ಅಶೋಕನನ್ನು ನೆಲೆಗೊಳಿಸಿದ ಸ್ಥಳ ಬ್ರಹ್ಮಗಿರಿ

Share

ಅಶೋಕನನ್ನು ನೆಲೆಗೊಳಿಸಿದ ಸ್ಥಳ ಬ್ರಹ್ಮಗಿರಿ

ಚಿತ್ರದುರ್ಗ ಜಿಲ್ಲೆಯ ಮೊಳಕಾಲ್ಮೂರು ತಾಲೂಕಿನಲ್ಲಿರುವ ಬ್ರಹ್ಮಗಿರಿಯು ಕರ್ನಾಟಕದ ಪ್ರಸಿದ್ಧ ಪ್ರಾಗೈತಿಹಾಸಿಕ ಮತ್ತು ಚಾರಿತ್ರಿಕ ಸ್ಥಳ. ಮೊಳಕಾಲ್ಮೂರು ತಾಲೂಕು ಭೌಗೋಳಿಕವಾಗಿ ಚಿತ್ರದುರ್ಗ ಜಿಲ್ಲೆಗೆ ಶಿಖರದಂತೆ ಕಂಡುಬಂದರೆ ಬ್ರಹ್ಮಗಿರಿಯು ಚಿತ್ರದುರ್ಗ ಜಿಲ್ಲೆಗಲ್ಲದೆ ಕರ್ನಾಟಕದ ಚರಿತ್ರೆಗೆ ಕಳಸಪ್ರಾಯವಾಗಿದೆಯೆಂದರೆ ಅತಿಶಯೋಕ್ತಿಯಾಗಲಾರದು. ಇಲ್ಲಿ ನಡೆದ ಉತ್ಖನನವು ಕರ್ನಾಟಕದ ಪ್ರಾಚೀನ ಚರಿತ್ರೆಯನ್ನು ಪ್ರಪ್ರಥಮವಾಗಿ ವೈeನಿಕ ದೃಷ್ಟಿಕೋನದಿಂದ ರಚಿಸಲು ಅನೇಕ ಸಾಧ್ಯತೆಗಳನ್ನು ಸೃಷ್ಟಿಸಿತೆಂದೇ ಹೇಳಬಹುದು. ಭಾರತ ಪ್ರಸಿದ್ಧ ಶಾಂತಿಪ್ರಿಯ ಅರಸ ಅಶೋಕನ ಕಾಲದ ಶಾಸನದಲ್ಲಿ ಉಲ್ಲೇಖಿಸುವಂತೆ ಇಸಿಲಾವೆಂದೇ ಖ್ಯಾತಿಹೊಂದಿದ ಬ್ರಹ್ಮಗಿರಿ ಬೆಟ್ಟಪರಿಸರದಲ್ಲಿ ಅಕ್ಷರ ಗುಂಡು, ಎಮ್ಮೆತಮ್ಮನ ಗುಂಡು(ಸಿದ್ದಾಪುರ) ಮತ್ತು ಬಳೆಗಾರರ ಗುಂಡು(ಜಟಂಗಿರಾಮೇಶ್ವರ)ಗಳ ಮೇಲೆ ಅವನು ಕಡೆಸಿದ ಮೂರು ಶಿಲಾಶಾಸನಗಳು ದೊರೆತಿರುವುದು ಗಮನಾರ್ಹ.

