ಮೀನಾಕ್ಷಿ ಹರೀಶ್.
ಮೀನಾಕ್ಷಿ ಹರೀಶ್. ಹಿರಿಯ ಸಾಹಿತಿ. ಪ್ರೌಢ ಸಾಹಿತ್ಯದ ಜೊತೆಗೆ ಮಕ್ಕಳಿಗಾಗಿ ಕಾದಂಬರಿ, ಕಥೆ, ಹಾಡುಗಳನ್ನು ಬರೆದಿದ್ದಾರೆ. ಎಸ್ ಬಿ ಎಂ, ನಿವೃತ್ತ ಬ್ಯಾಂಕ್ ಉದ್ಯೋಗಿ. ಮನಸ್ಸೆಂಬ ಮಾಯೆ – ಪ್ರೀತಿಯೆಂಬ ಭ್ರಮೆ ಹಾಗೂ ನನ್ನ ನೆನಪುಗಳು ಎನ್ನುವ ಎರಡು ಕೃತಿಗಳನ್ನು ಹೊರತಂದಿದ್ದಾರೆ. ಆಧ್ಯಾತ್ಮದ ಒಲವು ಇರುವ ಮೀನಾಕ್ಷಿ ಹರೀಶ್ ಅವರು ಆಧ್ಯಾತ್ಮಿಕ ಬರಹಗಳನ್ನು ಬರೆದಿದ್ದಾರೆ. ಪ್ರಸಕ್ತ ವರ್ಷ ಮೂರನೇ ಕಥಾಸಂಕಲನ ಹೊರುತ್ತಿದ್ದಾರೆ. ಉತ್ತಮ ಅನುವಾದಕರು ಕೂಡ. ಪ್ರವಾಸ, ಸಂಗೀತ ಕೇಳುವುದು, ಹಾಡು ಹೇಳುವುದು ಇವರ ಹವ್ಯಾಸ
ಜವಬ್ದಾರಿ
‘ಏ….ಭಾಗ್ಯ.. ಚೆನ್ನಾಗಿ ನೀರು ಸುರಿದು ಮೆಟ್ಟಲುಗಳನೆಲ್ಲಾ ಉಜ್ಜಿ ತೊಳಿ.’
‘ಅಕ್ಕ.…. ಈಗಷ್ಟೇ ಮಳೆ ಬಂದು ಮೆಟ್ಟಲೆಲ್ಲಾ ಕ್ಲೀನ್ ಆಗಿದೆ, ಮತ್ತೆ ನೀರು ಹಾಕುವ ಅವಶ್ಯಕತೆ ಇಲ್ಲ. ಬರೀ ಪರಕೆಯಿಂದ ಗುಡಿಸಿ ಒರೆಸುತ್ತೇನೆ’.
‘ಇಲ್ಲ ಕಣೆ, ನೀರು ಹಾಕೀ ತೊಳಿ, ನಾ ಹೇಳಿದ ಹಾಗೆ ನೀ ಮಾಡಬೇಕು .’
‘ಆಯ್ತು ಅಕ್ಕಾ’…ಮಳೆ ಬೀಳುತ್ತಿದ್ದರೂ ನೀರು ಹಾಕಬೇಕು ಎಂದು ಗೊಣಗುತ್ತಾ…. ನೀರು ಹಾಕಿ ಗುಡಿಸಿದಳು ಭಾಗ್ಯ. ಎರಡು ಮಹಡಿಗಳ ಮೆಟ್ಟಲುಗಳನ್ನು ತೊಳೆಯಲು 2 ರಿಂದ 3 ಬಕೆಟ್ ನೀರು ಬೇಕಾಯಿತು.
ಸರ-ಪೊರ ಪೊರಕೆಯ ಶಬ್ಧವು ಪಕ್ಕದ ಮನೆ ಗೀತಾಗೆ ಕೇಳಿಸಿತು. ಕಿಟಕಿಯಿಂದ ತೊಂಗಿ ನೋಡಿದಳು. ಭಾಗ್ಯ ಗುಡಿಸುತ್ತಿರುವುದನ್ನು ನೋಡಿದ ಗೀತಾ,ರತ್ನಳ ಮನೆಯಲ್ಲಿ ನೀರನ್ನು ಯತೇಚ್ಚ ವಾಗಿ ಬಳಸುವುದನ್ನು ನೋಡಿ ನಗಬೇಕೋ ಅಳಬೇಕೋ ತಿಳಿಯದೆ ಹೋದಳು. ಓದಿದವರೇ ಜವಬ್ದಾರಿ ಇಲ್ಲದೆ ನಡೆದು ಕೊಂಡರೆ ಹೇಗೆ!!
