
ಶ್ರೀ ಆರೂಢ ಭಾರತೀ ಸ್ವಾಮೀಜಿ,ಹಾರೊಹಳ್ಳಿ
ಬಗೆ ಬಗೆಯ ಆನಂದ!
ತೈತ್ತಿರೀಯ ಉಪನಿಷತ್ತಿನ ಬ್ರಹ್ಮಾನಂದವಲ್ಲಿಯಲ್ಲಿ ಬಗೆ ಬಗೆಯ ಆನಂದಗಳನ್ನು, ಅವುಗಳ ಅಂತಸ್ಸತ್ತ್ವವನ್ನು ಸೊಗಸಾಗಿ ವಿವರಿಸಲಾಗಿದೆ. ಗುರು ವೈಶಂಪಾಯನನು ಶಿಷ್ಯ ಯಾಜ್ಞವಲ್ಕ್ಯನಿಗೆ ಏಳನೆಯ ಅನುವಾಕದಲ್ಲಿ ಹೀಗೆ ವಿವರಿಸಿದ್ದಾನೆ:
ರಸೋ ವೈ ಸಃ.
ರಸಗ್ಂ ಹ್ಯೇವಾಯಂ ಲಭ್ಧ್ವಾನಂದೀ ಭವತಿ.
ಅವ್ಯಕ್ತಸ್ವರೂಪದ ಪರಮಾತ್ಮನು ವ್ಯಕ್ತಸ್ವರೂಪನಾಗಿ ತನ್ನಿಂದ ತಾನೇ ಆವಿರ್ಭಾವಗೊಂಡನು. ಇಂಥ ಈ ಪರಮಾತ್ಮನೇ ಸಕಲಸ್ವರೂಪದ ‘ರಸ’ ವಾಗಿದ್ದಾನೆ. ಇಂಥ ಪರಮಾತ್ಮನನ್ನು ತಿಳಿಯುವುದರಿಂದ ಮಾತ್ರವೇ ಆನಂದವನ್ನು ಹೊಂದುತ್ತಾನೆ. ಎಂಟನೆಯ ಅನುವಾಕದಲ್ಲಿ “ಸೈಷಾ ಆನಂದಸ್ಯ ಮೀಮಾಂಸಾ ಭವತಿ = ಇದು ಆನಂದಸ್ವರೂಪದ ಜಿಜ್ಞಾಸೆಯ ವಿಷಯವಾಗಿದೆ” ಎನ್ನುತ್ತಾ ಆನಂದಸ್ವರೂಪವನ್ನು ವಿವರಿಸಲು ಆರಂಭಿಸುವ ಗುರು ವೈಶಂಪಾಯನನು :
ಯುವಾ ಸ್ಯಾತ್ ಸಾಧು ಯುವಾಧ್ಯಾಯಕಃ.
ಆಶಿಷ್ಠೋ ದೃಢಿಷ್ಠೋ ಬಲಿಷ್ಠಃ.
ತಸ್ಯೇಯಂ ಪೃಥಿವೀ ಸರ್ವಾ ವಿತ್ತಸ್ಯ ಪೂರ್ಣಾ ಸ್ಯಾತ್.
ಸ ಏಕೋ ಮಾನುಷ ಆನಂದಃ. – ಎನ್ನುತ್ತಾನೆ.
