ಬೆಂಗಳೂರು, ಮೇ,05-ಕನ್ನಡಿಗರಿಗೆ ಅವಮಾನ ಮಾಡಿ ದುರ್ವರ್ತನೆ ತೋರಿದ್ದ ಗಾಯಕ ಸೋನು ನಿಗಮ್ ಅವರನ್ನು ಕನ್ನಡ ಚಿತ್ರರಂಗದಿಂದ ನಿಷೇಧ ಮಾಡಲಾಗಿದೆ.
ಕನ್ನಡ ಚಿತ್ರರಂಗದಿಂದ ಜೀವನ ಕಟ್ಟಿಕೊಂಡ ಹಿಂದಿ ಗಾಯಕ ಸೋನು ನಿಗಮ್ ಕಾಲೇಜೊಂದರ ಕಾರ್ಯಕ್ರಮಕ್ಕೆ ಬಂದು ಕನ್ನಡದ ಹಾಡುಗಳನ್ನು ಹೇಳುವಂತೆ ಕೇಳಿದ ಕನ್ನಡಿಗರನ್ನು ಪೆಹಲ್ಗಾಮ್ ಉಗ್ರರಿಗೆ ಹೋಲಿಕೆ ಮಾಡಿ ಕುಚೇಷ್ಟೆ ಮೆರೆದಿದ್ದರು. ಇದರ ಬಳಿಕ ಕನ್ನಡಪರ ಸಂಘಟನೆಗಳು ಕ್ಷಮೆ ಕೋರುವಂತೆ ಆಗ್ರಹಿಸಿದ ನಂತರ, ಕ್ಷಮೆ ಕೇಳದೇ ತನ್ನ ಹೇಳಿಕೆಗೆ ಸ್ಪಷ್ಟನೆ ಕೊಡುವ ಜೊತೆಗೆ ಮತ್ತೊಮ್ಮೆ ಕನ್ನಡಿಗರನ್ನು ಪುಂಡರು ಎಂದು ಹೇಳಿ ವಿಡಿಯೋ ಹರಿಬಿಟ್ಟಿದ್ದಾರೆ. ಈ ಮೂಲಕ ದುರ್ವರ್ತನೆ ತೋರಿಸಿದ ಗಾಯಕ ಸೋನು ನಿಗಮ್ ವಿರುದ್ಧ ಕನ್ನಡ ಚಿತ್ರರಂಗದಲ್ಲಿಯೂ ಆಕ್ರೋಶ ವ್ಯಕ್ತವಾಗಿದ್ದು, ಇಂದು ಚಲನಚಿತ್ರ ವಾಣಿಜ್ಯ ಮಂಡಳಿ ನಡೆದಸಿದ ಸಭೆಯಲ್ಲಿ ಗಾಯಕ ಸೋನು ನಿಗಮ್ನನ್ನು ಕನ್ನಡ ಚಿತ್ರರಂಗದಿಂದ ನಿಷೇಧಿಸಿ ನಿರ್ಣಯ ಕೈಗೊಳ್ಳಲಾಗಿದೆ.
ಗಾಯಕ ಸೋನು ನಿಗಮ್ ವಿವಾದಾತ್ಮಕ ಹೇಳಿಕೆ ವಿಚಾರದ ಬಗ್ಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಗಂಭೀರವಾಗಿ ಕ್ರಮ ಜರುಗಿಸುವ ಬಗ್ಗೆ ಸಭೆ ನಡೆಸಲಾಯಿತು. ಈ ಸಭೆಯಲ್ಲಿ ಅಧ್ಯಕ್ಷ ನರಸಿಂಹಲು, ವಾಣಿಜ್ಯ ಮಂಡಳಿಯ ಕುಮಾರ್, ಸಂಗೀತ ನಿರ್ದೇಶಕ ಧರ್ಮವಿಶ್, ನಿರ್ದೇಶಕರ ಸಂಘದ ಅಧ್ಯಕ್ಷ ವಿಶ್ವನಾಥ್ , ಗಾಯಕಿ ಶಮಿತಾ ಮಲ್ನಾಡ್ ಭಾಗಿಯಾಗಿದ್ದರು.