ಹೊರಗೆ ಮಳೆ ಸಣ್ಣಗೆ ಬರುತಿತ್ತು. ಗೀತಾಳ ಗಂಡ ನಾಗರಾಜ ತಾರಸಿಯಲ್ಲಿ ಗಾಳಿ – ಮಳೆಗೆ ಗಿಡಗಳ ಎಲೆಗಳು ಬಿದಿದ್ದರೆ ಅದನ್ನು ಗುಡಿಸಲು ಹೋದರು. ಅವರು ಮಳೆ ನೀರು ಕೊಯ್ಲು ಪದ್ಧತಿಯನ್ನು ಅಳವಡಿಸಿದ್ದರು. ಆದ್ದರಿಂದ ತಮ್ಮ ಮನೆಯ ತಾರಸಿ ನೆಲವನ್ನು ಸ್ವಚ್ಚ ವಾಗಿಡುತಿದ್ದರು. ತಾರಸಿಯ ಮೇಲೆ ಬಿದ್ದ ಮಳೆಯ ನೀರು ಸುಮ್ಮನೇ ಹರಿದು ಚರಂಡಿಗೆ ಸೇರಿ ಮುಂದೆ ಕೊಳಚೆ ನೀರಾಗಿ ವ್ಯರ್ಥವಾಗಿ ಹೋಗುವಬದಲು ಈ ಮಳೆ ನೀರನ್ನು ಅಂತರ್ಜಲಕ್ಕೆ ಸೇರಿಸಿದರೆ ಅಂತರ್ಜಲದಲ್ಲಿನ ತೆವಾಂಶವು ಹೆಚ್ಚುವುದಲ್ಲದೆ, ಭೂಮಿಯಲ್ಲಿ ನೀರು ಶೇಖರಣೆ ಆಗುತ್ತದೆ. ಜನಸಂಖ್ಯೆ ಜಾಸ್ತಿ ಯಾದಂತೆ ಭೂಮಿಯಿಂದ ತೆಗೆಯುವ ನೀರಿನ ಪ್ರಮಾಣ ಹೆಚ್ಚಾಗುತ್ತದೆ. ಈ ‘ಮಳೆ ನೀರು ಕೊಯ್ಲು’ ಪದ್ಧತಿಯನ್ನು ಅಡವಳಿಸಿದರೆ ನೆಲ ಬರಡಾಗುವುದಿಲ್ಲ. ಈ ಕಾರಣ ದಿಂದ ನೀರಿನ ವಿಷಯದಲ್ಲಿ ನಾಗರಾಜ ಹೆಚ್ಚು ಜವಬ್ದಾರಿಯಿಂದ ನಡೆದುಕೊಳ್ಳುತ್ತಿದ್ದರು.
ಎಲ್ಲೆಲ್ಲಿ ದೀಪ ಬೇಡವೋ ಅಲ್ಲಿಯ ದೀಪಗಳನ್ನು ಆರಿಸಿ ಗೀತಾ ರೂಮಿಗೆ ಬಂದಳು.
‘ಏನ್ರೀ ನೋಡುದ್ರಾ…ಪಕ್ಕದಮನೆ ರತ್ನ ಪ್ರತಿನಿತ್ಯ ಎಷ್ಟು ನೀರನ್ನು ಹಾಳು ಮಾಡುತ್ತಾರೆ… ಸ್ವಲ್ಪನೂ ಬುದ್ದಿ ಇಲ್ಲ.’
‘ಹೌದು ಗೀತಾ. ಮುಂದೆ ನಮ್ಮ ಮಕ್ಕಳು ನೀರಿಗಾಗಿ ಅಲೆದಾಡ ಬೇಕಾಗುವ ಪರಿಸ್ಥಿತಿ ಬರುವುದು.’
ಬೇಸಿಗೆ ಕಾಲ ಹತ್ತಿರವಾಗುತಿತ್ತು.
‘ಅಪ್ಪ ನನಗೆ 2 ದಿನ ಕಾಲೇಜಿಗೆ ರಜ ಇದೆ. ಯಾವುದಾದರೊಂದು ಊರಿಗೆ ಹೋಗಿ ಬರೋಣವೇ. ಬಿಸಿಲು ಕಾಲ ಮುಂದಿನ ತಿಂಗಳಿಂದ ಶುರು ಆಗೋಗತ್ತೆ. ಈಗಲೇ ಹೋದರೆ ಚೆಂದ’.
‘ಹಾಗೇ ಆಗಲಿ ವಿವೇಕ್. ಎಲ್ಲಿಗೆ ಹೋಗೋದು ಡಿಸೈಡ್ ಮಾಡು’.
‘ಮೈಸೂರ್ ಗೆ ಹೋಗೋಣ ಅಣ್ಣ .’
ತಂಗಿ ಸೌಮ್ಯಳ ಇಚ್ಛೆಯಂತೆ ಎಲ್ಲರೂ ‘ಮೈಸೂರ್ ‘ ಗೆ ಹೋಗಲು ನಿರ್ಧರಿಸಿದರು.
ಬೆಂಗಳೂರಿನಿಂದ ಸುಮಾರು 140 km ದೂರವಿದ್ದು ಸುಮಾರು 3 ಘಂಟೆ ಪ್ರಯಾಣ ಮಾಡಬೇಕಾಗಿತ್ತು. ಆಗ ಬೆಳಿಗ್ಗೆ 7 ಘಂಟೆ. ಕಾರು ಚಲಿಸುತ್ತ ಬೆಂಗಳೂರಿನ ಒಂದೊಂದೇ ಬಡಾವಣೆಗಳನ್ನು ದಾಟ್ಟುತ್ತಾ ಚಲಿಸುತಿತ್ತು. ಕಿಟಕಿಯ ಪಕ್ಕ ಕುಳಿತ ಗೀತಾ ಹೊರಗಿನ ಪರಿಸರವನ್ನು ನೋಡುತ್ತಾ ಕುಳಿತಳು. 7 ಘಂಟೆ ಆಗಿದೆ ಆದರೂ ಬೀದಿಯ ದೀಪಗಳು ಉರಿಯುತ್ತಲೇ ಇದ್ದವು. ಎಷ್ಟೊಂದು ವಿದ್ಯುತ್ ವೇಸ್ಟ್ ಆಗುತ್ತಿತ್ತು.
