ಸಚಿವರ ಆರೋಪಕ್ಕೆ ತಿರುಗೇಟು ನೀಡಿದ ಬರಗೂರು ರಾಮಚಂದ್ರಪ್ಪ

Share

ಬೆಂಗಳೂರು,ಜೂ.೨೫: ಕಮ್ಯುನಿಸ್ಟರಾಗಿ ನಾವು ಪಠ್ಯ ಪರಿಷ್ಕರಣೆ ಮಾಡಲಿಲ್ಲ. ಶಿಕ್ಷಣ ನಿಷ್ಠರಾಗಿ ಮಾಡಿದೆವು. ಪಠ್ಯ ಪರಿಷ್ಕರಣೆಯಲ್ಲಿ ರಾಷ್ಟ್ರೀಯ ಹಾಗೂ ರಾಜ್ಯ ಪಠ್ಯಕ್ರಮ ಚೌಕಟ್ಟು ಮತ್ತು ಸಂವಿಧಾನಾತ್ಮಕ ಆಶಯಗಳನ್ನು ಪಾಲಿಸಿದ್ದೇವೆ ಎಂದು ನಾಡೋಜ ಪ್ರೊ.ಬರಗೂರು ರಾಮಚಂದ್ರಪ್ಪ ಸ್ಪಷ್ಟಪಡಿಸಿದ್ದಾರೆ.

ಪತ್ರಿಕಾ ಹೇಳಿಕೆ ಮೂಲಕ ಸರ್ಕಾರದ ನಾಲ್ವರು ಸಚಿವರುಗಳು ಈ ಹಿಂದೆ ಮಾಡಿದ್ದ ಪ್ರತಿ ಆರೋಪಕ್ಕೂ ಅವರು ವಿವರಣೆಗಳ ಮೂಲಕ ತಿರುಗೇಟು ನೀಡಿದ್ದಾರೆ. ಮೈಸೂರು ಒಡೆಯರ ಕಾಲದ ವಿವರಗಳನ್ನು ನಾವು ಬಿಟ್ಟಿದ್ದೇವೆ ಎಂದು ಸಚಿವರು ಹೇಳಿದ್ದಾರೆ. ವಾಸ್ತವವಾಗಿ ೬ನೇ ತರಗತಿಯ ಸಮಾಜ ವಿಜ್ಞಾನದಲ್ಲಿದ್ದ ಪಾಠವನ್ನು ಹೆಚ್ಚು ವಿವರಗಳ ಸಮೇತ ೭ನೇ ತರಗತಿಯ ಪಠ್ಯಕ್ಕೆ ಸೇರಿಸಿದ್ದೇವೆ. ಇಡೀ ಅಧ್ಯಾಯವನ್ನು ಮರು ಪರಿಷ್ಕರಣೆಯಲ್ಲಿ ತೆಗೆದುಹಾಕಿ ನಮ್ಮ ಮೇಲೆ ಸಚಿವರುಗಳು ಆರೋಪ ಹೊರಿಸುತ್ತಿದ್ದಾರೆ. ಹೀಗೆ ೭ನೇ ತರಗತಿಯಿಂದ ತೆಗೆದು ೧೦ನೇ ತರಗತಿಯಲ್ಲಿ ಮುಕ್ಕಾಲು ಪುಟದಷ್ಟುಮಾತ್ರ ಮೈಸೂರು ಒಡೆಯರ್ ವಿವರ ಕೊಟ್ಟು ಅನ್ಯಾಯ ಮಾಡಿದ್ದಾರೆ ಎಂದು ಟೀಕಿಸಿದ್ದಾರೆ.

