ನವದೆಹಲಿ, ಆ,08-ಮಹಾರಾಷ್ಟ್ರ ಮತ್ತು ಕರ್ನಾಟಕದಲ್ಲಿ 2004 ರ ಲೋಕಸಭಾ ಚುನಾವಣೆಯಲ್ಲಿ
ಮತಗಳ್ಳತನ ನಡೆದಿದೆ ಎಂದು ಆರೋಪಿಸಿದ್ದ ಲೋಕಸಭಾ ಪ್ರತಿಪಕ್ಷದ ನಾಯಕ ರಾಹುಲ್ ಗಾಂಧಿ ಗುರುವಾರ ಚುನಾವಣಾ ಅಕ್ರಮಕ್ಕೆ ಸಂಬಂಧಿಸಿದ ದಾಖಲೆಗಳನ್ನು ಬಿಡುಗಡೆ ಮಾಡಿದ್ದಾರೆ
ಇಂದು ದೆಹಲಿಯ ಕಾಂಗ್ರೆಸ್ ಪ್ರಧಾನ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ದಾಖಲೆಗಳನ್ನು ಬಹಿರಂಗಪಡಿಸಿದ ರಾಹುಲ್ ಗಾಂಧಿ ಭಾರತೀಯ ಚುನಾವಣಾ ಆಯೋಗವು ಆಡಳಿತಾರೂಢ ಬಿಜೆಪಿಯೊಂದಿಗೆ ಕೈಜೋಡಿಸಿದೆ ಎಂದು ಆರೋಪಿಸಿದರು.
ಕರ್ನಾಟಕದ ಬೆಂಗಳೂರಿನ ಮಹದೇವಪುರ ಕ್ಷೇತ್ರದ ಮತದಾರರ ಪಟ್ಟಿಯಲ್ಲಿ ದೊಡ್ಡ ಪ್ರಮಾಣದ ಅಕ್ರಮ ನಡೆದಿರುವ ಬಗ್ಗೆ ದಾಖಲೆಗಳನ್ನು ಬಹಿರಂಗಪಡಿಸಿದ್ದಾರೆ. ಇದು ದೇಶದಲ್ಲಿ ಚುನಾವಣಾ ಪ್ರಕ್ರಿಯೆಯ ವಿಶ್ವಾಸಾರ್ಹತೆಯ ಬಗ್ಗೆ ವ್ಯಾಪಕ ಕಳವಳವನ್ನು ಹುಟ್ಟುಹಾಕಿದೆ.
ನಮ್ಮ ಪಕ್ಷವು ಮಹಾರಾಷ್ಟ್ರ ಚುನಾವಣೆಯಲ್ಲಿ ಅಕ್ರಮ ನಡೆದಿರುವ ಬಗ್ಗೆ ದೀರ್ಘಕಾಲದಿಂದ ಶಂಕಿಸಿತ್ತು ಮತ್ತು ಅಂತಿಮ ಫಲಿತಾಂಶ ಅವರ ಕೆಟ್ಟ ಭಯವನ್ನು ದೃಢಪಡಿಸಿದೆ ಎಂದು ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.
“ಮಹಾರಾಷ್ಟ್ರ ಫಲಿತಾಂಶ ವಿಧಾನಸಭಾ ಚುನಾವಣೆಯನ್ನು ನಮ್ಮಿಂದ ಕದ್ದಿದೆ ಎಂಬ ನಮ್ಮ ಅನುಮಾನವನ್ನು ದೃಢಪಡಿಸಿದೆ”. “ಮೆಶಿನ್ ರಿಡೇಬಲ್ ಮತದಾರರ ಪಟ್ಟಿಯನ್ನು ನೀಡಲು ಚುನಾವಣಾ ಆಯೋಗ ನಿರಾಕರಿಸಿರುವುದು ಬಿಜೆಪಿಯೊಂದಿಗೆ ಅದು ಒಪ್ಪಂದ ಮಾಡಿಕೊಂಡಿರುವುದು ನಮಗೆ ಮನವರಿಕೆ ಮಾಡಿಕೊಟ್ಟಿದೆ” ಎಂದಿದ್ದಾರೆ.