ಎಲ್ಲರ ಮನೆಯ ಮುಂದೆ ನೀರು ಹಾಕಿ ತೊಳೆದು ರಂಗೋಲಿಯನ್ನು ಹಾಕಿದ್ದರು. ಒಂದು ಮನೆಯ ಹೊರಗಡೆ ಹಾಕಿದ ಗಿಡಗಳಿಗೆ ನೀರು ಹಾಕಲೆಂದು ನೀರಿನ ಪೈಪ್ ಅನ್ನ ಆನ್ ಮಾಡಿ ಬಿಟ್ಟಿದ್ದರು. ನೀರು ಸುರಿಯುತ್ತಲೇ ಇತ್ತು. ನೀರು ವೆಸ್ಟ್ ಆಗಿ ರಸ್ತೆಗೆ ಹರಿದು ಕೊಂಡು ಬರುತಿತ್ತು. ನೀರಿನ ನಲ್ಲಿಯನ್ನು ಓಪನ್ ಮಾಡಿ ಎಲ್ಲಿ ಹೋದರೂ ತಿಳಿಯದು. ನೀರಂತೂ ವೇಸ್ಟ್ ಆಗುತಿತ್ತು. ನೀರು ಗಿಡಗಳಿಗೆ ಹಾಕಿದ ನಂತರ ನೀರಿನ ನಲ್ಲಿಯನ್ನು ಬಂದ್ ಮಾಡಿ ಹೋಗಿದ್ದರೆ ನೀರು ಸೇವ್ ಆಗುತಿತ್ತು. ಗೀತಾ ಆ ಮನೆಯವರ ಮೇಲೆ ಬೇಸರಗೊಂಡಳು.
ಒಂದು ಕಡೆ ಮನೆಯ ಮುಂದೆ ತುಂಬಾ ನೀರನ್ನು ಹಾಕುವುದು, ಗಿಡಗಳಿಗೆ ನೀರನ್ನು ಹಾಕಲೆಂದು ನಲ್ಲಿಯನ್ನು ತಿರುಗಿಸಿ ಹೊರಟು ಹೋಗುವುದು ಮಾಡಿದರೆ ನೀರು ವ್ಯರ್ಥ ವಾಗುವುದಿಲ್ಲವೇ!
ಕೆಲವೊಂದು ಮನೆಯ ಮೇಲೆ ಸೋಲಾರ್ ಪ್ಯಾನೆಲ್ ಫಿಕ್ಸ್ ಮಾಡಿಸಿದ್ದರು. ಇದರಿಂದ ವಿದ್ಯುತ್ ಉಳಿತಾಯ ಆಗುತಿತ್ತು. ನಮಗೆ ಸೂರ್ಯನಿಂದ ಫ್ರೀ ಯಾಗಿ ಶಾಖ ಸಿಗುವುದರಿಂದ ಎಲ್ಲರ ಮನೆಯಲ್ಲೂ ಸೋಲಾರ್ ಫಿಕ್ಸ್ ಮಾಡ್ಸುದ್ರೆ ಸೂರ್ಯ ನಿಂದ ಅಡುಗೆ, ಬಚ್ಚಲು ಮನೆಗೆ ಸ್ನಾನ ಮಾಡಲು ಬಿಸಿ ನೀರು ಸುಲಭವಾಗಿ ಪಡೆಯ ಬಹುದು ಮತ್ತು ಕರೆಂಟ್ ಅನ್ನು ಉಳಿಸಬಹುದು.
ಚಲಿಸುತಿದ್ದ ಕಾರು ಜೋರಾಗಿ ಬ್ರೇಕ್ ಹಾಕಿದ ಕಾರಣ ಎಲ್ಲರೂ ಬೆಚ್ಚಿಬಿದ್ದರು. ರಸ್ತೆ ತುಂಬಾ ನೀರು ಹರಿಯುತಿತ್ತು. ಕಾರ್ಪೋರೇಶನ್ ನೀರಿನ ಪೈಪ್ ಹೊಡೆದಿತ್ತು. ಕುಡಿಯುವ ನೀರು ವೇಸ್ಟ್ ಆಗಿ ಮೋರಿಗೆ ಸೇರುತಿತ್ತು. ನಗರ ಪಾಲಿಕೆಯವರಿಗೆ ಇದರ ಬಗ್ಗೆ ತಿಳಿದಿಲ್ಲವೇ? ಎಂಬ ಸಂಶಯ ಗೀತಾಳ ಮನದಲ್ಲಿ ಮೂಡಿತು. ಏಕೆಂದರೆ ನೀರು ಅನೇಕ ಅಕ್ಕ-ಪಕ್ಕ ರಸ್ತೆಗಳಿಗೆ ಹರಡಿತ್ತು. ಹೇಗೋ ಬೇರೆ ಮಾರ್ಗದಿಂದ ಬೆಂಗಳೂರಿನ ಹೊರಗೆ ಮೈಸೂರ್ ರೋಡ್ಗೆ ಜಾಯಿನ್ ಆದರು.
