ಬಳ್ಳಾರಿ, ನ, 08-ರೈತರ ಸಮಸ್ಯೆಗಳನ್ನು ಕೃಷಿ ಇಲಾಖೆಯ ಮೂಲಕ ಸರ್ಕಾರದ ಗಮನ ಸೆಳೆಯುವ ಸಂಪರ್ಕ ಕೊಂಡಿಯಾಗಿ ಕೃಷಿಕ ಸಮಾಜವು ಕೆಲಸ ನಿರ್ವಹಿಸುತ್ತಿದೆ ಎಂದು ಕೃಷಿ ಸಚಿವ ಎನ್.ಚಲುವರಾಯಸ್ವಾಮಿ ಅವರು ಹೇಳಿದರು.
ಜಿಲ್ಲಾ ಕೃಷಿ ಇಲಾಖೆ ಮತ್ತು ಕೃಷಿಕ ಸಮಾಜ ಇವರ ಸಹಯೋಗದಲ್ಲಿ ನಗರದ ಹಳೇ ತಾಲ್ಲೂಕು ಕಚೇರಿ ಆವರಣದಲ್ಲಿಂದು ಏರ್ಪಡಿಸಿದ್ದ ಬಳ್ಳಾರಿ ಘಟಕ ಕೃಷಿಕ ಸಮಾಜದ ನೂತನ ಕಟ್ಟಡದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಸ್ವತಂತ್ರ ಪೂರ್ವದಲ್ಲೇ ಪ್ರಾರಂಭವಾದ ಕೃಷಿಕ ಸಮಾಜವು ತನ್ನದೇ ಆದ ಇತಿಹಾಸ ಹೊಂದಿದೆ. ರೈತರ ಶ್ರೇಯೋಭಿವೃದ್ಧಿಗಾಗಿ ಶ್ರಮಿಸುತ್ತಿರುವ ಅವರಿಗಾಗಿ ರಾಜ್ಯದ ಎಲ್ಲಾ ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿಯೂ ಕೃಷಿಕ ಸಮಾಜ ಕಟ್ಟಡ ನಿರ್ಮಿಸಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಎಲ್ಲಾ ಇಲಾಖೆಗಳಿಗಿಂತಲೂ ಕೃಷಿ ಇಲಾಖೆಯು ವಿಶಿಷ್ಟವಾಗಿದೆ. ಲೆಸ್ಲಿ ಚಾರ್ಲ್ಸ್ ಕೋಲ್ಮನ್ ಎಂಬುವವರು ಸ್ವತಂತ್ರ ಪೂರ್ವದಲ್ಲಿ ರಾಜ್ಯದ ಕೃಷಿ ಇಲಾಖೆಯ ಮೊದಲ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಕೃಷಿಕ ಸಮಾಜ ಸ್ಥಾಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ರಾಜ್ಯದ 36 ತಾಲ್ಲೂಕುಗಳಲ್ಲಿ ಕೃಷಿಕ ಸಮಾಜದ ಕಟ್ಟಡ ನಿರ್ಮಾಣಕ್ಕೆ ನಿವೇಶನವಿದ್ದು, 32 ತಾಲ್ಲೂಕುಗಳಲ್ಲಿ ಕಟ್ಟಡ ನಿರ್ಮಾಣ ಮಾಡಲಾಗಿದೆ. ತಾಲ್ಲೂಕು ಮಟ್ಟದಲ್ಲಿ ಕಟ್ಟಡ ನಿರ್ಮಾಣಕ್ಕೆ 27 ಲಕ್ಷ ಮತ್ತು ಜಿಲ್ಲಾ ಮಟ್ಟದಲ್ಲಿ 50 ಲಕ್ಷ ರೂ. ನೀಡಲು ನಿರ್ಧರಿಸಲಾಗಿದೆ ಎಂದರು.
ಕೃಷಿಕ ಸಮಾಜವು ರಾಷ್ಟ್ರಮಟ್ಟದಲ್ಲಿ ಎಲ್ಲಾ ರಾಜ್ಯದಲ್ಲಿಯೂ ಒಳಗೊಂಡಿದ್ದು, ನಮ್ಮ ರಾಜ್ಯದಲ್ಲಿ ಸರ್ಕಾರದೊಂದಿಗೆ ಸದಾ ಸಂಪರ್ಕದಲ್ಲಿದ್ದುಕೊಂಡು ಅತ್ಯಂತ ಚುರುಕಾಗಿ, ಉತ್ಸಾಹಿಯಾಗಿ ಕೆಲಸ ನಿರ್ವಹಿಸುತ್ತಿದೆ ಎಂದು ತಿಳಿಸಿದ ಸಚಿವರು, ಮಾಜಿ ಲೋಕಸಭಾ ಸದಸ್ಯರಾದ ಬಸವರಾಜೇಶ್ವರಿ ಅವರು, ಕಟ್ಟಡ ನಿರ್ಮಾಣಕ್ಕಾಗಿ ಸಾಕಷ್ಟು ಶ್ರಮಿಸಿದ್ದಾರೆ. ಹಾಗಾಗಿ ರಾಜ್ಯ ಮಟ್ಟದ ಕೃಷಿಕ ಸಮಾಜಕ್ಕೆ ಅವರ ಹೆಸರಿನ್ನಿಡಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಇತ್ತೀಚಿಗೆ ಸುರಿದ ಮಳೆಯಿಂದಾಗಿ ಕಂಪ್ಲಿ, ಕುರುಗೋಡು, ಸಿರುಗುಪ್ಪ ಭಾಗಗಳಲ್ಲಿ ಭತ್ತದ ಬೆಳೆಯು ಹಾನಿಯಾಗಿದ್ದು, ಸಮೀಕ್ಷೆ ನಡೆಸಿ ಸೂಕ್ತ ಪರಿಹಾರ ನೀಡುವಂತೆ ಮತ್ತು ಜಿಲ್ಲೆಯಲ್ಲಿ ಜೋಳ ಖರೀದಿ ಕೇಂದ್ರಗಳನ್ನು ಆರಂಭಿಸಬೇಕು ಎಂದು ಬಳ್ಳಾರಿ ಸಂಸದ ತುಕರಾಂ ಸಚಿವರಿಗೆ ಮನವಿ ಮಾಡಿದರು..
