ಬೆಂಗಳೂರು,ಜು,21-ರಾಜ್ಯದ ಯಾವುದೇ ಭಾಗದಲ್ಲಿ ಇನ್ನರ್ ವೇರ್ ಉದ್ಯಮ ಸ್ಥಾಪನೆಗೆ ಅಗತ್ಯ ಮೂಲ ಸೌಕರ್ಯಗಳೊಂದಿಗೆ 15ರಿಂದ 20 ಎಕರೆ ಭೂಮಿ ಒದಗಿಸಲಾಗುವುದು ಎಂದು ಜವಳಿ, ಕಬ್ಬು ಅಭಿವೃದ್ಧಿ, ಸಕ್ಕರೆ ಹಾಗೂ ಕೃಷಿ ಮಾರುಕಟ್ಟೆ ಸಚಿವ ಶಿವಾನಂದ ಪಾಟೀಲ ಭರವಸೆ ನೀಡಿದರು.
ಕರ್ನಾಟಕ ಇನ್ನರ್‌ವೇರ್ ಅಸೋಸಿಯೇಷನ್ (ಕೆಐಎ) ಇಲ್ಲಿನ ಪ್ಯಾಲೇಸ್ ಗ್ರೌಂಡ್‌ನಲ್ಲಿ ಆಯೋಜಿಸಿರುವ ಮೂರು ದಿನಗಳ ಇನ್ನರ್ ಸ್ಟೋರಿ ಇನ್ನರ್‌ವೇರ್ ಟ್ರೇಡ್ ಶೋನ 4ನೇ ಆವೃತ್ತಿಯನ್ನು ಮಂಗಳವಾರ ಉದ್ಘಾಟಿಸಿ ಮಾತನಾಡಿದ ಅವರು, ಕೆಐಎ ರಾಜ್ಯದ ಯಾವುದೇ ಪ್ರದೇಶದಲ್ಲಿ ಬಯಸಿದ ಕಡೆ ಭೂಮಿ ಒದಗಿಸಲಾಗುವುದು ಎಂದು ಭರವಸೆ ನೀಡಿದರು.
ಗಾರ್ಮೆಂಟ್ಸ್ ಉದ್ಯಮಕ್ಕೆ ರಾಜ್ಯ ಸರ್ಕಾರ ಅಗತ್ಯ ಸಹಾಯ ಸಹಕಾರ ನೀಡುತ್ತಿದ್ದು, 3500 ಕೋಟಿ ರೂ. ಸಬ್ಸಿಡಿ ನೀಡಿದೆ. ಸಿದ್ದ ಉಡುಪು ಕ್ಷೇತ್ರದಲ್ಲಿ ಕರ್ನಾಟಕ ಮಂಚೂಣಿಯಲ್ಲಿದ್ದು, ದೇಶದ ಒಟ್ಟು ಉತ್ಪಾದನೆಯಲ್ಲಿ ರಾಜ್ಯದ ಕೊಡುಗೆ ಪ್ರತಿಶತ 20ರಷ್ಟಿದೆ ಎಂದರು.
ಬಾಂಗ್ಲಾದೇಶದ ಪ್ರತಿಕೂಲ ಪರಿಸ್ಥಿತಿ ಪರಿಣಾಮ ಅಲ್ಲಿನ ಜವಳಿ ಉದ್ಯಮ ಕರ್ನಟಕ, ಮಹಾರಾಷ್ಟ್ರ ಕಡೆ ಸ್ಥಳಾಂತರವಾಗುತ್ತಿದ್ದು, ರಾಜ್ಯ ಈ ಪರಿಸ್ಥಿತಿ ಬಳಸಿಕೊಂಡು ಜವಳಿ ಉದ್ಯಮಿಗಳಿಗೆ ಅಗತ್ಯ ಸಹಕಾರ ನೀಡಲಿದೆ ಎಂದರು.