ಸಿಟಿ ಬಿಟ್ಟು ಹಳ್ಳಿಗಳತ್ತ ಕಾರು ಚಲಿಸಿತು. ತಣ್ಣನೆಯ ಗಾಳಿ ಹಿತವಾಗಿತ್ತು. ಮಣ್ಣಿನ ಸೋಡಗು ಎಲ್ಲೆಡೆ ಹರಡಿತ್ತು. ಆನಂದಿಸುತ್ತಾ ಕಾರಿನಲ್ಲಿ ಕುಳಿತಿದ್ದ ಗೀತಾಳಿಗೆ ದೂರದ ದೃಶ್ಯವನ್ನು ನೋಡಿ ಒಂದು ನಿಮಿಷ ಹಾಗೇ ಕುಳಿತಳು. ದೂರದಲ್ಲಿ ಹೆಂಗಸರು ತಮ್ಮ ತಲೆಯ ಮೇಲೊಂದು, ಸೊಂಟದಲ್ಲೊಂದು ನೀರಿನ ಬಿಂದಿಗೆಗಳನ್ನು ಹಿಡಿದು ಬಿರ ಬಿರನೆ ನಡೆಯುತ್ತಾ ತಮ್ಮ ಮನೆಯತ್ತ ನಡೆಯುತ್ತಿದ್ದರು. ಚಪ್ಪಲಿ ಇಲ್ಲದ ಕಾಲು, ಕಲ್ಲು ಮುಳ್ಳು ಇರುವ ದಾರಿ ಜೊತೆಗೆ ಭಾರವನ್ನು ಹೊತ್ತು ಹೋಗುತ್ತಿದ್ದರು ಒಂದಷ್ಟು ಹೆಂಗಸರು. ಪ್ರತಿಯೊಂದು ಮನೆಯಲ್ಲಿ ಕಡಿಮೆ ಎಂದರೆ 4 ರಿಂದ 5 ಜನ ಇದ್ದೇ ಇರುತ್ತಾರೆ. ಹೆಂಗಸರು ಎರಡು ಬಿಂದಿಗೆಗಳ ಮೇಲೆ ಹೊರುವುದು ಕಷ್ಟ. ಒಂದು ಸಲಕ್ಕೆ ಎರಡು ಬಿಂದಿಗೆ ನೀರನ್ನು ಹೊತ್ತರೆ…. ಎರಡು ಬಿಂದಿಗೆ ನೀರು ಅವರಿಗೆ ಸಾಕಾಗುವುದೇ? ಇಲ್ಲ ಸಾಕಾಗುವುದಿಲ್ಲ…. ಹಾಗಾದರೆ ಈ ಮಹಿಳೆಯರು ಎಷ್ಟು ಬಾರಿ ನೀರಿನ ಬಿಂದೆಗೆಗಳನ್ನು ಹೊತ್ತುಕೊಂಡು 3 ರಿಂದ 4 ಕಿಲೋಮೀಟರ್ ನಡೆಗೆಯಲ್ಲಿ ಸಾಗಬೇಕು!! ಇನ್ನು ಅವರ ಸ್ನಾನ, ಮಲ ವಿಸರ್ಜನೆ, ಹೆಂಗಸರ ಮುಟ್ಟಿನ ಸಮಯದಲ್ಲಿ ನೀರನ್ನು ಎಲ್ಲಿಂದ,ಹೇಗೆ, ಶೇಖರಿಸುತ್ತಾರೆ ಎಂಬ ಯೋಚನೆ ಯಲ್ಲಿ ಕಣ್ಣು ಮುಚ್ಚಿ ಕುಳಿತಳು ಗೀತಾ.
“ಮನುಷ್ಯನ ಜೀವ ಪ್ರಾಣವಾದ ನೀರಿಗಾಗಿ ಅನೇಕರು ಎಷ್ಟು ಕಷ್ಟ ಪಡುವರಲ್ಲಾ!”.
ಆದು ಅಲ್ಲದೆ ಪ್ರತಿದಿನ ನೀರಿನ ಸರಬರಾಜು ಇರುವುದಿಲ್ಲ. ವಾರಕ್ಕೊಮ್ಮೆಯೋ ಅಥವಾ ಎರಡು ದಿನಗಳು ಮಾತ್ರ ನೀರು ಸಿಗುವ ಅನೇಕ ಹಳ್ಳಿಗಳು ಇನ್ನೂ ಹೀಗೆಯೇ ನೀರಿನ ಸಮಸ್ಯೆ ಯಿಂದ ಬಳಲುತ್ತಿವೆ. ಒಂದು ಬಿಂದಿಗೆ ನೀರಿಗಾಗಿ 4 ತಾಸು ಕಾಯುವ ಪರಿಸ್ಥಿತಿ ನಮ್ಮ ದೇಶದ ಪ್ರತಿಯೊಂದು ಹಳ್ಳಿಗಳಲ್ಲಿವೆ.
ಕಣ್ಣು ಮುಚ್ಚಿ ಕುಳಿತ ಗೀತಾಳ ಕಣ್ಣು ಮುಂದೆ … ಮನೆ ಮನೆಯಲ್ಲಿ ಮೆಟ್ಟಿಲುಗಳು, ಬೀದಿ ಬಾಗಿಲು, ತಮ್ಮ ಗಾಡಿಗಳನ್ನು ತೊಳೆಯಲು, ನೀರಿನ ಪೈಪುಗಳು ಹೊಡೆದು ಹೋಗಿ, ರಿಪೇರಿ ಮಾಡದೆ ವೇಸ್ಟ್ ಆಗುವ ನೀರು, ಮನೆಯಲ್ಲಿ ಅಕ್ಕಿ-ಬೇಳೆಕಾಳುಗಳು, ಸೊಪ್ಪು -ತರಕಾರಿಗಳನ್ನು ತೊಳೆಯಲು ಉಪಯೋಗಿಸುವ ನೀರು …… ಕೊನೆಗೆ ಕೊಳಚೆ ನೀರಾಗಿ ವ್ಯರ್ಥವಾಗಿ ಹೋಗುವುದು ನೀರು…. ಅವಳು ಚಿಂತಿಸುವಂತೆ ಮಾಡಿತು.
” ಒಂದೊಂದು ನೀರಿನ ಹನಿಯ ಮಹತ್ವ ಗೀತಾಳಿಗೆ ತಿಳಿಯಿತು”.