ಮಾನವನ ಸರಿಯಾದ ಆನಂದಸ್ವರೂಪವನ್ನು ಈ ಮಂತ್ರ ವಿವರಿಸುತ್ತದೆ. ಆನಂದವನ್ನು ಅನುಭವಿಸಲು ಸರಿಯಾದ ವಯಸ್ಸಿರಬೇಕು. ತಾರುಣ್ಯವು ಸದಾ ಕಂಗೊಳಿಸಬೇಕು. ಪ್ರಬಲ ಇಚ್ಛಾಶಕ್ತಿಯು ಪುಟಿದೇಳುತ್ತಿರಬೇಕು. ಸದಾ ಜೊಳ್ಳು ಮುಖದ, ಇಚ್ಛಾಶಕ್ತಿ ಇರದ ಆಶೆಬುರುಕ ನಿರಾಶಾವಾದಿಯು ಯಾವ ಸುಖವನ್ನೂ ಅನುಭವಿಸಲಾರ! ದೃಢನಿರ್ಧಾರದ ಗಟ್ಟಿ ಹೃದಯದವನಿರಬೇಕು! ಹೇಡಿಯು ಯಾವ ಕಾಲಕ್ಕೂ ಅಪ್ಪಟ ಸುಖವನ್ನು ಅನುಭವಿಸಲಾರ! ಆತನು ಬಲಿಷ್ಠನಾಗಿರಬೇಕು,ಆರೋಗ್ಯವಂತನಾಗಿರಬೇಕು. ದುರ್ಬಲ ರೋಗಿಷ್ಠನದ್ದು ಗೋಳೇ ಗೋಳು! ಇನ್ನು ಆತನು ಆನಂದಪಡುವುದೆಂತು? ಅದಕ್ಕೇ ಸ್ವಾಮಿ ವಿವೇಕಾನಂದರು ಹೇಳಿದ್ದು:
“ಕಬ್ಬಿಣದಂಥ ಮಾಂಸಖಂಡ, ಉಕ್ಕಿನಂಥ ನರಮಂಡಲ, ವಿದ್ಯುತ್ತಿನಂಥ ಇಚ್ಛಾಶಕ್ತಿ ಇರುವ ನೂರು ಯುವಕರನ್ನು ನನ್ನೊಂದಿಗೆ ಕಳಿಸಿ, ನಾನು ನವ ಭಾರತದ ನಿರ್ಮಾಣ ಮಾಡುತ್ತೇನೆ” – ಎಂದು.
ಇಂಥ ಯುವಕ ಆನಂದವನ್ನು ಅನುಭವಿಸಬಲ್ಲ. ಮಾತ್ರವಲ್ಲ, ಆನಂದವನ್ನು ಸೃಜಿಸಬಲ್ಲ! ಇಂಥ ಯುವಕನು, ಅತಿ ವೃಷ್ಟಿ – ಅನಾವೃಷ್ಟಿ – ಭೂಕಂಪಾದಿ ಯಾವುದೇ ಪ್ರಕೃತಿ ವಿಕೋಪವಿಲ್ಲದೇ ಸಂಪದ್ಭರಿತ ಸಮಗ್ರ ಭೂಮಂಡಲದ ಅಧಿಪತಿಯಾಗಿ ಸುಖ ಸಮೃದ್ಧಿಯ ಆನಂದವನ್ನು ಅನುಭವಿಸುತ್ತಿದ್ದರೆ, ಆತನು ತನ್ನ ಜೀವಮಾನ ಪೂರ್ತಿ ಪಡೆಯುವ ಇಂಥ ಒಟ್ಟು ಆನಂದವು ಮನುಷ್ಯಲೋಕದ ಮಾನವನ ಒಂದು ಆನಂದವೆನಿಸುವುದು. ಇಂಥ ಸೌಭಾಗ್ಯ ಅದೆಷ್ಟು ಜನರಿಗಿದೆ? ಅದೆಷ್ಟು ಜನರು ಮಾನವರಾಗಿದ್ದು, ಮಾನವನ ಒಂದು ಆನಂದವನ್ನು ಸವಿಯುತ್ತಿದ್ದಾರೆ? ಅವರವರೇ ಮೈ ಕೊಡವಿಕೊಂಡು, ಕಣ್ಣುಜ್ಜಿಕೊಂಡು ಪರಿಶೀಲಿಸಬೇಕು. ಹಾಗಿಲ್ಲದಿದ್ದರೆ, ನಾವೇ ಶ್ರೀಮಂತರು, ನಾವೇ ಹೆಚ್ಚು ಸುಖಿಗಳೆಂಬ ಜಂಭವನ್ನು ತೊರೆದಿರಬೇಕು! ಮುಂದುವರೆದು ವೈಶಂಪಾಯನನು ಹೇಳುತ್ತಾನೆ :
ತೇ ಯೇ ಶತಂ ಮಾನುಷಾಃ ಆನಂದಾಃ.
