಮೆಣಸಿನ ಕಾಯಿ,ಈರುಳ್ಳಿ ಪಕೋಡಗಳೊಂದಿಗೆ ಅದು ತಟ್ಟೆಯೆಂಬ ಅಕಾಡದಲ್ಲಿ ನಿಂತಾಗ ತನ್ನೆದುರಿನ ದ್ರಾಕ್ಷಿ,ಆಪಲ್,ಕಲ್ಲಂಗಡಿ,ಕರಬೂಜ,ಬೇಲದ ಹಣ್ಣು,ಖರ್ಜೂರಗಳಂತಹ ಸವಿ ಸವಿ ಪೈಲ್ವಾನರನ್ನೂ ತನ್ನ ರೂಪ ಮತ್ತು ರುಚಿಗಳಿಂದ ಮಂಡಕ್ಕಿ ಚಿತ್ತಾಗಿಸಿಬಿಡುತ್ತದೆ.
ಊರ ತೇರು,ಜಾತ್ರೆ,ಉರುಸುಗಳಲ್ಲಿ ಮುಖ್ಯ ಜಾಗಗಳನ್ನ ಆಕ್ರಮಿಸಿಕೊಂಡ ಮಂಡಕ್ಕಿಯು ಫಳಾರದ ಹೆಸರಲ್ಲಿ ಸಿಹಿಯ ಜೊತೆಗೆ ಮನೆ ಮನೆಗೆ ಸಲ್ಲುತ್ತದೆ.ಖಾರ ಬುಗ್ಗಿ,ದಾಣಿ ಮಂಡಕ್ಕಿ,ಮಸಲಾ ಮಂಡಕ್ಕಿ,ಮೊದಲಾದ ಹೆಸರುಗಳಲ್ಲ್ಲಿ ಜನರ ಆಕರ್ಷಿಸಲೆಂದೇ ನೆಲೆಗೊಂಡಿರುತ್ತದೆ.
ಕೊರೊನಾ ಕಾಲದಲ್ಲೂ ಮಂಡಕ್ಕಿ ತನ್ನ ಜನಪ್ರಿಯತೆಯನ್ನ ಕಳಕೊಂಡಿಲ್ಲ.ಯೂಟೂಬ್ ಮತ್ತು ಟಿವಿಗಳ ಹೊಸ ರುಚಿಗಳಲ್ಲಿ ಇದು ತನ್ನ ಕರಾಮತ್ತನ್ನ ಉಳಿಸಿಕೊಂಡೇ ಸಾಗಿತ್ತು.
ಎಲ್ಲಾ ದಾಟಿ ಮಂಡಕ್ಕಿಯ ಉತ್ಪಾದನೆಯ ಕಡೆಗೆ ಬಂದರೆ ಕಾರ್ಮಿಕರ ಸಮಸ್ಯೆಯಿಂದಾಗಿ ಉತ್ಪಾದನೆ ವಾರದಲ್ಲಿ ಮೂರು ದಿನಕ್ಕೆ ಮೀಸಲಾಗಿದೆಯಾದ್ದರಿಂದ ಬೇಡಿಕೆಗೆ ತಕ್ಕನಾದ ಪೂರೈಕೆ ಅಸಾಧ್ಯವಾಗಿದೆ ಎಂದು ಮಾಲಿಕರು ಮಂಡಕ್ಕಿ ಭಟ್ಟಿ ಮಾಲಿಕರು ಹೇಳುತಿದ್ದಾರೆ. ಮಂಡಕ್ಕಿ ಭಟ್ಟಿಯು ಊರ ಹೊರಗೇ ಇರುವುದರಿಂದ ಯಾವುದೇ ಮೂಲಭೂತ ಸೌಕರ್ಯಗಳು ಈ ಉದ್ಯಮಕ್ಕಿಲ್ಲ.ತಳವರ್ಗಗಳ ಮತ್ತು ಮುಸ್ಲಿಮರ ಈ ಉದ್ಯಮ ಶುಚಿರಹಿತ ಬಯಲುಗಳನ್ನ ಆವರಿಸಿಕೊಂಡಿದೆ.
ಯಂತ್ರಗಳಿಂದ ತಯಾರಾದ ಮಂಡಕ್ಕಿಗಳಿಗಿಂತಲೂ ಕೈಗಳಿಂದ ತಯಾರಾದ ಮಂಡಕ್ಕಿಯೇ ರುಚಿ ಎನ್ನುವಾಗಲೇ ಯಂತ್ರಗಳು ಈ ಮಂಡಕ್ಕಿಯ ರುಚಿ ಕಳೆಯುವುದರ ಜೊತೆಗೆ ನೂರಾರು ಜನರ ಬದುಕನ್ನೂ ಸರ್ವನಾಶದಂಚಿಗೆ ತಳ್ಳುತ್ತಿವೆ.
ದೇಶೀ ಎಣ್ಣೆಯ ಕಾರ್ಖಾನೆಗಳಿದ್ದಾಗ ನಿಸರ್ಗ ಸ್ನೇಹಿಯಾಗಿದ್ದ ಮಂಡಕ್ಕಿ ಉತ್ಪಾನೆಯು ಅಲ್ಲಿನ ಶೇಂಗಾ ಸಿಪ್ಪೆಯ ಉರುವಲಿಗೆ ಮೀಸಲಾಗಿತ್ತು. ಬಹುರಾಷ್ಟ್ರೀಯ ಕಂಪನಿಗಳ ಹೊಡೆತಕ್ಕೆ ಪ್ರಾದೇಶಿಕ ಕಾರ್ಖಾನೆಗಳು ಮುಚ್ಚಿಹೋದದ್ದರಿಂದ ಮಂಡಕ್ಕಿ ಭಟ್ಟಿಗೆ ಉರುವಲಿನ ಸಮಸ್ಯೆಗಳು ಶುರುವಾಗಿ ಕೆಲವು ಕಡೆಗೆ ಉರುವಲಿಗೆ ಟೈರ್ ಗಳನ್ನ ಬಳಸತೊಡಗಿದವು ಪರಿಣಾಮ ಕೂಲಿಕಾರ್ಮಿಕರು ಅಸ್ತಮಾ ಮತ್ತು ಕ್ಯಾನ್ಸರ್ ತರದ ರೋಗಗಳಿಗೆ ಬಲಿಯಾಗಬೇಕಾಯಿತು.
ಎಲ್ಲಕ್ಕೂ ಮಿಗಿಲಾಗಿ ಮಂಡಕ್ಕಿಗೆ ಎದುರಾಗಿ ಇಂದು ಹಳ್ಳಿ ಹಳ್ಳಿಗಳ ಗೂಡಂಗಡಿಗಳನ್ನ ಹೊಕ್ಕ ಚಿಪ್ಸ,ಕುರು ಕುರೇ,ಮೊದಲಾದ ಆಕರ್ಷಕ ಪ್ಯಾಕೆಟ್ ನೊಳಗಿನ ಕುರುಕಲು ಪದಾರ್ಥಗಳು ಆಧುನಿಕ ಮಕ್ಕಳ ಕೈಸೇರುತ್ತಿರುವುದರಿಂದ ಮಂಡಕ್ಕಿಯ ಅಂಟಿನ ನಂಟಿಗೇ ಉರುಲು ಕುಣಿಕೆ ಹೆಣೆವಂತಿದೆ.