ಅಲ್ಲಲ್ಲಿ ಸಣ್ಣ ಪುಟ್ಟ ಕೆರೆ-ಹೊಳಗಳು ಬತ್ತು ಹೋಗಿದ್ದವು. ಒಂದು ಕ್ಷಣ ಗಾಡಿ ನಿಲ್ಲಿಸಲು ಹೇಳಿ, ಗೀತಾ ಗಾದಿಯಿಂದ ಇಳಿದು ಕೆರೆಯತ್ತ ನೋಡುತ್ತಾ ನಿಂತಳು. ಹಸು, ಎಮ್ಮೆ,ನಾಯಿ, ಪಕ್ಷಿಗಳು ನೀರನ್ನು ಕುಡಿಯುವ ಸಲುವಾಗಿ ಆ ಬತ್ತಿದ ಕೆರೆಯಲ್ಲಿ ನೀರನ್ನು ಹುಡುಕುತ್ತಿದ್ದವು. ಆ ದೃಶ್ಯ ನೋಡಲಾಗಲಿಲ್ಲ ಗೀತಾಳಿಗೆ. ತನ್ನ ಮಕ್ಕಳಿಗೆ ಅಲ್ಲಿ ನೋಡುವಂತೆ ಹೇಳಿದಳು. ನಾಯಿಯೊಂದು ತನ್ನ ಕಾಲುಗಳ ಸಹಾಯದಿಂದ ಒದ್ದೆ ಮಣ್ಣನ್ನು ಪರಪರ ಗೀರಿ ತೆಗೆದು ಹಳ್ಳವನ್ನು ಮಾಡಿ…. ಆ ಹಳ್ಳದಲ್ಲಿದ್ದ ನೀರನ್ನು ಕುಡಿಯಲು ಪ್ರಯತ್ನಿಸುತಿತ್ತು. ಆ ನೀರಿಗಾಗಿ ಪಕ್ಷಿಗಳು ಹಾರಿ ಬಂದು ನಾಯಿಯ ಬೆನ್ನ ಮೇಲೆ ಕುಳಿತು ತಾವು ನೀರನ್ನು ಕುಡಿಯಲು ಪ್ರಯತ್ನಿಸುತಿತ್ತು. ಮಕ್ಕಳು ದುಃಖದಿಂದ ತಮ್ಮ ಮುಖವನ್ನು ಮುಚ್ಚಿಕೊಂಡರು. ಗೀತಾಳ ಕಣ್ಣುಗಳು ತುಂಬಿಕೊಂಡವು.
ಮೈಸೂರ್ ತಲುಪಿಯಾಗಿತ್ತು. ಸಾಯಂಕಾಲ KRS ಗೆ ಹೋಗೋ ಪ್ಲಾನ್ ಮಾಡಿದರು. ಅವರ ಪ್ಲಾನ್ ನಂತೆ ಸುಮಾರು 5 ಕ್ಕೆ KRS ಗೆ ಬಂದರು. ಆಶ್ಚರ್ಯವೆಂದರೆ KRS ನಲ್ಲಿನ ನೀರು ಅರ್ಧಕಿಂತ ಕಡಿಮೆಯಾಗಿಹೊಗಿತ್ತು. ಇನ್ನೂ ಆಗ ಫೆಬ್ರವರಿ ತಿಂಗಳು ನಡೆಯುತ್ತಿತ್ತು ಆಗಲೇ KRS ಡ್ಯಾಮ್ ಖಾಲಿ ಖಾಲಿ ಯಾಗುವುದೆಂದರೆ!!
ಅಲ್ಲಲ್ಲಿ ಹೆಂಗಸರು ಬಟ್ಟೆಗಳನ್ನು ಒಗೆದು ತಮ್ಮತಮ್ಮ ಮನೆಗಳಿಗೆ ಹಿಂತಿರುಗುತ್ತಿದ್ದರು. ಕೆಲವರು ಅಡುಗೆ ಮಾಡಿದ ಪಾತ್ರೆಗಳನ್ನೂ ಸಹ ಕೆರೆ ಹೊಳೆಯ ನೀರಿನಿಂದ ತೊಳೆಯುವ ರೂಢಿಯಲ್ಲಿದ್ದರು. ಕಾರಣ ಅವರ ಮನೆಗಳಲ್ಲಿ ಕಾವೇರಿ ನೀರಿನ ಸರಬರಾಜು ಇರಲಿಲ್ಲ. ಆ ಮಹಿಳೆಯರನ್ನು ಪ್ರಶ್ನಿಸಿದಾಗ ತಿಳಿದ ವಿಷಯ ವೇನೆಂದರೆ….. ಮೈಸೂರ್ನಲ್ಲಿ ಕಾವೇರಿ ನದಿ ಇದ್ದರೂ ಸಹ ಅವರಿಗೆ ವಾರಕ್ಕೊಮ್ಮೆ ಮಾತ್ರ ನೀರು ಬರುತಿತ್ತು. ಕೆಲವರಿಗೆ ಕಾವೇರಿ ನೀರಿನ ಕನೆಕ್ಷನ್ ಇನ್ನೂ ಬಂದಿರಲಿಲ್ಲ. ಅನೇಕ ಮೈಸೂರಿನ ಅಕ್ಕ ಪಕ್ಕ ಹಳ್ಳಿಗಳಿಗೆ KRS ಇಂದ ನೀರನ್ನು ಬಿಡುಗಡೆ ಮಾಡಲು ಯೋಜನೆಗಳೇ ಹಾಕಿರಲಿಲ್ಲ. ಈ ಕಾರಣ ದಿಂದ ರೈತರಿಗೆ, ಜನ ಸಾಮಾನ್ಯರಿಗೆ ನೀರಿನ ತೊಂದರೆ ಅಧಿಕವಾಗಿತ್ತು. ಎಲ್ಲಿ ಕಾವೇರಿ ಉಕ್ಕಿ ಹರಿಯುವಳೋ ಅಲ್ಲಿ ನೀರಿಗೆ ಬರ ಎಂದರೆ ನಂಬಲು ಅಸಾಧ್ಯ. ಹಾಗಾದರೆ ಬೆಂಗಳೂರಿನವರು ಅದೃಷ್ಟವಂತರೇ ಸರಿ. ಇದು ಅನ್ಯಾಯ ವೆನಿಸಿತು.