ಸ ಏಕೋ ಮನುಷ್ಯಗಂಧರ್ವಾಣಾಮಾನಂದಃ.
ಶ್ರೋತ್ರಿಯಸ್ಯ ಚಾಕಾಮಹತಸ್ಯ.
ಇಂಥ ನೂರು ಮಾನುಷ ಆನಂದಗಳು ಮನುಷ್ಯ ಗಂಧರ್ವರ ಒಂದು ಆನಂದಕ್ಕೆ ಸಮ. ಎಂದರೆ ಒಬ್ಬ ಮನುಷ್ಯ ನೂರು ಜನ್ಮಗಳಲ್ಲಿ ಹೊಂದುವ ಮೇಲ್ಕಂಡ ಆನಂದದಂಥ ಒಟ್ಟು ನೂರು ಆನಂದಗಳ ಮೊತ್ತವು ಮನುಷ್ಯ ಗಂಧರ್ವನ ಒಂದು ಆನಂದವನ್ನು, ಒಂದು ಜನ್ಮದ ಆನಂದವನ್ನು ಸರಿಗಟ್ಟಬಹುದು. ಆದರೆ ತತ್ತ್ವಜ್ಞಾನಿಯೂ ವೈರಾಗ್ಯ ಸಂಪನ್ನನೂ ಆದವನು ಪಡೆಯುವ ಒಂದು ಆನಂದವು, ಒಬ್ಬ ಮನುಷ್ಯನು ನೂರು ಜನ್ಮಗಳಲ್ಲಿ ಹೊಂದುವ ಮೇಲ್ಕಂಡ ಆನಂದದಂಥ ನೂರು ಆನಂದಗಳಿಗೆ ಮತ್ತು ಮನುಷ್ಯ ಗಂಧರ್ವರ ಒಂದು ಆನಂದಕ್ಕೆ ಸಮ.
ತೇ ಯೇ ಶತಂ ಮನುಷ್ಯಗಂಧರ್ವಾಣಾಮಾನಂದಾಃ.
ಸ ಏಕೋ ದೇವಗಂಧರ್ವಾಣಾಮಾನಂದಃ.
ಶ್ರೋತ್ರಿಯಸ್ಯ ಚಾಕಾಮಹತಸ್ಯ.
ಮನುಷ್ಯಗಂಧರ್ವರ ನೂರು ಆನಂದಗಳು, ದೇವಗಂಧರ್ವರ ಒಂದು ಆನಂದಕ್ಕೆ ಸಮ. ಆದರೆ ತತ್ತ್ವಜ್ಞಾನಿಯೂ ವೈರಾಗ್ಯ ಸಂಪನ್ನನೂ ಆದವನು ಪಡೆಯುವ ಆನಂದವು ಮನುಷ್ಯ ಗಂಧರ್ವನು ನೂರು ಜನ್ಮಗಳಲ್ಲಿ ಪಡೆಯುವ ನೂರು ಆನಂದಗಳಿಗೆ ಮತ್ತು ದೇವಗಂಧರ್ವನ ಒಂದು ಆನಂದಕ್ಕೆ ಸಮ.
ತೇ ಯೇ ಶತಂ ದೇವಗಂಧರ್ವಾಣಾಮಾನಂದಾಃ.
ಸ ಏಕಃ ಪಿತೃಣಾಂ ಚಿರಲೋಕಲೋಕಾನಾಮಾನಂದಃ.
ಶ್ರೋತ್ರಿಯಸ್ಯ ಚಾಕಾಮಹತಸ್ಯ.