ನಾಲ್ವಡಿ ಕೃಷ್ಣರಾಜ ಒಡೆಯರ್ ತಂದ ಮೀಸಲಾತಿ, ಮಹಿಳೆಯರಿಗೆ ಮತದಾನದ ಹಕ್ಕಿನ ಮಹತ್ವದ ವಿವರಗಳೇ ಆ ಪಠ್ಯದಲ್ಲಿ ಇಲ್ಲ. ನಮ್ಮ ಪಠ್ಯದಲ್ಲಿದ್ದ ಮುಮ್ಮಡಿ ಕೃಷ್ಣರಾಜ ಒಡೆಯರ್, ಸರ್ ಎಂ.ವಿಶ್ವೇಶ್ವರಯ್ಯ ಮತ್ತು ಮಿರ್ಜಾ ಇಸ್ಮಾಯಿಲ್ ಅವರ ಪೂರ್ಣ ವಿವರಗಳನ್ನು ಮರು ಪರಿಷ್ಕರಣೆಯಲ್ಲಿ ಕೈಬಿಟ್ಟಿದ್ದಾರೆ. ಆದರೆ ನಮ್ಮ ಮೇಲೆ ಸುಳ್ಳು ಆರೋಪ ಮಾಡಿದ್ದಾರೆ ಎಂದು ಹೇಳಿದ್ದಾರೆ.
ನಾಡಪ್ರಭು ಕೆಂಪೇಗೌಡರ ಪಾಠ ನಮ್ಮ ಪರಿಷ್ಕರಣೆಯ ಪಠ್ಯದಲ್ಲಿ ಇರಲಿಲ್ಲ ಎಂಬುದು ಸಚಿವರ ಇನ್ನೊಂದು ಆರೋಪ. ನಾವು ೭ನೇ ತರಗತಿಯ ಸಮಾಜ ವಿಜ್ಞಾನ ಭಾಗ ೧ರಲ್ಲಿ ಎರಡು ಪುಟಗಳ ವಿವರಗಳನ್ನು ಕೊಟ್ಟಿದ್ದೆವು. ಈಗಿನ ಮರು ಪರಿಷ್ಕರಣೆಯಲ್ಲಿ ಒಂದು ಪುಟಕ್ಕೆ ಇಳಿಸಿದ್ದಲ್ಲದೆ, ಕೆಂಪೇಗೌಡರ ಆಡಳಿತಕ್ಕೆ ರಾಮನಗರ, ಕೋಲಾರ ಮತ್ತು ತುಮಕೂರು ಭಾಗಗಳು ಒಳಪಟ್ಟಿದ್ದವೆಂದು ನಾವು ಕೊಟ್ಟಿದ್ದ ವಿವರಗಳನ್ನು ತೆಗೆದು ಕೆಂಪೇಗೌಡರ ಮಹತ್ವವನ್ನು ಇವರೇ ಕುಗ್ಗಿಸಿದ್ದಾರೆ ಎಂದು ಆರೋಪಿಸಿದ್ದಾರೆ.

ನಾವು ೭ನೇ ತರಗತಿಯ ಸಮಾಜ ವಿಜ್ಞಾನದಲ್ಲಿ ಹೊಸದಾಗಿ ಸೇರಿಸಿದ್ದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರನ್ನು ಕುರಿತ ಇಡೀ ಅಧ್ಯಾಯವನ್ನು ಕೈಬಿಟ್ಟಿದ್ದಾರೆ. ಈ ಅಧ್ಯಾಯದಲ್ಲಿದ್ದ ರಾಣಿ ಅಬ್ಬಕ್ಕ, ಯಶೋದರಮ್ಮ ದಾಸಪ್ಪ, ಬಳ್ಳಾರಿ ಸಿದ್ದಮ್ಮ, ಕಮಲಾದೇವಿ ಚಟ್ಟೋಪಾಧ್ಯಾಯ, ಉಮಾಬಾಯಿ ಕುಂದಾಪುರ ಅವರ ಎಲ್ಲಾ ವಿವರಗಳನ್ನು ತೆಗೆದಿದ್ದಾರೆ. ಇದು ಕರ್ನಾಟಕದ ಮಹಿಳಾ ಸ್ವಾತಂತ್ರ್ಯ ಹೋರಾಟಗಾರರಿಗೆ ಮಾಡಿದ ಅವಮಾನ. ಹಾಗೆಯೇ ೭ನೇ ತರಗತಿಯ ಸಮಾಜ ವಿಜ್ಞಾನ ಭಾಗ ೧ರ ಭಕ್ತಿಪಂಥ ಮತ್ತು ಸೂಫಿ ಪರಂಪರೆಯೆಂಬ ಅಧ್ಯಾಯದಲ್ಲಿದ್ದ ಅಕ್ಕಮಹಾದೇವಿ, ಶಿಶುನಾಳ ಶರೀಫರು, ಪುರಂದರದಾಸರು, ಕನಕದಾಸರು ಇವರ ಎಲ್ಲಾ ವಿವರ ತೆಗೆದು ಉತ್ತರ ಭಾರತದವರನ್ನು ಮಾತ್ರ ಉಳಿಸಿಕೊಂಡಿದ್ದಾರೆ. ಇದು ಕರ್ನಾಟಕದ ಅಸ್ಮಿತೆಗೆ ಮಾಡಿದ ಅನ್ಯಾಯ ಎಂದು ಕಿಡಿಕಾರಿದ್ದಾರೆ.