ಆಗಲೇ 7 ಘಂಟೆ ಆಗಿಹೋಯಿತು. ಎಲ್ಲೆಲ್ಲೂ ಕತ್ತಲು. ಅನೇಕ ಹಳ್ಳಿಗಳಲ್ಲಿ ವಿದ್ಯುತ್ ಕಂಬಗಳೆ ಇರಲಿಲ್ಲ. ಸೀಮೆ ಎಣ್ಣೆಯ ಬತ್ತಿ ಅಥವಾ ಬ್ಯಾಟರಿ ಇರುವ ಲೈಟ್ ಅನ್ನು ಉಪಯೋಗಿಸುತಿದ್ದರು. ಪುಟ್ಟ ಮಕ್ಕಳು ಮಂದ ವಾದ ಬೆಳಕಿನಲ್ಲಿ ಓದುತ್ತಿರುವುದು ಕಾಣಿಸಿತು. ಹಳ್ಳಿಯ ಒಂದೊಂದೇ ಪರಿಸ್ಥಿಯ ಕಂಡರು ಗೀತಾ ಮತ್ತು ಮಕ್ಕಳು.
ಮರುದಿನ ತಮ್ಮ ಊರು ಬೆಂಗಳೂರಿಗೆ ವಾಪಸ್ ಬಂದರು. ಮಧ್ಯಾಹ್ನ 3 ರ ಸಮಯ… ಕೆಲವು ರಾಸ್ತೆಗಳಲ್ಲಿ ಬೀದಿ ದೀಪವು ಉರಿಯುತ್ತಲೇ ಇತ್ತು.. KEB ಯವರು ಗಮನಿಸಿಯೇ ಇರಲಿಲ್ಲ. ಎಷ್ಟೊಂದು ಕರೆಂಟ್ ವೆಸ್ಟ್ ಆಗಿ ಹೋಗುತಿತ್ತು. ಮನೆ ಬೀಗ ತೆಗೆದು ಒಳಗೆ ಬಂದರು. ಏನೋ ವಿವೇಕೆ ಫ್ಯಾನ್ ಆಫ್ ಮಾಡೇ ಇಲ್ಲವಲ್ಲೊ!ನೆನ್ನೆ ಬೆಳಗ್ಗೆ ಇಂದ ಉರಿಯುತ್ತಿದೆ. ಕೋಪದಿಂದ ಗೀತಾ ಮಗನನ್ನು ಬೈದಳು. ಸಾರಿ ಅಮ್ಮ ಹೊರಡುವ ಆತುರದಲ್ಲಿ ಮರೆತು ಬಿಟ್ಟೆ. ಮತ್ತೆ ಇಂತಹ ತಪ್ಪನ್ನು ಮಾಡುವುದಿಲ್ಲ.
ಪ್ರಯಾಣದಿಂದ ಸುಸ್ತಾಗಿತ್ತು. ಊಟ ಮಾಡಿ ಎಲ್ಲರೂ ಮಲಗಿಬಿಟ್ಟರು.
ಗೀತಾಳಿಗೆ ಸರಿಯಾಗಿ ನಿದ್ದೆ ಬರಲಿಲ್ಲ. ಮಂಪರು ಮಂಪರು ನಿದ್ದೆಯಲ್ಲಿ ಏನೋ ಕಂಡಂತಾಯಿತು………. ಬರಡು ಭೂಮಿ…. ಮಗ ವಿವೇಕ್ ತನ್ನ ಎರಡು ಕೈಗಳಿಂದ ನೆಲವನ್ನು ಬಗೆಯುತ್ತಿದ್ದಾನೆ…. ಬಾಯಾರಿಕೆ…. ನೀರು… ನೀರು ಬೇಕು ಎಂದು ಚೀರುತ್ತಾ… ಅಳುತ್ತಾ ಮಣ್ಣನ್ನು ಎತ್ತಿ ಎತ್ತಿ ಪಕ್ಕಕ್ಕೆ ಹಾಕುತ್ತಿದ್ದಾನೆ…. ಆದರೆ ನೀರು ಭೂಮಿಯಿಂದ ಮೇಲೆ ಬರಲಿಲ್ಲ….. ಮಗ ವಿವೇಕ ನೀರಿಗಾಗಿ ನರಳುತ್ತಾ ಒದ್ದಾಡುತ್ತಿದ್ದನು. ಭೂಮಿತಾಯಿ ನೀರಿಲ್ಲದೆ ಬರಡಾಗಿ ಹೋಗಿದ್ದಳು.
“ಅಯ್ಯೋ….. ನನ್ನ ಕಂದಾ…”ಎಂದು ಕೂಗುತ್ತಾ ಹೆದರಿ ಎದ್ದು ಕೂತಳು.
‘ಏನಾಯಿತು ಗೀತಾ?’…… ಗಂಡ ಅವಳನ್ನು ಸಮಾಧಾನ ಮಾಡಿ… ಕುಡಿಯಲು ನೀರನ್ನು ಕೊಟ್ಟನು.
‘ಮಗ ವಿವೇಕ್ ನ ಕರೀರಿ… ನಾ ನೋಡಬೇಕು ಅವನನ್ನು ‘.
‘ಏಕೆ ಹೆದರಿದ್ದೀ? ಅವನು ತನ್ನ ರೂಮಿನಲ್ಲಿ ಮಲಗಿದ್ದಾನೆ. ಆಯಾಸವಾಗಿದೆ ಅವನಿಗೆ. ಬೆಳೆಗ್ಗೆ ನೋಡಿದರಾಯಿತು ‘.
