ಡಿಸೇಲ್,ಪೆಟ್ರೋಲ್ ದರದಲ್ಲಿ 2 ರೂ ಏರಿಕೆ,ಅಡಿಗೆ ಅನಿಲದರದಲ್ಲೂ ಏರಿಕೆ
by-ಕೆಂಧೂಳಿ
ನವದೆಹಲಿ,ಏ,07-ಕೇಂದ್ರ ಸರ್ಕಾರವು ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು ಪ್ರತಿ ಲೀಟರ್‌ಗೆ ತಲಾ 2 ರೂಪಾಯಿ ಏರಿಕೆ ಮಾಡಿದೆ. ಈ ಸಂಬಂಧ ಹಣಕಾಸು ಸಚಿವಾಲಯದ ಕಂದಾಯ ಇಲಾಖೆಯ ಅಧಿಸೂಚನೆ ಹೊರಡಿಸಿದೆ. ಈ ಪರಿಷ್ಕೃತ ದರವು ಏಪ್ರಿಲ್ 8ರ ಮಂಗಳವಾರದಿಂದಲೇ ಜಾರಿಗೆ ಬರಲಿದೆ. ಒಟ್ಟಾರೆ ಪೆಟ್ರೋಲ್ ಮೇಲಿನ ಅಬಕಾರಿ ಸುಂಕವನ್ನು ಲೀಟರ್‌ಗೆ 13 ರೂಪಾಯಿಗೆ ಹಾಗೂ ಡೀಸೆಲ್ ಮೇಲಿನ ಅಬಕಾರಿ ಸುಂಕವನ್ನು 10 ರೂಪಾಯಿಗೆ ಹೆಚ್ಚಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಿದೆ.
ಈ ಹೊಸ ಆದೇಶದಲ್ಲಿ ಪೆಟ್ರೋಲ್ ಹಾಗೂ ಡೀಸೆಲ್ ಚಿಲ್ಲರೆ ಬೆಲೆಗಳ ಮೇಲೆ ಯಾವ ಪರಿಣಾಮ ಬೀರುತ್ತದೆ ಎಂಬುದನ್ನು ಉಲ್ಲೇಖಿಸಿಲ್ಲ. ಆದರೆ ಚಿಲ್ಲರೆ ಬೆಲೆಗಳಲ್ಲಿ ಯಾವುದೇ ಬದಲಾವಣೆಯಾಗುವ ಸಾಧ್ಯತೆಯಿಲ್ಲ ಎಂದು ತೈಲ ಮಾರುಕಟ್ಟೆಯ ಮೂಲಗಳು ತಿಳಿಸಿವೆ ಎಂದು ಪಿಟಿಐ ವರದಿ ಮಾಡಿದೆ.
ಎಲ್‌ಪಿಜಿ ಸಿಲಿಂಡರ್ ದರ ಕೂಡ ಹೆಚ್ಚಳ
ಎಲ್‌ಪಿಜಿ ಸಿಲಿಂಡರ್‌ನ ಪ್ರತಿ ಸಿಲಿಂಡರ್ ಬೆಲೆ 50 ರೂಪಾಯಿ ಹೆಚ್ಚಾಗಲಿದೆ. ಪಿಎಂಯುವೈ ಫಲಾನುಭವಿಗಳಿಗೆ 500ರಿಂದ 550 ರೂಪಾಯಿಗೆ ಸಿಗಲಿದೆ. ಇತರರಿಗೆ ಇದು 803 ರೂ.ನಿಂದ 853 ರೂ.ಗೆ ಏರಿಕೆಯಾಗಲಿದೆ ಎಂದೂ ಕೇಂದ್ರ ಪೆಟ್ರೋಲಿಯಂ ಮತ್ತು ನೈಸರ್ಗಿಕ ಅನಿಲ ಸಚಿವ ಹರ್ದೀಪ್ ಸಿಂಗ್ ಪುರಿ ವಿವರಿಸಿದ್ದಾರೆ. ನಾವು ಪ್ರತಿ 2-3 ವಾರಗಳಿಗೊಮ್ಮೆ ಇದನ್ನು ಪರಿಶೀಲಿಸುತ್ತೇವೆ. ಆದ್ದರಿಂದ ನೀವು ಕಂಡ ಅಬಕಾರಿ ಸುಂಕವು ಪೆಟ್ರೋಲ್ ಮತ್ತು ಡೀಸೆಲ್ ಮೇಲಿನ ಗ್ರಾಹಕರಿಗೆ ಹೊರೆಯಾಗುವುದಿಲ್ಲ ಎಂದಿದ್ದಾರೆ.
ಪ್ರತಿ ಸಿಲಿಂಡರ್‌ಗೆ 50 ರೂಪಾಯಿ ಹೆಚ್ಚಳವು ಉಜ್ವಲ ಫಲಾನುಭವಿಗೆ ಮತ್ತು ಒಟ್ಟಾರೆಯಾಗಿ ಉಜ್ವಲ ಫಲಾನುಭವಿಯಲ್ಲದವರಿಗೂ ಅನ್ವಯಿಸುತ್ತದೆ. ಇದನ್ನು ಪ್ರತಿ 15-30 ದಿನಗಳಿಗೊಮ್ಮೆ ಪರಿಶೀಲಿಸಲಾಗುತ್ತದೆ. ಪೆಟ್ರೋಲ್ ಮತ್ತು ಡೀಸೆಲ್ ವಿಷಯದಲ್ಲಿ ಈ ಪ್ರವೃತ್ತಿ ಮುಂದುವರಿದರೆ, ಬೆಲೆಯನ್ನು ಪರಿಷ್ಕರಿಸುವ ಸಾಧ್ಯತೆಯಿದೆ ಎಂದೂ ಸಚಿವ ಹರ್ದೀಪ್ ಸಿಂಗ್ ಪುರಿ ಸುಳಿವು ನೀಡಿದ್ದಾರೆ.