ಅಂಕಿಅಂಶಗಳನ್ನು ಉಲ್ಲೇಖ
ಮಹಾರಾಷ್ಟ್ರದಲ್ಲಿ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗಳ ನಡುವೆ, ಕೇವಲ ಐದು ತಿಂಗಳೊಳಗೆ ಒಂದು ಕೋಟಿಗೂ ಹೆಚ್ಚು ಹೊಸ ಮತದಾರರನ್ನು ಮತದಾರರ ಪಟ್ಟಿಗೆ ಸೇರಿಸಲಾಗಿದೆ ಎಂದು ಆರೋಪಿಸಿದರು.
ಐದು ವರ್ಷಗಳ ಅವಧಿಯಲ್ಲಿ ಸೇರಿಸಲಾದ ಮತದಾರರಿಗಿಂತ ಹೆಚ್ಚು ಮತದಾರರನ್ನು ಕೇವಲ ಐದು ತಿಂಗಳಲ್ಲಿ ಹಠಾತ್ ಸೇರಿಸಿದ್ದು ಗಂಭೀರ ಪ್ರಶ್ನೆಗಳನ್ನು ಹುಟ್ಟುಹಾಕಿದೆ ಎಂದು ಅವರು ಹೇಳಿದರು.
ಇನ್ನು ಕರ್ನಾಟಕದಲ್ಲಿ, ಮಹದೇವಪುರ ವಿಧಾನಸಭಾ ಕ್ಷೇತ್ರದಲ್ಲಿ ಒಟ್ಟು 6.5 ಲಕ್ಷ ಮತಗಳಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮತಗಳನ್ನು ಅಕ್ರಮವಾಗಿ ಚಲಾಯಿಸಲಾಗಿದೆ ಎಂದು ರಾಹುಲ್ ಗಾಂಧಿ ಆರೋಪಿಸಿದರು.
“ಒಂದು ಲಕ್ಷಕ್ಕೂ ಹೆಚ್ಚು ಮತಗಳ ‘ವೋಟ್ ಚೋರಿ’ ಆಗಿದೆ”. ಕಾಂಗ್ರೆಸ್ ಸತ್ಯ ಶೋಧನಾ ತಂಡವು ಆ ಕ್ಷೇತ್ರದಲ್ಲಿ ಹೆಚ್ಚಿನ ಸಂಖ್ಯೆಯ ನಕಲಿ ಮತದಾರರು, ಅಮಾನ್ಯ ವಿಳಾಸಗಳು ಮತ್ತು ಬೃಹತ್ ಸೇರ್ಪಡೆಗಳನ್ನು ಕಂಡುಕೊಂಡಿದೆ ಎಂದು ಕಾಂಗ್ರೆಸ್ ನಾಯಕ ಆರೋಪಿಸಿದರು.
ಮಹದೇವಪುರದಲ್ಲಿ ನಕಲಿ ವಿಳಾಸಗಳನ್ನು ಹೊಂದಿರುವ ‘40,009’ ಮತದಾರರಿದ್ದಾರೆ. ‘ಮನೆ ಸಂಖ್ಯೆ 0’ ಎಂಬ ಅಡ್ರೆಸ್ ಇರುವ ಹಲವರು ನೋಂದಾಯಿಸಿಕೊಂಡಿದ್ದಾರೆ. ಒಂದು ಪ್ರಕರಣದಲ್ಲಿ, 46 ಮತದಾರರು ಒಂದೇ ರೂಮಿನ ವಿಳಾಸದ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದಾರೆ. ಆದರೆ ಆ ಸ್ಥಳಕ್ಕೆ ಭೇಟಿ ನೀಡಿದಾಗ, ಯಾರೂ ಅಲ್ಲಿ ವಾಸಿಸುತ್ತಿಲ್ಲ ಎಂದು ಗೊತ್ತಾಯಿತು ಎಂದು ರಾಹುಲ್ ಗಾಂಧಿ ಆರೋಪಿಸಿದ್ದಾರೆ. ನಕಲಿ ವಿಳಾಸಗಳೊಂದಿಗೆ 40,000 ನಮೂದುಗಳು ಮತ್ತು ಯಾವುದೇ ಫೋಟೋಗಳಿಲ್ಲದ ಸುಮಾರು 4,000 ನೋಂದಾಯಿತ ಮತದಾರರಿದ್ದಾರೆ ಎಂದು ಅವರು ಆರೋಪಿಸಿದ್ದಾರೆ.