 

ಇವು ಅಶೋಕನ ಶಾಂತಿಪ್ರಿಯತೆ, ಸತ್ಯ, ಅಹಿಂಸೆ ಹಾಗೂ ಸನ್ಮಾರ್ಗದ ಗುಣಗಳನ್ನು ಸಾರುವ, ಜನರನ್ನು ಉತ್ತಮ ಮಾರ್ಗದತ್ತ ಕೊಂಡೊಯ್ಯುವ ಮಹತ್ವದ ಪ್ರಾಚೀನ ದಾಖಲೆಗಳೂ ಆಗಿವೆ. ಈ ಸ್ಥಳಕ್ಕೆ ಐತಿಹಾಸಿಕ ಮಹತ್ವ ಬಂದದ್ದು ಬಿ.ಎಲ್.ರೈಸ್‌ರವರಿಂದ. ಇವರು ೧೮೯೨ರಲ್ಲಿ ಬೆಟ್ಟದ ಉತ್ತರಕ್ಕಿರುವ ಅಕ್ಷರಗುಂಡಿನ ಮೇಲಿದ್ದ ಶಾಸನವನ್ನು ಪತ್ತೆಹಚ್ಚುವ ಮೂಲಕ ಅಶೋಕನ ಕಾಲದ ಮೌರ್ಯ ಸಾಮ್ರಾಜ್ಯವು ಚಿತ್ರದುರ್ಗ ಜಿಲ್ಲೆಯವರೆಗೆ ವಿಸ್ತಾರವಾಗಿದ್ದುದನ್ನು ದೃಢಪಡಿಸಿದರು.
ಇಸಿಲಾ ಪಟ್ಟಣವು ಅಶೋಕನ ಕಾಲದಲ್ಲಿ ದಕ್ಷಿಣದ ಪ್ರಮುಖ ಆಡಳಿತ ಕೇಂದ್ರವಾಗಿದ್ದಿತು. ಇಲ್ಲಿ ಎಂ.ಹೆಚ್.ಕೃಷ್ಣ ಕ್ರಿ.ಶ. ೧೯೨೮ ಮತ್ತು ೧೯೪೦ರಲ್ಲಿ, ಸರ್ ಮಾರ್ಟಿಮರ್ ವೀಲ್ಹರ್ ೧೯೪೭ರಲ್ಲಿ ಕೈಗೊಂಡ ಕ್ರಮಬದ್ಧ ಉತ್ಖನನದ ಮೂಲಕ ಬ್ರಹ್ಮಗಿರಿಯ ಪರಿಸರದ ಪ್ರಾಚೀನತೆಯನ್ನು ಜಗತ್ತಿಗೆ ಸಾರಿದರು. ಕೃಷ್ಣ ಅವರು ಇಲ್ಲಿ ನಡೆಸಲಾದ ಉತ್ಖನನ ಹಾಗೂ ಅಲ್ಲಿ ಕಂಡುಬಂದ ಅವಶೇಷಗಳು ಮತ್ತು ಪದರಗಳ ಹಿನ್ನೆಲೆಯಲ್ಲಿ ಐದು ಸಾಂಸ್ಕೃತಿಕ ಹಂತಗಳಾದ ೧. ಸೂಕ್ಷ್ಮ ಶಿಲಾಯುಗ(ರೊಪ್ಪ ಸಂಸ್ಕೃತಿ), ೨. ನವಶಿಲಾಯುಗ, ೩. ಕಬ್ಬಿಣ ಯುಗ ಅಥವಾ ಬೃಹತ್ ಶಿಲಾಯುಗ, ೪. ಮೌರ್ಯಕಾಲೀನ ೫. ಚಾಲುಕ್ಯ-ಹೊಯ್ಸಳ ಕಾಲದ ಸಂಸ್ಕೃತಿಗಳೆಂದು ಕರೆದರು. ಇವುಗಳನ್ನು ವೀಲರ್ ಮತ್ತೊಮ್ಮೆ ದೃಢೀಕರಿಸಿದರು. ಅಲ್ಲದೆ ಈ ಪರಿಸರವು ಇತಿಹಾಸ ಕಾಲದ ಮೌರ್ಯರಿಂದ ಹಿಡಿದು ಕದಂಬ, ಸಾತವಾಹನ, ರಾಷ್ಟ್ರಕೂಟ, ಕಲ್ಯಾಣ ಚಾಲುಕ್ಯ, ನೊಳಂಬ, ಹೊಯ್ಸಳ, ನಿಡುಗಲ್ಲು ಚೋಳರು, ವಿಜಯನಗರ ಹಾಗೂ ಪಾಳೆಯಗಾರರ ಕಾಲದವರೆಗೆ ಆಳ್ವಿಕೆಗೆ ಒಳಪಟ್ಟಿತ್ತು. ಅಶೋಕನ ಕಾಲದಲ್ಲಿ ಇಸಿಲಾ ಪಟ್ಟಣವಾಗಿದ್ದ ಈ ಸ್ಥಳವು ಮುಂದೆ ಹಾನೆಯ ನಾಡು, ಹಾನೆಯಪಟ್ಟಣವಾಗಿ, ಹೊಯ್ಸಳ ಬಲ್ಲಾಳನ ಅವದಿsಯಲ್ಲಿ ವಿಜಯಗಿರಿಯಾಗಿ ಪ್ರಸಿದ್ಧಿ ಪಡೆಯಿತು.