ಬಳ್ಳಾರಿ ಜಿಲ್ಲೆಯು 2,81,522 ಎಕರೆ ಕೃಷಿ ಭೂಮಿ ಹೊಂದಿದ್ದು, 1,05,517 ಎಕರೆ ಮಳೆಯಾಧಾರಿತ ಪ್ರದೇಶ, 1,76,005 ಎಕರೆ ನೀರಾವರಿ ಪ್ರದೇಶವಿದ್ದು, ಈ ಬಾರಿಯಂತೆ ಮುಂದಿನ ವರ್ಷದಲ್ಲಿಯೂ ಸಹ ಉತ್ತಮ ಮಳೆ, ಬೆಳೆಯಾಗಿ ನಾಡು, ನಮ್ಮ ಜಿಲ್ಲೆ ಸಮೃದ್ಧಿಯಾಗಬೇಕು ಎಂದು ಸಚಿವರು ಆಶಿಸಿದರು.
ಕಾರ್ಯಕ್ರಮದಲ್ಲಿ ಕೃಷಿಕ ಸಮಾಜ್ ಅಧ್ಯಕ್ಷ ಮಂಜುನಾಥ್ ಗೌಡ, ಡಾ.ಬಾಬು ಜಗಜೀವನ್ರಾಮ್ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾ ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಅಧ್ಯಕ್ಷ ಕೆ.ಇ.ಚಿದಾನಂದಪ್ಪ, ಬಳ್ಳಾರಿ ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಗಾದೆಪ್ಪ, ಉಪಾಧ್ಯಕ್ಷರಾದ ಎಸ್.ಕೆ ವಿಶಾಲಾಕ್ಷಿ ಕುಮಾರಸ್ವಾಮಿ, ಕೃಷಿಕ ಸಮಾಜದ ರಾಜ್ಯ ಪ್ರತಿನಿಧಿ ಸುರೇಶ್ ನಂದಿ.ಪಿ., ಉಪ ಕೃಷಿ ನಿರ್ದೇಶಕ ಮಂಜುನಾಥ್ ಎಸ್.ಎನ್ ಸೇರಿದಂತೆ ಪಾಲಿಕೆ ಸದಸ್ಯರು, ಕೃಷಿ ಸಮಾಜದ ವಿವಿಧ ತಾಲ್ಲೂಕುಗಳ ಅಧ್ಯಕ್ಷರು ಮತ್ತು ಉಪಾಧ್ಯಕ್ಷರು, ಎಲ್ಲಾ ರೈತ ಮತ್ತು ಸಂಘಸಂಸ್ಥೆಗಳು, ಪ್ರಗತಿಪರ ರೈತರು ಮತ್ತು ರೈತ ಮಹಿಳೆಯರು, ಸಾರ್ವಜನಿಕರು ಹಾಗೂ ಇತರರು ಉಪಸ್ಥಿತರಿದ್ದರು.
ಕಾರ್ಯಕ್ರಮ ಆರಂಭಕ್ಕೂ ಮುನ್ನ ಕೃಷಿ ಸಚಿವರು, ಆಧುನಿಕ ಕೃಷಿ ಯಂತ್ರೋಪಕರಣಗಳು, ಸಾವಯವ ರಸ-ಗೊಬ್ಬರ, ಕೃಷಿ ಪರಿಕರಗಳು, ಪಿಎಂಎಫ್ಎಂಇ ಯೋಜನೆಯಡಿ ಅನುಷ್ಠಾನಗೊಂಡ ಆಹಾರಾ ಸಂಸ್ಕರಣಾ ಘಟಕಗಳ ಆಹಾರ ಉತ್ಪನ್ನ ಮಳಿಗೆ ಹಾಗೂ ವಿವಿಧ ಯೋಜನೆಗಳ ಮಾಹಿತಿಗಳನ್ನೊಳಗೊಂಡ ವಸ್ತು ಪ್ರದರ್ಶನಕ್ಕೆ ಚಾಲನೆ ನೀಡಿದರು.
ಕಾರ್ಯಕ್ರಮದಲ್ಲಿ ಕೃಷಿ ಸಂಸ್ಕರಣೆ, ಮೌಲ್ಯವರ್ಧನೆ ಮತ್ತು ಮಾರುಕಟ್ಟೆ ಕಾರ್ಯಾಗಾರ ಹಾಗೂ ವಿನೂತನ ತಾಂತ್ರಿಕತೆಗಳ ಕುರಿತು ವಿಜ್ಞಾನಿಗಳು, ಕೃಷಿ ಅಧಿಕಾರಿಗಳು ರೈತರೊಂದಿಗೆ ಕೃಷಿ ಸಚಿವ ಚಲುವರಾಯಸ್ವಾಮಿಯವರು ಸಂವಾದ ನಡೆಸಿದರು..