ಸಭೆಯ ಬಳಿಕ ಮಾತನಾಡಿದ ಫಿಲ್ಮ್ ಚೇಂಬರ್ ಅಧ್ಯಕ್ಷ ನರಸಿಂಹಲು, ಪಹಲ್ಗಾಮ್ ಗಲಭೆ ಕುರಿತು ಸೋನು ನಿಗಮ್ ಖಾಸಗಿ ಶಾಲೆಯಲ್ಲಿ ಮಾತನಾಡಿದ್ದಾರೆ. ಪಹಲ್ಗಾಮ್ ವಿಚಾರವನ್ನ ಕನ್ನಡಿಗರಿಗೆ ಹೋಲಿಕೆ ಮಾಡಿದ್ದಾರೆ. ಇದು ಸರಿಯಲ್ಲ. ಮತ್ತೆ ಲೈವ್ ಬಂದು ಅವರ ಮಾತನ್ನ ಸಮರ್ಥಿಸಿಕೊಂಡಿದ್ದಾರೆ. ಈ ಕ್ಷಣದಿಂದಲೇ ಅಸಹಕಾರ ತೋರಿಸಲು ತೀರ್ಮಾನಿಸಲಾಗಿದೆ. ಅವರ ಜೊತೆಗೆ ಯಾವುದೇ ಚಟುವಟಿಕೆ ಮಾಡಬಾರದು. ಅವರನ್ನ ಕರ್ನಾಟಕ ಇಂಡಸ್ಟ್ರಿಯಿಂದ ಅಸಹಕಾರ ಮಾಡ ಬೇಕು ಅಂತ ತೀರ್ಮಾನಿಸಲಾಗಿದೆ. ಮುಂದಿನ ದಿನಗಳಲ್ಲಿ ಅವರ ವಿರುದ್ದ ಯಾವ ರೀತಿ ಕ್ರಮ ತೆಗೆದುಕೊಳ್ಳಬೇಕು ಅಂತ ಚರ್ಚಿಸುತ್ತೇವೆ. ಯಾರು ಕೂಡ ಅವರನ್ನ ಕರೆಯಬಾರದು. ಸಿನಿಮಾಗಳಲ್ಲಿ ಅವರ ಕೈಯಲ್ಲಿ ಹಾಡಿಸಬಾರದು. ಅವರ ಕೈಯಲ್ಲಿ ಲೈವ್ ಕಾರ್ಯಕ್ರಮ ಮಾಡಿಸಬಾರದು ಎಂದು ಹೇಳಿದರು.
ಸೋನು ನಿಗಮ್ನನ್ನು ಯಾರು ಕರೆಸಿ ಹಾಡು ಹಾಡಿಸಬಾರದು. ಯಾರಾದರೂ ಅವರನ್ನ ಕರೆದು ಹಾಡು ಹಾಡಿಸಿದ್ರೆ ಕ್ರಮಕೈಗೊಳ್ಳುತ್ತೇವೆ. ಯಾವ ರೀತಿ ಕ್ರಮಕೈಗೊಳ್ಳಬೇಕು ಅಂತ ಚರ್ಚೆ ಮಾಡಿ ತೀರ್ಮಾನಿಸುತ್ತೇವೆ. ಸದ್ಯಕ್ಕೆ ಅಸಹಕಾರ ಅಂತ ತೀರ್ಮಾನ ಮಾಡಿದ್ದೇವೆ. ಇದೇ ವಿಚಾರಕ್ಕೆ ಮುಂದಿನ ದಿನಗಳಲ್ಲಿ ಎಲ್ಲರನ್ನ ಆಹ್ವಾನಿಸುತ್ತೇವೆ. ಅವತ್ತು ಅವರನ್ನ ಬ್ಯಾನ್ ಮಾಡಬೇಕಾ? ಎಷ್ಟು ದಿನ ಬ್ಯಾನ್ ಮಾಡಬೇಕು? ಯಾವ ರೀತಿ ಅವರ ವಿರುದ್ದ ಕ್ರಮಕೈಗೊಳ್ಳಬೇಕು ಅಂತ ತೀರ್ಮಾನ ಮಾಡುತ್ತೇವೆ ಎಂದು ಕನ್ನಡ ಫಿಲ್ಮ್ ಚೇಂಬರ್ ನರಸಿಂಹಲು ತಿಳಿಸಿದ್ದಾರೆ.