ಚಿತ್ರದುರ್ಗ ಜಿಲ್ಲೆಯು ಜಾಗತಿಕವಾಗಿ ಹೆಚ್ಚು ಪರಿಚಿತವಾದದ್ದು ಅಶೋಕನ ಬಂಡೆಗಲ್ಲು ಶಾಸನಗಳಿಂದ ಎಂಬುದು ಸರ್ವವಿದಿತ. ಈ ಶಾಸನಗಳಲ್ಲಿ ಅಶೋಕ ಬೌದ್ಧ ಮತಾವಲಂಬಿಯಾಗಿ ಪರಿವರ್ತನೆಯಾದದ್ದು, ಜಂಬೂದ್ವೀಪದ ಪ್ರಜೆಗಳು ಬೌದ್ದ ಧರ್ಮ ಪ್ರಸಾರದಿಂದ ಗುಣವಂತರಾದದ್ದು, ಪರಿಶ್ರಮದಿಂದ ಎಲ್ಲರೂ ಸುಖಿಗಳಾಗಬೇಕು, ತಾಯಿ, ತಂದೆ ಮತ್ತು ಹಿರಿಯರಿಗೆ ವಿಧೇಯರಾಗಿರಬೇಕು, ಪ್ರಾಣಿಗಳಲ್ಲಿ ದಯೆ ತೋರಿಸಬೇಕು, ಸತ್ಯದಿಂದ ನಡೆಯಬೇಕು ಇನ್ನು ಮುಂತಾದ ಧರ್ಮ ಪರಿಪಾಲನೆಯ ಸಂಗತಿಗಳನ್ನು ಹೇಳಲಾಗಿದೆ. ಇದಕ್ಕೆ ಪೂರಕವೆನ್ನುವಂತೆ ಬೌದ್ಧ ಧರ್ಮದ ಚೈತ್ಯ ಕಟ್ಟಡವು ಬ್ರಹ್ಮಗಿರಿ ಉತ್ಖನನದಲ್ಲಿ ಕಂಡುಬಂದಿರುವುದು ಗಮನಾರ್ಹ. ಚಿತ್ರದುರ್ಗ ಜಿಲ್ಲೆಯ ಮಟ್ಟಿಗೆ ಇದು ಅತ್ಯಂತ ಪ್ರಾಚೀನ ಧಾರ್ಮಿಕ ವಾಸ್ತು. ಬ್ರಹ್ಮಗಿರಿ ಬೆಟ್ಟದ ಮೇಲೆ ಸುಂದರವಾದ ಕಟ್ಟಡವೊಂದಿದೆ. ಅದನ್ನು ಮಹಲ್ ಎಂದೇ ಕರೆಯುತ್ತಿದ್ದು ಇಂದು ಮಠವಾಗಿ ಕಾರ್ಯ ನಿರ್ವಹಿಸುತ್ತಿದೆ.