‘ಇಲ್ಲ ನಾ ಈಗಲೇ ನೋಡಬೇಕು ‘.
ಹೆಂಡತಿಯ ಹಠಕ್ಕೆ ಮಣಿದು, ನಾಗರಾಜ ಎದ್ದು ಮಗನನ್ನು ನಿದ್ದೆ ಇಂದ ಎಬ್ಬಿಸಿ ತನ್ನ ರೂಮಿಗೆ ಕರೆತಂದನು.
‘ವಿವೇಕಾ…. ‘ಮಗನನ್ನು ತಬ್ಬಿ ಅತ್ತು ಬಿಟ್ಟಳು.
ನಂತರ ತನ್ನ ಕನಸಲ್ಲಿ ಕಂದಡ್ಡನೆಲ್ಲಾ ವಿವರಿಸಿದಳು.
ಇವರ ಮಾತಿನ ಶಬ್ದಕ್ಕೆ ಮಗಳು ತನ್ನ ರೂಮಿನಿಂದ ಓಡಿಬಂದಳು.
ಅಮ್ಮ ಕನಸಲ್ಲಿ ಕಂಡದನ್ನು ಅಣ್ಣನಿಂದ ತಿಳಿದಳು. ಸ್ವಲ್ಪ ಹೊತ್ತು ಎಲ್ಲರೂ ಮೌನವಾಗಿ ಕುಳಿತರು. ಮಗಳು ಎಲ್ಲರಿಗೂ ಟೀ ಮಾಡಿ ಕೊಟ್ಟಳು.
‘ನಾನು ಒಂದು ನಿರ್ಣಾಯಕ್ಕೆ ಬಂದಿದ್ದೆನೆ. ಈವತ್ತಿನಿಂದ ಎಲ್ಲರೂ ನೀರು ಹಾಗೂ ಕರೆಂಟನ ಉಳಿತಾಯವನ್ನು ಮಾಡಬೇಕು. ಎಲ್ಲೆಲಿ ಉಳಿಸಲು ಆಗುವುದೋ ಅಲ್ಲಿ ಸಾಧ್ಯವಾದಷ್ಟು ಉಳಿತಾಯವನ್ನು ಮಾಡೋಣ. ಈಗ ಎಲ್ಲರೂ ಮಲಗಿ.’
ಎಂದಿನಂತೆ ಬೆಳಕಾಯಿತು. ಗೀತಾ ಎದ್ದು ಹೆಚ್ಚು ನೀರನ್ನು ಬಳಸದೆ ಮುಖ ತೊಳೆದುಕೊಂಡು ಬಂದು ಕಾಫಿ ಮಾಡಿದಳು. ಮನೆ ಬಾಗಿಲನ್ನು ಗುಡಿಸಿ, ಅಲ್ಪ ನೀರನ್ನು ಹಾಕಿ ಗುಡಿಸಿ ರಂಗೋಲಿ ಇಟ್ಟು, ಸ್ನಾನಕ್ಕೆ ಹೋದಳು. ಬಕೀಟು ಗಟ್ಟಳೆ ನೀರಿನಿಂದ ಸ್ನಾನ ಮಾಡುವುದರ ಬದಲಿಗೆ ಎಷ್ಟು ಬೇಕೋ ಅಷ್ಟು ನೀರನ್ನು ಉಪಯೋಗಿಸಿದಳು. ಮಕ್ಕಳಿಗೆ ಮಲ ವಿಸರ್ಜನೆ ನಂತರ ಕಮೋಡ್ ಗೆ ನೀರನ್ನು ಬಕ್ಕೆಟ್ ನಿಂದ ಹಾಕಲು ತಿಳಿಸಿದಳು. ಕಾರಣ ಕಮೋಡ್ ಫ್ಲಶ್ ಉಪಯೋಗಿಸಿದರೆ 6 ಲೀಟರ್ ನೀರು ಬೇಕಾಗುವುದು. ಒಂದರಿಂದ ಎರಡು ಲೀಟರ್ ನೀರು ಖರ್ಚಾಗುವ ಕಡೆ 6 ಲೀಟರ್ ಅಂದರೆ ಎಷ್ಟು ನೀರು ವೇಸ್ಟ್ ಆಗುವುದು.. 3 ರಿಂದ 4 ಲೀಟರ್ಸ್ ನೀರು ಉಳಿಸಿದ ಹಾಗಾಯಿತು.
ಕೆಲಸದವಳು ಶಾಂತ ಬಟ್ಟೆ ಒಗೆಯುತ್ತಿದ್ದಳು. ಗೀತಾ ಎಂದೂ ಕೆಲಸದವಳು ಹೇಗೆ ನೀರನ್ನು ಉಪಯೋಗಿಸುತ್ತಾಳೆಂದು ನೋಡೇ ಇರಲಿಲ್ಲ. ಇಂದು ಮೆಲ್ಲನೆ ಹಿತ್ತಲ ಕಡೆ ಹೋದಳು. ಬಕ್ಕೆಟ್ ನಲ್ಲಿ ಒಂದಷ್ಟು ಬಟ್ಟೆ ಇದ್ದವು. ನೀರು ಒಂದೇ ಸಮನೆ ಬಕ್ಕೆಟ್ ನಿಂದ ಹೊರಗೆ ಸುರಿದು ಮೋರಿಯಲ್ಲಿ ಹೋಗುತಿತ್ತು. ಅದನ್ನು ನೋಡಿ ಓಡಿಹೋಗಿ ನಲ್ಲಿಯನ್ನು ನಿಲ್ಲಿಸಿದಳು ಗೀತಾ. ಇನ್ನುಮುಂದೆ ಬಟ್ಟೆ ಒಗೆಯುವಾಗ ನೀರನ್ನು ಹೀಗೆ ಬಿಡಬಾರದೆಂದು ಎಚ್ಚರಿಕೆಯನ್ನು ಕೊಟ್ಟಳು.