ಕುವೆಂಪು ಅವರ ಹತ್ತು ಪಾಠಗಳ ವಿಷಯವನ್ನು ಮತ್ತೆ ಮತ್ತೆ ಹೇಳುವ ಸಚಿವರುಗಳು ಕರ್ನಾಟಕ ಏಕೀಕರಣದ ವಿಷಯ ತಿಳಿಸುವಾಗ ಹಾಕಿದ್ದ ಕುವೆಂಪು ಭಾವಚಿತ್ರವನ್ನೇ ತೆಗೆದು ಹಾಕಿದ್ದಾರೆ. ಹುಯಿಲಗೋಲ ನಾರಾಯಣರಾಯರ ಭಾವಚಿತ್ರ ತೆಗೆದದ್ದಲ್ಲದೆ, ಕಯ್ಯಾರ ಕಿಞಣ್ಣರೈ ಅವರ ವಿವರ ಬಿಟ್ಟಿದ್ದಾರೆ. ಕರ್ನಾಟಕದಿಂದ ಪ್ರಧಾನಿ ಸ್ಥಾನಕ್ಕೆ ಏರಿದ ದೇವೇಗೌಡರ ಭಾವಚಿತ್ರ ಕೈಬಿಟ್ಟಿದ್ದಾರೆ. ದೇವನೂರು ಮಹಾದೇವರ ಭಾವಚಿತ್ರವೂ ಇಲ್ಲ. ನಮ್ಮ ಪಠ್ಯದಲ್ಲಿದ್ದ ಸಿದ್ಧಗಂಗೆ ಮತ್ತು ಆದಿಚುಂಚನಗಿರಿ ಮಠಗಳ ವಿವರಗಳನ್ನು ಒಂದೇ ಸಾಲಿಗೆ ಇಳಿಸಿ ಅನ್ಯಾಯ ಮಾಡಿದ್ದಾರೆ. ನಮ್ಮ ಪಠ್ಯದಲ್ಲಿದ್ದ ವೇದಕಾಲದ ಸಂಸ್ಕೃತಿ ಎಂಬ ಪಾಠವನ್ನು ತೆಗೆದು ಹಾಕಿರುವ ಅವರು ಭಾರತೀಯ ಪರಂಪರೆಯ ಬಗ್ಗೆ ಮಾತನಾಡುವುದೇ ಒಂದು ವಿಚಿತ್ರ ಎಂದು ವ್ಯಂಗ್ಯವಾಡಿದ್ದಾರೆ.

ನಮ್ಮ ಪಠ್ಯ ಪರಿಷ್ಕರಣೆಯು ಕಮ್ಯುನಿಸ್ಟ್ ಸಿದ್ಧಾಂತವನ್ನು ಅಳವಡಿಸಿಕೊಂಡಿದೆ ಎಂದು ಸುಳ್ಳು ಆರೋಪ ಮಾಡಿರುವ ಸಚಿವರುಗಳಿಗೆ ನಮ್ಮ ಪಠ್ಯಗಳೇ ಉತ್ತರ ಹೇಳುತ್ತವೆ. ನಾವು ಹೊಸದಾಗಿ ಬಸವಣ್ಣ, ಸಂಗೊಳ್ಳಿ ರಾಯಣ್ಣ, ಡಾ.ರಾಜಕುಮಾರ್ ಅವರ ಬಗ್ಗೆ ಪಾಠ ಸೇರಿಸಿದರೆ ಅದು ಕಮ್ಯುನಿಸ್ಟ್ ಪಠ್ಯವೇ? ಮಾಸ್ತಿ, ಗೋಪಾಲಕೃಷ್ಣ ಅಡಿಗ, ಗೊರೂರು, ಮೂರ್ತಿರಾಯರು, ಲಂಕೇಶ್, ಶಾಂತರಸ, ಸಾರಾ ಅಬೂಬಕರ್, ಚೆನ್ನಣ್ಣ ವಾಲೀಕರ ಮುಂತಾದವರ ಬರಹಗಳನ್ನು ಹೊಸದಾಗಿ ಸೇರಿಸಿ ಸಮತೋಲನ ಸಾಧಿಸಿದರೆ ಅದು ಕಮ್ಯುನಿಸ್ಟ್ ಸಿದ್ಧಾಂತವೇ? ಇನ್ನಾದರೂ ಸುಳ್ಳು ಆರೋಪಗಳು ನಿಲ್ಲಲಿ. ಮುಖ್ಯಮಂತ್ರಿಯವರು ಮರುಪರಿಷ್ಕರಣೆಯನ್ನು ವಿರೋಧಿಸುತ್ತಿರುವ ಸಾಹಿತಿಗಳು ಮತ್ತು ಸಂಘಟನೆಗಳನ್ನು ಮಾತುಕತೆಗೆ ಆಹ್ವಾನಿಸಿ ಪ್ರಜಾಸತ್ತಾತ್ಮಕ ನಡೆಗೆ ಮುಂದಾಗಲಿ ಎಂದು ಬರಗೂರು ಒತ್ತಾಯಿಸಿದ್ದಾರೆ.

Girl in a jacket

Leave A Reply

error: Content is protected !!