ಬ್ರಹ್ಮಗಿರಿ ಬೆಟ್ಟದ ಪಶ್ಷಿಮಕ್ಕೆ ಕೆಳಭಾಗದಲ್ಲಿ ಕಾಡಸಿದ್ಧಾಪುರ ಮತ್ತು ಸಿದ್ಧಾಪುರಗಳಿವೆ. ಉತ್ತರಕ್ಕೆ ಸುಮಾರು ಐದು ಕಿ.ಮೀ. ದೂರದಲ್ಲಿ ಜಟಂಗಿರಾಮೇಶ್ವರ ಬೆಟ್ಟವಿದೆ. ಅಶೋಕನ ಶಾಸನ ದೊರೆತ ಹಿನ್ನೆಲೆಯಲ್ಲಿ ಸಿದ್ಧಾಪುರವನ್ನು ಅಶೋಕ ಸಿದ್ಧಾಪುರವೆಂದು ಕರೆಯುತ್ತಾರೆ. ಬ್ರಹ್ಮಗಿರಿ ಬೆಟ್ಟವನ್ನು ಮೂರು ಕಡೆಗಳಿಂದ ಹತ್ತಬಹುದಾಗಿದೆ. ಅಕ್ಕತಂಗಿ ಗುಡಿಯ ಮುಂಭಾಗದಿಂದ ಒಂದು ಮಾರ್ಗವಿದ್ದರೆ, ಪಗಡೆಸಾಲು, ಏಳೂರ ಬಂಡೆಯ ಮೂಲಕ ಹುಲಿಕುಂಟೆ ತಲುಪುವ ದಾರಿ ಇನ್ನೊಂದು. ಹಾಗೆಯೇ ಕಾಡಸಿದ್ದಾಪುರದಿಂದ ಈಶಾನ್ಯಕ್ಕೆ ಹೊರಟು ಅಕ್ಷರಗುಂಡನ್ನು ದಾಟಿ ರೊಪ್ಪದೆಡೆಗೆ ಹೋದರೆ, ದಾರಿಯಲ್ಲಿ ಹತ್ತಾರು ಬೃಹತ್ ಶಿಲಾಯುಗದ ಕಲ್ಗೋರಿಗಳಿವೆ. ಇವುಗಳನ್ನು ದಾಟಿ ರೊಪ್ಪ ಗ್ರಾಮದ ಮೂಲಕ ಹತ್ತುವ ಮಾರ್ಗ ಮೂರನೆಯದು.


ಕಾಡಸಿದ್ದಾಪುರದಿಂದ ಮಾರ್ಗದಲ್ಲಿ ಹೊರಟರೆ ೧೨-೧೩ನೆಯ ನಿರ್ಮಿತಿಗಳಾದ ಅಕ್ಕ ತಂಗಿಯರ ಗುಡಿಗಳಿವೆ. ಇವುಗಳಲ್ಲಿ ಅಕ್ಕನ ಗುಡಿಮಾತ್ರವಿದ್ದು, ತಂಗಿಯ ಗುಡಿಯ ಕಂಬ ಮೊದಲಾದವನ್ನು ಚಿಕ್ಕೇರಹಳ್ಳಿಯ ಗ್ರಾಮಸ್ಥರು ಕೊಂಡೊಯ್ದು ತಮ್ಮ ಊರಿನ ರಾಮದೇವಾಲಯಕ್ಕೆ ಬಳಸಿಕೊಂಡಿದ್ದಾರೆ. ಅಕ್ಕನ ಗುಡಿಯ ಮುಂದೆ ಬೃಹದಾಕಾರದ ಬಂಡೆಗಲ್ಲಿದ್ದು, ಇದನ್ನು ಆನೆಬಂಡೆಯೆಂದೇ ಕರೆಯುತ್ತಾರೆ. ಇದಕ್ಕೆ ಕಾರಣ ಒಂದು ಮುಖದಲ್ಲಿ ಆನೆಯ ಬೃಹತ್ ರೇಖಾಕೃತಿ ಇರುವುದು. ಇದು ಪ್ರಾಚೀನ ಇತಿಹಾಸದ ಮಹತ್ವದ ಆಕರವೂ ಹೌದು. ಇದನ್ನು ದಾಟಿ ಗೋಡೆ ಸಾಲನ್ನು ಹಿಡಿದು ಕಲ್ಲುಬಂಡೆಗಳನ್ನು ದಾಟಿ ಮೇಲೇರಿದರೆ ಮಹಲ್‌ವರೆಗೂ ಹೋಗಬಹುದಾಗಿದೆ. ಇನ್ನೊಂದು ಮಾರ್ಗವಾದ ಕಲ್ಲುಕುಂಟೆಗೆ ಹೋಗುವ ದಾರಿಯಲ್ಲಿ ಜಿನಾಲಯ, ನಿಷಧಿಕಲ್ಲುಗಳಿವೆ. ಮುಂದೆ ಸಾಗಿದರೆ ನೂರಾರು ಅಡಿ ಉದ್ದದ ಬೃಹತ್ ಬಂಡೆಗಲ್ಲು ಮತ್ತು ಅದರ ಕೆಳಗೆ ವಿಸ್ತಾರವಾದ ಗುಹೆಯಿದೆ. ಈ ಗುಹೆಯನ್ನು ಏಳೂರ ಬಂಡೆಯೆಂದೇ ಕರೆಯುತ್ತಾರೆ. ಇದರಲ್ಲಿ ಪ್ರಾಚೀನ ಕಾಲದ ಕೆಂಪು, ಬಿಳಿಬಣ್ಣದ ನೂರಾರು ವರ್ಣಚಿತ್ರಗಳನ್ನು ಕಾಣಬಹುದು. ಇವುಗಳನ್ನು ದಾಟಿ ಕಣಿವೆ ಹಿಡಿದು ಹತ್ತಿದರೆ ಮೇಲ್ದುರ್ಗವಿದೆ. ಇಲ್ಲಿ ಮಧ್ಯಯುಗದ ಭಾಗ್ಯಲಕ್ಷ್ಮಿ ಮೊದಲಾದ ದೇವಾಲಯ ಮತ್ತು ವಸತಿ ಸಮುಚ್ಚಯದ ಅವಶೇಷಗಳಿವೆ. ಅಲ್ಲಿಂದ ಮೇಲೆ ಹೋದರೆ ೧೩ನೇ ಶತಮಾನದಲ್ಲಿ ಕುಮ್ಮಟದ ಬೀಚನು ತನ್ನ ಒಡೆಯ ಬೊಮ್ಮದೇವನ ಹೆಸರಿನಲ್ಲಿ ನಿರ್ಮಿಸಿದ ತ್ರಿಶಂಕೇಶ್ವರ ದೇವಾಲಯವಿದೆ. ಶಾಸನದಲ್ಲಿ ಇದನ್ನು ಬಂರ್ಮೋಬ್ಬೀಶ್ವರ ಎಂದೇ ಕರೆಯಲಾಗಿದೆ. ಇನ್ನೊಂದು ಶಾಸನದಲ್ಲಿ ಅಲ್ಲಿದ್ದ ಬ್ರಮೇಶ್ವರ ಊರನ್ನು ಉಲ್ಲೇಖಿಸಿದೆ. ಈ ಹಿನ್ನೆಲೆಯಲ್ಲಿ ಬಂರ್ಮೋಬ್ಬೀಶ್ವರ ದೇವಾಲಯ ಮತ್ತು ಬ್ರಮೇಶ್ವರ ಊರನ್ನು ಒಳಗೊಂಡ ಬೆಟ್ಟಕ್ಕೆ ಬ್ರಹ್ಮಗಿರಿ ಎಂದು ಕರೆದಿರುವುದು ಚಾರಿತ್ರಿಕ ಸಂಗತಿ.