ತರಕಾರಿಗಳನ್ನು, ಅಕ್ಕಿ, ಬೇಳೆಯನ್ನು ತೊಳೆದ ನೀರನ್ನು ಒಂದು ಬಕೆಟ್ ನಲ್ಲಿ ಹಾಕಿ… ಆ ನೀರನ್ನು ಗಿಡಗಳಿಗೆ ಹಾಕಿ ಬಂದು ಅಡುಗೆ ಮಾಡುತ್ತಿದ್ದಾಗ ಕರೆಂಟ್ ಕಟ್ ಆಯ್ತು. ಮಕ್ಕಳು TV ಯಲ್ಲಿ ಫಿಲಂ ಒಂದನ್ನು ನೋಡುತಿದ್ದರು. UPS ಇದ್ದ ಕಾರಣ TV ಚಾಲನೆಯಲ್ಲೇ ಇತ್ತು. ಮಕ್ಕಳು ಫಿಲಂ ನೋಡುತ್ತಾ ಕುಳಿತಿದ್ದರು. ದೀಪಗಳು ಊರುಯುತ್ತಿದ್ದವು. ಗೀತಾ ಒಂದೊಂದಾಗಿ ದೀಪವನ್ನು ಆರಿಸುತ್ತಾ ಹಾಲಿಗೆ ಬಂದಳು. ಮಕ್ಕಳಿಗೆ TV ಬಂದ್ ಮಾಡಲು ಹೇಳಿದಳು.
‘ಅಮ್ಮ TV UPS ನಲ್ಲಿ ಓಡುತ್ತಿದೆ… ಕರೆಂಟ್ ನಲ್ಲಲ್ಲ…TV ಆಫ್ ಮಾಡಬೇಡ.’
ವಿವೇಕ್ ನ ಮಾತನ್ನು ಕೇಳಿದ ಗೀತಾ ‘ಯೇ… ಸ್ವಲ್ಪ ಯೋಚಿಸಿ ಮಾತನಾಡು. UPS ಯಾವಾಗಲೂ ಆನ್ ಆಗಿರತ್ತೆ… ಕಾರಣ ಆದು ಕರೆಂಟ್ ನ ಶೇಖರಿಸಿ ಇಟ್ಟುಕೊಂಡಿರುತ್ತೆ. ಕರೆಂಟ್ ಹೋದಾಗ UPS ನಲ್ಲಿ ಶೇಕರಿಸಿದ ವಿದ್ಯುತ್ ಖರ್ಚುಆಗುತ್ತಾ ಹೋಗುತ್ತದೆ.. ಅಂದರೆ ನಾವು ಕರೆಂಟ್ ಅನ್ನೇ ಉಪಯೋಗಿಸುತ್ತಿದ್ದೇವೆಂದು ತಿಳಿಯದೇ ನಿನಗೆ!!
ಅಯ್ಯೋ ಅಮ್ಮ ಹೌದು… ಗೊತ್ತಾಗಲಿಲ್ಲ…. ಎಂದು ಎದ್ದು ಹೋಗಿ TV ಯನ್ನು ಆಫ್ ಮಾಡಿದನು.
ಅಂದು ಗೀತಾಳಿಗೆ ಸ್ವಲ್ಪ ಸಮಾಧಾನ ವಾಯಿತು. ಪ್ರತಿಯೊಂದು ಮನೆಯಲ್ಲಿ ನೀರು ಮತ್ತೆ ವಿದ್ಯುತ್ ಬಳಕೆಯಲ್ಲಿ ಎಚ್ಚರ ವಹಿಸಿದರೆ…. ಎಷ್ಟೋ ಹಳ್ಳಿಯಲ್ಲಿರುವ ರೈತರ ಮನೆಗಳಿಗೆ ನೀರು ಹಾಗೂ ವಿದ್ಯುತ್ ಕನೆಕ್ಷನ್ ಕೊಡಬಹುದಾಗಿದೆ. ಹೆಂಗಸರು ಕೇವಲ ಒಂದು ಬಿಂದಿಗೆಗಾಗಿ 3-4 ಮೈಲಿ ನಡೆದುಕೊಂಡು ನೀರು ತರುವ ಅವಶ್ಯಕತೆ ಇರುವುದಿಲ್ಲ… ಬದಲಿಗೆ ಅವರವರ ಮನೆಗಳಿಗೆ ನೀರಿನ ಕನೆಕ್ಷನ್ ಕೊಡಬಹುದು. ಕೆರೆ-ನದಿಗಳ ನೀರಿನ ಮಟ್ಟವನ್ನು ಉಳಿಸಿಕೊಳ್ಳಬಹುದು…. ಪ್ರಾಣಿ -ಪಕ್ಷಿ ಗಳಿಗೆ ನೀರಿನ ಅಭಾವ ಆಗುವುದಿಲ್ಲ. ಎಲ್ಲದಕ್ಕಿಂತ ಮುಖ್ಯವಾಗಿ…..
” ನಮ್ಮ ಮಕ್ಕಳು ಹಾಗೂ ಮುಂದಿನ ಪೀಳಿಗೆಯವರು ನೀರು ಮತ್ತೆ ವಿದ್ಯುತ್ ಗಾಗಿ ಪರದಾಡಬೇಕಾಗುವುದಿಲ್ಲ”.