ದೇವಗಂಧರ್ವರು ನೂರು ಜನ್ಮಗಳಲ್ಲಿ ಪಡೆಯುವ ನೂರು ಆನಂದಗಳು, ಸ್ವರ್ಗಾದಿ ಚಿರಕಾಲದ ಲೋಕದಲ್ಲಿರುವ ಪಿತೃಗಳು ಒಂದು ಜನ್ಮದಲ್ಲಿ ಪಡೆಯುವ ಒಂದು ಆನಂದಕ್ಕೆ ಸಮ. ಆದರೆ ತತ್ತ್ವಜ್ಞಾನಿಯೂ ವೈರಾಗ್ಯ ಸಂಪನ್ನನೂ ಆದವನು ಹೊಂದುವ ಒಂದು ಆನಂದವು, ದೇವಗಂಧರ್ವರ ನೂರು ಆನಂದಗಳಿಗೆ ಮತ್ತು ಪಿತೃಗಳ ಒಂದು ಆನಂದಕ್ಕೆ ಸಮ.
ತೇ ಯೇ ಶತಂ ಪಿತೃಣಾಂ ಚಿರಲೋಕಲೋಕಾನಾಮಾನಂದಾಃ.
ಸ ಏಕ ಆಜಾನಜಾನಾಂ ದೇವಾನಾಮಾನಂದಃ.
ಶ್ರೋತ್ರಿಯಸ್ಯ ಚಾಕಾಮಹತಸ್ಯ.
ಸ್ವರ್ಗಾದಿ ಚಿರಲೋಕವಾಸಿ ಪಿತೃಗಳು ನೂರು ಜನ್ಮಗಳಲ್ಲಿ ಪಡೆಯುವ ಒಟ್ಟು ನೂರು ಆನಂದಗಳು, ಆಜಾನಜ ದೇವತೆಗಳ ಒಂದು ಆನಂದಕ್ಕೆ ಸಮ. ಆದರೆ ತತ್ತ್ವಜ್ಞಾನಿಯೂ, ವೈರಾಗ್ಯ ಸಂಪನ್ನನೂ ಆದವನು ಪಡೆಯುವ ಒಂದು ಆನಂದವು ಸ್ವರ್ಗಾದಿ ಚಿರಲೋಕವಾಸಿ ಪಿತೃಗಳ ನೂರು ಆನಂದಗಳಿಗೆ ಮತ್ತು ಆಜಾನಜ ದೇವತೆಗಳ ಒಂದು ಆನಂದಕ್ಕೆ ಸಮ.
ತೇ ಯೇ ಶತಮಾಜಾನಜಾನಾಂ ದೇವಾನಾಮಾನಂದಾಃ.
ಸ ಏಕಃ ಕರ್ಮದೇವಾನಾಂ ದೇವಾನಾಮಾನಂದಃ.
ಯೇ ಕರ್ಮಣಾ ದೇವಾನಪಿ ಯಂತಿ.
ಶ್ರೋತ್ರಿಯಸ್ಯ ಚಾಕಾಮಹತಸ್ಯ.
ಆಜಾನಜ ದೇವತೆಗಳ ನೂರು ಆನಂದಗಳು, ಕರ್ಮದೇವತೆಗಳ ಒಂದು ಆನಂದಕ್ಕೆ ಸಮ. ಈ ಕರ್ಮದೇವತೆಗಳು ವೈದಿಕ ಕರ್ಮಗಳ ಮೂಲಕ ದೇವತ್ವವನ್ನು ಪಡೆದಿರುತ್ತಾರೆ. ಆದರೆ, ತತ್ತ್ವಜ್ಞಾನಿಯೂ, ವೈರಾಗ್ಯ ಸಂಪನ್ನನೂ ಆದವನು ಪಡೆಯುವ ಒಂದು ಆನಂದವು ಆಜಾನಜ ದೇವತೆಗಳ ನೂರು ಆನಂದಗಳಿಗೆ ಮತ್ತು ಕರ್ಮದೇವತೆಗಳ ಒಂದು ಆನಂದಕ್ಕೆ ಸಮ. (ಮುಂದುವರೆಯುವುದು).
-ಡಾ. ಶ್ರೀ ಆರೂಢಭಾರತೀ ಸ್ವಾಮೀಜಿ.
ಅಧ್ಯಕ್ಷರು ಶ್ರೀ ಸಿದ್ಧಾರೂಢ ಮಿಷನ್ ಆಶ್ರಮ. ರಾಮೋಹಳ್ಳಿ. ಬೆಂಗಳೂರು. 9731004160.