ಇಂತಹ ಪ್ರಾಗೈತಿಹಾಸಿಕ ಮತ್ತು ಚಾರಿತ್ರಿಕ ನೆಲೆಗೆ ಭೇಟಿ ನೀಡುವ ಸುವರ್ಣಾವಕಾಶ ದೊರೆತದ್ದು ೧೯೯೫ರಲ್ಲಿ, ಅದೂ ಪ್ರೊ. ಲಕ್ಷ್ಮಣ್ ತೆಲಗಾವಿ ಅವರಿಂದ. ಮೂರ‍್ನಾಲ್ಕು ಜನ ಸ್ನೇಹಿತರೊಂದಿಗೆ ಹೊರಟ ನಮಗೆ ಆದ ಅನುಭವ ಅಪರಿಮಿತ. ನಮಗೆ ಬ್ರಹ್ಮಗಿರಿಯನ್ನು ನೋಡುವ ತವಕವಿದ್ದರೆ, ತೆಲಗಾವಿಯವರದು ಅಶೋಕನ ಇನ್ನೊಂದು ಬಂಡೆಗಲ್ಲು ಶಾಸನವನ್ನು ಹುಡುಕುವ ಉದ್ದೇಶವಿತ್ತ್ತು. ಆ ನಿಟ್ಟಿನಲ್ಲಿ ಐದು ದಿನಗಳ ಸುದೀರ್ಘ ಕ್ಷೇತ್ರಕಾರ್ಯಕ್ಕಾಗಿ ಒಂದು ತಂಡವನ್ನೇ ಕರೆದೊಯ್ದಿದ್ದರು. ಅಂತೆಯೇ ವಾಸ್ತವ್ಯಕ್ಕೆ ಅಶೋಕ ಸಿದ್ಧಾಪುರದ ಶಾಲೆಯನ್ನು ಆಯ್ಕೆ ಮಾಡಿದೆವು. ಶಾಲೆಯ ವಾಸ ಕಷ್ಟಕರವಾಯಿತಾದ್ದರಿಂದ ಬ್ರಹ್ಮಗಿರಿ ಬೆಟ್ಟದ ಮೇಲಿನ ಮಹಲಿನಲ್ಲಿದ್ದ ಮಠಕ್ಕೆ ಮರುದಿನ ಸ್ಥಳಾಂತರಗೊಂಡೆವು. ಅದೂ ಅಲ್ಲಿನ ಮಹದೇವತಾತ ಅವರ ಕೃಪಾಕಟಾಕ್ಷದಿಂದ ಎನ್ನಬಹುದು. ರಾಮಸಮುದ್ರದ ಹಿಂದಿನ ಹೆಸರು ಜೀಯರಹಳ್ಳಿ. ಈ ಹಳ್ಳಿಗೆ ಹೆಸರು ಹೇಗೆ ಬಂದ ಬಗೆಯನ್ನು ಗಮನಿಸಿದರೆ ಜಟಂಗಿ ರಾಮೇಶ್ವರದ ಶಾಸನಗಳಲ್ಲಿ ಶಿವಜೀಯ, ಅಮೃತರಾಸಿ ಜೀಯರು ೧೦-೧೧ನೆಯ ಶತಮಾನದಲ್ಲಿ ರಾಮೇಶ್ವರ ದೇವಾಲಯದ ಮುಖ್ಯ ಯತಿಗಳಾಗಿದ್ದುದಲ್ಲದೆ ದೇವಾಲಯಗಳ ಜೀರ್ಣೋದ್ಧಾರ ಮಾಡಿದ ವಿವರಗಳಿವೆ. ಈ ಜೀಯರು ವಾಸವಿದ್ದ ಬೆಟ್ಟದ ಕೆಳಗಿನ ಗ್ರಾಮವನ್ನು ಜೀಯರಹಳ್ಳಿ ಎಂದು ಕರೆದಿರುವ ಸಾಧ್ಯತೆಯಿದೆ.

 

ಈ ಊರನ್ನು ಪ್ರವೇಶಿಸುತ್ತಿದ್ದಂತೆ ದಾರಿಯುದ್ದಕ್ಕೂ ಎಲ್ಲೆಂದರಲ್ಲಿ ಕಪ್ಪುಹಂಚು, ಅದರಲ್ಲಿ ಅರಶಿಣ-ಕುಂಕುಮ, ರಕ್ತದ ಓಕಳಿಯ ಕಲೆ ಮತ್ತಿತರ ವಸ್ತುಗಳು ಕಾಣುತ್ತಿದ್ದವು. ಇವುಗಳನ್ನು ಕಂಡ ನಮಗೆ ಭಯವೇ ಆಯಿತು. ಈ ಗ್ರಾಮಕ್ಕೆ ಹೊರಗಿನವರು