ಜವಳಿ ಕ್ಷೇತ್ರ, ನೇಕಾರಿಕೆ ಅಭಿವೃದ್ಧಿ, ಬಂಡವಾಳ ಹೂಡಿಕೆ ಹಾಗೂ ಉದ್ಯೋಗ ಸೃಜನೆಗೆ ಉದ್ಯಮಸ್ನೇಹಿ ನೂತನ ಜವಳಿ ನೀತಿ 2025-30 ರೂಪಿಸುವ ಸಿದ್ದತೆ ನಡೆದಿದ್ದು, ಈ ಸಮಿತಿಯಲ್ಲಿ ಕರ್ನಾಟಕ ಇನ್ನರ್‌ವೇರ್ ಅಸೋಸಿಯೇಷನ್‌ನ ಪ್ರತಿನಿಧಿಯೊಬ್ಬರಿಗೆ ಅವಕಾಶ ಕಲ್ಪಿಸಲಾಗುವುದು ಎಂದು ಭರವಸೆ ನೀಡಿದರು.
ಕರ್ನಾಟಕ ಇನ್ನರ್‌ವೇರ್ ಅಸೋಸಿಯೇಷನ್‌ಗೆ ಬೆಂಗಳೂರಿನಲ್ಲಿ ಕಚೇರಿಗೆ ಸ್ಥಳಾವಕಾಶ ಕಲ್ಪಿಸಬೇಕು, ಜವಳಿ ನೀತಿಯಲ್ಲಿ ಅಸೋಸಿಯೇನಷ್ ಪ್ರತಿನಿಧಿ ಸೇರ್ಪಡೆ ಮಾಡಬೇಕು ಎಂದು ಪದಾಧಿಕಾರಿಗಳು ಸಚಿವ ಶಿವಾನಂದ ಪಾಟೀಲ ಅವರಿಗೆ ಮನವಿ ಮಾಡಿದರು. ಸೌಥ್ ವೆಸ್ಟ್ರನ್ ರೈಲ್ವೆ ಝಡ್‌ಆರ್‌ಯುಸಿಸಿ ಸದಸ್ಯ ಮಹೇಂದ್ರ ಸಿಂಘಿ ಮಾತನಾಡಿ, ಬೆಂಗಳೂರಿನಲ್ಲಿ ಸತತವಾಗಿ ನಾಲ್ಕನೇ ಬಾರಿ ಟ್ರೇಡ್ ಶೋ ಆಯೋಜನೆ ಮಾಡಲಾಗುತ್ತಿದ್ದು, ಇದು ಒಂದು ರೀತಿ ಹೂಡಿಕೆದಾರರ ಸಮಾವೇಶವಾಗಿದೆ ಎಂದರು.
ಟೆಸ್ಸೂಟಿ ಇಂಡಸ್ಟ್ರೀಸ್‌ನ ಸಂಸ್ಥಾಪಕ ರಮೇಶ ಕೊಠಾರಿ, ಕೆಇಎ ಅಧ್ಯಕ್ಷ ದಿಲೀಪ್‌ಕುಮಾರ್ ಜೈನ್, ಉಪಾಧ್ಯಕ್ಷ ಅಶ್ವಿನ್ ಸೆಮ್ಲಾನಿ, ಮಹಾವೀರಚಂದ್ ಮೆಹ್ತಾ, ಕಾರ್ಯದರ್ಶಿ ರವೀಂದ್ರ ಬಂಬೋಲಿ, ಖಜಾಂಚಿ ಪ್ರಕಾಶ್ ಎಚ್. ಜೈನ್ ಮತ್ತಿತರ ಪದಾಧಿಕಾರಿಗಳು ವೇದಿಕೆಯಲ್ಲಿದ್ದರು.
ಮೂರು ದಿನಗಳ ಕಾಲ ನಡೆಯಲಿರುವ ಟ್ರೇಡ್ ಶೋನಲ್ಲಿ ಇನ್ನರ್ ವೇರ್ ಉತ್ಪಾದಕರು, ಹೋಲ್‌ಸೇಲ್ ಮತ್ತು ರೀಟೇಲ್ ಮಾರಾಟಗಾರರು ಸೇರಿದಂತೆ ಎರಡು ಸಾವಿರ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಕರ್ನಾಟಕ ಇನ್ನರ್‌ವೇರ್ ಅಸೋಸಿಯೇಷನ್ ತಿಳಿಸಿದೆ.