ಅದರಲ್ಲೂ ಸುಶಿಕ್ಷಿತರು ಬರುವುದೆಂದರೆ ಕೆಲವರಿಗೆ ಕಣ್ಣುರಿ. ಅಲ್ಲಿನ ಮರವೊಂದರ ಕೆಳಗೆ ದಣಿವಾರಿಸಿಕೊಳ್ಳಲೆಂದು ಕುಳಿತ ನಮ್ಮನ್ನು ವ್ಯಕ್ತಿಯೊಬ್ಬ ಸಂಶಯದಿಂದ ನೋಡಿದ. ಆತನ ಹೆಸರು ಗಂಗಪ್ಪ. ನೀವು ಇಲ್ಲಿಗೆ ಬಂದದ್ದು ಏಕೆ, ಯಾರು ನಿಮ್ಮನ್ನು ಕಳುಹಿಸಿದ್ದು, ಏನು ನಿಮ್ಮ ಕೆಲಸ ಹೀಗೆ ಪ್ರಶ್ನೆಗಳ ಸುರಿಮಳೆಗೈದ, ಅಲ್ಲದೆ ನಮ್ಮನ್ನು ಹೆದರಿಸಿ ಅಲ್ಲಿಂದ ಓಡಿಸುವ ಪ್ರಯತ್ನಕ್ಕೂ ಕೈಹಾಕಿದ್ದ. ಆದರೆ ಇವುಗಳ ಅನುಭವವಿದ್ದ ಮೇಷ್ಟ್ರು, ನಾವು ಬಂದದ್ದು ಮತ್ತು ಪೊಲೀಸ್ ಸ್ಟೇಷನ್ನಿಗೆ ಮಾಹಿತಿ ನೀಡಿದ್ದ ಸಂಗತಿಯನ್ನು ಸೂಕ್ಷ್ಮವಾಗಿ ತಿಳಿಸಿದರು. ಪೊಲೀಸ್ ಶಬ್ದ ಕೇಳುತ್ತಲೇ ಗಂಗಪ್ಪ ಮೆಲ್ಲಗೆ ಅಲ್ಲಿಂದ ಕಾಲ್ಕಿತ್ತ. ಆ ನಂತರ ಊರವರಿಂದ ತಿಳಿಯಿತು, ಊರಿನ ದಾರಿಯ ಇಕ್ಕೆಲಗಳಲ್ಲಿ ಇಟ್ಟ ಕಪ್ಪುಹೆಂಚಿನ ಬೋಕಿಗಳ ಸೂತ್ರದಾರ ಈತನೇ ಎಂದು. ಅಲ್ಲಿನ ಜನರ ಪ್ರಕಾರ ಮಾಟಮಂತ್ರ ಮಾಡಿಸುವ ಮತ್ತು ಅದನ್ನು ತೆಗೆಸುವ ಪ್ರತಿಷ್ಟಿತ ವ್ಯಕ್ತಿ ಗಂಗಪ್ಪನೇ ಆಗಿದ್ದನು. ಆದರೆ ಮಾಟ ಮಾಡಿಸಲು ಮತ್ತು ಅದನ್ನು ತೆಗೆಸಲು ನೀಡಬೇಕಾದ ಪೊಗದಿ ಮಾತ್ರ ತಲಾ ಒಂದೊಂದು ಕೋಳಿಗಳಾಗಿದ್ದವು. ಅದಕ್ಕೇ ಇರಬೇಕು ಇಂತಹ ನೂರಾರು ಕೋಳಿಗಳನ್ನು ಮೇದು ಗಂಗಪ್ಪ ದಷ್ಟಪುಷ್ಟವಾಗಿದ್ದುದು. ಆದರೆ ಜನರು ಮಾತ್ರ ಗಂಗಪ್ಪನ ಮಾಟಮಂತ್ರವೆಂಬ ಮೂಢನಂಬಿಕೆ, ಕಂದಾಚಾರಗಳ ಜಾಲದಲ್ಲಿ ಸಿಲುಕಿ ಹೈರಾಣವಾಗಿದ್ದುದಂತೂ ಸತ್ಯ. ರಾಮಸಮುದ್ರದ ಜನರು ೨೫ ವರ್ಷಗಳ ಹಿಂದೆ ಇದ್ದಂತೆ ಈಗ ಇಲ್ಲ. ಅವರು ಇಂದು ಸಾಕಷ್ಟು ಬದಲಾಗಿ ಆಧುನಿಕತೆಗೆ ಒಗ್ಗಿಕೊಂಡಿರುವುದು ಸಂತಸದ ವಿಷಯ.

 

Girl in a jacket
error: Content is protected !!